ನುಡಿ ಬೆಳಗು
ಊರಿನ ಜನರೆಲ್ಲರೂ ಹಿಡಿ ