ನುಡಿ ಬೆಳಗು
ಮಗಳ ಮನೆ ಕಣ್ಣೆದುರಲ್ಲೇ ಇತ್ತು. 250 ಮೀಟರ್ ಅಷ್ಟೆ. ಬಸ್ಸಾರು, ಮೊಸಪ್ಪು, ಮೊಳಕೆ ಪಲ್ಯ... ಏನು ಮಾಡಿದರೂ ಪರಸ್ಪರ ವಿನಿಮಯ. ಮಗಳ ಮನೆ ಮತ್ತು ತಾಯಿಯ ಮನೆಗೆ ಕೇವಲ ರಸ್ತೆ ದಾಟಬೇಕಿತ್ತು ಅಷ್ಟೆ. ಮಗ– ಸೊಸೆ ಹಾಗಲ್ಲ, ದೂರದ ಶಹರಿನ ಮೋಹಕ್ಕೆ ಒಳಗಾಗಿ ಉದ್ಯೋಗದ ನೆಪದಲ್ಲಿ ದೂರವೇ ಉಳಿದಿದ್ದರು. ಸಣ್ಣ ಹಳ್ಳಿ. ಒಂದು ಶಿವನ ದೇವಾಲಯ, ಪಂಚಾಯ್ತಿ ಕುಡಿಯುವ ನೀರಿನ ಕೇಂದ್ರ... ಇಷ್ಟು ರೋಡಿನ ಈ ಬದಿ. ಆ ಬದಿಯಲ್ಲಿ ಹತ್ತಾರು ಅಂಗಡಿಗಳು ಹರಡಿದ್ದವು. ಎಲ್ಲವೂ ಕೂಗಳತೆಯಲ್ಲೇ. ಆದರೆ ರಸ್ತೆಯನ್ನು ದಾಟಬೇಕಿತ್ತಷ್ಟೆ.
ಮಗಳ ಬಸಿರು ಬಾಣಂತನ ಮುಗಿಸಿ ಎರಡು ತಿಂಗಳಲ್ಲೇ ಹೆದ್ದಾರಿಯ ನಿರ್ಮಾಣ ಶುರುವಾಗಿತ್ತು. ಜನ, ವಾಹನ ನಿಬಿಡತೆ ಅಂದರೆ ಏನು ಅಂತ ಗೊತ್ತಿರದ ಆ ರಸ್ತೆಗೆ ಹೆದ್ದಾರಿ ಬರುವುದೆಂದರೆ ಒಂದು ತಲ್ಲಣವೇ ಹೌದು. ಮೈಮೇಲೆ ರೊಯ್ಯಂತ ಹಾದು ಹೋಗುವ ಹಾಗೆ ಹಾಯುವ ವಾಹನಗಳು ಒಂದಿಷ್ಟು ಮನೆಗಳನ್ನು ಹಿಂದಕ್ಕೆ ತಳ್ಳಿದ ಹೆದ್ದಾರಿಯದು. ಹಿಂದೆ ಸರಿದಂತಾಗಿದ್ದ ಗ್ರಾಮದ ಇಬ್ಬದಿಯ ಜನರು ಪರಸ್ಪರ ಅಪರಿಚಿತರ ಹಾಗೆ ಕಂಡರು. ತಾಯಿ ಮಗಳದು ಇದೇ ಪರಿತಾಪ. ಮೊದಲೆಲ್ಲ ಸಣ್ಣ ಬಟ್ಟಲು, ತಟ್ಟೆ, ಹಾಲು ಮೊಸರು... ಅಂತೆಲ್ಲ ಸಲೀಸಾಗಿ ಸಾಗಿಸಬಹುದಾಗಿತ್ತು. ಈಗ ಹಾಗಲ್ಲ, ದೈತ್ಯ ದಾರಿಯನ್ನು ದಾಟಿ ಬೇಗ ಬರೋ ಹಾಗಿಲ್ಲ. ಎರಡೂ ಬದಿ ಎರಡೆರಡು ವಾಹನಗಳ ಅಬ್ಬರ. ಅಷ್ಟು ದೂರದಲ್ಲಿ ಬಿಟ್ಟ ತಿರುವಿನ ದಾರಿಯಲ್ಲಿ ಬರಬೇಕಿತ್ತು. ತಾಯಿ ಕೂಗಾಟ, ‘ಹುಷಾರು ಮಗಳೇ... ನೀನು ಬರಬೇಡ. ಮಗುವನ್ನು ಎತ್ತಿಕೊಂಡು ಬರಲೇಬೇಡ’. ಹೆದ್ದಾರಿಯ ಚಾಚುವಿಕೆ ಸ್ವಲ್ಪ ಮಟ್ಟಿಗೆ ತಾಯಿ ಮಗಳ ಓಡಾಟವನ್ನು ಕಡಿಮೆ ಮಾಡಿತ್ತು.
ಮಗ ಸೊಸೆ ಹಳ್ಳಿಗೆ ಹೆದ್ದಾರಿಯಾದ ಸುದ್ದಿಗೆ ಹಿಗ್ಗಿದ್ದರು. ಮಗ ಸೊಸೆಯಂತೂ ಕುಗ್ರಾಮ, ಬಸ್ ಇಲ್ಲ, ಇದ್ದರೂ ನಿಲ್ಲಿಸುವುದಿಲ್ಲ, ರಸ್ತೆ ಅಧ್ವಾನ... ಎಂದೆಲ್ಲ ನೆಪ ಹಾಕಿ ಬರೋದನ್ನೇ ಬಿಟ್ಟಿದ್ದರು. ಈಗ ಹಾಗಲ್ಲ, ಕಾರಲ್ಲಿ ಬಂದು ನಿಲ್ಲುತ್ತಿದ್ದರು. ಮಗಳಿಗೆ ಹಾಗಲ್ಲ ಒಂದು ಬಗೆಯ ತಲ್ಲಣ. ಕಪ್ಪಗೆ ಚಾಚಿಕೊಂಡ ಈ ಹೆದ್ದಾರಿ ಯಾಕಾದರೂ ಬಂತೋ ಎಂಬ ಬೇಸರ. ಕೂಗಳತೆಯ ಮನೆಗೆ ಅಡ್ಡಲಾದ ಕೆಟ್ಟ ಕನಸಿನ ಹಾಗೆ.
ಈ ಹಿಂದೆ ಸಣ್ಣ ಏಕೈಕ ಅರೆ ಡಾಂಬರಿನ ರಸ್ತೆ ಇದ್ದಾಗ ಪದೆ ಪದೇ ಬರುತ್ತಿದ್ದ ಮಗಳು–ಅಳಿಯ ಮತ್ತು ಹೆದ್ದಾರಿ ಆದ ಮೇಲೆ ಬರೋ ಮನಸ್ಸು ಮಾಡಿದ ಮಗ–ಸೊಸೆ. ಜೀವನವೇ ಹೀಗೆ ಅಲ್ಲವೆ? ದಾರಿಗಳು ಸಂಬಂಧವನ್ನು ಬಣ್ಣಿಸುತ್ತವೆ. ತಾಯಿಯಂತಹ ದಡವೊಂದು ಎಲ್ಲವನ್ನೂ ನಿರೀಕ್ಷಿಸುತ್ತದೆ ಮತ್ತು ಒಳಿತನ್ನೇ ಬಯಸುತ್ತದೆ. ಓಡಾಟ ಅವರವರ ಭಾವ ಮತ್ತು ಭಕ್ತಿಗೆ ಬಿಟ್ಟದ್ದು. ಮಧ್ಯೆ ಅಂತಃಕರಣದ ಸ್ರೋತ ಇರಬೇಕಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.