ADVERTISEMENT

ನುಡಿ ಬೆಳಗು: ಕಾಯುವ ತಪ..

ನುಡಿ ಬೆಳಗು

ವಾಸುದೇವ ನಾಡಿಗ್
Published 18 ಜೂನ್ 2025, 0:31 IST
Last Updated 18 ಜೂನ್ 2025, 0:31 IST
<div class="paragraphs"><p>ವಾಸುದೇವ ನಾಡಿಗ್</p></div>

ವಾಸುದೇವ ನಾಡಿಗ್

   

ಇಂದಲ್ಲ ನಾಳೆ ಕಂಸನ ಊರಾದ ಮಥುರೆಗೆ ಕೃಷ್ಣ ಬಂದೇ ಬರುತ್ತಾನೆ ಎಂಬ ಭರವಸೆಯಲ್ಲಿದ್ದಾಳೆ ವೃದ್ಧೆ ಕುಬ್ಜೆ. ಅನುದಿನ ಅವಳದು ಒಂದೇ ಕೆಲಸ; ಗಂಧವನ್ನು ತೇಯ್ದಿಟ್ಟು ಕಾಯುವುದು. ಎಂದಾದರೊಮ್ಮೆ ಕೃಷ್ಣ ಬಂದರೆ ಅವನ ಕೈ ಮತ್ತು ಹಣೆಗೆ ಈ ಪರಿಮಳ ದ್ರವ್ಯವನ್ನು ತೀಡುವುದೇ ಅವಳ ಬಾಳಿನ ಆತ್ಯಂತಿಕ ಗುರಿ. ಊರವರಿಗೆಲ್ಲ ಇವಳು ಮಾತಿಗೆ ಆಹಾರ. ಎಂದೂ ಬಾರದ ಕೃಷ್ಣನಿಗಾಗಿ ಕಾಯುವ ಇವಳ ಹುಚ್ಚುತನ.

ನಿಜ ಹೇಳಬೇಕು ಎಂದರೆ ಈಕೆ ಆಕಾಶವನ್ನು ಒಮ್ಮೆಯೂ ನೋಡಿದವಳಲ್ಲ. ತಲೆ ಎತ್ತೋದು ಒತ್ತಟ್ಟಿಗೆ ಇರಲಿ. ನೆಟ್ಟಗೆ ನಿಲ್ಲಲಾಗದ ಅಸಹಾಯಕತೆ ಕುಬ್ಜೆಯದು. ಹೇಗೆ ಆಕಾಶ ನೋಡಬಲ್ಲಳು? ಉಸಿರಾಡಲು ತಲೆ ತಗ್ಗಿಸಿ ತಿನ್ನುವುದಕ್ಕಾಗೇ ಹೀಗೆ ಬೆನ್ನು ಗೂನಾಗಿದೆಯೇ ಎನಿಸುತ್ತದೆ. ಒಂದು ರೀತಿಯಲ್ಲಿ ಲೋಕದ ವಿಕಾರಗಳನ್ನು ನೋಡದ ಕುಬ್ಜೆ ನೆಲವನ್ನು ಮಾತ್ರ ನೋಡುವ ಧ್ಯಾನಸ್ಥಳೇ ಸರಿ.

ADVERTISEMENT

‘ಮಗುವಾಗಿದ್ದಾಗಲೇ ಕಂಸ ಕೃಷ್ಣನನ್ನು ಕೊಂದಿರುವಾಗ ಅವನು ಬರುವುದಾದರೂ ಹೇಗೆ ಮಥುರೆಗೆ’ ಎಂಬ ದಟ್ಟವಾದ ನಂಬಿಕೆಯಲ್ಲಿ ಲೋಕ ಮುಳುಗಿದ್ದರೆ ಕುಬ್ಜೆ, ಕೃಷ್ಣ ಎಂಬ ಒಂದೇ ಹೆಸರಿನ ಭರವಸೆಯಲ್ಲಿ ಮಾಗಿದ ಜೀವ. ಕಂಸ ಏರ್ಪಡಿಸಿದ್ದ ಬಿಲ್ಲ ಹಬ್ಬದ ದಿನದಂದು ಕೃಷ್ಣ ಬಂದೇ ಬರುತ್ತಾನೆ ಎಂಬ ಒಂಟಿಕಾಲಿನ ನಿರೀಕ್ಷೆಯ ತಪ ಆಕೆಯದು. ಲೋಕದಲ್ಲಿ ಈ ಮಾತೂ ಇತ್ತು... ಕಂಸನನ್ನು ಕೊಲ್ಲಲು ಕೃಷ್ಣ ಮತ್ತೆ ಹುಟ್ಟಿ ಬರಲೂಬಹುದು.

ನಾಳೆ ಬಿಲ್ಲ ಹಬ್ಬ. ಹಿಂದಿನ ರಾತ್ರಿ ಇಡೀ ಕುಬ್ಜೆಗೆ ನಿದ್ದೆ ಇಲ್ಲ. ಕೊಡಗಟ್ಟಲೆ ಗಂಧವನ್ನು ತೇಯಲು ಕೂತಳು. ಹಗಲಾದದ್ದೇ ಗೊತ್ತಾಗದ ಹಾಗೆ. ಎಲ್ಲೆಡೆ ಕೃಷ್ಣನ ಆಗಮನದ ಕೂಗು. ಅವನು ಬಂದನಂತೆ. ಮಥುರೆಯ ಅರಮನೆಯ ಅಂಗಳ ಪ್ರವೇಶಿಸುವ ರಾಜಬೀದಿಯಲ್ಲಿ ಪರಿಮಳದ ದ್ರವ್ಯ ಹೊತ್ತು ನಿಂತಳು ಕುಬ್ಜೆ. ಇದನ್ನು ಮೊದಲೇ ಬಲ್ಲ ಕೃಷ್ಣ ನೆಟ್ಟಗೆ ನಿಲ್ಲಲಾಗದ ಕುಬ್ಜೆಯ ಎದುರು ಮೊಣಕಾಲೂರಿ ಕುಳಿತು ಹಣೆಗೆ ಗಂಧವನ್ನು ಹಚ್ಚಿಸಿಕೊಂಡು, ಕುಬ್ಜೆಯ ಬೆನ್ನು ಸವರಿದಾಗ ಕುಬ್ಜೆಯ ಗೂನು ಕರಗಿ ಸಹಜವಾದಳು. ಅವಳ ಎದುರು ಕಂಡದ್ದು ಆಕಾಶದ ಹೊಳಪಿನ ಕೃಷ್ಣನೇ.

ಇದನ್ನೆ ಆಲ್ಲವೇ ಕಾಯುವುದಕ್ಕಿಂತ ತಪವು ಬೇರಿಲ್ಲ ಎಂದಿರುವುದು. ಬಾಳು ತಾಳ್ಮೆಯನ್ನು ಬಯಸಿದರೆ, ತಾಳ್ಮೆ ಬಾಳನ್ನು ಗೆಲ್ಲಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.