ADVERTISEMENT

ನುಡಿ ಬೆಳಗು: ಬದುಕಿನಲ್ಲಿ ಭರವಸೆ ಬೇಕು

Nudi belagu 175

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 16 ಏಪ್ರಿಲ್ 2025, 22:36 IST
Last Updated 16 ಏಪ್ರಿಲ್ 2025, 22:36 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಈ ಜಗತ್ತು ದೇವನ ಅಡುಗೆ ಮನೆ. ನಮ್ಮ ಅಡುಗೆ ಮನೆಗೂ ದೇವನ ಅಡುಗೆ ಮನೆಗೂ ಬಹಳ ವ್ಯತ್ಯಾಸ ಇದೆ. ಅಲ್ಲಿ ಒಂದು ಆಕಳು ಇದೆ. ನೀವು ಅದನ್ನು ಬಿಟ್ಟರೆ ಅದು ಹಳ್ಳಕ್ಕೆ ಹೋಗಿ ರಾಡಿ ನೀರು ಕುಡಿಯುತ್ತದೆ. ಕಸಕಡ್ಡಿ ತಿನ್ನುತ್ತದೆ. ಅಂತಹ ಆಹಾರ ತಿಂದ ಆಕಳು ತನ್ನ ಕರುವಿಗೆ ಹಾಲುಣಿಸಿದರೆ ಅದಕ್ಕೆ ಯಾವುದೇ ಇನ್‌ಫೆಕ್ಷನ್ ಆಗಿಲ್ಲ. ಇದು ಭಗವಂತನ ದಾಸೋಹ. ನಮ್ಮ ದಾಸೋಹದಲ್ಲಿ ಸ್ವಲ್ಪ ನೀರು ಬದಲಾದರೆ ನೆಗಡಿ ಬರುತ್ತದೆ. ಯಾವಯಾವುದೋ ಗಿಡದ ಹಣ್ಣು ತಿನ್ನುವ, ಎಲ್ಲಿಯೋ ಸಿಕ್ಕ ನೀರು ಕುಡಿಯುವ ಯಾವುದೇ ಪಕ್ಷಿಗಳಿಗೆ ಗಂಟಲು ನೋವು ಬಂದಿಲ್ಲ. ಭಗವಂತನ ದಾಸೋಹ ಅಷ್ಟು ಅದ್ಭುತ. ನಮ್ಮ ದಾಸೋಹದಲ್ಲಿ ಇನ್‌ಫೆಕ್ಷನ್ ಇದೆ. ನಮ್ಮದು ಅಚ್ಚಿನ ಮೊಳೆ. ಆದರೆ ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ನವನವೀನ. ತನುಮನಧನ ಎಲ್ಲವೂ ಗುಹೇಶ್ವರನ ಸ್ವತ್ತು. ನಮ್ಮದು ಎನ್ನುವುದು ಏನೂ ಇಲ್ಲ ಜಗತ್ತಿನಲ್ಲಿ. ನಾವು ಸುಮ್ಮನೆ ಹೆಸರಿಗೆ ಬಡಿದಾಡುತ್ತೇವೆ. ಆಕಳು ಹಾಲು ಕೊಟ್ಟಿದೆ. ನಾವು ಪ್ಯಾಕೇಟ್ ಮೇಲೆ ನಮ್ಮ ಹೆಸರು ಬರೆದುಕೊಂಡಿದ್ದೇವೆ. ಆದರೆ ಆಕಳು ತನ್ನ ಹಾಲಿನ ಮೇಲೆ ಹೆಸರು ಬರೆದುಕೊಂಡಿಲ್ಲ. ಭೂಮಿತಾಯಿ ಅಕ್ಕಿ ಕೊಡ್ತಾಳ. ಅಕ್ಕಿ ಪ್ಯಾಕೆಟ್ ಮೇಲೆ ನಮ್ಮ ಹೆಸರು ಬರೆದುಕೊಂಡಿದ್ದೇವೆ. ಆದರೆ ಭೂಮಿ ತಾಯಿ ತನ್ನ ಹೆಸರು ಬರೆದುಕೊಂಡಿಲ್ಲ. ಚೀಲದ ಮೇಲೆ ನಮ್ಮ ಫ್ಯಾಕ್ಟರಿ ಹೆಸರು ಇರಬೇಕು, ತಲೆಯಲ್ಲಿ ಇದು ಅವನು ಕೊಟ್ಟಿದ್ದು ಎಂಬ ಉಸಿರು ಇರಬೇಕು.

