ADVERTISEMENT

ಬಂಗಾಳದಲ್ಲಿ ಎದಿರುಬದಿರಾದ ಬೆಂಕಿ- ಬಿರುಗಾಳಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 19:45 IST
Last Updated 4 ಫೆಬ್ರುವರಿ 2019, 19:45 IST
.
.   

ಬಿರುಗಾಳಿ ಎಂಬುದು ಶೂನ್ಯದಲ್ಲಿ ಉಂಟಾಗುವ ನೈಸರ್ಗಿಕ ಕ್ರಿಯೆ ಅಲ್ಲ.ಪಶ್ಚಿಮ ಬಂಗಾಳದಲ್ಲಿ ಮಮತಾ-ಮೋದಿ ನಡುವೆ ಎದ್ದಿರುವ ಬಿರುಗಾಳಿಯೂ ಅಷ್ಟೇ. ಅಲ್ಲಿನ ರಾಜಕೀಯ ದಿಗಂತದಲ್ಲಿ ಎರಡು ಪ್ರಬಲ ವಿರೋಧಿ ರಾಜಕೀಯ ಒತ್ತಡಗಳು ವರ್ಷಗಳಿಂದ ಒತ್ತಿ ಕವಿಯತೊಡಗಿದ್ದವು. ಇದೀಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸ್ಫೋಟಗೊಂಡಿವೆ. ಶಾರದಾ ಚಿಟ್ ಫಂಡ್ ಹಗರಣದ ಸಂಬಂಧದಲ್ಲಿ ಪುರಾವೆ ಹತ್ತಿಕ್ಕಿದ ಆರೋಪ ಹೊತ್ತಿರುವ ಕೋಲ್ಕತ್ತ ಪೊಲೀಸ್ ಆಯುಕ್ತರ ಅಧಿಕೃತ ನಿವಾಸಕ್ಕೆ ಭಾನುವಾರ ಸಂಜೆ ನಲವತ್ತು ಮಂದಿ ಸಿಬಿಐ ಸಿಬ್ಬಂದಿ ನುಗ್ಗುತ್ತಾರೆ.ರಾಜ್ಯ ಪೊಲೀಸರು ಮತ್ತು ಕೇಂದ್ರದ ಸಿಬಿಐ ನಡುವೆ ಘರ್ಷಣೆ ನಡೆಯುತ್ತದೆ.ಪೊಲೀಸ್ ಆಯುಕ್ತರ ರಕ್ಷಣೆಗೆ ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದೆ ಬರುತ್ತಾರೆ.ಧರಣಿ ಕುಳಿತುಕೊಳ್ಳುತ್ತಾರೆ. ಬಂಗಾಳದ ಕುಖ್ಯಾತ ಶಾರದಾ ಚಿಟ್ ಫಂಡ್ ಹಗರಣವನ್ನು ಸುಪ್ರೀಂ ಕೋರ್ಟ್‌ 2014ರಲ್ಲೇ ಸಿಬಿಐ ತನಿಖೆಗೆ ಒಪ್ಪಿಸಿತ್ತು.ತೃಣಮೂಲ ಕಾಂಗ್ರೆಸ್ಸಿನ ಭಾರಿ ಕುಳಗಳತ್ತ ಬೆರಳು ತೋರಿದ್ದ ಈ ಹಗರಣದ ಆಮೂಲಾಗ್ರ ತನಿಖೆ ನಡೆಯಲೇಬೇಕು, ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಿದ್ದರೂ ಶಿಕ್ಷೆಯಾಗಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ.ಆದರೆ ಈ ಹಗರಣವು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ರಾಜ್ಯದ ತೃಣಮೂಲ ನೇತೃತ್ವದ ಸರ್ಕಾರದ ನಡುವಣ ರಾಜಕೀಯ ದಾಳವಾಗಿ ಉರುಳತೊಡಗಿದೆ.ಇಂತಹ ರಾಜಕೀಯ ದಾಳ ದೇಶದ ರಾಜಕೀಯ ಇತಿಹಾಸದಲ್ಲಿ ಮೊದಲನೆಯದಲ್ಲ,ದುರದೃಷ್ಟವಶಾತ್ ಕೊನೆಯದೂ ಆಗುವುದಿಲ್ಲ. ಆದರೆ ಮದ್ದಾನೆಗಳ ಈ ಗುದ್ದಾಟದಲ್ಲಿ ನವೆಯುವುದು ನೈಜ ಜನತಂತ್ರ ಮತ್ತು ರಾಜ್ಯ- ಕೇಂದ್ರದ ಸಂಬಂಧ.ಒಕ್ಕೂಟ ವ್ಯವಸ್ಥೆಗೆ ಶಕ್ತಿ ತುಂಬುವ ಬದಲು ಇಂತಹ ಬೆಳವಣಿಗೆಗಳು ಅದನ್ನು ದುರ್ಬಲ ಆಗಿಸುತ್ತವೆ.ಆದರೆ ಅಧಿಕಾರ ಗದ್ದುಗೆಯೇ ಅಂತಿಮ ಗುರಿ ಎಂದು ಬಗೆದು ಜಿದ್ದಿಗೆ ಬೀಳುವವರು ಜನತಂತ್ರ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.ಅದು ಈ ಗಣತಂತ್ರ ಒಕ್ಕೂಟದ ದೌರ್ಭಾಗ್ಯ.

