ದೇವದುರ್ಗ ತಾಲ್ಲೂಕಿನ ಕೋತಿಗುಡ್ಡ ಎಂಬ ಗ್ರಾಮದಲ್ಲಿ ರಮೇಶ ಬಲ್ಲಿದ್ ಎಂಬ ಹುಡುಗ ಇದ್ದ. 10–15 ವರ್ಷದವರೆಗೂ ದನ, ಕುರಿ ಕಾಯುತ್ತಿದ್ದ. ಅವನು ಶಾಲೆಗೆ ಹೋಗಿಲ್ಲ, ಅಕ್ಷರ ಕಲಿತಿಲ್ಲ. ಅಂತಹ ಹುಡುಗನನ್ನು ಬೆಂಗಳೂರಿನ ‘ಹೆಡ್ ಹೆಲ್ಡ್ ಹೈ’ ಎಂಬ ಸಂಸ್ಥೆಯವರು ಕರೆದುಕೊಂಡು ಹೋಗಿ ಇಂಗ್ಲಿಷ್ ಕಲಿಸಿದರು. ದನ ಕಾಯುವ ಹುಡಗನಿಗೆ ಕಮ್ಯುನಿಕೇಷನ್ ಇಂಗ್ಲಿಷ್, ಸ್ಪೋಕನ್ ಇಂಗ್ಲಿಷ್, ಬೇಸಿಕ್ ಕಂಪ್ಯೂಟರ್ ಕಲಿಸಿದರು. ಸುಮಾರು ಒಂದು ವರ್ಷದಲ್ಲಿ ರಮೇಶ ಇಂಗ್ಲಿಷ್ ಕಲಿತ. ಅವ ಈಗ ಹೇಗೆ ಆಗಿದ್ದಾನೆಂದರೆ, ಬಿಎಡ್ ಮಾಡುವವರಿಗೆ, ಟೀಚರ್ ಆಗುವವರಿಗೆ, ಕೆಎಎಸ್, ಐಎಎಸ್ ಆಗುವವರಿಗೆ, ಜೆಇಇ ಮಾಡುವವರಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದಾನೆ. ಇಂಗ್ಲಿಷ್ ವ್ಯಾಕರಣ ಕಲಿಸುತ್ತಾನೆ. ಸುಮಾರು 4ರಿಂದ 5 ಲಕ್ಷ ಮಕ್ಕಳ ಜೊತೆ ಸಂವಾದ ಮಾಡಿದ್ದಾನೆ. ಕರ್ನಾಟಕದ ಹಳ್ಳಿಗಳ ಮಕ್ಕಳಿಗೆ ಇಂಗ್ಲಿಷ್ ಭಯ ಹೋಗಬೇಕು ಎಂದು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ 700ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದಾನೆ. ‘ನಿನ್ನ ಹತ್ರ ಯಾವುದಾದರೂ ಸರ್ಟಿಫಿಕೇಟ್ ಇದೆಯಾ’ ಎಂದು ಕೇಳಿದರೆ ‘ನಮಗೂ ಸರ್ಟಿಫಿಕೇಟ್‌ಗೂ ಬಹಳ ದೂರ’ ಅನ್ನುತ್ತಾನೆ. ಅವನ ಬಳಿ ಸರ್ಟಿಫಿಕೇಟ್ ಇಲ್ಲ; ಆದರೆ ಬಹಳಷ್ಟು ಜನರಿಂದ ‘ಈತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾನೆ’ ಎಂದು ಸರ್ಟಿಫೈ ಆಗಿದ್ದಾನೆ. ಶಾಲೆಗೆ ಹೋದವರಿಗೇ ಇಂಗ್ಲಿಷ್ ಬರಲ್ಲ. ಅಂತಹದ್ದರಲ್ಲಿ ಶಾಲೆಯ ಮೆಟ್ಟಿಲು ಹತ್ತದ ರಮೇಶ್ ಬಲ್ಲಿದ್ ಇಂಗ್ಲಿಷ್ ಕಲಿತು, ಕಂಪ್ಯೂಟರ್ ಕಲಿತು ಇನ್ನೊಬ್ಬರಿಗೆ ಕಲಿಸುವ ಮಟ್ಟಕ್ಕೆ ಬೆಳೆದಿದ್ದು ಒಂದು ಸಾಧನೆ. ನಮ್ಮಲ್ಲಿ ಒಂದು ಗಾದೆ ಮಾತಿದೆ. ಮಾಡು ಇಲ್ಲವೇ ಮಡಿ ಅಂತ. ಆದರೆ ಅದು ಹಾಗಲ್ಲ. ಮಡಿಯುವ ಮುನ್ನ ಏನಾದರೂ ಸಾಧನೆ ಮಾಡಬೇಕು ಎನ್ನುವುದಕ್ಕೆ ರಮೇಶ್ ಉದಾಹರಣೆ.
ಕಳೆದ ವರ್ಷ ಬಾನಾಪುರದ ಬಳಿ ಒಂದು ಅಪಘಾತವಾಯಿತು. ಒಬ್ಬ ಯುವಕ ಗಾಯಗೊಂಡ. ಅವನನ್ನು ದವಾಖಾನೆಗೆ ಕರೆದುಕೊಂಡು ಹೋದರು. ಆತ ಕೋಮಾದಲ್ಲಿದ್ದ. ಕೆಲವು ದಿನ ಆದ ಮೇಲೆ ಅವನ ಬ್ರೇನ್ ಡೆಡ್ ಆಯಿತು. ಆತ ಗ್ರಾಮ ಪಂಚಾಯ್ತಿ ಸದಸ್ಯನೂ ಆಗಿದ್ದ. ಆ ಯುವಕನ ಹೆಸರು ಮಲ್ಲಪ್ಪ ಉದ್ದಾರ್. ಆತನ ಬ್ರೇನ್ ಡೆಡ್ ಆಗಿದೆ ಎನ್ನುವುದು ಗೊತ್ತಾದ ನಂತರ ಆತನ ತಾಯಿ ಮತ್ತು ಇತರ ಸಹೋದರರು ಕೂಡಿ ಒಂದು ನಿರ್ಣಯ ಮಾಡಿದರು. ತನ್ನ ಮಗ ಹೇಗೂ ಬದುಕುವುದಿಲ್ಲ ಎಂದು ತಿಳಿದು ಅವನ ಅಂಗಾಂಗ ದಾನ ಮಾಡಲು ಒಪ್ಪಿಗೆ ಕೊಟ್ಟರು. ಅವರ ಅಂಗಾಂಗಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಝೀರೊ ಟ್ರಾಫಿಕ್‌ನಲ್ಲಿ ತೆಗೆದುಕೊಂಡು ಹೋಗಲಾಯಿತು. ಮಲ್ಲಪ್ಪ ಉದ್ದಾರ್ ಅವರು ತೀರಿಕೊಂಡರು. ಆದರೆ ಅಗಾಂಗ ದಾನ ಮಾಡಿದ್ದರಿಂದ ನಾಲ್ಕು ಮಂದಿ ಜೀವ ಉಳಿಸಿದರು. ನೇತ್ರದಾನ, ರಕ್ತದಾನ ಅಂಗಾಂಗ ದಾನದ ಬಗ್ಗೆ ಸಾಮಾಜಿಕ ಜಾಗೃತಿ ಮೂಡಬೇಕು. ಅನ್ನದಾನ, ವಿದ್ಯಾದಾನ, ಶ್ರಮದಾನ ನಮಗೆ ಗೊತ್ತಿದೆ. ಅದರಿಂದ ಪುಣ್ಯ ಬರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಅದರ ಜೊತೆಗೆ ದೇಹದಾನ, ಅಂಗಾಂಗ ದಾನದ ಬಗ್ಗೆಯೂ ಜಾಗೃತಿ ಆಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.