ADVERTISEMENT

ನುಡಿ ಬೆಳಗು: ಯಾರೂ ಅರಿಯದ ವೀರರು

ದೀಪಾ ಹಿರೇಗುತ್ತಿ
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
   

2017ನೇ ಇಸವಿಯ ಅಗಸ್ಟ್‌ 25ರ ಬೆಳಿಗ್ಗಿನ ಸಮಯ. ಮಧ್ಯಪ್ರದೇಶದ ಸಾಗರ ಜಿಲ್ಲೆಯ ಚಿತೋರಾ ಎಂಬ ಶಾಲೆಯಲ್ಲಿ ಆತಂಕ ಮನೆಮಾಡಿತ್ತು. ಕಾರಣ ಆ ಶಾಲೆಯ ಹಿಂದೆ ಬಾಂಬ್‌ ಒಂದು ಪತ್ತೆಯಾಗಿತ್ತು. ನಾನೂರು ಮಕ್ಕಳಿರುವ ಶಾಲೆ ಅದು. ಜತೆಗೆ ಶಾಲೆಯ ಸುತ್ತ ಜನವಸತಿಯೂ ಇತ್ತು. ಪೋಲೀಸರಿಗೆ ಸುದ್ದಿ ಹೋಯಿತು. ಕಾನ್‌ಸ್ಟೆಬಲ್‌ ಅಭಿಷೇಕ್‌ ಪಟೇಲ್‌ ನೇತೃತ್ವದಲ್ಲಿ ಪೋಲೀಸರ ತಂಡ ಸ್ಥಳಕ್ಕೆ ಆಗಮಿಸಿತು. ಆದರೆ ಬಾಂಬ್‌ ನಿಷ್ಕ್ರಿಯಗೊಳಿಸುವ ತಂಡ ತಕ್ಷಣಕ್ಕೆ ಲಭ್ಯವಿರಲಿಲ್ಲ.

ಮುಂದೇನು ಮಾಡುವುದೆಂದು ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದಂತೆಯೇ ಅಭಿಷೇಕ್‌ ಅವರು ಮಕ್ಕಳನ್ನು ಶಾಲೆಯಿಂದ ಹೊರಗೆ ಕಳಿಸಲು ಹೇಳಿದರು. ಮತ್ತು ತಾವು ಮುಂದೆ ಹೋಗಿ ಹನ್ನೆರಡು ಇಂಚಿನ ಸುಮಾರು ಹತ್ತು ಕೇಜಿ ತೂಕದ ಬಾಂಬ್‌ ಅನ್ನು ಭುಜದ ಮೇಲೆ ಇರಿಸಿಕೊಂಡವರೇ ಓಡಲು ಶುರು ಮಾಡಿದರು. ಎಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆ ಅಚ್ಚರಿಯಿಂದ ನೋಡುತ್ತಲೇ ಇದ್ದರು. ಓಡುತ್ತ ಓಡುತ್ತ ಒಂದು ಕಿಲೋಮೀಟರ್‌ ದೂರದಲ್ಲಿರುವ ನಿರ್ಜನ ಪ್ರದೇಶವೊಂದರಲ್ಲಿ ಬಾಂಬ್‌ ಅನ್ನು ಇರಿಸಿ ವಾಪಾಸು ಬಂದರು ಅಭಿಷೇಕ್.‌

‘ಅಕಸ್ಮಾತ್ತಾಗಿ ಬಾಂಬ್‌ ಸ್ಫೋಟವಾದರೆ ಸುತ್ತಲಿನ ಐನೂರು ಮೀಟರ್‌ ಪ್ರದೇಶ ಹಾನಿಗೊಳಗಾಗುತ್ತದೆಂದು ನಮಗೆ ತರಬೇತಿಯಲ್ಲಿ ಹೇಳಿದ್ದರು. ಹಾಗಾಗಿ ಬಾಂಬ್‌ ಅನ್ನು ಈ ಜನನಿಬಿಡ ಜಾಗದಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಸಾಗಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ನಲವತ್ತು ವರ್ಷದ ಅಭಿಷೇಕ್‌ ನಂತರ ಹೇಳಿದರು.

ADVERTISEMENT

‘ಬಾಂಬ್‌ ಹೊತ್ತುಕೊಂಡು ಓಡುವಾಗ ಭಯವಾಗಲಿಲ್ಲವೇ’ ಎಂದು ಕೇಳಿದಾಗ ಅವರು ‘ನಾನೂರು ಮಂದಿಯ ಜೀವಗಳು ನನ್ನೊಬ್ಬನ ಜೀವಕ್ಕಿಂತ ಅಮೂಲ್ಯ ಎಂದುಕೊಂಡೆ’ ಎಂದರು.

ಅಭಿಷೇಕ್‌ ಬಾಂಬ್‌ ಹೊತ್ತು ಓಡುತ್ತಿರುವ ವಿಡಿಯೊಗಳು ವೈರಲ್‌ ಆದವು. ಎಲ್ಲೆಡೆ ಪ್ರಶಂಸೆಯ ಸುರಿಮಳೆ. ಮಧ್ಯಪ್ರದೇಶದ ಮುಖ್ಯಮಂತ್ರಿಯವರು ತಮ್ಮ ನಿವಾಸಕ್ಕೆ ಕರೆದು ನಗದು ಬಹುಮಾನ ನೀಡಿ ಗೌರವಿಸಿದರು. ಅವೆಲ್ಲ ಸಹಜವೇ. ಆದರೆ ಅಭಿಷೇಕ್‌ ಅವರ ಧೈರ್ಯ ಮತ್ತು ತ್ಯಾಗಕ್ಕೆ ಯಾವ ಬೆಲೆಯನ್ನೂ ಕಟ್ಟಲು ಸಾಧ್ಯವಿಲ್ಲ. ತಮ್ಮ ಜೀವ ಉಳಿಸಿಕೊಳ್ಳುವಾಗ ರಕ್ತಸಂಬಂಧಗಳೂ ಪರಕೀಯವಾಗುವಾಗ ಸಾವಿನ ಬಾಯಿಗೆ ಹೋಗುವ ಸಾಧ್ಯತೆಯಿದ್ದರೂ ಯಾರೋ ಅಪರಿಚಿತ ವಿದ್ಯಾರ್ಥಿಗಳಿಗಾಗಿ ಒಂದಿಷ್ಟೂ ಹಿಂಜರಿಯದೇ ಮುನ್ನುಗ್ಗಿದ ಈ ಅಪರಿಮಿತ ತ್ಯಾಗದ ಕಥೆ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆ. ಪೋಲೀಸ್‌ ಇಲಾಖೆಯ ಹೆಮ್ಮೆಯ ಪ್ರತಿನಿಧಿ ಅಭಿಷೇಕ್‌ ಪಟೇಲ್.‌ ಹಿಂದಿನಿಂದಲೂ ಇಂತಹ ಅಸಂಖ್ಯಾತ ‘ಯಾರೂ ಅರಿಯದ ವೀರರು’ ಮಾನವೀಯತೆಯ ಅಡಿಪಾಯವಾಗಿದ್ದಾರೆ. ಇಂತಹ ವ್ಯಕ್ತಿಗಳು ಸಮಾಜದಲ್ಲಿ ಇದ್ದಾರೆ ಎನ್ನುವುದೇ ಹೆಮ್ಮೆಯ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.