ADVERTISEMENT

ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ: ಹುಕ್ಕೇರಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2014, 11:06 IST
Last Updated 11 ಏಪ್ರಿಲ್ 2014, 11:06 IST
ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ: ಹುಕ್ಕೇರಿ
ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ: ಹುಕ್ಕೇರಿ   

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಓದಿದ್ದು ಎಸ್ಸೆಸ್ಸೆಲ್ಸಿ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಅವರದ್ದು ಸುದೀರ್ಘ ಕಾಲ ಸಂಶೋಧನೆ ಮಾಡಿದಂತಹ ಅನುಭವ. 1983ರಲ್ಲಿ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪಯಣ ಆರಂಭಿಸಿದ ಹುಕ್ಕೇರಿ ಎರಡು ಬಾರಿ ಸಚಿವರ ಹುದ್ದೆ ಅಲಂಕರಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ, ವಿಧಾನ ಪರಿಷತ್‌ ಸದಸ್ಯರೂ ಆಗಿದ್ದ ಇವರು, 1994ರಿಂದ ಸತತವಾಗಿ ಐದು ಬಾರಿ ಶಾಸಕರಾಗುವ ಮೂಲಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2004ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದ ಹುಕ್ಕೇರಿ ಅವರು ಈಗ ಸಕ್ಕರೆ, ಮುಜರಾಯಿ ಹಾಗೂ ಸಣ್ಣ ಕೈಗಾರಿಕೆಗಳ ಸಚಿವರಾಗಿದ್ದಾರೆ.

2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದ ಹುಕ್ಕೇರಿ ಅವರು ಈ ಬಾರಿ ಪುನಃ ‘ಮೀಸೆ’ ತಿರುವುತ್ತ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ! ಕ್ಷೇತ್ರದಾದ್ಯಂತ ಹಗಲಿರುಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಬಾರಿ ಸಂಪರ್ಕಿಸಿದ ಬಳಿಕ ತರಾತುರಿಯಲ್ಲಿ ಪ್ರಕಾಶ ಹುಕ್ಕೇರಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಪ್ರಶ್ನೆ: ಪ್ರಚಾರಕ್ಕೆ ಹೋದಾಗ ಕ್ಷೇತ್ರದ ಜನರಿಂದ ಹೇಗೆ ಪ್ರತಿಕ್ರಿಯೆ ಸಿಗುತ್ತಿದೆ?
* ಉತ್ತರ: ಕ್ಷೇತ್ರದಲ್ಲಿ ಸಂಚರಿಸಿದ ಕಡೆಗಳಲ್ಲೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನನ್ನನ್ನೇ ಗೇಲ್ಲಿಸುತ್ತೇನೆ ಎಂದು ಜನರು ಮಾತು ಕೊಡುತ್ತಿದ್ದಾರೆ.

* ಕ್ಷೇತ್ರದಲ್ಲಿ ನಿಮ್ಮ ಗಮನಕ್ಕೆ ಬಂದ ಪ್ರಮುಖ ಸಮಸ್ಯೆಗಳು ಯಾವವು?
ಅಥಣಿಯಲ್ಲಿನ ಬಸವೇಶ್ವರ ಏತನೀರಾವರಿ ಯೋಜನೆಗೆ ಚಾಲನೆ ನೀಡಬೇಕಾಗಿದೆ. ಹುಕ್ಕೇರಿ ತಾಲ್ಲೂಕಿನಲ್ಲಿ ಸಂಗಮ ಬ್ಯಾರೇಜ್‌ ನಿರ್ಮಿಸ­ಬೇಕು. ಹಿರಣ್ಯಕೇಶಿ ನದಿಯ ಸುಲ್ತಾನಪುರ ಬ್ಯಾರೇಜ್‌ ಎತ್ತರವನ್ನು ಹೆಚ್ಚಿಸಬೇಕಾಗಿದೆ. ಕೃಷ್ಣಾ–ಕಿತ್ತೂರು ಬ್ಯಾರೇಜ್‌ ಮಾಡಬೇಕಾಗಿದೆ. ವಿಶೇಷವಾಗಿ ಅಥಣಿ, ಚಿಕ್ಕೋಡಿ ಭಾಗದಲ್ಲಿ ನೀರಾವರಿ ಸೌಲಭ್ಯವನ್ನು ಕಲ್ಪಿಸಬೇಕು ಎಂಬ ಬೇಡಿಕೆ ಜನರಿಂದ ಕೇಳಿ ಬರುತ್ತಿವೆ.

* ನಿಮ್ಮ ಪ್ರಮುಖ ಎದುರಾಳಿ ಯಾರು?
ಬಿಜೆಪಿ ಅಭ್ಯರ್ಥಿಯ ಪ್ರಚಾರ ಅಬ್ಬರವೇ ಎಲ್ಲೂ ಕಂಡು ಬರುತ್ತಿಲ್ಲ. ಜೆಡಿಎಸ್‌ ಅಭ್ಯರ್ಥಿ ತಮ್ಮ ಸಕ್ಕರೆ ಕಾರ್ಖಾನೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿರುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ನನಗೆ ತಿಳಿದಂತೆ, ಅವರು ಬ್ಯಾಂಕಿನಿಂದ ರೈತರಿಗೆ ಸಾಲ ಕೊಡಿಸಿ ನೀರಾವರಿ ಕಲ್ಪಿಸಿಕೊಟ್ಟಿದ್ದಾರೆ. ರೈತರು ಬಳಿಕ ಸಾಲದ ಹಣವನ್ನು ವಾಪಸ್‌ ಪಾವತಿಸಬೇಕು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ನನಗೆ ಯಾರೂ ಪ್ರಬಲ ಎದುರಾಳಿ ಇಲ್ಲ.

* ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿಮಗೆ ಮನಸ್ಸಿರಲಿಲ್ಲ ಎಂಬುದು ಕ್ಷೇತ್ರದ ಜನರಿಗೂ ತಿಳಿದಿದೆ. ಹೀಗಿರುವಾಗ ಗೆಲ್ಲುತ್ತೀರಿ ಎಂಬ ವಿಶ್ವಾಸ ನಿಮಗೆ ಇದೆಯೇ?
ಇದು ಬಹಳ ಹಿಂದಿನ ಮಾತು. ಈಗ ಚಿತ್ರಣವೇ ಬದಲಾಗಿದೆ. ಕಾಂಗ್ರೆಸ್‌ನ ಯಾರೂ ಈ ಮಾತನ್ನು ಹೇಳುತ್ತಿಲ್ಲ. ನನ್ನ ಬೆಂಬಲಿಗರು ಮತದಾನ ಮಾಡುವ ದಿನಕ್ಕಾಗಿ (ಏಪ್ರಿಲ್‌ 17) ಕಾಯುತ್ತಿದ್ದಾರೆ. ನನ್ನನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಲು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ‘ಸಚಿವರಾಗಿ ಪ್ರಕಾಶ ಹುಕ್ಕೇರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಸಚಿವರನ್ನಾಗಿಯೇ ಉಳಿಸಿಕೊಳ್ಳಿ’ ಎಂದು ಬಿಜೆಪಿ ಮುಖಂಡರೇ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಸಾಧನೆಗಳ ಕುರಿತು ಹೇಳುವುದಕ್ಕಿಂತ ನನ್ನ ಕೆಲಸಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಇದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ.

* ಸಚಿವ ಸಂಪುಟದಲ್ಲಿ ನಿಮ್ಮನ್ನು ಉಳಿಸಿಕೊಳ್ಳುವ ಮನಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ ಅನಿಸುತ್ತಿಲ್ಲವೇ?
ನನಗೆ ಹಾಗೆ ಅನ್ನಿಸುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ‘ಗೆಲ್ಲುವ ಕುದುರೆ’ ಬೇಕಾಗಿತ್ತು. ಹೀಗಾಗಿ ನನ್ನನ್ನೇ ಕಣಕ್ಕೆ ಇಳಿಸಿದ್ದಾರೆ. ಸಚಿವನಾದ ಬಳಿಕ ನಾನೇನು ಹಗರಣ ಮಾಡಿಲ್ಲ. ಹೀಗಾಗಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

* ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಹಗರಣಗಳು ನಿಮ್ಮ ಪಾಲಿಗೆ ಗೆಲುವಿನ ಹಾದಿಯಲ್ಲಿರುವ ಮುಳ್ಳುಗಳು ಎಂದು ಅನಿಸುತ್ತಿಲ್ಲವೇ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದ ಹಗರಣಗಳ ಪಟ್ಟಿಗಳ ಸಂಖ್ಯೆಯೂ ದೊಡ್ಡದಿದೆ. ಯುಪಿಎ ಸರ್ಕಾರದ ಬಗ್ಗೆ ಜನ ಮಾತನಾಡುವು­ದಿಲ್ಲ. ಬಿ.ಎಸ್‌. ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರು ಜೈಲಿಗೆ ಹೋಗಿರುವುದು, ಹರತಾಳ ಹಾಲಪ್ಪ, ರೇಣುಕಾಚಾರ್ಯ ಪ್ರಕರಣಗಳಿವೆ. ಹೀಗಾಗಿ ಅಂಥ ಪರಿಣಾಮ ಆಗುವುದಿಲ್ಲ.

*  ನಿಮಗೆ ಏಕೆ ಮತ ಹಾಕಬೇಕು?
ಉತ್ತರ: ಅಭಿವೃದ್ಧಿ ಕೆಲಸಗಳ ಮೂಲಕ ನಾನು ಹೆಸರು ಮಾಡಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ರಸ್ತೆ, ಶೌಚಾಲಯ ನಿರ್ಮಿಸಿ­ಕೊಟ್ಟಿ­ದ್ದೇನೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ. ಎಸ್‌ಸಿ ಹಾಗೂ ಎಸ್‌ಟಿ ಕಾಲೋನಿಗಳಲ್ಲಿ ರಸ್ತೆ ಅಭಿವೃದ್ಧಿಗೊಳಿಸಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನ ನನಗೇ ಮತ ಹಾಕಬೇಕು.

* ಸಂಸದರಾದರೆ ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಳ್ಳುತ್ತೀರಿ?
ಕ್ಷೇತ್ರದಲ್ಲಿ ಸಂಚರಿಸಿದಾಗ ನೀರಾವರಿ ಕಲ್ಪಿಸುವ ಬಗ್ಗೆ ಜನರಿಂದ ಬೇಡಿಕೆ ಬಂದಿದೆ. ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡುತ್ತೇನೆ. ಈ ಯೋಜನೆಯಿಂದ ಅಥಣಿ ತಾಲ್ಲೂಕಿನ 7 ಹಳ್ಳಿಗಳು ಬಿಟ್ಟು ಹೋಗಿವೆ. ಈ ಹಳ್ಳಿಗಳಿಗೂ ಪ್ರತ್ಯೇಕ ನೀರಾವರಿ ಸೌಲಭ್ಯ ಕಲ್ಪಿಸಿಕೊಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.