
ನುಡಿ ಬೆಳಗು
ಪೂರ್ಣನೆಂಬ ಒಬ್ಬ ಶಿಷ್ಯ ಬುದ್ಧನ ಬಳಿಗೆ ಬಂದು, ‘ನನ್ನ ಸಾಧನೆ ಪೂರ್ಣವಾಗಿದೆ ಎಂದಾದರೆ ಇನ್ನು ನಾನು ನಿಮ್ಮ ಸಂದೇಶಗಳನ್ನು ಜನರಿಗೆ ತಲುಪಿಸುವ ಕೆಲಸಕ್ಕೆ ತೊಡಗಬೇಕೆಂದಿದ್ದೇನೆ’ ಎಂದ. ಬುದ್ಧ ಯಾರನ್ನೂ ಪರೀಕ್ಷಿಸದೆ ಒಪ್ಪುವುದು ಸಾಧ್ಯವೇ ಇರಲಿಲ್ಲವಾದ್ದರಿಂದ ನಗುತ್ತಾ, ‘ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳು ಪೂರ್ಣಾ’ ಎಂದನು. ಪೂರ್ಣನಿಗೆ ತನ್ನ ಪರೀಕ್ಷೆಯ ಕಾಲವಿದು ಎಂದು ಅರ್ಥವಾಗಿ ಹೋಯಿತು. ಬುದ್ಧ ಕೇಳಿದ, ‘ನನ್ನ ಸಂದೇಶದ ಅಗತ್ಯ ಯಾರಿಗಿದೆ ಎಂದು ಎನಿಸುತ್ತಿದೆ ನಿನಗೆ’ ಎಂದು ಕೇಳಿದ. ಅದಕ್ಕೆ ಪೂರ್ಣನೆಂದ, ‘ಯಾರು ಇದುವರೆವಿಗೂ ನಿಮ್ಮ ಮಾತುಗಳನ್ನು ಕೇಳಿಲ್ಲವೋ ಅವರಿಗಿದೆ. ಹಾಗಾಗಿ, ಯಾವ ಭಿಕ್ಷುವೂ ಹೋಗದ ಸ್ಥಳಗಳಿಗೆ ಹೋಗಬೇಕೆಂದಿರುವೆ. ನಿಮ್ಮ ಸಂದೇಶಗಳಿಂದ ವಂಚಿತರಾದವರಿಗೆ ಅದನ್ನು ತಲುಪಿಸುವೆ’ ಎಂದ. ಆಗ ಬುದ್ಧ ಹೇಳಿದ, ‘ಪೂರ್ವ ದಿಕ್ಕಿನ ಕಾಡಿನ ಮಾರ್ಗವನ್ನು ದಾಟಿ ಹೋದರೆ ಅಲ್ಲಿ ದೊಡ್ಡದೊಂದು ನಗರವಿದೆ. ಅಲ್ಲಿಗೆ ಇದುವರೆಗೂ ಯಾವ ಭಿಕ್ಷುವೂ ಹೋಗಿಲ್ಲ. ಯಾಕೆಂದರೆ ಆ ದಟ್ಟವಾದ ಕಾಡಿನಲ್ಲಿ ಕಳ್ಳರ ದೊಡ್ಡ ದೊಡ್ಡ ದಂಡುಗಳೇ ಇವೆ. ಒಬ್ಬರು ಬಿಟ್ಟರೂ ಇನ್ನೊಬ್ಬರ ಕೈಗೆ ಸಿಕ್ಕಿಕೊಳ್ಳುವ ಭೀತಿ ಇದ್ದೇ ಇರುತ್ತದೆ. ಹೇಳು ಅಲ್ಲಿಗೆ ಹೋಗುತ್ತೀಯಾ’ ಎನ್ನುತ್ತಾನೆ. ಆಗ ಪೂರ್ಣ, ‘ಹೋಗಬಲ್ಲೆ ಗುರುವೇ, ನನಗೆ ಜನರನ್ನು ದುಃಖಮುಕ್ತವಾಗಿಸುವುದಷ್ಟೇ ಬೇಕಿದೆ’ ಎನ್ನುತ್ತಾನೆ.
ಬುದ್ಧನಿಗೆ ತನ್ನ ಶಿಷ್ಯನ ಗುರಿ ಮತ್ತು ಉದ್ದೇಶಗಳ ಸ್ಪಷ್ಟತೆಯಲ್ಲಿ ನಂಬಿಕೆ ಬಂದಿತಾದರೂ, ಪೂರ್ತಿಯಾಗಿ ಪರೀಕ್ಷಿಸುವುದು ಅವನ ಗುಣವೇ ಆಗಿತ್ತಾದ್ದರಿಂದ, ‘ಅಕಸ್ಮಾತ್ ಆಗಿ ಕಳ್ಳರು ನಿನ್ನ ಬಳಿ ಇರುವ ಎಲ್ಲವನ್ನೂ ಕೊಡು, ಇಲ್ಲದಿದ್ದರೆ ಸಾಯಿಸುತ್ತೇವೆ ಎಂದರೆ ಏನು ಮಾಡುವೆ’ ಎನ್ನುತ್ತಾನೆ. ‘ನನ್ನ ಬಳಿ ನೀನು ನೀಡಿದ ಜ್ಞಾನದ ಹೊರತಾಗಿ ಏನಿದೆ? ಅದು ಬಿಟ್ಟರೆ ನನ್ನ ಬಳಿ ಇರುವುದು ಈ ಭಿಕ್ಷಾಪಾತ್ರೆ ಮಾತ್ರ. ಅದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ, ನನ್ನ ಜೋಳಿಗೆಯಲ್ಲಿರುವುದನ್ನೆಲ್ಲಾ ಕೊಡುವೆ; ಒಂದು ಗಂಟೆ ನನ್ನ ಮಾತನ್ನು ಕೇಳಿ’ ಎಂದು ನಿನ್ನ ಎಲ್ಲ ಮಾತುಗಳನ್ನೂ ಅವರಿಗೆ ತಲುಪಿಸುವೆ. ನನ್ನ ಮಾತುಗಳಿಂದ ಅವರಲ್ಲಿ ಬದಲಾವಣೆಯಾದರೆ, ನನ್ನ ಗುರುವಿನ ಸಂದೇಶದಿಂದ ನಿಮ್ಮ ಜೀವನವನ್ನು ಬದಲಿಸಲು ನನ್ನಿಂದ ಸಾಧ್ಯವಾಯಿತು. ಇದಕ್ಕೆ ಕಾರಣರಾದ ನಿಮಗೆ ನನ್ನ ಕೃತಜ್ಞತೆಗಳು ಎನ್ನುವೆ ಪ್ರೀತಿಯಿಂದ’ ಎನ್ನುತ್ತಾನೆ ಪೂರ್ಣ. ಬುದ್ಧ ಮತ್ತೂ ಕೇಳಿದ, ‘ಅವರು ನಿನ್ನ ಮಾತನ್ನು ಕೇಳದೆ ನೀನು ತಪ್ಪಿಸಿಕೊಳ್ಳಲು ಇದನ್ನೆಲ್ಲಾ ಮಾಡುತ್ತಿರುವೆ ಎಂದು ನಿನ್ನ ತಲೆ ಕಡಿದೇ ಕಡಿಯುತ್ತೇವೆ ಎಂದರೆ?’. ಪೂರ್ಣ ಶಾಂತವಾಗಿ ಹೇಳಿದ, ‘ಭಯ ಏಕೆ ಗುರುವೇ? ಹುಟ್ಟಿದ ಎಲ್ಲವೂ ಸಾಯುವುದು ಪ್ರಕೃತಿ ಧರ್ಮ. ನನ್ನನ್ನು ಮುಕ್ತರಾಗಿಸುತ್ತಿರುವ ನಿಮಗೆ ನನ್ನ ಕೃತಜ್ಞತೆಗಳು ಎಂದು ಹೇಳುತ್ತೇನೆ ಅದೇ ಪ್ರೀತಿಯಿಂದ’ ಎಂದ. ಬುದ್ಧನಿಗೆ ಖಾತ್ರಿಯಾಯಿತು ಇವನು ಸಾಧನೆಯ ಎಲ್ಲ ಹಂತಗಳನ್ನು ದಾಟಿ ಪೂರ್ಣನೇ ಆಗಿದ್ದಾನೆಂದು- ಹೇಳಿದ, ‘ಎಲ್ಲವನ್ನೂ ಪ್ರೀತಿಯಿಂದಲೇ ಹೇಳಬೇಕೆನ್ನುವ ನಿನ್ನ ಭಾವನೆ ದೊಡ್ಡದು. ಈಗ ಇಡೀ ಜಗತ್ತು ನಿನ್ನದೇ. ನೀನು ಜಗತ್ತಿನ ಯಾವ ಮೂಲೆಗೆ ಹೋದರೂ ನನ್ನ ಮಾತುಗಳನ್ನು ತಲುಪಿಸುತ್ತೀಯ ಎನ್ನುವ ನಂಬಿಕೆ ನನಗೆ ಬಂದಿದೆ. ನೀನಿನ್ನು ಹೊರಡಬಹುದು’ ಎನ್ನುತ್ತಾನೆ.
ಇನ್ನೊಬ್ಬರಿಗೆ ಏನನ್ನಾದರೂ ಹೇಳುವಾಗ ಯಾವ ಪ್ರತಿಕ್ರಿಯೆ ಬಂದರೂ ಸರಿಯೇ, ಅದನ್ನು ಪ್ರೀತಿಯಿಂದ ಸ್ವೀಕರಿಸುವ ಮನಃಸ್ಥಿತಿ ಬೇಕು. ಇಲ್ಲವಾದರೆ ಬಂದದ್ದನ್ನು ಸಮಸ್ಥಿತಿಯಲ್ಲಿ ಸ್ವೀಕರಿಸಲು ಸಾಧ್ಯವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.