ADVERTISEMENT

ನುಡಿ ಬೆಳಗು: ಮುಳ್ಳು ಮತ್ತು ಪ್ರೀತಿ

ಪಿ. ಚಂದ್ರಿಕಾ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
   

ಒಮ್ಮೆ ಮಹಾವೀರ ಕಿಷ್ಕಿಂಧೆಯಂತೆ ಇಕ್ಕಿರಿದು ಮುಳ್ಳುಗಿಡಗಳಿಂದ ಕೂಡಿದ್ದ ಕಾಡಿನ ಹಾದಿಯಲ್ಲಿ ಹೋಗುತ್ತಿದ್ದ. ಮಹಾವೀರನ ಶಿಷ್ಯರು ಮುಂದೆ ಹೋಗುತ್ತಿದ್ದವರು ಇನ್ನು ಮುಂದೆ ಹೋಗಲಾರೆವು ಎಂದು ನಿಂತುಬಿಟ್ಟರು. ಅವರ ಮೈ ಮುಳ್ಳುಗಳ ತರಚು ಗಾಯದಿಂದ ತುಂಬಿತ್ತು. ರಕ್ತವೊಸರುವ ಗಾಯಗಳನ್ನು ಅಲ್ಲೇ ಇದ್ದ ಎಲೆಗಳನ್ನು ಹರಿದು ಒರೆಸಿಕೊಳ್ಳುವಾಗ ಅದನ್ನು ಕಾಣದಂತೆ ಮಹಾವೀರ ಮುಂದಕ್ಕೆ ನಡೆದ. ಅವನನ್ನು ಶಿಷ್ಯರು ತಡೆದು ನಿಮ್ಮ ಮೈಗೂ ಹೀಗೇ ಗಾಯವಾಗಬಹುದು ನಿಲ್ಲಿ, ಮುಳ್ಳುಗಳನ್ನು ಸವರಿ ನಂತರ ಮುಂದಕ್ಕೆ ಹೋಗೋಣ ಎಂದರು. ಮಹಾವೀರ ಶಿಷ್ಯರ ಮಾತುಗಳಿಗೆ ನಸುನಕ್ಕು ಸುಮ್ಮನೆ ಅವನ ಪಾಡಿಗೆ ಅವನು ಮುಂದೆ ಹೊರಟ. ಅವನು ನಡೆಯುವ ಹಾದಿಯಲ್ಲಿ ಮುಳ್ಳುಗಳು ಹಿಂದಕ್ಕೆ ತಿರುಗಲಾರಂಭಿಸಿದವು. ಇದೇನು ಪವಾಡ ಎನ್ನುವಂತೆ ಅಚ್ಚರಿಯಿಂದ ನೋಡುತ್ತಾ ನಿಂತರು ಶಿಷ್ಯರು. ಮಹಾವೀರ ಮುಂದೆ ಹೋದಂತೆ ಹಿಂದಿನಿಂದ ಮುಳ್ಳುಗಳು ಯಥಾಸ್ಥಿತಿಗೆ ಬರುತ್ತಿದ್ದವು. ಮಹಾವೀರನ ಮೈಮೇಲೆ ಒಂದೇ ಒಂದು ಸಣ್ಣ ತರಚು ಗಾಯವೂ ಆಗಲಿಲ್ಲ. ಇದನ್ನು ನೋಡಿ ಇದೊಂದು ಪವಾಡವೇ ಸರಿ ಎಂದು ಶಿಷ್ಯರು ನಿರ್ಧರಿಸಿದರು. ತಾವು ಕಂಡು ಕೇಳರಿಯದ ಘಟನೆಗೆ ಶಿಷ್ಯರು ಸಾಕ್ಷಿಯಾಗಿದ್ದರು.

ಅಂದಿನ ಪ್ರಯಾಣವನ್ನು ಮುಗಿಸಿ ಒಂದೆಡೆ ಉಳಿಯುವ ನಿರ್ಧಾರವನ್ನು ಮಾಡಲಾಯಿತು. ಸಂಜೆ ಶಿಷ್ಯನೊಬ್ಬ ಕೇಳಿಯೇ ಬಿಟ್ಟ, ‘ಇದ್ಯಾವ ಪವಾಡ ನೀವು ನಡೆಸಿದ್ದು?’ ಮಹಾವೀರ ನಕ್ಕು, ‘ಪವಾಡ ಯಾವುದೂ ನಡೆಯಲಿಲ್ಲವಲ್ಲ’ ಎಂದ. ಕಣ್ಣಾರೆ ಕಂಡದ್ದನ್ನು ಹಾಗೇ ಬಿಡಲು ಯಾರು ಒಪ್ಪುತ್ತಾರೆ? ಮತ್ತೆ ಶಿಷ್ಯ ಪ್ರಶ್ನಿಸಿದ, ‘ಸುಳ್ಳು ಹೇಳಬೇಡಿ. ನಮಗೆ ಚುಚ್ಚಿದ ಮುಳ್ಳು ನಿನ್ನನ್ನು ಯಾಕೆ ಚುಚ್ಚಲಿಲ್ಲ?’ ಎಂದು. ಮಹಾವೀರ ಗಂಭೀರನಾದ. ‘ಅಲ್ಲಿ ಯಾವ ಪವಾಡವೂ ನಡೆಯಲಿಲ್ಲ; ಅಲ್ಲಿ ಸಂಭವಿಸಿದ್ದು ಪ್ರೀತಿ ಮಾತ್ರ’ ಎಂದ. ಶಿಷ್ಯನಿಗೆ ಇದ್ಯಾಕೋ ಅತಿರೇಕ ಎನ್ನಿಸಿ ಮುಳ್ಳಿಗೆ ಒಬ್ಬರಿಗೆ ಚುಚ್ಚಬೇಕು ಇನ್ನೊಬ್ಬರನ್ನು ಪ್ರೀತಿಸಬೇಕು ಎಂದು ಗೊತ್ತಾಗುತ್ತದೆಯಲ್ಲವೆ ಎಂದ ವ್ಯಂಗ್ಯದಿಂದ. ಅತ್ಯಂತ ಕರುಣೆಯಿಂದ ‘ಹೌದು ಗೊತ್ತಾಗುತ್ತದೆ. ಪ್ರಾಣಿ-ಪಕ್ಷಿ, ಗಿಡ -ಮರ ಎಲ್ಲಕ್ಕೂ ಗೊತ್ತಾಗುವ ಒಂದೇ ಒಂದು ಭಾಷೆ ಎಂದರೆ, ಅದು ಪ್ರೀತಿ. ಸುಮ್ಮನೆ ಒಂದು ನಾಯಿ ಮರಿಯ ಮೇಲೆ ಕೈ ಆಡಿಸಿ. ಅದು ನಿಮ್ಮನ್ನು ಹಿಂಬಾಲಿಸುತ್ತದೆ. ಹಸುವಿನ ಮೇಲೆ ಕೈ ಆಡಿಸಿ, ನಿಮ್ಮ ನೆತ್ತಿಯನ್ನು ನೆಕ್ಕುತ್ತದೆ. ಬಿರುಬಿಸಿಲಲ್ಲಿ ಗಿಡ ನೆರಳು ಕೊಡುತ್ತದೆ. ಇದರಲ್ಲಿ ಅಚ್ಚರಿಯೇನಿದೆ?’ ಎಂದ. ಅವನ ಮಾತಿಗೆ ಶಿಷ್ಯ, ‘ಹಾಗಾದರೆ ನಾವು ಮಾಡಿದ್ದೇನು, ಕೇಡನ್ನು ಬಯಸಿದ್ದೆವೆ?’ ಎಂದ. ಆಗ ಮಹಾವೀರ, ‘ಒಮ್ಮೆ ಪ್ರಯತ್ನಿಸು ನಿನ್ನ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು, ನೀನು ಒಳ್ಳೆಯವನಾಗಲು ಯತ್ನಿಸಿದಷ್ಟೂ ಜಗತ್ತು ನಿನಗೆ ಒಳಿತನ್ನು ಮಾಡುವ ಎಲ್ಲವನ್ನೂ ತಂದು ಎದುರು ನಿಲ್ಲಿಸುತ್ತದೆ. ದುರಾಸೆ-ದ್ವೇಷ, ಮದ- ಮತ್ಸರಗಳು ನಮ್ಮನ್ನು ಹಿಂಬಾಲಿಸುತ್ತಲೇ ಇದ್ದರೆ ಪ್ರತೀಕಾರದ ಬೆಂಕಿಯಲ್ಲಿ ನಾವು ಉರಿದು ಹೋಗುತ್ತೇವೆ. ನಾನು ನಮ್ಮ ಸುತ್ತಾ ಏನನ್ನು ಇರಲು ಬಯಸುತ್ತೇವೋ ಅದೇ ನಮಗೆ ಹಿಂದಿರುಗಿ ಬರುತ್ತದೆ. ಇದನ್ನು ಬಿಟ್ಟರೆ ಬೇರೆ ಪವಾಡ ಏನಿದೆ?’ ಎನ್ನುತ್ತಾನೆ.

ಮಹಾವೀರನಿಗೆ ಮುಳ್ಳು ತಳಕೆಳಗಾಗಿ ಚುಚ್ಚಲಿಲ್ಲವೋ ಚುಚ್ಚಿತೋ ತಿಳಿಯದು. ಆದರೆ ಅವನ ಪ್ರೀತಿಯ ಸಂದೇಶ ಅರ್ಥ ಮಾಡಿಕೊಂಡರೆ ತಾಪಗಳಿಲ್ಲದ ಶುದ್ಧ ಜೀವನ ನಮ್ಮದಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.