ADVERTISEMENT

‘ಬ್ರಾಹ್ಮಣರಷ್ಟೇ ಅಲ್ಲ ಅನೇಕರಿಗೆ ಪ್ರಯೋಜನವಾಗಲಿದೆ’

ಮಂಜುನಾಥ್ ಹೆಬ್ಬಾರ್‌
Published 10 ಜನವರಿ 2019, 19:59 IST
Last Updated 10 ಜನವರಿ 2019, 19:59 IST
ಕೆ.ಎನ್‌. ವೆಂಕಟನಾರಾಯಣ
ಕೆ.ಎನ್‌. ವೆಂಕಟನಾರಾಯಣ   

‘ಆರ್ಥಿಕ ಹಿಂದುಳಿದಿರುವಿಕೆ ಆಧರಿಸಿ ಮೀಸಲಾತಿ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆ. ಇದು ಒಂದು ಜಾತಿಗೆ ಮಾತ್ರ ಸೀಮಿತವಾದ ನಿರ್ಧಾರವಲ್ಲ. ಮೇಲ್ಜಾತಿಯಲ್ಲಿದ್ದರೂ ಅತಿ ಬಡವರಾಗಿರುವ ಪ್ರತಿಭಾವಂತರಿಗೆ ಈ ಮೀಸಲಾತಿಯಿಂದ ಅವಕಾಶ ಸೃಷ್ಟಿಯಾಗಲಿದೆ’ ಎಂದು ಪ್ರತಿಪಾದಿಸುತ್ತಾರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಕೆ.ಎನ್‌.ವೆಂಕಟನಾರಾಯಣ. ಅವರ ಜತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

*ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ಬ್ರಾಹ್ಮಣರಿಗೆ ಮೀಸಲಾತಿ ನೀಡುವ ಅಗತ್ಯ ಇದೆಯೇ?
ನಾವು ಮೊದಲಿನಿಂದಲೂ ಬ್ರಾಹ್ಮಣರಿಗೆ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಆರ್ಥಿಕ ಹಿಂದುಳಿದಿರುವಿಕೆಯನ್ನು ಮಾನದಂಡವನ್ನಾಗಿಟ್ಟುಕೊಂಡು ಮೀಸಲಾತಿ ನೀಡಿ ಎಂಬುದಷ್ಟೇ ನಮ್ಮ ಬೇಡಿಕೆ. ಅದು ಬ್ರಾಹ್ಮಣರು ಮಾತ್ರ ಅಲ್ಲ, ಹಲವು ಸಮುದಾಯಗಳ ಆರ್ಥಿಕವಾಗಿ ಹಿಂದುಳಿದವರು ಇದರ ಲಾಭ ‍ಪಡೆಯುತ್ತಾರೆ. ‍‍ಪ್ರತಿಭಾವಂತರು ದೇಶದ ಆಸ್ತಿ. ಅವರಿಗೆ ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯ.

*ವಾರ್ಷಿಕ ಆದಾಯ ₹8 ಲಕ್ಷ ಇದ್ದವರು ಆರ್ಥಿಕವಾಗಿ ಹಿಂದುಳಿದವರು ಹೇಗಾಗುತ್ತಾರೆ?
ಸ್ಥಳೀಯ ಸನ್ನಿವೇಶಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಈ ಮಾನದಂಡ ಬದಲಿಸಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದಿದೆ. ಏನಾಗುತ್ತದೆ ಎಂಬುದನ್ನು ಕಾದು ನೋಡೋಣ.

