ADVERTISEMENT

ಇದು ಸಿದ್ಧಾಂತಗಳ ಹೋರಾಟ: ಕೃಷ್ಣಾ ಪೂನಿಯಾ ಮನದಾಳ

ಸಚಿವ ರಾಜ್ಯವರ್ಧನ್‌ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿ

ತಬಿನಾ ಅಂಜುಮ್‌
Published 25 ಏಪ್ರಿಲ್ 2019, 9:04 IST
Last Updated 25 ಏಪ್ರಿಲ್ 2019, 9:04 IST
ಕೃಷ್ಣಾ ಪೂನಿಯಾ
ಕೃಷ್ಣಾ ಪೂನಿಯಾ   

ಜೈಪುರ ಗ್ರಾಮೀಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರದ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರಿಗೆ ಸ್ಪರ್ಧೆ ಒಡ್ಡಲು ಕಾಂಗ್ರೆಸ್‌ ಪಕ್ಷವು ಕಣಕ್ಕೆ ಇಳಿಸಿರುವುದು ಇನ್ನೊಬ್ಬ ಕ್ರೀಡಾಪಟು ಕೃಷ್ಣಾ ಪೂನಿಯಾ ಅವರನ್ನು. ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿರುವ ಕ್ರೀಡಾಪಟು, ಪದ್ಮಶ್ರೀ ಪುರಸ್ಕೃತೆ ಕೃಷ್ಣಾ ಪೂನಿಯಾ ಜೊತೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

* ಹಾಲಿ ಶಾಸಕಿಯಾಗಿರುವ ನಿಮ್ಮನ್ನು ಜೈಪುರ ಗ್ರಾಮೀಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷ ಕಣಕ್ಕೆ ಇಳಿಸಿದೆ. ಜನರ ಪ್ರತಿಕ್ರಿಯೆ ಹೇಗಿದೆ?
ಈ ಕ್ಷೇತ್ರ ನನಗೆ ಹೊಸದಲ್ಲ. 2013ರಲ್ಲಿ ನಾನು ಕಾಂಗ್ರೆಸ್‌ ಸೇರಿದ್ದೆ. ಇದಾಗಿ ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬಂದಿತ್ತು. ಆಗ ನಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕಾಗಿ ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದೆ. ಈಗ ಪುನಃ ಜನರ ಬಳಿಗೆ ಹೋದಾಗ ಎಲ್ಲರೂ ನನ್ನನ್ನು ಉತ್ಸಾಹದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಕೆಲವರು ಕ್ರೀಡಾಪಟುವಾಗಿ ಸ್ವಾಗತಿಸುತ್ತಾರೆ. ಆದರೆ ಹೆಚ್ಚಿನವರಿಗೆ ನಾನು ಒಬ್ಬ ರೈತನ ಮಗಳು.

* ನೀವು ಅಂತರರಾಷ್ಟ್ರೀಯ ಕ್ರೀಡಾಪಟು. ಈಗ ರಾಜಕಾರಣಿಯಾಗಿದ್ದೀರಿ. ನಿಮ್ಮ ಮುಂದಿರುವ ಸವಾಲುಗಳೇನು?
ನಾನು ಈಗಾಗಲೇ ಜನಪ್ರತಿನಿಧಿ. ನನ್ನ ಜವಾಬ್ದಾರಿಗಳೇನು ಎಂಬುದು ತಿಳಿದಿದೆ. ಆದ್ದರಿಂದ ಹೊಸ ಸವಾಲುಗಳು ಇವೆ ಅನ್ನಿಸುತ್ತಿಲ್ಲ. ಆದರೆ ನಾನು ಕ್ರೀಡಾಪಟುವಾಗಿದ್ದರಿಂದ ಜನರಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಕ್ರೀಡೆಯಲ್ಲಿ ಯಾವ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದೆನೋ ಅಷ್ಟೇ ಉತ್ಸಾಹದಿಂದ ಇಲ್ಲೂ ಕೆಲಸ ಮಾಡಬೇಕು ಎಂದು ಜನ ನಿರೀಕ್ಷಿಸುತ್ತಾರೆ.

ADVERTISEMENT

* ಜೈಪುರ ಗ್ರಾಮೀಣ ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು?
ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಜನರಲ್ಲಿ ಹಾಲಿ ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಇದೆ. ಕುಡಿಯುವ ನೀರು, ಶಿಕ್ಷಣ ಹಾಗೂ ಜೈಪುರ– ದೆಹಲಿ ಹೆದ್ದಾರಿ ಸಮಸ್ಯೆ ಬಗೆಹರಿಸಬೇಕೆಂಬುದು ಜನರ ನಿರೀಕ್ಷೆ. ಕೇಂದ್ರ ಸರ್ಕಾರ ನಮ್ಮನ್ನು ವಂಚಿಸಿದೆ ಎಂಬ ಭಾವನೆ ಇಲ್ಲಿನ ಯುವಕರಲ್ಲಿ ಇದೆ.

* ಹಾಲಿ ಸಂಸದ ರಾಜ್ಯವರ್ಧನ್‌ ರಾಥೋಡ್‌ ಸಂಸದರಾಗಿ ವಿಫಲರಾಗಿದ್ದಾರೆ ಎಂಬುದು ನಿಮ್ಮ ಅಭಿಪ್ರಾಯವೇ?
ಅವರು ಕ್ರೀಡಾ ಸಚಿವರಾದಾಗ ನಾನೂ ಸೇರಿದಂತೆ ಕ್ರೀಡಾ ಕ್ಷೇತ್ರದ ಎಲ್ಲರೂ ಖುಷಿಪಟ್ಟಿದ್ದೆವು. ಆದರೆ ಐದು ವರ್ಷಗಳಲ್ಲಿ ಎಲ್ಲರೂ ಭ್ರಮನಿರಸನಗೊಂಡಿದ್ದಾರೆ. ಸರ್ಕಾರದ ವಿರುದ್ಧ ಅತೃಪ್ತಿಯ ದೊಡ್ಡ ಅಲೆಯೇ ಇದೆ.

* ರಾಥೋಡ್‌ ಎರಡು ಪ್ರಮುಖ ಖಾತೆಗಳನ್ನು ಹೊಂದಿರುವ ಸಚಿವರು. ಅವರ ವಿರುದ್ಧ ಸ್ಪರ್ಧಿಸಬೇಕಲ್ಲಾ ಎಂಬ ಭಯ ಕಾಡುತ್ತಿಲ್ಲವೇ?
ಇದು ಇಬ್ಬರು ಕ್ರೀಡಾಪಟುಗಳ ಸ್ಪರ್ಧೆಯಲ್ಲ, ಎರಡು ಸಿದ್ಧಾಂತಗಳ ಹೋರಾಟ. ನಾನು ಅವರ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡದೆ, ಗೌರವಯುತವಾಗಿ ಹೋರಾಡುವೆ. ಎರಡು ಖಾತೆಗಳನ್ನು ಹೊಂದಿದ್ದರೂ ಅವರು ಕೆಲಸ ಮಾಡಲು ವಿಫಲರಾಗಿದ್ದಾರೆ ಎಂಬುದು ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.