ಕೆಎಲ್ಇ ಸಂಸ್ಥೆಯಲ್ಲಿ ಭೂಮರಡ್ಡಿ ಬಸಪ್ಪನವರು ಅಂತ ಒಬ್ಬರು ಇದ್ದರು. ಅವರು 1946ರಲ್ಲಿ ಐದು ಲಕ್ಷ ರೂಪಾಯಿ ದಾನ ಮಾಡಿದರು. ಇನ್ನೂ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ನಮ್ಮ ಭಾಗಕ್ಕೆ ಒಂದು ಎಂಜಿನಿಯರಿಂಗ್ ಕಾಲೇಜು ಆಗಬೇಕು ಎಂದು ಹಣ ನೀಡಿದರು. 1970ರ ವೇಳೆಗೆ ಆ ಕಾಲೇಜು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಮುಚ್ಚುವ ಪ್ರಸಂಗ ಬಂತು. ಆಗ ಬಸಪ್ಪನವರು ಕಾಲೇಜಿನವರನ್ನು ಕರೆದು ‘ನನ್ನ ಹೆಸರು ಹೋದರೂ ಪರವಾಗಿಲ್ಲ. ಕಾಲೇಜು ಮುಂದಕ್ಕೆ ನಡೀಬೇಕು. ಅದಕ್ಕೆ ಯಾರಾದರೂ ಹಣ ಸಹಾಯ ಮಾಡಿದರೆ ಅವರ ಹೆಸರು ಹಾಕಿ’ ಎಂದರು. ಇದು ದೈವೀ ಭಾವ. ಹೆಸರಿಗಾಗಿ ದುಡಿಯುವುದಲ್ಲ. ಜಗತ್ತು ಬೆಳೆಯಲಿ ಎಂದು ದುಡಿಯುವ ಸೇವಾ ಮನೋಭಾವ ಇರಬೇಕು. ದೇವನಿಗೆ ಪತಿ ಎಂದು ಕರೆಯುತ್ತಾರೆ. ನಮ್ಮ ಪತಿ ಬೇರೆ. ಪತಿ ಎಂದರೆ ಒಡೆಯ. ಇವನು ಬೆಳಿಗ್ಗೆ ಎದ್ದ ತಕ್ಷಣ ಚಾ ಕುಡಿದು ಚಾಪತಿಯಾಗುತ್ತಾನೆ. ಸಂಜೆಯಾದರೆ ನಾಪತಿ. ಯಾವ ಅಂಗಡಿಗೆ ಹೋಗುತ್ತಾನೋ ಗೊತ್ತಾಗೋದಿಲ್ಲ. ಇವನ ಕುಡಿತ ಬಿಡಿಸಲು ಪತ್ನಿ ಅಲೋಪತಿ, ಹೋಮಿಯೋಪತಿ, ನ್ಯಾಚುರೋಪತಿ ಎಲ್ಲ ಮುಗಿಸಿ ತಿರುಪತಿಗೆ ಹೋದರೂ ಇವ ಬಿಡಲಿಲ್ಲ ಕಿತಾಪತಿ. ಅದಕ್ಕೆ ಮನದಲ್ಲಿ ಪಶುಪತಿಯ ಭಾವ ಇರಬೇಕು.

ADVERTISEMENT

ತಾಯಿ ಶಿಶುವನ್ನು ಮೇಲಕ್ಕೆ ಹಾರಿಸಿದರೂ ಮಗು ನಗುತ್ತಿರುತ್ತದೆ. ಮಗು ಯಾಕೆ ನಗುತ್ತಿರುತ್ತದೆ ಎಂದರೆ, ಆ ಮಗುವಿಗೆ ತನ್ನ ತಾಯಿ ಕೈಬಿಡುವುದಿಲ್ಲ ಎಂಬ ಭರವಸೆ ಇರುತ್ತದೆ. ಹಾಗೆಯೇ ನಮಗೆ ಈ ಜನ್ಮಕೊಟ್ಟ ದೇವ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇರಬೇಕು. ಇದು ದೇವ ಕೊಟ್ಟ ಪ್ರಸಾದ ಎಂಬ ಭಾವ ಇದ್ದರೆ ಸಮಾಧಾನ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.