ನುಡಿ ಬೆಳಗು
ಯಜಮಾನ್ತಿ ಗೌರಕ್ಕ ಕೆರೆಯ ದಂಡೆಯಲಿದ್ದ ಹಿಪ್ಪೆ ಮರದ ಬುಡಕ್ಕೆ ಒರಗಿಕೊಂಡು ಮನೆಯ ಬಟ್ಟೆ ತೊಳೆವ ಗಂಗಮ್ಮನನ್ನೇ ನೋಡುತ್ತಾ ಮುಖ ಇಳಿಬಿಟ್ಟು ಕುಳಿತಿದ್ದಳು. ಬಟ್ಟೆ ಒಗೆಯುವಾಗ ತನ್ನ ಜೊತೆ ಬರುತ್ತಿದ್ದ ಗೌರಕ್ಕ ಯಾವತ್ತೂ ಹೀಗೆ ಕುಳಿತವಳಲ್ಲ. ಅವಳು ಅಷ್ಟು ದೊಡ್ಡ ಮನೆಯ ಯಜಮಾನ್ತಿಯಾದರೂ ಮನೆಯ ಹಿರಿಯರ, ಗಂಡಸರ, ಅವರ, ಇವರ ನಿರ್ಬಂಧಗಳೇ ಹೆಚ್ಚಾಗಿದ್ದು ಗಂಡನೂ ಜಮೀನ್ದಾರಿಕೆಯ ದೌಲತ್ತಿನ ಗಂಡಸಾಗಿದ್ದ ಕಾರಣ ಮನೆ ಎಂದರೆ ಉಸಿರುಗಟ್ಟಿದಂತೆ ಅನಿಸುತ್ತಿತ್ತು. ಹೀಗೆ ಕೆಲಸದವರು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ಲವೋ ಎಂದು ಮೇಲುಸ್ತುವಾರಿ ಮಾಡುವ ನೆಪ ಇಟ್ಟುಕೊಂಡು ಆಗಾಗ ಹೊಲ, ತೋಟ, ಕೆರೆಯ ಕಡೆಗೆ ಬರುತ್ತಿದ್ದಳು. ಹಾಗೆ ಬಂದ ದಿನವಷ್ಟೇ ಅವಳಿಗೆ ಕಟ್ಟು ಬಿಚ್ಚಿದ ಆಕಳಿನ ಅನುಭವ.
ಅಂಥದ್ದರಲ್ಲಿ ಇವತ್ತು ಗೌರಕ್ಕ ಯಾರ ಜೊತೆಯೂ ತುಟಿ ಎರಡು ಮಾಡಲಿಲ್ಲ. ಏನನ್ನೋ ಕಳೆದುಕೊಂಡವಳಂತೆ, ತನ್ನೊಳಗೇ ಅಳುತ್ತಿರುವವಳಂತೆ ಸೋತವಳಂತೆ ಕುಂತುಬಿಟ್ಟಿದ್ದಳು. ನೋಡುವ ತನಕ ನೋಡಿದ ಗಂಗಮ್ಮ ತಡೆಯಲಾರದೆ, ‘ಅಲ್ಲ ಅವ್ವೋರೆ, ನಾನೂ ಅವಾಗಿಂದ ನೋಡ್ತಿದೀನಿ; ಆಕಾಶ ತಲೇಮೇಲೆ ಬಿದ್ದಂಗೆ ಕೂತಿದಿರಲ್ಲ.. ಏನಾಯ್ತು’ ಅಂದಳು. ಗೌರಮ್ಮ ತನ್ನ ನೋವನ್ನು ಇವಳ ಬಳಿ ಹೇಳಲೋ ಬೇಡವೋ ಎಂಬ ಗೊಂದಲದಲ್ಲಿ ಸುಮ್ಮನೇ ಕುಳಿತಳು. ಈಗ ಮನಸ್ಸಿಗೆ ಆಗಿರುವ ನೋವನ್ನು ಹೇಳಿಕೊಳ್ಳಬೇಕು. ಆದರೆ ಹೇಳಿಕೊಂಡರೆ ಏನಾಗುತ್ತದೋ, ಅದರ ಪರಿಣಾಮ ಘೋರವಾದರೆ? ಹೀಗೆ ಏನೇನೋ ಯೋಚನೆಗಳ ಗೊಂದಲಕ್ಕೆ ಬಿದ್ದು ಮೌನವನ್ನೇ ತಬ್ಬಿದಳು.
