ನುಡಿ ಬೆಳಗು
ಹದಿನೆಂಟನೇ ಶತಮಾನದಲ್ಲಿ ಆಡಂ ಸ್ಮಿತ್ ಎಂಬುವವ ಅರ್ಥಶಾಸ್ತ್ರ ಬರೆದ. ಅರ್ಥಶಾಸ್ತ್ರ ಎಂದರೆ ಸಂಪತ್ತನ್ನು ಅರಿಯುವ ಶಾಸ್ತ್ರ ಎಂದು ಬರೆದ. ನೂರು ವರ್ಷದ ನಂತರ ಇನ್ನೊಬ್ಬ ಅರ್ಥಶಾಸ್ತ್ರಜ್ಞ ಬಂದ, ಪ್ರೊ.ಮಾರ್ಷಲ್ ಅಂತ. ಅವ ಅರ್ಥಶಾಸ್ತ್ರ ಎಂದರೆ ಬರೀ ಸಂಪತ್ತನ್ನು ಅರಿಯುವುದಲ್ಲ. ಸಂಪತ್ತು ಕೇವಲ ಸಾಧನ. ಏನು ಸಂಪತ್ತು ಗಳಿಸಿರುತ್ತೇವೆ ಅದು ಮಾನವ ಕೋಟಿಗೆ ಉಪಯೋಗವಾಗಬೇಕು ಅದು ಅರ್ಥಶಾಸ್ತ್ರ ಎಂದ. ಆದರೆ ಆಶ್ಚರ್ಯ ಏನು ಎಂದರೆ, ಇವರೆಲ್ಲರಿಗಿಂತ 700 ವರ್ಷಗಳ ಮೊದಲೇ ಬಸವಣ್ಣ ಅರ್ಥಶಾಸ್ತ್ರ ಬರೆದಿದ್ದರು. ದುಡಿದು ಉಣ್ರಿ, ದುಡಿದಿದ್ದರಲ್ಲಿ ಸಮಾಜಕ್ಕೆ ಒಂದಿಷ್ಟು ಕೊಡ್ರಿ ಎಂದಿದ್ದರು ಬಸವಣ್ಣ. ಇದು ಕಾಯಕ, ಇದು ದಾಸೋಹ ಎಂದಿದ್ದರು. ದಾಸೋಹ ಪ್ರಜ್ಞೆ ಎಂದರೆ ಅಹಂ ಪ್ರಜ್ಞೆಯನ್ನು ಮೀರಬೇಕು. ಶಿವೋಹಂ ಪ್ರಜ್ಞೆಯನ್ನು ಸಂಪಾದಿಸಬೇಕು. ಅದು ದಾಸೋಹ ಪ್ರಜ್ಞೆಯಾಗಿ ವಿಸ್ತಾರ ಆಗಬೇಕು. ಇದು ಕಾಯಕ. ಇದನ್ನು ಕಲಿಯಬೇಕು ಮನುಷ್ಯ. ದಾಸೋಹ ಎಂದರೆ ಉಂಡವನ ಮುಖದಲ್ಲಿ ಏನು ಸಂತೋಷ ಇರುತ್ತದಲ್ಲ, ಅದೇ ಸಂತೋಷ ಉಣ್ಣಿಸಿದವನ ಮುಖದಲ್ಲಿಯೂ ಇರಬೇಕು.
