ADVERTISEMENT

ನುಡಿ ಬೆಳಗು: ಬದುಕಿನ ಲಯ ಅರಿಯಲಾಗದೆ...

ಪ್ರಜಾವಾಣಿ ವಿಶೇಷ
Published 16 ಜುಲೈ 2024, 23:16 IST
Last Updated 16 ಜುಲೈ 2024, 23:16 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಎಂಜಿನಿಯರಿಂಗ್‌ ಮುಗಿಸಿದ ತಕ್ಷಣ ಕೆಲಸ ಸಿಕ್ಕಿತು.ಊಹಿಸದಷ್ಟು ಸಂಬಳ ಕಂಡಿತು. ಬಾಲ್ಯದಿಂದ ಹುದುಗಿಸಿಕೊಂಡ ಆಸೆಗಳು ಭುಗಿಲೆದ್ದವು. ಖರೀದಿ, ಮೋಜು, ಪ್ರವಾಸ, ಕಾರು, ತಿರುಗಾಟ, ಪಟ್ಟಿ ಬೆಳೆಯುತ್ತಾ ಹೋಯಿತು. ಈತ ತನ್ನನಿತ್ಯ ಹೊಗಳುವ ಗೆಳೆಯರ ಗುಂಪು ಹಿಗ್ಗಿಸಿಕೊಂಡ. ಜೀವನ ಪರಮ ಸುಖ ಎನಿಸಿತು. 

ರಾತ್ರಿ ದುಡಿದು ಹಗಲು ಮಲಗುವ ಕೆಲಸ ನಿಧಾನಕ್ಕೆ ನೀರಸವಾಗತೊಡಗಿತು. ಮೊದಲು ಸುಖವೆನಿಸಿದ ಹವಾ ನಿಯಂತ್ರಿತ ಚೆಂದದ ಕಛೇರಿ ಉಸಿರುಗಟ್ಟುತ್ತಿತ್ತು. ಕೆಲಸದ ಒತ್ತಡ, ಮೇಲಿನವರ ಕಿರಿಕಿರಿ, ಹಗಲು ರಾತ್ರಿಗಳ ವ್ಯತ್ಯಾಸ ತಿಳಿಯದ ಸ್ಥಿತಿ ಜಿಗುಪ್ಸೆ ಎನಿಸಿತೊಡಗಿತು. 

ADVERTISEMENT

ಚಿಕ್ಕ ವಯಸ್ಸಿನಲ್ಲೇ ಆರೋಗ್ಯದಲ್ಲಿ ಬಿರುಕು ಕಾಣಿಸಿಕೊಂಡವು. ಕೆಲವರು ಬೇಗ ಮದುವೆಯಾದರೆ ಎಲ್ಲಾ ಸರಿ ಹೋಗುತ್ತದೆ ಎಂದುಪುಕ್ಕಟ್ಟೆ ಸಲಹೆ ಕೊಟ್ಟರು. ತನ್ನಂತೆಯೇ ಐಟಿ ಕಂಪನಿಯಲ್ಲಿ ದುಡಿಯುತ್ತಿದ್ದ ಹುಡುಗಿಯ ಮಾತಾಡಿಸಿದ. ಪರಿಚಯ ಸ್ನೇಹಕ್ಕೆ,ನಂತರ ಪ್ರೇಮಕ್ಕೆ ಮುಂದೆ ಮದುವೆಯ ದಿನಾಂಕಕ್ಕೆ ಬಂದಿತು. ಮನೆಯ ಎರಡೂ ಬದಿಯಲ್ಲೂ ವಿರೋಧಹೊಗೆಯಾಡಿತು. ಜಾತಿ,ಅಂತಸ್ತು, ಭಾಷೆ, ರಾಜ್ಯಗಳು ಅಡ್ಡಿ ಬಂದವು. ಮುನಿಸಿಕೊಂಡವರ ಜೊತೆ ಮಾತಾಡಿ, ಒಪ್ಪಿಸಿ, ಬದುಕಲ್ಲಿ ಮುಂದೆ ಏನೇ ಆದರೂ ನಾವಿಬ್ಬರೇ ಹೊಣೆ ಎಂದು ಹೇಳಿ ಒಂದಾದರು. ಮುಂದಿನ ವರ್ಷದಲ್ಲೇ ಕಂದನ ಪಡೆದರು. ಇಬ್ಬರೂ ಕೆಲಸಕ್ಕೆ ಹೊರಗೆ ಹೋಗುವ ಕಾರಣ ಮನೆಯ ಜವಾಬ್ದಾರಿ ಹಂಚಿಕೆಯಾಗಬೇಕಿತ್ತು. ಹೆಂಡತಿಯೂ ತಾಯಿಯೂ ಆದವಳು ಹೆಚ್ಚು ಒತ್ತಡದಲ್ಲಿದ್ದಳು. ಇವನು ಯಥಾಪ್ರಕಾರ ಮೊದಲಿನ ಐಷಾರಾಮಿ, ಸೋಂಬೇರಿ, ಮನೆಯಾಚೆ ಕಾಲ ಕಳೆಯುವ ಗೆಳೆಯರ ಸೇರಿದ. ನಶೆಯಲ್ಲಿರುವುದು ಗಂಡಾದ ತನ್ನ ಹಕ್ಕೆಂದು ನಿರ್ಣಯಿಸಿಕೊಂಡ.