‘ಅವ್ವೋರೆ, ಈ ಕೆರೆ ಸುತ್ತಮುತ್ತ ಎಷ್ಟು ತಂಪಾಗಿದೆ ಅಲ್ಲವಾ. ಅಗೋ ನೋಡಿ ಆ ಕೊಕ್ಕರೆಗಳು ಎಷ್ಟು ಚಂದ ಆಡ್ತಾವೆ. ಕೆರೆ ಮಧ್ಯ ಇರೋ ಹೂಗಳ ಬಣ್ಣ ನೋಡಿ ಎಷ್ಟು ಚಂದ’ ಅಂದಳು. ಗೌರಮ್ಮ ಮೆಲ್ಲಗೆ ಕತ್ತೆತ್ತಿ ಸುತ್ತಮುತ್ತ ನೋಡಿದಳು. ಸುತ್ತಲಿನ ಹಸಿರು ಭರಿತ ವಾತಾವರಣ, ತಣ್ಣನೆಯ ಗಾಳಿ, ಕೆರೆಯೊಳಗೆ ಪುಳಗುಟ್ಟ ಮೀನು ಇವೆಲ್ಲವನ್ನು ನೋಡುತ್ತಾ ನೋಡುತ್ತಾ ಅವಳ ಮನಸ್ಸು ಸ್ವಲ್ಪ ಸಮಾಧಾನಕ್ಕೆ ಬಂತು. ‘ಅವ್ವೋರೆ, ಈ ಜಾಗ ಯಾಕೆ ಇಷ್ಟು ಚೆನ್ನಾಗಿದೆ ಗೊತ್ತಾ ನಿಮಗೆ’ ಅಂದಳು ಗಂಗಮ್ಮ. ಅವಳ ಕಡೆ ಯಾಕೆ ಎಂಬಂತೆ ನೋಡಿದಳು ಗೌರಮ್ಮ. ‘ತನ್ನ ಸುತ್ತಮುತ್ತ ಇರೋ ಕೊರತೆನ ಈ ಕೆರೆ ತುಂಬುತ್ತೆ ಕಣವ್ವಾ, ಅದಕ್ಕೇ ಈ ಜಾಗ ಹಿಂಗಿದೆ. ಮನುಷ್ಯನ ಮನಸ್ಸು ಈ ಕೆರೆ ಇದ್ದಂಗೆ. ಈ ನೋವು, ದುಃಖ, ಯಾತನೆ, ಅಸೂಯೆ, ಆಸೆ, ಸಮಸ್ಯೆ ಇವೆಲ್ಲಾ ಇಲ್ನೋಡಿ ಈ ಕೆರೇಲಿ ನೀರು ತುಂಬೈತಲ್ಲ ಹಂಗೆ ಅವನ ಮನಸ್ಸಿನಲ್ಲಿ ತುಂಬ್ಕಂಡೇ ಇರ್ತವೆ. ಈ ಕೆರೆ ತನ್ನ ಸುತ್ತ ಮುತ್ತ ಇರೋ ಹೊಲ ಗದ್ದೆ ತೋಟ ಎಲ್ಲದಕ್ಕೂ ತನ್ನೊಳಗಿರೋ ನೀರನ್ನು ಹಂಚಿ, ಕುಡಿಸಿ ತಾನು ಖಾಲಿ ಆಯ್ತದೆ. ಹಂಗೆ ಖಾಲಿ ಆದಾಗ್ಲೇ ಅದು ಮತ್ತೆ ತುಂಬಕೆ ಜಾಗ ಸಿಗದು ಅಲ್ವೇನವ್ವಾ, ನೀವೂ ನಿಮ್ಮೊಳಗೆ ಅದೇನು ತುಂಬ್ಕಂಡಿದೀರೋ ಅದನ್ನ ಹೊರಕ್ಕಾಕಿ ಹಗುರಾಗಿಬಿಡಿ. ದೇವರು ನಿಮಗೆ ಏನೆಲ್ಲಾ ಕೊಟ್ಟಿದಾನೆಯೋ ಅದರ ಬಗ್ಗೆ ಯೋಚಿಸಿ, ಸಾಧ್ಯ ಆದ್ರೆ ಈ ಕೆರೆಯಂಗೆ ನಿಮ್ಮ ಸುತ್ತಮುತ್ತಲಿನವರ ಕಷ್ಟಕ್ಕೆ ಜೊತೆಯಾಗಿ’ ಅಂದಳು ಗಂಗಮ್ಮ. ಗಂಗಮ್ಮನ ಮಾತುಗಳು ಗೌರಮ್ಮನ ಮನಸ್ಸನ್ನು ನಿರಾಳಗೊಳಿಸಿದವು.
ನಮ್ಮ ಬಳಿ ಏನಿದೆಯೋ ಅದರ ಬಗ್ಗೆ ನಮಗೆ ಅರಿವು ಮತ್ತು ಗೌರವ ಇರಬೇಕು ಆಗ ಮಾತ್ರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಶಕ್ತಿ ನಮಗೆ ದಕ್ಕುತ್ತದೆ. ಅದು ಬಿಟ್ಟು ನಮ್ಮಲ್ಲಿ ಇಲ್ಲದಿದ್ದುದರ ಬಗ್ಗೆ ದುಗುಡಪಡುತ್ತಾ ಕುಳಿತರೆ ನಾವೇ ಹಾಳಾಗುತ್ತೇವೆ. ನಮ್ಮ ಬಳಿ ಇರುವುದು ಏನು? ಅದರ ಸರಿಯಾದ ಬಳಕೆ ಹೇಗೆ ಎಂಬುದನ್ನು ಅರಿತು ನಡೆದರೆ ಸಂತೋಷ ಬೆನ್ನಿಗೆ ಬೀಳುವುದರಲ್ಲಿ ಅನುಮಾನವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.