ADVERTISEMENT

ನುಡಿ ಬೆಳಗು | ಮಾರ್ಗದರ್ಶಕರು ಬೇಕಾಗಿದ್ದಾರೆ

ದೀಪಾ ಹಿರೇಗುತ್ತಿ
Published 14 ಜುಲೈ 2025, 23:30 IST
Last Updated 14 ಜುಲೈ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಜನಸಾಮಾನ್ಯರ ಸಂಕಷ್ಟಗಳ ಅರಿವು ಮೂಡಿಸಬೇಕೆಂದು ಹಳ್ಳಿಯೊಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಹಳ್ಳಿಯಲ್ಲಿ ಹೊಲದ ಬದುವಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಶಿಷ್ಯರಿಗೆ ಒಂದೆಡೆ ಹರಿದು ಹೋದ ಒಂದು ಜೊತೆ ಚಪ್ಪಲಿ ಮತ್ತು ಊಟದ ಡಬ್ಬಿಯಿರುವ ಚೀಲ ಕಾಣಿಸುತ್ತದೆ. ಅವರು ಗುರುಗಳ ಹತ್ತಿರ, ‘ಸರ್‌, ಇವು ಇಲ್ಲಿ ಕೆಲಸ ಮಾಡುತ್ತಿರುವವರದ್ದು ಅನ್ನಿಸುತ್ತದೆ. ಒಂದು ಕೆಲಸ ಮಾಡುತ್ತೇವೆ, ನಾವು ಇವೆರಡನ್ನೂ ಅಡಗಿಸಿಡುತ್ತೇವೆ. ಮರದ ಮರೆಯಲ್ಲಿ ಕುಳಿತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡೋಣ’ ಎಂದರು ಹುಡುಗಾಟಿಕೆಯಿಂದ.

ಶಿಕ್ಷಕ ಏನನ್ನೂ ಹೇಳಲಿಲ್ಲ. ಈ ರೀತಿಯ ಕಿತಾಪತಿ ಏಕೆಂದು ಶಿಷ್ಯರನ್ನು ಬಯ್ಯಲೂ ಇಲ್ಲ. ಅದರ ಬದಲು ಮಾಮೂಲಿ ಧ್ವನಿಯಲ್ಲಿ, ‘ಅಲ್ಲ, ನೀವು ಹೇಳಿದ್ದನ್ನು ಸ್ವಲ್ಪ ಬದಲಾಯಿಸೋಣ. ಅವನ್ನು ಅಡಗಿಸಿಡುವ ಬದಲು ಆ ಚೀಲದಲ್ಲಿ ನೂರು ರೂಪಾಯಿಯ ಎರಡು ನೋಟು ಹಾಕಿಡೋಣ. ಮತ್ತು ಮರೆಯಲ್ಲಿ ಕುಳಿತು ನೋಡೋಣ’ ಎಂದರು.

ADVERTISEMENT

ಊಟದ ಸಮಯವಾಯಿತು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಬಂದವನು ಚೀಲದಲ್ಲಿದ್ದ ಹಣವನ್ನು ನೋಡಿ ಒಂದು ಕ್ಷಣ ಗಾಬರಿಯಾದ. ಸುತ್ತಮುತ್ತಲೂ ನೋಡಿದ. ಯಾರೂ ಇಲ್ಲ. ಆತ ಕಣ್ಣಲ್ಲಿ ನೀರು ತುಂಬಿಕೊಂಡು ಆಕಾಶದತ್ತ ಮುಖ ಮಾಡಿ ಜೋರಾಗಿ ಹೇಳಿದ, ‘ದೇವರೇ, ನೀನು ನನ್ನ ಮೊರೆ ಕೇಳಿದೆ. ಹೆಂಡತಿಯ ಮಾತ್ರೆಗೂ ಇವತ್ತು ನನ್ನ ಹತ್ತಿರ ದುಡ್ಡಿರಲಿಲ್ಲ, ಧನ್ಯವಾದಗಳು ನಿನಗೆ’.

ಗುರುಗಳು ಮುಗುಳ್ನಗುತ್ತ ಶಿಷ್ಯರ ಕಡೆ ನೋಡಿದರು. ಶಿಷ್ಯರೆಲ್ಲ ಮೌನವಾಗಿದ್ದರು. ಅವರ ಕಣ್ಣಂಚಿನಲ್ಲಿ ನೀರಿತ್ತು. ಗುರುಗಳ ಹತ್ತಿರ ‘ಸರ್‌, ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕಿಂತ ಸಹಾಯ ಮಾಡುವುದರಲ್ಲಿ ಹೆಚ್ಚಿನ ಸಂತೋಷವಿದೆ ಎಂಬುದನ್ನು ಎಷ್ಟು ಸರಳವಾಗಿ ಹೇಳಿಕೊಟ್ಟಿರಿ’ ಅಂದರು.

ಇನ್ನೊಬ್ಬರ ಪಾಲಿಗೆ ದೇವರಾಗುವ ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ. ಅದಕ್ಕಾಗಿ ಬಹಳ ದೊಡ್ಡ ದೊಡ್ಡ ಕೆಲಸಗಳನ್ನೇನೂ ಮಾಡಬೇಕೆಂದಿಲ್ಲ. ಸಣ್ಣ ಸಣ್ಣ ಸಹಾಯಗಳನ್ನು ನಮ್ಮ ನಮ್ಮ ವ್ಯಾಪ್ತಿಯಲ್ಲೇ ಮಾಡುವುದರ ಮೂಲಕ ಇತರರ ಮುಖದಲ್ಲಿ ಮುಗುಳ್ನಗೆ ಮೂಡಿಸಬಹುದು.

ಈ ಮೇಲಿನ ಕಥೆಯ ಶಿಕ್ಷಕರಂತಹ ವ್ಯಕ್ತಿಗಳು ಇಂದು ಸಮಾಜಕ್ಕೆ ಬೇಕಾಗಿದ್ದಾರೆ. ಯಾರಾದರೂ ಹೀಗೆ ಹುಡುಗಾಟದಲ್ಲಿ ತರಲೆ ಮಾಡಹೊರಟಾಗ ಅವರನ್ನು ಬಯ್ಯದೇ, ‘ನೀನು ಮಾಡಬೇಕೆಂದಿರುವುದನ್ನೇ ಇನ್ನೂ ಉತ್ತಮವಾಗಿ, ವಿಭಿನ್ನವಾಗಿ ಹೇಗೆ ಮಾಡಬಹುದು ನೋಡು’ ಎಂದು ತಿದ್ದಿ ಹೇಳಿಕೊಡುವವರು ಬೇಕಾಗಿದ್ದಾರೆ. ನಾವು ನಿಮ್ಮ ವಯಸ್ಸಿನಲ್ಲಿರುವಾಗ ಹಾಗೆ ಮಾಡುತ್ತಿದ್ದೆವು. ಹೀಗೆ ಮಾಡುತ್ತಿದ್ದೆವು ಎಂಬ ಹಳೆಯ ಕಥೆಯನ್ನೇ ಮತ್ತೆ ಮತ್ತೆ ಹೇಳುತ್ತ, ಹೊಸ ಪೀಳಿಗೆಯನ್ನು ದೂಷಿಸುವ ಬದಲು ಅವರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು ಬದುಕಿನ ದೈನಂದಿನ ಸಂಗತಿಗಳನ್ನು, ಜೀವನ ಮೌಲ್ಯಗಳನ್ನು ಅವರಿಗೆ ಸರಳವಾಗಿ ಹೇಳಿಕೊಡುವ ಮಾರ್ಗದರ್ಶಕರು ಬೇಕಾಗಿದ್ದಾರೆ. ಮತ್ತು ಆ ಜವಾಬ್ದಾರಿಯನ್ನು ನಾವೆಲ್ಲ ನಿರ್ವಹಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.