ಈ ಹೆಣ್ಣು ಮಗಳಿಗೆ ಎಲ್ಲವನ್ನೂ ಸಂಭಾಳಿಸುವುದು ಕಷ್ಟವಾಗತೊಡಗಿತು. ಮನೆ, ಮಗು, ಹೊರಗೆಲಸ ಯಾವುದೂ ಬಿಡುವಂತಿರಲಿಲ್ಲ.ಇಷ್ಟರಲ್ಲೇ ಇವನು ಕೆಲಸ ಮಾಡುತ್ತಿದ್ದ ಕಂಪನಿ ಅದಕ್ಷತೆಯ ಕಾರಣ ಒಡ್ಡಿ ಉಗಿದು ಹೊರಗಟ್ಟಿತು. ಹೊಸ ಕೆಲಸ ಹುಡುಕುವ ಬದಲಿಗೆ ಮನೆಯಲ್ಲೇ ಟಿ.ವಿ, ಸಿನಿಮಾ ನೋಡುತ್ತಾ ಮಗು ಆಡಿಸುತ್ತಾ ಕಾಲ ಕಳೆದ. ಸಂಜೆಗೆ ಕಣ್ಮರೆಯಾಗಿ ಬೆಳಗಿನ ಜಾವಕ್ಕೆ ಕದ
ತಟ್ಟುವ ಪತಿಯಾದ. ಒಪ್ಪಿ ಮದುವೆಯಾದ ಕಾರಣ ಹೆತ್ತವರ ಬಳಿ ಕೂಡ ಈಕೆ ದೂರು ಸಲ್ಲಿಸುವಂತಿಲ್ಲ. ಕೊನೆಗೆ ಸಂಸಾರ ಈಗ ಕೋರ್ಟಿನ ಬಾಗಿಲಲ್ಲಿ ನ್ಯಾಯಕ್ಕಾಗಿ ನಿಂತು ಬಿಟ್ಟಿದೆ.

ಉತ್ತಮ ಓದು, ಒಳ್ಳೆಯ ಕೆಲಸ, ಕೈ ತುಂಬ ಸಂಬಳ, ನಗರದ ಬದುಕು ಸಿಕ್ಕರಷ್ಟೆ ಸುಖ ಸಿಗುವುದಿಲ್ಲ. ಹೇಗೆ ಬಾಳಬೇಕೆಂಬ ಕನಿಷ್ಠ ಶಿಸ್ತು, ಹಿಡಿಯಷ್ಟು ಆದರ್ಶ, ತಿದ್ದಿ ಹೇಳಬಲ್ಲ ಗೆಳೆಯರು, ಹೆತ್ತವರ ಸಂಪರ್ಕ ಇಲ್ಲದಿದ್ದರೆ ಬದುಕು ಹೀಗೆ ಮೂರಾ ಬಟ್ಟೆಯಾಗುತ್ತದೆ.ಚಿಕ್ಕ ವಯಸ್ಸಿಗೆ ಸಕಲವನ್ನೂ ಗಳಿಸುವ ಇಂದಿನ ತಲೆಮಾರಿಗೆ ತಿಳಿವಳಿಕೆಯ ಆಪ್ತ ಮಾತು ಹೇಳಬಲ್ಲವರು ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.