ಸಂಪಾದಕೀಯ.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಗಳು ಕೋಮು ಹಿಂಸಾಚಾರದ ರೂಪ ಪಡೆದು, ಮೂವರ ಸಾವಿಗೆ ಕಾರಣವಾಗಿವೆ. ಹಿಂಸಾಚಾರದ ಪರಿಣಾಮವಾಗಿ ಹಲವರು ತಮ್ಮ ಊರು ತೊರೆದಿದ್ದಾರೆ. ಇತರ ಕೆಲವೆಡೆಗಳಲ್ಲಿಯೂ ಸಮಸ್ಯೆ ಸೃಷ್ಟಿಯಾಗಿದೆ. ಹಲವೆಡೆ ಪ್ರತಿಭಟನಕಾರರು ಪೊಲೀಸರ ಜೊತೆ ಸಂಘರ್ಷಕ್ಕೆ ಇಳಿದಿದ್ದಾರೆ, ಹಲವರ ಬಂಧನ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಸಮುದಾಯಗಳ ನೆಲೆಯಲ್ಲಿ ಇರುವ ಒಡಕನ್ನು ಎಲ್ಲ ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಂಡಿವೆ, ಈ ಬಾರಿಯೂ ಅದು ಮುಂದುವರಿದಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಮುಸ್ಲಿಂ ಸಮುದಾಯದ ಬೆಂಬಲ ಹೊಂದಿದೆ. ಈ ಪಕ್ಷವು ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಬೆಂಬಲ ನೀಡಿದೆ. ಈ ಕಾಯ್ದೆಯ ವಿಚಾರವಾಗಿ ಮುಸ್ಲಿಂ ಸಮುದಾಯದಲ್ಲಿ ಬಹಳಷ್ಟು ಆತಂಕಗಳು ಇವೆ. ಈ ಕಾಯ್ದೆಯ ಮೂಲಕ ವಕ್ಫ್ ಆಸ್ತಿಗಳನ್ನು ಸರ್ಕಾರವು ತನ್ನ ನಿಯಂತ್ರಣಕ್ಕೆ ಪಡೆಯಬಹುದು ಎಂಬುದು ಅವರಲ್ಲಿನ ಒಂದು ಆತಂಕ. ಮುಸ್ಲಿಮರ ಹಿತಾಸಕ್ತಿಗಳನ್ನು ರಕ್ಷಿಸಲಾಗುತ್ತದೆ ಎಂಬ ಭರವಸೆಯನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಮತ್ತೆ ನೀಡಿದ್ದಾರೆ. ಆದರೆ, ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರುವುದಿಲ್ಲ ಎಂದು ಅವರು ಘೋಷಿಸಿದ್ದುದು ತಪ್ಪು.
ಪಶ್ಚಿಮ ಬಂಗಾಳದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯು ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಈಚೆಗೆ ನಡೆದ ರಾಮನವಮಿ ಮೆರವಣಿಗೆಗೆ ಕೋಮು ಬಣ್ಣ ಇತ್ತು, ಅದಕ್ಕೆ ಬಿಜೆಪಿಯ ಬೆಂಬಲ ಇತ್ತು. 25 ಸಾವಿರ ಮಂದಿ ಶಾಲಾ ಶಿಕ್ಷಕರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಪರಿಣಾಮವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಉಂಟಾಗಿರುವ ಹಿನ್ನಡೆಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ತಿರುಗಿಸಲು ಟಿಎಂಸಿಯು ಕೋಮು ಆಧಾರದಲ್ಲಿ ಒಡಕು ಸೃಷ್ಟಿಸು ತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಯುವಲ್ಲಿ ಪೊಲೀಸರು ಆರಂಭದಿಂದಲೂ ವಿಫಲರಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಲು ಸರ್ಕಾರವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರೆ ಜೀವಹಾನಿ, ಆಸ್ತಿ ನಷ್ಟ ತಡೆಯಬಹುದಿತ್ತು ಮತ್ತು ಜನ ಜೀವಭಯದಿಂದ ತಮ್ಮ ಊರು ತೊರೆದು ಬೇರೆಡೆಗಳಿಗೆ ಓಡಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪರಿಸ್ಥಿತಿ ಕೈಮೀರುತ್ತಿದೆ ಎಂಬುದನ್ನು ಅರಿತುಕೊಳ್ಳುವಲ್ಲಿ ಅಲ್ಲಿ ಗುಪ್ತಚರ ವ್ಯವಸ್ಥೆ ಕೂಡ ವಿಫಲವಾಗಿದೆ. ಹಿಂಸಾಚಾರಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಈಗ ಕೇಂದ್ರದ ಪಡೆಗಳನ್ನು ನಿಯೋಜಿಸಲಾಗಿದೆ.
ಕೋಮು ಹಿಂಸಾಚಾರವು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯಷ್ಟೇ ಅಲ್ಲ. ಇಂತಹ ಹಿಂಸಾಚಾರಗಳ ಹಿಂದೆ ಹಲವು ಸಂದರ್ಭಗಳಲ್ಲಿ ರಾಜಕೀಯ ಉದ್ದೇಶವಿರುತ್ತದೆ. ಕೋಮು ಹಿಂಸಾಚಾರ ನಡೆದಂತಹ ಸಂದರ್ಭಗಳಲ್ಲಿ ‘ಪರಿಸ್ಥಿತಿಯು ಇದ್ದಕ್ಕಿದ್ದಂತೆ ಕೈಮೀರಿತು’ ಎಂದು ಪ್ರತಿ ಸಲವೂ ಹೇಳಲಾಗದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಪರಸ್ಪರ ದೂಷಣೆಯಲ್ಲಿ ತೊಡಗಿವೆ. ಹಿಂಸಾಚಾರವನ್ನು ಸೃಷ್ಟಿ ಮಾಡಿದವರು ಕೆಲವರಾದರೂ, ಅದಕ್ಕೆ ಸಮುದಾಯಗಳನ್ನು ಹೊಣೆ ಮಾಡಲಾಗುತ್ತಿದೆ. ಹಿಂಸಾಚಾರದಿಂದ ನಲುಗಿರುವ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ (ಎಎಫ್‌ಎಸ್‌ಪಿಎ) ಅಡಿಯಲ್ಲಿ ವಿಶೇಷ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಸಮಸ್ಯೆ ಸೃಷ್ಟಿಸಲು ಬಿಜೆಪಿಯು ಹಿಂಸಾಚಾರದ ನಕಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಡುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಎರಡೂ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿವೆ. ಆದರೆ, ಕೋಮುವಾದದ ಹುಲಿ ಸವಾರಿಯು ಸಮಾಜಕ್ಕೂ ತಮಗೂ ಹಾನಿಯನ್ನೇ ಉಂಟುಮಾಡುತ್ತದೆ ಎಂಬ ಪಾಠವನ್ನು ಎರಡೂ ಪಕ್ಷಗಳು ಉಪೇಕ್ಷಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.