ನುಡಿ ಬೆಳಗು
ಬಹಳ ಶಿಸ್ತಿಗೆ ಹೆಸರಾದ ಸಾಹುಕಾರನೊಬ್ಬ ಕೆಲಸಗಾರರು ಹೇಗೆ ಕೆಲಸ ಮಾಡುತ್ತಾರೆ ಎಂದು ಪರೀಕ್ಷಿಸಲು ತನ್ನ ಗೋಡೌನಿಗೆ ಹೋದ. ಅಲ್ಲಿನ ಸಾಮಾನುಗಳನ್ನು ಚೀಲಕ್ಕೆ ಕಟ್ಟುತ್ತಿದ್ದ ಕೋಣೆಯಲ್ಲಿ ಒಬ್ಬ ಹುಡುಗ ಕೆಲಸ ಮಾಡದೇ ಮೊಬೈಲು ನೋಡುತ್ತಾ ನಿಂತಿದ್ದು ಕಾಣಿಸಿತು. ಕೋಪಗೊಂಡ ಅವನು, ‘ಏನೋ, ನಿನಗೆ ತಿಂಗಳಿಗೆ ಎಷ್ಟು ಸಂಬಳ ಸಿಗುತ್ತದೆ’ ಎಂದು ಕೇಳಿದ. ಅವನು ತಿರುಗಿ ನೋಡಿ ಉಡಾಫೆಯಲ್ಲಿ ‘ಹತ್ತು ಸಾವಿರ ರೂಪಾಯಿ’ ಎಂದ. ಅವನ ಧೋಣೆಗೆ ಇವನ ಪಿತ್ತ ನೆತ್ತಿಗೇರಿತು. ತಕ್ಷಣ ಇವನು ಕೋಪದಲ್ಲಿ ಜೇಬಿಗೆ ಕೈ ಹಾಕಿ, ‘ತಗೊ ಹತ್ತು ಸಾವಿರ ರೂಪಾಯಿ, ನೀನು ಇನ್ನು ಮೇಲೆ ಈ ಕಡೆ ತಲೆ ಹಾಕಬೇಡ, ನಿನ್ನನ್ನು ವಜಾ ಮಾಡಿದ್ದೇನೆ. ಹೋಗಿಲ್ಲಿಂದ’ ಎಂದು ಬೈದು ಕಳಿಸಿಬಿಟ್ಟ. ಆಮೇಲೆ ಅವನು ಆ ಭಾಗದ ಮ್ಯಾನೇಜರನ್ನು ಕರೆದು ‘ಆ ಹುಡುಗನನ್ನು ಯಾರು ನೌಕರಿಗೆ ಸೇರಿಕೊಂಡರು? ಸೇರಿಸಿಕೊಂಡು ಎಷ್ಟು ದಿನವಾಗಿತ್ತು? ಇಂತಹವರನ್ನೆಲ್ಲಾ ಯಾಕ್ರೀ ಸೇರಿಸ್ಕೊತೀರಿ’ ಎಂದು ಕೇಳಿದ. ತನ್ನ ಬೈಕ್ ಸ್ಟಾರ್ಟ್ ಮಾಡಿ ಹೊರಟು ಹೋದ ಹುಡುಗನನ್ನು ನೋಡಿದ ಮ್ಯಾನೇಜರ್ ಆಶ್ಚರ್ಯದಿಂದ ‘ಅವನು ನಮ್ಮಲ್ಲಿಯ ನೌಕರನಲ್ಲವಲ್ಲ. ಆತ ಯಾವುದೋ ಅಂಗಡಿಯಿಂದ ಸಾಮಾನನ್ನು ಕೊಟ್ಟುಹೋಗಲು ಬಂದಿದ್ದವ’ ಅಂದ.
