ADVERTISEMENT

ನುಡಿ ಬೆಳಗು: ನನ್ನ ದೇವರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 0:14 IST
Last Updated 11 ಸೆಪ್ಟೆಂಬರ್ 2025, 0:14 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ನನ್ನ ಪರಿಚಿತ ಸಾಹಿತಿಯೊಬ್ಬರ ಸಂಬಂಧಿಗೆ ಬಾಡಿಗೆ ಮನೆ ನೋಡಲು ಹೋದಾಗ ಬಾಡಿಗೆ, ಮುಂಗಡ ಹಣ ಎಲ್ಲ ಒಪ್ಪಿಗೆಯಾಗಿ ಕೊನೆಯಲ್ಲಿ ಅವರು ಕೇಳಿದ ಪ್ರಶ್ನೆ: ‘ನೀವು ಯಾವ ಜನ?’. ಇಂಥವರು ಎಂದು ಗೊತ್ತಾದ ಮೇಲೆ ಆ ಕ್ಷಣ ಸುಮ್ಮನಿದ್ದು ಮಾರನೆಯ ದಿನ, ‘ಅಯ್ಯೋ ನನಗೆ ಗೊತ್ತಿರಲಿಲ್ಲ. ಮೊನ್ನೆಯೇ ಯಾರೋ ಟೋಕನ್ ಅಡ್ವಾನ್ಸ್ ಮಾಡಿದ್ದಾರಂತೆ, ಕ್ಷಮಿಸಿ’ ಎನ್ನುವ ಉತ್ತರ. ಆಗ ನೆನಪಾಗಿದ್ದೇ ಆತ್ಮಾನಂದರು ಎನ್ನುವ ಅರವಿಂದರ ಅನುಯಾಯಿ ಹೇಳಿದ್ದ ಈ ಕಥೆ. 

ಊರವರೆಲ್ಲಾ ಸೇರಿ ಗುರುವೊಬ್ಬನನ್ನು ಪ್ರವಚನ ಹೇಳುವಂತೆ ಊರಿಗೆ ಕರೆಸಿದ್ದರು. ಗುರುವಿನ ಆಗಮನದಿಂದ ಊರಲ್ಲಿ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆ ಪೂಜೆ ಪುನಸ್ಕಾರಗಳ ನಂತರ, ಊರವರ ಜೊತೆ ಮಾತುಕತೆ. ಒಂದು ಬೆಳಿಗ್ಗೆ ಗುರುಗಳು ಪೂಜೆಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಆಗ ಊರಿನ ಒಬ್ಬ ಮನುಷ್ಯ ಕೈಗಳಲ್ಲಿ ಅದೇ ತಾನೇ ಕಿತ್ತು ತಂದಿದ್ದ ತಾವರೆ ಹಿಡಿದು ಅಲ್ಲಿಗೆ ಬಂದ. ಹೂಗಳನ್ನು ನೋಡಿ ಗುರುಗಳು, ‘ಆಹಾ ಇವತ್ತು ನನ್ನ ದೇವರು ಎಂಥಾ ಪುಣ್ಯ ಮಾಡಿದ್ದ. ಇಷ್ಟು ಚೆನ್ನಾಗಿರುವ ಹೂಗಳನ್ನು ಮುಡಿದುಕೊಳ್ಳುತ್ತಾನಲ್ಲಾ’ ಎಂದರು. ಅದನ್ನು ಕೇಳಿದ ಊರಿನವರು, ‘ಗುರುಗಳೇ ಅವನು ಅಂತ್ಯಜ’ ಎಂದರು. ಅವನನ್ನು ದಿಟ್ಟಿಸಿದ ಗುರು ಅಂತ್ಯಜನ ಕೈಹಿಡಿದು ದೇವರ ಮನೆಯೊಳಗೆ ಕರೆದುಕೊಂಡು ಹೋಗಿ, ‘ನನ್ನ ದೇವರಿಗೆ ನೀನೇ ಹೂವನ್ನಿಡು’ ಎನ್ನುತ್ತಾರೆ. ಇದೆಲ್ಲಾ ಗಮನಿಸುತ್ತಿದ್ದ ಒಬ್ಬನು ಸುದ್ದಿಯನ್ನು ಊರವರಿಗೆ ಮುಟ್ಟಿಸುತ್ತಾನೆ. ಜನ ಕೋಪಗೊಂಡು ದಂಡುಕಟ್ಟಿಕೊಂಡು ಬರುತ್ತಾರೆ. 