ಹಾಲಿ ಹಣಾಹಣಿಯ ಹಿಂದೆ ನಿಜವಾಗಿಯೂ ಪಣಕ್ಕಿರುವುದು ಬಂಗಾಳದ 42 ಲೋಕಸಭಾ ಸ್ಥಾನಗಳೇ ವಿನಾ ಚಿಟ್ ಫಂಡ್ ಹಗರಣ ಅಲ್ಲ.ಇತ್ತೀಚಿನ ದಿನಮಾನಗಳು ಮಮತಾ- ಮೋದಿ ಮತ್ತು ಮಮತಾ-ಅಮಿತ್ ಶಾ ನಡುವೆ ಬೆಂಕಿ ಕಾರುವ ಬಿರುನುಡಿಗಳ ವಿನಿಮಯ ಕಂಡಿವೆ. ರಾಜ್ಯದಲ್ಲಿ ಹೆಜ್ಜೆ ಊರತೊಡಗಿರುವ ಬಿಜೆಪಿಯ ರಥಯಾತ್ರೆ ಯೋಜನೆಯನ್ನು ಮಮತಾ ಅವರು ಭಂಗಗೊಳಿಸಿದ್ದಾರೆ. ಬಂಗಾಳದಲ್ಲಿ ಮೋದಿ-ಶಾ ರಾಜಕೀಯ ರ‍್ಯಾಲಿಗಳು ಜರುಗುವುದು ಅಷ್ಟೇನೂ ಸಲೀಸಲ್ಲ. ಯೋಗಿ ಆದಿತ್ಯನಾಥ ಅವರ ಹೆಲಿಕಾಪ್ಟರನ್ನು ಇತ್ತೀಚೆಗೆ ಇಲ್ಲಿ ಇಳಿಯಗೊಡಲಿಲ್ಲ. ಬಂಗಾಳದಲ್ಲಿ ಎಡರಂಗದ ಕೆಂಪುಕೋಟೆ ಉರುಳಿದ ನಂತರ, ಪ್ರಧಾನ ಪ್ರತಿಪಕ್ಷವಾಗಿ ಹೊರಹೊಮ್ಮುವುದು ಬಿಜೆಪಿಯ ಮಹತ್ವಾಕಾಂಕ್ಷೆ. ಉತ್ತರಪ್ರದೇಶ (80) ಮತ್ತು ಮಹಾರಾಷ್ಟ್ರದ (48) ನಂತರ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ. 2014ರ ಪ್ರಬಲ ಮೋದಿ ಅಲೆಯನ್ನು ಮೆಟ್ಟಿ ನಿಂತು 34 ಸೀಟು ಗೆದ್ದವರು ಮಮತಾ. ಬಿಜೆಪಿ ಎರಡೇ ಸ್ಥಾನಗಳಿಗೆ ತೃಪ್ತಿಪಡ ಬೇಕಾಯಿತು. ಆದರೆ 2009ರಲ್ಲಿ ಕೇವಲ ಶೇ 6ರಷ್ಟು ಮತ ಗಳಿಸಿದ್ದ ಬಿಜೆಪಿ, 2014ರಲ್ಲಿ ಶೇ 17ರಷ್ಟು ಬಂಗಾಳಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಯಶಸ್ಸನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ಗರಿಷ್ಠ ಸೀಟು ಗಳಿಸುವುದು ಮೋದಿ-ಶಾ ಗುರಿ. ಆದರೆ 2016ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆ ಶೇ 10ಕ್ಕೆ ಕುಸಿದಿತ್ತು. 2019ರಲ್ಲಿ ಪುನಃ ದೆಹಲಿ ಗದ್ದುಗೆ ಹಿಡಿಯಲು ಗರಿಷ್ಠ ಸೀಟು ಗಳಿಸುವುದು ಮೋದಿ-ಶಾ ಜೋಡಿಯ ಗುರಿ. ಬಿಜೆಪಿಯ ಯಶಸ್ಸು ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಚಟುವಟಿಕೆಗಳನ್ನು ಬಂಗಾಳದಲ್ಲಿ ಗರಿಗೆದರಿಸಿದೆ. ಎಡರಂಗ ಮತ್ತು ಕಾಂಗ್ರೆಸ್ ನಿಸ್ತೇಜಗೊಂಡಿವೆ. ಪ್ರಧಾನಿ ಹುದ್ದೆಯ ಮೇಲೆ ಮಮತಾ ಕೂಡ ಕಣ್ಣಿಟ್ಟಿರುವುದು ಸುಳ್ಳಲ್ಲ. ಪ್ರಬಲ ಕೆಂಪು ಕೋಟೆಯನ್ನೇ ಕುಟ್ಟಿ ಕೆಡವಿದ ಅವರು ಮೋದಿ-ಶಾ ಜೋಡಿಗೆ ಸುಲಭಕ್ಕೆ ಶರಣಾಗುವವರಲ್ಲ. ರಾಜಕೀಯ ದಾಳಿಯನ್ನು ರಾಜಕೀಯವಾಗಿಯೇ ಹಿಮ್ಮೆಟ್ಟಿಸಲು ಆಕೆ ಬೀದಿಗಿಳಿದಿದ್ದಾರೆ. ಈ ಬೆಂಕಿ-ಬಿರುಗಾಳಿ ಸದ್ಯಕ್ಕೆ ಅಡಗುವುದಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT