ADVERTISEMENT

ನುಡಿ ಬೆಳಗು | ಹಿಡಿ ಮತ್ತು ಬಿಡುಗಳ ಮಥನ

ವಾಸುದೇವ ನಾಡಿಗ್
Published 26 ಆಗಸ್ಟ್ 2025, 23:45 IST
Last Updated 26 ಆಗಸ್ಟ್ 2025, 23:45 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಕಳೆದ ವರ್ಷವಷ್ಟೇ ಸಿಬಿಎಸ್‌ಇ ಹತ್ತನೇ ತರಗತಿ ಓದುವಾಗಲೇ ಹೊಂದಾಣಿಕೆ ಸಮಸ್ಯೆಯೋ, ಇನ್ಯಾವುದೋ ಅಂತರಂಗದ ಆತಂಕವೋ ನೋವೋ ಓದಿನ ಒತ್ತಡವೋ ಖಿನ್ನತೆಗೆ ಜಾರಿದ ಹುಡುಗಿ. ಪಾದರಸದ ಹಾಗೆ ಪುಟಿದೇಳುತ್ತಿದ್ದವಳು ಏಕ್ ದಂ ನಿಸ್ತೇಜ ಮತ್ತು ಮೌನಿ. ನಕ್ಕರೆ ಹತ್ತು ಮನೆಗೆ ಕೇಳುವ ಹಾಗೆ ‘ವಿಶಿಷ್ಟ’ವಾಗಿ ನಗುತ್ತಿದ್ದವಳು ಈಗ ಗಾಢ ಮೌನದಿಂದ ಎಲ್ಲರೂ ಕೇಳುವ ಹಾಗಾದಳು. ಏನಾಯಿತು, ಯಾಕಾಯಿತು ಮನಸ್ಸು ಯಾಕೆ ಹೀಗೆ ದೇಹವನ್ನು ಅಲ್ಲಾಡದ ಹಾಗೆ ಅಣತಿಕೊಟ್ಟಿತೋ ಗೊತ್ತಿಲ್ಲ. ಅಂತೂ ಇಂತೂ ತುಸು ಮಟ್ಟಿಗೆ ಹೊರಗೆ ಬಂದು ಸಿಬಿಎಸ್ಇ ಬೋರ್ಡಿನ ಸವಾಲಿನ ಪರೀಕ್ಷೆ ಮುಗಿಸಿ ಎಂಭತ್ತೈದು ಪ್ರತಿಶತ ಅಂಕವನ್ನೂ ಪಡೆದಳು. ನೀಟ್ ಇಂಟಿಗ್ರೇಟೆಡ್ ಕಾಲೇಜಿಗೆ ಎರಡು ತಿಂಗಳೂ ಆಗಿಲ್ಲ, ಧುತ್ತನೆ ತಂದೆಯ ಅಕಾಲಿಕ ಸಾವು. ಮೊನ್ನೆ ತಾನೆ ಖಿನ್ನತೆಯಿಂದ ಹೊರಬಂದ ಜೀವ ಅಪ್ಪನನ್ನು ಕಳೆದು ಕೊಳ್ಳೋದು. ಆ ನೋವು ಅನೂಹ್ಯ ಅವಳಿಗೇ ಗೊತ್ತು. ತಂದೆ ಹೋಗಿ ಐದನೇ ದಿನಕ್ಕೇ ಕಾಲೇಜು ಸೇರಿ ನೀಟ್ ಸೈಕಲ್ ಟೆಸ್ಟು ಬರೆದು ತರಗತಿಗೇ ಮೊದಲು ಮತ್ತು ಕನ್ನಡ ಪಿರಿಯಾಡಿಕಲ್ ಪರೀಕ್ಷೆಯಲ್ಲಿ ನಲವತ್ತಕ್ಕೆ ನಲವತ್ತು ಅಂಕ. ಅಪ್ಪ ಹೋದ ನಾಲ್ಕೇ ದಿನಕ್ಕೆ ಮತ್ತೆ ಎದ್ದು ಬಂದ ಅದೇ ಲವಲವಿಕೆ ಪುಟಿದೇಳುವ ಜೀವಕಾರಂಜಿ.