ADVERTISEMENT

*ಹಿಂದುಳಿದ ಜಾತಿಗಳ ಹೆಸರಿನಲ್ಲಿ ಆರ್ಥಿಕವಾಗಿ ಬಲಾಢ್ಯರು ಸವಲತ್ತು ಕಬಳಿಸುತ್ತಿದ್ದಾರೆ ಎಂಬ ಆರೋಪ ಇದೆಯಲ್ಲ?
ಮೀಸಲಾತಿಯನ್ನು ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಮೀಸಲಾತಿಯನ್ನು ರದ್ದು ಮಾಡಿ ತೊಂದರೆಗೆ ಸಿಕ್ಕಿಹಾಕಿಕೊಳ್ಳಲು ಸರ್ಕಾರ ಕೂಡಾ ಇಷ್ಟಪಡುವುದಿಲ್ಲ. ಸರ್ಕಾರ ಉನ್ನತ ಮಟ್ಟದಲ್ಲಿ ಆಲೋಚನೆ ಮಾಡಿ ಮೀಸಲಾತಿಗೆ ನಿರ್ದಿಷ್ಟ ಅವಧಿಯ ಗಡುವು ನಿಗದಿಪಡಿಸಬೇಕು. ಬಳಿಕ ಅದನ್ನು ನಿಲ್ಲಿಸಬೇಕು.

*ಕೇಂದ್ರ ಸರ್ಕಾರ ಅಧಿಕಾರಾವಧಿಯ ಕೊನೆಯಲ್ಲಿ ಮಸೂದೆ ತರುವ ಅಗತ್ಯ ಏನಿತ್ತು?
ಕೇಂದ್ರ ಸರ್ಕಾರ ಹಿಂದುಳಿದವರ ಮೇಲಿನ ನೈಜ ಕಾಳಜಿಯಿಂದ ಈ ಮಸೂದೆ ತಂದಿದೆ. ಚುನಾವಣಾ ಸಮಯದಲ್ಲಿ ತಂದಾಗ ಆರೋಪ ಬರುವುದು ಸಹಜ. ಇದು ದೀರ್ಘಕಾಲ ಪರಿಣಾಮ ಬೀರುವ ಮಸೂದೆ.

*ದೇಶದಲ್ಲಿ ಉದ್ಯೋಗಾವಕಾಶ ದೊಡ್ಡ ಮಟ್ಟದಲ್ಲಿ ಸೃಷ್ಟಿ ಆಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಈ ಮೀಸಲಾತಿಯಿಂದ ಹೆಚ್ಚಿನ ಅನುಕೂಲ ಆಗುತ್ತದೆಯೇ?
ದೇಶದಲ್ಲಿ ಪ್ರತಿಭಾ ಪಲಾಯನ ಆಗುತ್ತಿದೆ. ಇದರ ಲಾಭವನ್ನು ಅಮೆರಿಕದಂತಹ ದೇಶಗಳು ಪಡೆಯುತ್ತಿವೆ. ಪ್ರತಿಭಾವಂತರನ್ನು ನಮ್ಮಲ್ಲಿ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಅವರ ಶಕ್ತಿ ಬಳಸಿಕೊಳ್ಳಬೇಕು. ಹೀಗಾಗಿ, ಅವರಿಗೆ ಉತ್ತೇಜನ ನೀಡಬೇಕು.

*ಯಾವ ಸಮೀಕ್ಷೆಯನ್ನೂ ನಡೆಸದೆ ಹಾಗೂ ಆಯೋಗದ ವರದಿಯನ್ನೂ ಪಡೆಯದೆ ಮಸೂದೆ ಮಂಡಿಸಲಾಗಿದೆ ಎಂಬ ಆಕ್ಷೇ‍ಪದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆ ಶೇ 3ರಷ್ಟು ಇದೆ. ಉತ್ತರ ‍ಪ್ರದೇಶದಲ್ಲಿ ಶೇ 7ರಷ್ಟು ಇದೆ. 30 ವರ್ಷಗಳ ಹಿಂದೆಯೇ ಹಾವನೂರು ವರದಿ ಸಲ್ಲಿಕೆಯಾಗಿದೆ. ಅದೇ ರೀತಿ, ದೇಶದಲ್ಲಿ ಹಲವು ವರದಿಗಳು ಇವೆ. ಅವುಗಳಲ್ಲಿ ಎಲ್ಲ ವಿವರಗಳು ಇವೆ. 10–15 ವರ್ಷಗಳಲ್ಲಿ ಬ್ರಾಹ್ಮಣರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿಲ್ಲ. ಆದರೂ, ಈ ಸನ್ನಿವೇಶ ಬಳಸಿಕೊಂಡು ರಾಷ್ಟ್ರೀಯ ಸಮೀಕ್ಷೆ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.