ADVERTISEMENT

‘ಹೀಗೆ ಜಾತಿಯಲ್ಲದವರನ್ನು ಮನೆಯೊಳಗೆ ಅದರಲ್ಲೂ ದೇವರ ಮನೆಯೊಳಗೆ ಬಿಟ್ಟುಕೊಳ್ಳುವುದು ಸರಿಯಾ’ ಊರವರ ಪ್ರಶ್ನೆ ಗುರುವಿಗೆ ತುಂಬಾ ಕ್ಲೀಷೆ ಅನ್ನಿಸಿತು. ‘ಯಾಕೆ ಬಿಟ್ಟುಕೊಂಡರೆ ಏನಾದೀತು?’ ಎಂದರು. ‘ಒಂದು ಪದ್ಧತಿ ಬೇಡವಾ? ದೇವರನ್ನು ಮೈಲಿಗೆ ಮಾಡಿಬಿಟ್ಟಿರಿ’ ಎಂದರು ಕಡುಕೋಪದಿಂದ. ಗುರುಗಳು ನಕ್ಕು, ‘ನಿಮ್ಮ ದೇವರು ಮೈಲಿಗೆಯಾಗಬಹುದು. ನನ್ನ ದೇವರು ಮೈಲಿಗೆಯಾಗುವಷ್ಟು ದುರ್ಬಲ ಅಲ್ಲ’ ಎಂದರು. ಊರಿನವರಿಗೆ ಗುರುಗಳದ್ದು ವಿತಂಡವಾದ ಅನ್ನಿಸಿ, ‘ಶಾಸ್ತ್ರ  ಸಂಪ್ರದಾಯ ಬೇಡವಾ?’ ಎಂದರು. ‘ನಿಮ್ಮ ಕಥೆ ಗೊತ್ತಿಲ್ಲ, ನಾನು ನಂಬುವುದು ಒಂದು ಶಕ್ತಿಯನ್ನು. ಅದು ದೇವರ ಮನೆಯಲ್ಲಿ ಬಂಧಿಯಾಗಿಲ್ಲ. ನಮ್ಮನ್ನು ಸೃಷ್ಟಿಸಿದ ಅವನೇ ಅಷ್ಟು ಅವಕಾಶಗಳನ್ನು ತೆರೆದಿರುವಾಗ, ನಾವು ಮಾತ್ರ ಕಣ್ಣುಗಳನ್ನು ಕಟ್ಟಿಕೊಂಡು ಯಾಕೆ ಕೂಡಬೇಕು’ ಎಂದರು. ಅಸಮಾಧಾನವಾದರೂ ಊರವರು ಮಾತಾಡಲಿಲ್ಲ. ಗುರು, ‘ನಾನು ಈಗಲೇ ಹೊರಡುವೆ’ ಎಂದರು. ಊರವರಲ್ಲಿ ಕೆಲವರು ಅವರನ್ನು ತಡೆಯುತ್ತಾ, ‘ತಿಳಿಯದೆ ಏನೋ ಹೇಳಿದ್ದಕ್ಕೆ ನೀವು ಹೊರಟೇ ಬಿಡುವುದಾ’ ಎಂದರು. ಗುರು ನಕ್ಕರು. ‘ಅವನ ದೇಹದ ಯಾವ ಭಾಗದಲ್ಲಾದರೂ ಅವನು ಅಂತ್ಯಜ ಎಂದು ಬರೆದಿದೆಯಾ ತೋರಿಸಿ, ಆಗ ನಾನು ಇಲ್ಲಿ ಉಳಿಯುವೆ. ಇದಕ್ಕಿಂತ ನಿಮಗೆ ಹೇಳುವುದಕ್ಕೆ ನನ್ನಲ್ಲಿ ಏನೂ ಉಳಿದಿಲ್ಲ. ಹಸುಗಳಲ್ಲಿ ನಾಯಿಗಳಲ್ಲಿ, ಹಂದಿಗಳಲ್ಲಿ ಸಕಲ ಜೀವರಾಶಿಗಳಲ್ಲಿ ದೇವರನ್ನು ಕಂಡವರು ನಾವು, ನಮ್ಮ ಹಾಗೆ ಇರುವ ಈ ಮನುಷ್ಯರಲ್ಲಿ ಯಾಕೆ ಕಾಣಲ್ಲ? ಹಾಗೆ ಮಾಡಿ ನೋಡಿ. ನನ್ನ ದೇವರ ಥರಾ ನಿಮ್ಮ ದೇವರು ಶಕ್ತನಾಗುತ್ತಾನೆ’ ಎಂದರು.

ಈ ಕಥೆ ಹೇಳಿದ ಆತ್ಮಾನಂದರು ‘ದೇವರು ಹೆಚ್ಚು ದುರ್ಬಲವಾದಷ್ಟೂ ಮನುಷ್ಯ ಕೆಡುಕಿನತ್ತ ಹೋಗುತ್ತಾನೆ. ಒಳಿತು ಕೆಡುಕು ಎರಡೂ ಮನುಷ್ಯನ ಕೈಲೇ ಇರುತ್ತದೆ ಮಗೂ’ ಎಂದಿದ್ದರು. ಜಾತಿಯ ನೀತಿಯನ್ನು ಬಿಟ್ಟು, ಎಲ್ಲರನ್ನೂ ಒಳಗೊಂಡು ನಮ್ಮ ನಮ್ಮ ದೇವರನ್ನು ಶಕ್ತಿವಂತನನ್ನಾಗಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.