ಮನಸು ಎಷ್ಟು ವಿಸ್ಮಯ ನೋಡಿ. ಯಾವ ಸಮಯದಲ್ಲಿ ಅದು ದೇಹದ ಕೆಲವು ಅಂಗಗಳನ್ನು ನಿಸ್ತೇಜ ಮಾಡಿಬಿಡುತ್ತದೆ. ಯಾವುದೋ ಒಂದು ಸಂಬಂಧಿತ ನರ ಕೈ ಕಾಲು ಕಣ್ಣು ಗಂಟಲು ಕಿವಿ ಹೊಟ್ಟೆ ಕೊರಳಿಗೆ ‘ನೀನು ಏನೂ ಮಾಡಬೇಡ’ ಅಂತ ಸಂದೇಶವನ್ನು ಕಳಿಸಿದರೆ ಮುಗೀತು. ಈಗ ಇವಳ ವಿಷಯದಲ್ಲಿ ಹಾಗಲ್ಲ; ಮನಸಿನ ಅಸಮತೋಲನ ಮತ್ತು ಅದು ಹೂಡಿಸುವ ಮುಷ್ಕರಕ್ಕೆ ಅವಕಾಶವನ್ನೇ ಕೊಡಲಿಲ್ಲ. ಯಾವುದನ್ನು ಮರೆಯಬೇಕು ಯಾವುದನ್ನು ನೆನಪಿಡಬೇಕು ಎಂಬ ಮಥನದಲ್ಲಿ ಹುಟ್ಟಿದ ಅಮೃತವನ್ನು ಬೊಗಸೆಯಲ್ಲಿ ಹಿಡಿದಳು.

ADVERTISEMENT

ನಮಗೆ ಹೊಂದಾಣಿಕೆಯಾಗದ, ರುಚಿಸದ, ಒಗ್ಗದ ಸಂಗತಿಗಳನ್ನು ನಿರ್ಲಕ್ಷಿಸುವುದೂ ಬಹುದೊಡ್ಡ ಆತ್ಮ ಸಾಕ್ಷಾತ್ಕಾರವೇ ಸರಿ. ಅನಗತ್ಯಗಳನ್ನು ಬಿಡುವ ಕಲೆಯೇ ಬಹುದೊಡ್ಡ ಜೀವನ ಕಲೆ ಅನಿಸುತ್ತದೆ. ಪ್ರೌಢತೆಯೆಂದರೆ ಕೇವಲ ಹಿಡಿಯುವುದಲ್ಲ ಬಿಡುವುದೂ ಕೂಡ. ಯಾವುದನ್ನು ಮಾಡಬೇಕು, ಯಾವುದನ್ನು ಕೇಳಿಸಿಕೊಳ್ಳಬೇಕು, ಯಾವುದಕ್ಕೆ ಪ್ರತಿಕ್ರಿಯಿಸಬೇಕು ಎಂಬ ಅರಿವು ಇಲ್ಲಿ ಕೆಲಸ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ನಮ್ಮ ಪ್ರತಿಕ್ರಿಯೆಗಳ ಅಗತ್ಯವೇ ಇರುವುದಿಲ್ಲ. ವೃಥಾ ಕಸವನ್ನು ಮನಸಿನೊಳಗೆ ಸುರಿದುಕೊಳ್ಳುವ ಬದಲು ಖಾಲಿಯಾಗಿ ಅಮೃತಕ್ಕೆ ಕಾಯುವುದೇ ಸೊಗಸು. ಸವಾಲು ಇರುವುದು ಅಪ್ಪನ ಅನುಪಸ್ಥಿತಿಯನ್ನು ಯಾವುದರಿಂದ ತುಂಬಿಸಿಕೊಳ್ಳಬೇಕು ಎಂಬುದು. ಈ ಅರಿವು ಇವಳಿಗೆ ಸಾಧ್ಯ ಕೂಡ. ಅದು ಅವಳನ್ನು ಎತ್ತರಕ್ಕೆ ಬೆಳೆಸಬಲ್ಲದು ಕೂಡ.

ತಿದ್ದುಪಡಿ: ‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯ ನುಡಿ ಬೆಳಗು ಅಂಕಣದ ‘ಅನಾಮಿಕ ತ್ಯಾಗಿಗಳು’ ಬರಹದಲ್ಲಿ ಮುಂಬೈನಲ್ಲಿ ನಡೆದ  ಅಖಿಲ ಭಾರತ ಸಮಿತಿ ಸಭೆಯನ್ನು ನಾ.ದಿವಾಕರರು ರಾತ್ರಿ ಹನ್ನೆರಡು ಗಂಟೆಗೆ ಕನ್ನಡಿಗರೊಬ್ಬರ ಮನೆಯಲ್ಲಿ ನಡೆಸಿದ್ದರು ಎಂಬಲ್ಲಿ ಹೆಸರು ತಪ್ಪಾಗಿದ್ದು, ಅದು ರಂಗನಾಥ್‌ ದಿವಾಕರರು ಎಂದಾಗಬೇಕಿತ್ತು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.