ಕೋಪ. ಇದು ಯಾಕೆ, ಯಾವಾಗ, ಹೇಗೆ ಬರುತ್ತದೆ ಹೇಳುವುದು ಕಷ್ಟ. ಸಿಟ್ಟು ಬರಲು ಇಂಥವೇ ಕಾರಣ ಎಂದು ಗುರುತಿಸುವುದು ಜಟಿಲ. ವಿಜ್ಞಾನಿಗಳು ಸಹ ಈ ಮಾತನ್ನು ಒಪ್ಪಿಕೊಳ್ಳುತ್ತಾ ಕೋಪ ಯಾವಾಗ, ಏಕೆ ಬರುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಕಷ್ಟ ಎನ್ನುತ್ತಾರೆ. ನಮಗೆ ಇಷ್ಟವಿಲ್ಲದ್ದು ನಡೆದಾಗ, ನಮ್ಮ ಬಯಕೆಗಳು ಈಡೇರದೇ ಹೋದಾಗ, ಯಾರೋ ನಮ್ಮನ್ನು ಅವಮಾನಿಸಿದಾಗ ಅಥವಾ ಯಾರೋ ನಮ್ಮ ಘನತೆಗೆ ಕುಂದು ತರುವ ಮಾತಾಡಿದರೆ ಇಂತಹ ಬಹುತೇಕ ಕಾರಣಗಳು ವ್ಯಕ್ತಿಯನ್ನು ತಕ್ಷಣ ಕೋಪಗೊಳ್ಳುವಂತೆ ಮಾಡುತ್ತವೆ. ಸಿಟ್ಟೆಬ್ಬಿಸುವ ವಿಷಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವಯಸ್ಸು, ಲಿಂಗ, ಸಂಸ್ಕೃತಿಗೆ ಅನುಸಾರವೂ ಭಿನ್ನವಾಗಿರುತ್ತದೆ. ಸಿಟ್ಟೆಬ್ಬಿಸುವ ವಿಷಯಗಳಿಗೆ ಜನರು ಪ್ರತಿಕ್ರಿಯಿಸುವ ವಿಧದಲ್ಲೂ ವ್ಯತ್ಯಾಸವಿದೆ. ಕೆಲವರಿಗೆ ಸಿಟ್ಟು ಬರುವುದೇ ಕಡಿಮೆ. ಬಂದರೂ ಆ ಸಿಟ್ಟು ಬೇಗನೆ ಆರಿಹೋಗುತ್ತದೆ. ಇನ್ನು ಕೆಲವರು ‘ಮುಟ್ಟಿದರೆ ಮುನಿ’ ಸ್ವಭಾವದವರು, ಮುಂಗೋಪಿಗಳು. ಅವರ ಸಿಟ್ಟು ತಣ್ಣಗಾಗಲು ಅನೇಕ ದಿನಗಳು, ವಾರಗಳು, ತಿಂಗಳುಗಳು ಅಥವಾ ವರ್ಷವೇ ಬೇಕಾಗುತ್ತದೆ.
//ಯಾರಾದರೂ ಕೋಪಿಸಿಕೊಂಡಾಗ ಏನಾಗುತ್ತದೆ? ಪ್ರಕೃತಿ ಸಹಜವಾಗಿ ಕೋಪವನ್ನು ಮಾಡಿಕೊಳ್ಳುವ ವ್ಯಕ್ತಿಯೇ ಅದರ ಮೊದಲ ಬಲಿಯಾಗುತ್ತಾನೆ. ನನ್ನ ವಿರುದ್ಧವಾಗಿ ಯಾರೂ ಏನನ್ನೂ ಹೇಳಬಾರದು, ನನಗೆ ಇಷ್ಟವಾಗದ ರೀತಿ ಯಾರೂ ನಡೆದುಕೊಳ್ಳಬಾರದು, ಎಲ್ಲಾ ನನ್ನ ಮೂಗಿನ ನೇರಕ್ಕೇ ಇರಬೇಕು. ಆಗ ಕೋಪವೇ ಬರುವುದಿಲ್ಲ ಎಂದು ಹಾಗೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವೇ? ಖಂಡಿತವಾಗಿ ಸಾಧ್ಯವಿಲ್ಲ. ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗೂ ಇಷ್ಟವಿಲ್ಲದ ಘಟನೆಗಳು ನಡೆಯುತ್ತಿರುತ್ತವೆ ಮತ್ತು ಅವುಗಳನ್ನು ತಡೆಗಟ್ಟುವಲ್ಲಿ ಅವರೂ ಅಸಹಾಯಕರಾಗಿರುತ್ತಾರೆ.//
ಹಾಗಾದರೆ ಕೋಪವೇ ಬರಬಾರದೇ? ಹಾಗೆ ಹೇಳಲಾಗುವುದಿಲ್ಲ. ಜಗತ್ತಿನಲ್ಲಿ ನಡೆವ ಅನ್ಯಾಯಗಳೆಡೆಗೆ, ಮೋಸ, ಶೋಷಣೆಗಳಿಗೆ ನಮ್ಮಲ್ಲಿ ಕೋಪ ಹುಟ್ಟಲೇ ಬೇಕು. ಆದರೆ ಅದನ್ನು ವ್ಯಕ್ತಪಡಿಸುವ ರೀತಿ ಮತ್ತು ಕೋಪದ ಯಾವ ರೂಪ ಸರಿಯಲ್ಲ ಎಂಬುದು ಯೋಚಿಸಬೇಕಾದ ವಿಚಾರ. ನಮ್ಮ ನಿಯಂತ್ರಣಕ್ಕೆ ಸಿಗದ ಮತ್ತು ಅನಾಹುತಗಳಿಗೆ ದಾರಿ ಮಾಡಿಕೊಡುವಂತಹ ಕೋಪ ಒಳ್ಳೆಯದಲ್ಲ. ಅಂತಹಾ ಕೋಪ ಹೋಗು ಹೋಗುತ್ತಾ ಚಟವಾಗುತ್ತದೆ ಅಷ್ಟೆ. ‘ಕೋಪವು ನನಗೆ ಒಳ್ಳೆಯದಲ್ಲ, ಅದು ಅಪಾಯಕಾರಿ, ಹಾನಿಕಾರಿ’ ಎಂಬುದು ಹಲವು ಅನುಭವ ಮತ್ತು ಅರಿವಿನ ಕಾರಣದಿಂದ ಬಹಳ ಚೆನ್ನಾಗಿಯೇ ಅರ್ಥವಾಗಿರುತ್ತದೆ. ಆದರೂ ನಾವು ಕೋಪದ ಚಟಕ್ಕೆ ಬಲಿಯಾಗುತ್ತೇವೆ, ಆ ಕ್ಷಣಕ್ಕೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಸಿಟ್ಟಿನಿಂದ ರೇಗುವುದೋ, ಬಯ್ಯುವುದೋ, ಸಿಡಿಮಿಡಿಗೊಂಡು ಕುದಿಯುವುದೋ ಮಾಡುವ ಮೂಲಕ ಪ್ರತಿಕ್ರಿಯಿಸಿಬಿಡುತ್ತೇವೆ. ಕೋಪ ಇಳಿದ ಮೇಲೆ, ‘ನಾನು ಕೋಪಗೊಳ್ಳಬಾರದಿತ್ತು’ ಎಂದು ಪದೇ ಪದೇ ಹೇಳಿಕೊಳ್ಳುತ್ತೇವೆ. ಇದು ಆ ಕ್ಷಣಕ್ಕಷ್ಟೇ. ಮುಂದಿನ ಸಲ ಯಾವುದೋ ಪ್ರಚೋದನೆ ಬರುತ್ತದೆ. ನಾವು ಪುನಃ ಕೋಪಗೊಳ್ಳುತ್ತೇವೆ. ಏಕೆಂದರೆ ಅದರ ನಿಯಂತ್ರಣ ನಮಗೆ ಗೊತ್ತಿಲ್ಲ. ಮುಳ್ಳನ್ನು ಮುಳ್ಳಿನಿಂದ ತೆಗೆಯಬಹುದು. ಆದರೆ ಕೆಸರನ್ನು ಕೆಸರಿನಿಂದ ತೊಳೆಯಲು ಬರುವುದಿಲ್ಲ. ಅದೇ ರೀತಿಯಲ್ಲಿ ಸಿಟ್ಟನ್ನು ಸಿಟ್ಟಿನಿಂದ ಕಡಿಮೆ ಮಾಡಲು ಬರುವುದಿಲ್ಲ. ಕೋಪಕ್ಕೆ ಕೋಪ ಎಂದೂ ಉತ್ತರವಲ್ಲ. ಮನಸ್ಸೆಂಬುದು ಭಾವನೆಗಳ ಕಾರ್ಖಾನೆ ನಿಜ. ಅಲ್ಲಿ ಉತ್ಪಾದನೆಯಾಗುವ ಎಲ್ಲ ಭಾವನೆಗಳನ್ನೂ ಹೊರ ಹಾಕಲು ಮಾರ್ಗಗಳು ಬೇಕೇ ಬೇಕು. ಕೋಪದಂಥ ನಕಾರಾತ್ಮಕ ಭಾವವನ್ನು ಹೊರ ಹಾಕಲು ನಮಗೆ ಸೂಕ್ತವೆನಿಸುವ ಸಮಾಧಾನಕರ, ಶಾಂತ ದಾರಿಗಳನ್ನು ನಾವೇ ಹುಡುಕಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನಮಗೇ ನಷ್ಟ ಕಟ್ಟಿಟ್ಟ ಬುತ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.