ADVERTISEMENT

ನುಡಿ ಬೆಳಗು: ನೆಲಮುಗಿಲಿನ ಮಧ್ಯೆ

ವಾಸುದೇವ ನಾಡಿಗ್
Published 16 ಸೆಪ್ಟೆಂಬರ್ 2025, 19:30 IST
Last Updated 16 ಸೆಪ್ಟೆಂಬರ್ 2025, 19:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಹದ್ದುಗಳ ನಡತೆಯೇ ಭಿನ್ನ. ಅವು ಗಿಳಿ, ಗುಬ್ಬಿ, ಕಾಗೆಗಳ ಹಾಗೆ ವಟ ವಟ ಗುಟ್ಟುವುದಿಲ್ಲ; ಸಾಧನೆಗೆ ಕೂತ ಮೌನ ತಪಸ್ವಿಯ ಹಾಗೆ ಅಥವಾ ಸಾಧಕರ ಹಾಗೆ ಕಾಣುತ್ತವೆ. ಲೋಕದ ಗದ್ದಲ ಎಲ್ಲ ಗೊತ್ತು. ಆದರೂ ಆಕಾಶದ ಸಖ್ಯ; ನೀರವ ಮತ್ತು ಎತ್ತರದ ಯಾನ. ಸಂತೆಯ ಜೊತೆಗೆ ಅಂಟಿಕೊಂಡಿದ್ದರೂ ಸಂತತನದ ಧ್ಯಾನ. ಬಾಳು ಮತ್ತು ಸಂಬಂಧಗಳನ್ನು ಒಂದಿಷ್ಟು ಅಂತರಗಳಲ್ಲಿ ಇಟ್ಟು ಪರಿಭಾವಿಸುವಂತೆ ಕಾಣುತ್ತದೆ ಹದ್ದಿನ ನಡೆ. ಎಷ್ಟು ಎತ್ತರ ಹಾರಿದರೂ ಊಟಕ್ಕೆ, ಹಸಿವಿಗೆ ನೆಲಕ್ಕೆ ಬರಲೇಬೇಕು; ಡೌನ್ ಟು ಅರ್ಥ್ ಅಂತೀವಲ್ಲ ಹಾಗೆ. ಸಾಮಾನ್ಯ ಜೀವನದ ನೆಲೆಕ್ಕೆ ತಲೆಬಾಗಿದ ಹಾಗೆ. ಎಲ್ಲಕ್ಕೂ ಅದರದ್ದೇ ಒಂದು ವಿಶೇಷತೆ ಇದೆ. ಮೀನು ಅಕಾಶದಲ್ಲಿ ಹಾರಲಾರದು, ಹದ್ದು ನೀರಿನಲ್ಲಿ ಈಜಲಾರದು. ಪ್ರತಿ ಜೀವಕ್ಕೂ ಒಂದು ಗೌರವ, ಘನತೆ ಮತ್ತು ಅರ್ಥವಿದೆ. ಕುವೆಂಪು ಇದನ್ನೇ ‘ಗೌರವಿಸು ಜೀವನವ ಗೌರವಿಸು ಚೇತನವ’ ಅಂತ ಹೇಳಿದ್ದು. ಮರದಲ್ಲಿ ನೆಲ್ಲಿಕಾಯಿ, ಬಳ್ಳಿಯಲಿ ಕುಂಬಳಕಾಯಿ ಇರುವುದು. ಮರದಲ್ಲಿ ಕುಂಬಳಕಾಯಿ ಇದ್ದಿದ್ದರೆ ನಮ್ಮ ತಲೆಯ ಪಾಡೇನು? ಹದ್ದಿನ ಬಾಳಿನ ಹದ್ದೇ ವಿಸ್ತಾರವಾದದ್ದು ನೆಲ ಮತ್ತು ಮುಗಿಲಿನ ಮಧ್ಯದ ಪರ್ಯಟನ ಅದು.

ನಮ್ಮ ಬಾಳೂ ಕೂಡಾ ಹೀಗೆ; ಸಾಧ್ಯತೆಗಳನ್ನು ಅವಲಂಬಿಸಿದೆ. ಕನಸುಗಳನ್ನು ಸಲಹಬಲ್ಲುದೇ ವಿನಾ ಎಲ್ಲವೂ ನನಸಾಗದು. ಪ್ರಯತ್ನವಂತೂ ಸದಾ ಜಾರಿಯಲ್ಲೇ ಇರಬೇಕು. ಜೀವ ಮತ್ತು ಶಕ್ತಿಗೆ ತಕ್ಕ ಹಾಗೆ ಸಾಧ್ಯತೆಗಳು. ನಮ್ಮ ನಮ್ಮ ಪರಿಮಿತಿಗಳನ್ನು ಕರಾರುವಾಕ್ಕಾಗಿ ಅರಿಯುವುದೂ ಕೂಡಾ ವಿವೇಕವೇ ಅನಿಸುತ್ತದೆ. ಆದರೆ, ಹದ್ದಿನ ಮಾತೇ ಬೇರೆ. ಏರು ಮತ್ತು ಇಳಿ ವ್ಯಾಪಕವಾದುದು. ಸದಾ ಸುರಕ್ಷಿತ ವಲಯವನ್ನು ಧಿಕ್ಕರಿಸುವ ಹದ್ದುಗಳು ತಮ್ಮ ಮರಿಗಳಿಗೂ ಮುಳ್ಳು ಬೆಣಚು ಕಲ್ಲುಗಳು ಮೇಲೆ ನಿಲ್ಲಿಸಿ ಹಾರಲು ಕಲಿಸುತ್ತವೆ. ಸುರಕ್ಷಿತ ವಲಯದಿಂದ ಹೊರಬಂದರೆ ಮಾತ್ರ ಸಾಧನೆ ಸಾಧ್ಯ ಎಂಬ ಮಾತಿಗೆ.

ADVERTISEMENT

ಆ ಮರಿಗಳು ಕುಪ್ಪಳಿಸಿ ಕುಪ್ಪಳಿಸಿ ಹಾರುತ್ತವೆ; ವಿಸ್ತಾರವಾದ ಕಣಿವೆ ಕಂದಕ ಬೆಟ್ಟ ತಪ್ಪಲು ಕಾಡುಗಳ ಮೇಲೆ ದಣಿವಿರದೆ ನಿರಂತರ. ಬಿದ್ದಲ್ಲೇ ಹಾಸಿಗೆ ಮೇಲೇ ಬಿದ್ದಿದ್ದರೆ ಈ ಎತ್ತರ ಸಾಧ್ಯವೇ ಇಲ್ಲ

ಹದ್ದುಗಳು ಕೂಡಾ ದಣಿಯುತ್ತವೆ, ಹಣ್ಣಾಗುತ್ತವೆ; ಹಾಗಂತ ಕುಸಿಯುವುದಿಲ್ಲ. ಬಾಳಿನ ಸಾಧ್ಯತೆಗಳನ್ನು ಮೊಟಕು ಗೊಳಿಸುವುದಿಲ್ಲ. ವಯಸ್ಸಾದಾಗ ಭಾರವಾದ ಮತ್ತು ಅಶಕ್ತ ರೆಕ್ಕೆಗಳನ್ನು ತಾವೇ ಕಿತ್ತು ಎಸೆಯುತ್ತವೆ. ಕೊಕ್ಕನ್ನು ಬಂಡೆಗಲ್ಲಿಗೆ ಉಜ್ಜಿ ಮೊನಚುಗೊಳಿಸಿಕೊಳ್ಳುತ್ತವೆ. ಪಾದ ಉಗುರುಗಳನ್ನು ಮಸೆದುಕೊಳ್ಳುತ್ತವೆ. ಮತ್ತೆ ಹಗುರಾಗಿ ಹೊಸದಾಗಿ ಹಾರಲು ಅಣಿಯಾಗುತ್ತವೆ. ಬದುಕು ಮುಗಿಯುವುದಿಲ್ಲ, ನಾವು ಮುಗಿಸಿಕೊಳ್ಳುತ್ತೇವೆ ಅಷ್ಟೆ. ಆದರೆ ಹದ್ದುಗಳು ಬಾಳನ್ನು ಮುಗಿಯಗೊಡಲು ಬಿಡದೆ ವಿಸ್ತರಿಸಿಕೊಳ್ಳುತ್ತದೆ. ನಿರುತ್ಸಾಹ, ವಿಷಾದ, ವೃದ್ಧಾಪ್ಯ, ಅಶಕ್ತತೆ, ಅಸಾಧ್ಯತೆ ಎಂದೆಲ್ಲ ಗೊಣಗುವ ನಮಗೆ ಹದ್ದಿನ ಈ ಹದ್ದು ಬಹುದೊಡ್ಡ ಪಾಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.