
ನುಡಿ ಬೆಳಗು
ದಟ್ಟ ಕಾಡೊಂದರಲ್ಲಿ ಹಲವಾರು ಪ್ರಾಣಿಗಳು ವಾಸವಾಗಿದ್ದವು. ಸಿಂಹ, ಆನೆ, ಜಿಂಕೆ, ಕೋತಿ, ಚಿರತೆ, ಹಕ್ಕಿ, ಇರುವೆಗಳು ಹೀಗೆ ಪ್ರತಿಯೊಂದು ಜೀವಿಯೂ ಇದ್ದ ವೈವಿಧ್ಯಮಯ ಕಾಡು ಅದು.
ಕಾಡಿನ ರಾಜ ಸಿಂಹ ತನ್ನ ಗರ್ಜನೆಯಿಂದಲೇ ಕಾಡಿನ ರಕ್ಷಣೆಯಾಗುತ್ತಿದೆ ಎಂದು ನಂಬಿಕೊಂಡಿತ್ತು ಮತ್ತು ಹಾಗೆಯೇ ಹೇಳುತ್ತಿತ್ತು. ಸಿಂಹದ ಮಾತನ್ನು ಆನೆ ಅನುಮೋದಿಸುತ್ತಿತ್ತು. ಆನೆ ಕೂಡ ಗಾತ್ರವೇ ಪ್ರಮುಖವಾದದ್ದು ಎಂದು ತಿಳಿದಿತ್ತು. ಕಾಡಿನ ಅಭಿವೃದ್ಧಿಯ ಕುರಿತ ಸಭೆಗಳಿಗೆ ಚಿಕ್ಕ ಗಾತ್ರದ ಪ್ರಾಣಿಗಳನ್ನು ಯಾವಾಗಲೂ ಕರೆಯುತ್ತಿರಲಿಲ್ಲ. ಅಷ್ಟು ಮಾತ್ರವಲ್ಲ, ಇರುವೆಗಳಿಗೆ ಮೊಲಗಳಿಗೆ ಕಾಡಿನ ಬಗ್ಗೆ ಏನು ಗೊತ್ತಿದೆ ಎಂದು ಸಿಂಹ ಗಹಗಹಿಸಿ ನಗುತ್ತ ಹೇಳುತ್ತಿತ್ತು.
ಒಂದು ಮಳೆಗಾಲ ಮುಗಿದು, ಅದರ ಹಿಂದೆ ಚಳಿಗಾಲ ಕಳೆದು ಬೇಸಿಗೆ ಕಾಡಿನಲ್ಲಿ ಕಾಲಿಟ್ಟಿತು. ಈ ಬಾರಿ ಬಿರುಬೇಸಿಗೆಯ ಬಿಸಿ ಕಾಡಿಗೂ ತಟ್ಟದೇ ಬಿಡಲಿಲ್ಲ. ನೀರು ಆಹಾರ ಸಿಕ್ಕದೇ ಪ್ರಾಣಿಗಳಲ್ಲಿ ಹಾಹಾಕಾರ ಉಂಟಾಯಿತು. ಸಿಂಹ ತುರ್ತು ಸಭೆ ಕರೆಯಿತು. ಮಾಮೂಲಿಯಂತೆ ದೊಡ್ಡ ಗಾತ್ರದ ಪ್ರಾಣಿಗಳು ಮಾತ್ರ ಆಹ್ವಾನಿಸಲ್ಪಟ್ಟವು. ವಾದ ಪ್ರತಿವಾದಗಳಾದವು. ಆದರೆ ಪರಿಹಾರ ಸಿಗಲಿಲ್ಲ.
ಅಲ್ಲೇ ಪಕ್ಕದ ಪೊದೆಯಲ್ಲಿ ಓಡಾಡಿಕೊಂಡಿದ್ದ ಮೊಲವೊಂದಕ್ಕೆ ಈ ಪ್ರಾಣಿಗಳ ಮಾತು ಕೇಳಿಸಿತು. ಅದು ಹೋಗಿ ಅಳಿಲುಗಳು, ಹಕ್ಕಿಗಳು, ಇರುವೆ ಮುಂತಾದ ಪುಟ್ಟ ಜೀವಿಗಳನ್ನು ಸೇರಿಸಿತು. ನಾವು ಸಣ್ಣ ದೇಹದವರಿರಬಹುದು. ಆದರೆ ನಾವೂ ಈ ಕಾಡಿನಲ್ಲಿ ಬದುಕುತ್ತೇವೆ. ನಾವೂ ಈ ಸಮಸ್ಯೆಯ ಕುರಿತು ಯೋಚಿಸೋಣ ಅಂದಿತು. ಹಕ್ಕಿಗಳು ಹಾರಿ ಹೋಗಿ ಬೆಟ್ಟದ ತಪ್ಪಲಿನಲ್ಲಿ ನೀರಿನ ಗುಪ್ತ ಝರಿಯೊಂದನ್ನು ಪತ್ತೆ ಮಾಡಿದವು. ಇರುವೆಗಳು ನೆಲದಲ್ಲಿರುವ ಒದ್ದೆಯನ್ನು ಕಂಡುಹಿಡಿದು ಅಲ್ಲಿ ನೀರಿರಬಹುದೆಂದು ಊಹಿಸಿದವು. ಹಣ್ಣುಗಳನ್ನು ಬಿಡುವ ಬೃಹತ್ ಮರಗಳಿರುವ ಜಾಗವನ್ನು ಅಳಿಲುಗಳು ಕಂಡುಹಿಡಿದವು.
ಮೊಲ ಹೋಗಿ ಸಿಂಹಕ್ಕೆ ಈ ವಿಷಯ ಹೇಳಿದಾಗ ಸಿಂಹ ತಮಾಷೆ ಮಾಡಿತು. ‘ದೊಡ್ಡ ದೊಡ್ಡ ಸಮಸ್ಯೆಗಳಿಗೆ ದೊಡ್ಡ ದೊಡ್ಡ ಚಿಂತಕರು ಬೇಕು, ಸರಿ ಬದಿಗೆ’ ಅಂದಿತು. ಮೊಲ ಮತ್ತೊಮ್ಮೆ ಹೇಳಿದಾಗ ಈಗಾಗಲೇ ಆಹಾರ ನೀರು ಸಿಗದೇ ಒದ್ದಾಡುತ್ತಿದ್ದ ಸಿಂಹ ಒಪ್ಪಿತು. ಹಕ್ಕಿಗಳನ್ನು ಹಿಂಬಾಲಿಸಿ ಪ್ರಾಣಿಗಳು ನಡೆದವು. ಸಿಕ್ಕ ನೀರನ್ನು ಜಾಗರೂಕತೆಯಿಂದ ಸಂಗ್ರಹಿಸಿದವು. ಹಣ್ಣುಗಳನ್ನು ಹಂಚಿಕೊಂಡವು. ಪುಟ್ಟ ಪುಟ್ಟ ನೀರಿನ ಕೊಳಗಳಲ್ಲಿ ಮೀನುಗಳೂ ಸಿಕ್ಕವು. ಕೆಲ ದಿನಗಳಲ್ಲೇ ಮಳೆ ಬಂದು ಕಾಡು ಹಸಿರಾಯಿತು. ತೊರೆಗಳು ನಿಧಾನಕ್ಕೆ ಮೈದುಂಬಿದವು.
ಒಂದು ದಿನ ಸಂಜೆ ಸಿಂಹ ಸಭೆ ಕರೆಯಿತು. ವಿಶಾಲ ಆಲದ ಮರದ ಕೆಳಗೆ ಪ್ರಾಣಿಗಳೆಲ್ಲ ಸೇರಿದವು. ಈ ಬಾರಿ ಆಹ್ವಾನ ಎಲ್ಲರಿಗೂ ಹೋಗಿತ್ತು. ಸಿಂಹ ಹೇಳಿತು, ‘ನಾನು ಶಕ್ತಿಯೇ ಮುಖ್ಯ ಗಾತ್ರವೇ ಮುಖ್ಯ ಅಂದುಕೊಂಡಿದ್ದೆ. ಇವತ್ತು ಈ ಕಾಡಿನಲ್ಲಿ ನಾವೆಲ್ಲ ಕ್ಷೇಮವಾಗಿರಲು ಪ್ರತೀ ಪ್ರಾಣಿಯೂ ಕಾರಣ’ ಎಂದು ಹೇಳಿ ಮೊಲಕ್ಕೆ ಕೃತಜ್ಞತೆಯಿಂದ ವಂದಿಸಿತು. ಎಲ್ಲ ಪ್ರಾಣಿಗಳೂ ಚಪ್ಪಾಳೆ ತಟ್ಟಿದವು. ಅಂದಿನಿಂದ ಕಾಡಿನ ತೀರ್ಮಾನಗಳನ್ನು ಎಲ್ಲರೂ ಸೇರಿ ತೆಗೆದುಕೊಳ್ಳಲಾರಂಭಿಸಿದರು.
ಸಾಮರ್ಥ್ಯ ಎಂಬುದು ಗಾತ್ರ, ಶಕ್ತಿಯ ಮೇಲೆ ನಿರ್ಧಾರವಾಗುವುದಿಲ್ಲ. ಸಮಾಜದ ಪ್ರತಿಯೊಂದು ಧ್ವನಿಯೂ ಮುಖ್ಯವೇ. ನಿಜವಾದ ನಾಯಕತ್ವ ಎಂದರೆ ಅತ್ಯಂತ ಸಣ್ಣ ಧ್ವನಿಯೂ ಮುಖ್ಯ ಎಂದು ಗುರುತಿಸುವುದು ಕೂಡ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.