ಅಬ್ದುಲ್ ಕಲಾ ಅವರಿಗೆ ಯಾರೋ ಒಬ್ಬರು ಒಮ್ಮೆ ‘ನಿಮಗೆ ಮನೆ, ಮಡದಿ, ಮಕ್ಕಳು ಯಾರೂ ಇಲ್ಲ. ಮನೆಗೆ ಹೋದರೆ ಉಂಡ್ಯಾ ಬಿಟ್ಯಾ ಎಂದು ಕೇಳೋರು ಇಲ್ಲ. ಆದರೂ ನೀವು ಆರೋಗ್ಯವಾಗಿದ್ದೀರಿ, ಸಂತೋಷವಾಗಿದ್ದೀರಿ. ಇದರ ಗುಟ್ಟು ಏನು’ ಎಂದು ಕೇಳಿದರು. ಅದಕ್ಕೆ ಕಲಾಂ ‘ನನ್ನ ಬಳಿಗೆ ಯಾರೇ ಬಂದರೂ ಅವರಿಂದ ನಾನು ಏನು ಪಡೆಯಬಹುದು ಎಂದು ಯೋಚಿಸುವುದಿಲ್ಲ. ನಾನು ಏನನ್ನು ಕೊಟ್ಟು ಅವರನ್ನು ಸಂತೋಷಪಡಿಸಬಹುದು ಎಂದು ಆಲೋಚಿಸುತ್ತೇವೆ. ಅದಕ್ಕೇ ನಾನು ಸಂತೋಷವಾಗಿಯೂ ಇದ್ದೇನೆ, ಆರೋಗ್ಯವಾಗಿಯೂ ಇದ್ದೇನೆ’ ಎಂದು ಹೇಳಿದರಂತೆ. ನಾವಾದರೆ ಇವನಿಂದ ನನಗೇನು ಲಾಭ ಎಂದು ಆಲೋಚಿಸುತ್ತೇವೆ. ಇದೇ ದುಃಖಕ್ಕೆ ಕಾರಣ. ಅದನ್ನು ಬಿಟ್ಟು ನಾವು ಏನನ್ನು ಕೊಡಬಹುದು ಎಂದು ಯೋಚಿಸಿದರೆ ಅದು ಸಂತೋಷಕ್ಕೆ ಕಾರಣವಾಗುತ್ತದೆ. ನಾವು ಕೊಡೋದಿಲ್ಲ ಅಂದ್ರೆ ಆಗೋದಿಲ್ಲ. ಉಸಿರು ತೆಗೆದುಕೊಂಡಿದ್ದನ್ನು ಬಿಡಲೇಬೇಕು. ಉಂಡಿದ್ದನ್ನು ಹೊರಗೆ ಹಾಕಲೇಬೇಕು. ಹಾಕೋದಿಲ್ಲ ಎಂದರೆ ಆಗುತ್ತದೇನು? ನಿಸರ್ಗ ಹಾಗೇ ಇದೆ. ಈಗ ಕೆರೆ ಕಟ್ಟುತ್ತಾರೆ. ಎಷ್ಟೇ ದೊಡ್ಡ ಕೆರೆ ಕಟ್ಟಿದರೂ ಅದಕ್ಕೆ ಕೋಡಿ ಬಿಟ್ಟಿರುತ್ತಾರೆ. ಯಾಕೆಂದರೆ, ಕೆರೆ ತುಂಬುತ್ತಿರಬೇಕು. ತುಂಬಿದ್ದು ಹಾಗೆಯೇ ಹೋಗುತ್ತಿರಬೇಕು. ಇಲ್ಲವಾದರೆ ಕೆರೆ ಒಡೆಯುತ್ತದೆ. ಹಾಗೆಯೇ ಮನುಷ್ಯ ಗಳಿಸಿದ್ದನ್ನು ದಾನದ ರೂಪದಲ್ಲಿ ಕೊಡಬೇಕು. ಇಲ್ಲವಾದರೆ ಒಡೆಯುತ್ತದೆ. ಕೆರೆ ಒಡೆದ ಹಾಗೆ ಜೀವನವೂ ಒಡೆಯುತ್ತದೆ. ತುಂಬುತ್ತಿರಬೇಕು, ಹರಿಯುತ್ತಿರಬೇಕು. ಎರಡೂ ಬೇಕು.
ನದಿಯ ನೀರು ಯಾಕೆ ಸಿಹಿ, ಸಮುದ್ರದ ನೀರು ಯಾಕೆ ಉಪ್ಪು? ನದಿ ನೀರನ್ನು ಎಲ್ಲರಿಗೂ ಹಂಚುತ್ತದೆ. ಅದಕ್ಕೆ ಅದು ಸಿಹಿ ಆತು. ಸಮುದ್ರ ಎಲ್ಲ ನೀರನ್ನೂ ಇಟ್ಟುಕೊಂಡಿದೆ ಅದಕ್ಕೇ ಅದು ಉಪ್ಪಾತು. ಇಟ್ಟುಕೊಂಡವರು ಉಪ್ಪಾಗುತ್ತಾರೆ. ಹಂಚುವವರು ಸಿಹಿಯಾಗುತ್ತಾರೆ. ಮನುಷ್ಯ ಇದನ್ನು ಕಲಿಯಬೇಕು. ನಮ್ಮದು ಕೊಡುವುದು ಎಂದರೆ ದೇವರಾಣೆಗೂ ಆಗೋದಿಲ್ಲ. ಬರುವುದಿದ್ದರೆ ಎಷ್ಟಾದರೂ ಬರಲಿ ಅಂತೀವಿ. ನಾವು ಕೊಟ್ಟು ದಾನಿಗಳು ಅನಿಸಿಕೊಳ್ಳಿಲ್ಲ. ಬೇಡಿ ಬೇಡಿ ದೇವರು ಎಷ್ಟೇ ಕೊಟ್ಟರೂ ಭಿಕ್ಷುಕರಾಗಿದ್ದೀವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.