ADVERTISEMENT

ಅಭಿವೃದ್ಧಿಯ ಕನಸು ನನಸಾಗಿಸುವೆ

ಜೆಡಿಎಸ್ ಅಭ್ಯರ್ಥಿ ಮಹಿಮ ಜೆ.ಪಟೇಲ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 5:14 IST
Last Updated 12 ಏಪ್ರಿಲ್ 2014, 5:14 IST
ಮಹಿಮ ಪಟೇಲ್‌
ಮಹಿಮ ಪಟೇಲ್‌   

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಒಟ್ಟು 18 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 17ರ ಚುನಾವಣಾ ದಿನ ಹತ್ತಿರ ಬರುತ್ತಿರುವಂತೆ ಪ್ರಚಾರದ ಭರಾಟೆ ಜೋರಾಗಿದೆ. ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್‌ ಇಲ್ಲಿ ಪ್ರಬಲ ನೆಲೆ ಹೊಂದಿದ್ದವು. 1977ರಿಂದ 2009ರವರೆಗೆ ನಡೆದ 10 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ ಗೆಲುವು ಕಂಡಿವೆ. 1996ಕ್ಕೂ ಮೊದಲು ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. 1996ರ ನಂತರ ನಡೆದ ಚುನಾವಣೆಗಳಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆಲುವು ಕಂಡಿದೆ.

ಮರಳಿ ಗೂಡು ಸೇರಿ ಲೋಕಸಭಾ ಚುನಾವಣೆಯ ಅಖಾಡಕ್ಕೆ ರಂಗು ತಂದಿರುವವರು ಜೆಡಿಎಸ್‌ ಅಭ್ಯರ್ಥಿ ಮಹಿಮ ಜೆ. ಪಟೇಲ್‌. ಕಾಂಗ್ರೆಸ್ ತೊರೆದು ಜೆಡಿಎಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕ್ಷೇತ್ರ ಸುತ್ತು ಹಾಕಿ, ಮತ ಕೇಳುತ್ತಿದ್ದಾರೆ. ತಂದೆಯ ಅಭಿವೃದ್ಧಿ ಕೆಲಸ, ತಮ್ಮ ಕನಸ್ಸುಗಳನ್ನು ಮತದಾರರ ಮುಂದಿಟ್ಟು, ಮತ ಕೇಳುತ್ತಿರುವ ಮಹಿಮ ‘ಪ್ರಜಾವಾಣಿ’ಗೆ ನೀಡಿದ ಕಿರು ಸಂದರ್ಶನ ಇಲ್ಲಿದೆ.

* ನಿಮ್ಮ ಪ್ರಕಾರ ಜಿಲ್ಲೆಯಲ್ಲಿ ಆಗಬೇಕಿರುವ ಪ್ರಮುಖ ಅಭಿವೃದ್ಧಿ ಕೆಲಸಗಳು?
ದಾವಣಗೆರೆ ಕೃಷಿಯನ್ನೇ ಆಧಾರವಾಗಿ ಇಟ್ಟುಕೊಂಡಿರುವ ಜಿಲ್ಲೆ. ಕೃಷಿ ಆಧಾರಿತ ಕೈಗಾರಿಕೆಗಳು  ಅಗತ್ಯ; ಅನಿವಾರ್ಯ. ‘ಮೆಕ್ಕೆಜೋಳ ಸಂಸ್ಕರಣಾ ಘಟಕ’ ಸ್ಥಾಪನೆ ಆಗಬೇಕು. ಶಾಸಕನಾಗಿದ್ದ ವೇಳೆ ಉಬ್ರಾಣಿ ಹೋಬಳಿಗೆ ₨ 100 ಕೋಟಿಯಷ್ಟು ಅನುದಾನ ತಂದು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೆ. ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕೆಲಸ ತುರ್ತಾಗಿ ನಡೆಯಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಬೇಕು. ಕೊಂಡಜ್ಜಿ, ಸೂಳೆಕೆರೆ ಪ್ರವಾಸಿ ಕೇಂದ್ರಗಳಾಗಿ ಕಣ್ಮನ ಸೆಳೆಯಬೇಕು. ತೀರ್ಥಕ್ಷೇತ್ರಗಳನ್ನೂ ಅಭಿವೃದ್ಧಿ ಮಾಡುವ ಕನಸು ನನ್ನದು.

* ಯಾವ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೀರಾ?
ನಾನು ಎಂಜಿನಿಯರ್‌ ಪದವೀಧರ. ನಮ್ಮ ತಂದೆ ದಿ.ಜೆ.ಎಚ್‌. ಪಟೇಲ್‌ ಅವರು ರಾಜ್ಯದಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದರು. ನನಗೂ ಅವಕಾಶ ಕೊಡಿ; ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿ ತೊರಿಸುವೆ. ಈ ಜಿಲ್ಲೆಯ ನಿರ್ಮಾತೃ ನಮ್ಮ ತಂದೆ. ಎಲ್ಲರೂ ಇಂದಿಗೂ ಅದನ್ನೇ ನೆನಪು ಮಾಡಿಕೊಳ್ಳುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಾದ ಬಳಿಕ ಕೇಂದ್ರದಿಂದ ದೊಡ್ಡ ಪ್ರಮಾಣದಲ್ಲಿ ಅನುದಾನ ಹರಿದು ಬರುತ್ತಿದೆ. ತಾಲ್ಲೂಕುಮಟ್ಟದ ವ್ಯಾಪಾರಿಗಳು ಜಿಲ್ಲಾಮಟ್ಟದ ವ್ಯಾಪಾರಿಗಳಾಗಿ ಬೆಳೆದಿದ್ದಾರೆ. ತಂದೆ ಹಾಕಿಕೊಟ್ಟ ಅಭಿವೃದ್ಧಿ ಬುನಾದಿ ಮೇಲೆ ನಾನು ಗೆಲುವಿನ ಕಟ್ಟಡ ಕಟ್ಟಲು ಹೊರಟಿದ್ದೇನೆ; ಅದರಲ್ಲಿ ಯಶಸ್ವಿಯೂ ಆಗುತ್ತೇನೆ. ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಎಚ್‌.ಡಿ.ದೇವೇಗೌಡರ ಹಾದಿಯಲ್ಲಿ ಸಾಗುವ ನಿರ್ಧಾರ ನನ್ನದು.

* ಜಿಲ್ಲೆಯಲ್ಲಿ ಜೆಡಿಎಸ್‌ಗೆ ಪೂರ್ಣ ನೆಲೆ ಇದೆಯೇ?
ಪಕ್ಷದ ಕೊಡುಗೆ, ತಂದೆ– ವೈಯಕ್ತಿಕ ವರ್ಚಸ್ಸು ನನ್ನ ಗೆಲುವಿನ ಹಾದಿಯಲ್ಲಿ ಕೆಲಸ ಮಾಡಲಿದೆ. ಜೆಡಿಎಸ್‌ ಜಿಲ್ಲೆಯಲ್ಲಿ ಮತ್ತೆ ಭದ್ರ ನೆಲೆ ಸಿಗಲಿದೆ. ಜನರಿಗೆ ಬದಲಾವಣೆ ಬೇಕಿದೆ. ಜಿಲ್ಲೆಯ ಜನರು ಕೆಲವು ವರ್ಷಗಳಿಂದ ಅವ್ಯವಸ್ಥೆ ನೋಡಿ ಬೇಸರಗೊಂಡಿದ್ದು, ಜೆಡಿಎಸ್‌ ಬೆಂಬಲಿಸುವುದು ಖಚಿತ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

* ನಿಮ್ಮ ಎದುರಾಳಿಗಳ ಬಗ್ಗೆ...?
ಎದುರಾಳಿಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಕುಟುಂಬದ ಮೂರನೇ ತಲೆಮಾರಿನ
ರಾಜಕಾರಣಿ ನಾನು. ಅಜ್ಜ, ತಂದೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದವರು. ಜನರಿಗೆ ಮೋಸ
ಮಾಡದೇ ರಾಜಕಾರಣ ಮಾಡಿದ ಕುಟುಂಬ. ಜನರಿಗೂ ಅದರ ಅರಿವು ಇದೆ. ಸಹಾಯ ಮಾಡಲಿಕ್ಕೆ ಯಾವಾಗಲೂ ಮುಂದೆ ಬರುತ್ತೇವೆ. ಸಮಾಜವಾದದ ಹಿನ್ನೆಲೆ ನನ್ನದು. ಅದೇ ಗೆಲುವಿಗೆ ಶ್ರೀರಕ್ಷೆ ಆಗಲಿದೆ.

* ರಾಷ್ಟ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದೇ?
ರಾಜ್ಯದಲ್ಲಿ ಜೆಡಿಎಸ್‌ 15 ಸ್ಥಾನ ಗೆದ್ದರೆ ಈ ಹಾದಿ ಸುಗಮವಾಗಲಿದೆ. ಮತ್ತೆ ರಾಷ್ಟ್ರದಲ್ಲಿ ಚಮತ್ಕಾರ ನಡೆದರೂ ನಡೆಯಬಹುದು.

* ಚುನಾವಣೆ ವೇಳೆ ಹಣ, ಹೆಂಡ ಹಂಚಿಕೆ, ಜಾತಿ ಲೆಕ್ಕಾಚಾರದ ಬಗ್ಗೆ ನಿಮ್ಮ ಅನಿಸಿಕೆ?
ಚುನಾವಣೆ ವೇಳೆ ಇದನ್ನೆಲ್ಲಾ ಸುಮ್ಮನೆ ಹಬ್ಬಿಸಲಾಗುತ್ತದೆ. ‘ಗಾಲಿ ತಿರುಗಲು ಗ್ರೀಸ್‌ ಬೇಕು; ಗ್ರೀಸ್‌ನಲ್ಲೇ ಗಾಲಿ ಮುಳುಗಿಸಬಾರದು’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT