
ನುಡಿ ಬೆಳಗು ಅಂಕಣ
ಜೀವನದಲ್ಲಿ ಮೂರು ಸಂಗತಿಗಳನ್ನು ನಾವು ಗಮನಿಸಬೇಕು. ಹುಟ್ಟು, ಸಾವು ಮತ್ತು ಬದುಕು. ಹುಟ್ಟು ಈಗಾಗಲೇ ಆಗಿದೆ. ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ನಾವ್ಯಾರೂ ಆನ್ ಲೈನ್ ಅಪ್ಲಿಕೇಷನ್ ಹಾಕಿಲ್ಲ. ಸಾವೂ ನಮ್ಮ ಕೈಯಲ್ಲಿ ಇಲ್ಲ. ನಾವು ಬ್ಯಾಡಂದ್ರೂ ಬರೋದು ಅಂದ್ರೆ ಸಾವೊಂದೆ. ಒಂದು ಕಪ್ಪೆ ನಾಲಿಗೆ ಚಾಚಿಕೊಂಡು ನೊಣಕ್ಕೆ ನೋಡುತ್ತಿತ್ತು. ನೊಣ ಹಾರಿಬಂದು ಕಪ್ಪೆ ನಾಲಿಗೆ ಮೇಲೆ ಕುಳಿತುಕೊಂಡಿತು. ಆದರೆ, ಕಪ್ಪೆಗೆ ಗೊತ್ತಿರಲಿಲ್ಲ ತಾನು ಹಾವಿನ ಬಾಯಿಯಲ್ಲಿ ಕುಂತೇನಿ ಅಂತ.
ಸಾವೆಂಬ ಕಾಳಸರ್ಪ ಯಾರನ್ನೂ ಬಿಟ್ಟಿಲ್ಲ. ರಾಜ ಮಹಾರಾಜರು ಇರಬಹುದು, ಸಚಿವರಿರಬಹುದು, ಸನ್ಯಾಸಿಗಳು, ಸಾಮಾನ್ಯ ಜನರು ಯಾರೂ ಸಾವಿನ ತೋಳ್ತೆಕ್ಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜೀವನ ಅನ್ನೋದು ಇಸ್ಪೀಟ್ ಆಟ ಇದ್ದಂಗೆ. ಇಸ್ಪೀಟ್ ಆಡೋರಿಗೆ ಗೊತ್ತಿರತೈತಿ. ಅಲ್ಲಿ ರಾಜ, ರಾಣಿ, ಎಕ್ಕ ಎಲ್ಲಾ ಇರ್ತಾವ. ಇವೆಲ್ಲ ಆಟ ನಡೆದಾಗ ಇರ್ತಾವ. ಆಟ ಮುಗಿದ ಮೇಲೆ ರಾಜ, ರಾಣಿ, ಗುಲಾಮ ಎಕ್ಕ ಎಲ್ಲವನ್ನೂ ಒಂದೇ ಪಾಕೀಟ್‌ನಲ್ಲಿಡತ್ತಾರ. ಹಾಗೆಯೇ ಜೀವನ ಎಂಬ ಆಟದಲ್ಲಿ ಒಬ್ಬ ಸನ್ಯಾಸಿ, ಒಬ್ಬ ಸಚಿವ, ಒಬ್ಬ ಸಾಮಾನ್ಯ ಇರ್ತಾರ. ಜೀವನದ ಆಟ ಮುಗೀತು ಅಂದ್ರ ಸ್ಮಶಾನದಲ್ಲಿ ಒಂದೇ ಪಾಕೀಟಿನೊಳಗೇ ಕಳಿಸ್ತಾರ. ಯಾರೂ ಇದರಿಂದ ತಪ್ಪಿಸಿಕೊಳ್ಳಲು ಆಗೋದಿಲ್ಲ. ಹುಟ್ಟು ಮತ್ತು ಸಾವನ್ನು ತನ್ನ ಕೈಯಲ್ಲಿ ಇಟ್ಟುಕೊಂಡು ಮಧ್ಯದ ಜೀವನವನ್ನು ಮಾತ್ರ ನಮ್ಮ ಕೈಯಲ್ಲಿ ಇಟ್ಟು ಭೂಮಿಗೆ ಕಳಿಸಿದ್ದಾನೆ ದೇವ. ಇದು ಅವನ ವಿಶೇಷತೆ. ಮಧ್ಯದ ಬದುಕನ್ನು ಹ್ಯಾಂಗ್ ಬದುಕಬೇಕು ಮನುಷ್ಯ? ಹೇಗೆ ಬದುಕಬೇಕು ಎನ್ನುವುದಕ್ಕೆ ಉಪನಿಷತ್ ಹೇಳ್ತದೆ, ‘ಈ ಬದುಕನ್ನು ಕೊಟ್ಟ ದೇವರಿಗೆ ಪ್ರೀತಿಯಾಗುವಂತೆ ಬದುಕಬೇಕು’ ಎಂದು. ಎರಡು ತೊಲೆ ಬಂಗಾರದ ಆಭರಣ ಹಾಕಿದರೆ ಮರೆಯುತ್ತೀ ಆದರೆ ಬಂಗಾರದಂತ ಬದುಕ ಕೊಟ್ಟ ದೇವನಿಗೆ ಏನು ಕೊಟ್ಟೆ ಅಂತ ಒಮ್ಮೆ ಯೋಚನೆ ಮಾಡಬೇಕಲ್ಲ.
ಏನು ಮಾಡಿದರೆ ದೇವನಿಗೆ ಪ್ರೀತಿ ಬರ್ತದೆ? ನೀವು ದೇವರ ಮೂರ್ತಿ ಮುಂದೆ ಹೋಗಿ ತುಪ್ಪದ ದೀಪ ಬೆಳಗಿದರೆ ದೇವನಿಗೆ ಪ್ರೀತಿ ಬರ್ತದೇನು? ನೀರಿನಿಂದ ಅಭೀಷೇಕ ಮಾಡಿದರೆ ದೇವರು ತೃಪ್ತಿಯಾಗ್ತಾನೇನು? ನೈವೇದ್ಯ ನೀಡಿ ದೇವರನ್ನು ತೃಪ್ತಿಪಡಿಸಲೇನು? ಧೂಪ ಹಾಕಿ ದೇವರನ್ನು ಸಂತೃಪ್ತಿಪಡಿಸಲಿಕ್ಕೆ ಆಗ್ತದೇನು? ಸಾವಿರ ಸಾವಿರ ಕೋಟಿ ಹೂವುಗಳಲ್ಲಿ ಸುಗಂಧ ತುಂಬಿದ ದೇವರಿಗೆ ನಮ್ಮ ಒಣ ಊದಿನ ಕಡ್ಡಿಯ ಧೂಪ ಅಗತ್ಯ ಐತೇನು? ಇದು ನಮ್ಮ ಪ್ರಶ್ನೆಯಲ್ಲ. ಅಕ್ಕಮಹಾದೇವಿಯ ಪ್ರಶ್ನೆ. ‘ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ, ನೀನು ಬಹಿರಂಗ ವ್ಯವಹಾರ ದೂರಸ್ಥನು, ಅಂತರಂಗದಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ ನೀನು ವಾಙ್ಮನಕ್ಕತೀತನು, ಜಪಸೂತ್ರದಿಂದ ಒಲಿಸುವೆನೆ ಅಯ್ಯಾ ನೀನು ನಾದಾತೀತನು’ ಎನ್ನುತ್ತಾಳೆ ಅಕ್ಕ.
ಧೂಪ ದೀಪಗಳಿಂದ ಪೂಜೆ ಮಾಡಬೇಕು ಅಂದುಕೊಂಡರೂ ದೇವ ಯಾರಿಗೂ ಕಂಡಿಲ್ಲ. ಸುಮ್ಮನೆ ಮೂರ್ತಿ ಪೂಜೆ ಮಾಡುತೀವಿ ಆದರೂ ಯಾರಿಗೂ ದೇವರು ಮುಖ ತೋರ್ಸಿಲ್ಲ. ಮುಟ್ಟಿದರೆ ಸಿಗಲ್ಲ. ಆದರೆ ನಮ್ಮ ಹಿಂದಿನವರು ‘ ಕಾಣುವ ಜಗತ್ತಿನಲ್ಲೇ ದೇವರನ್ನು ನೋಡು’ ಅಂದರು. ಕಾಣುವ ಈ ಜಗತ್ತು ಅವ್ಯಕ್ತ ದೇವನ ಅಭಿವ್ಯಕ್ತ ರೂಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.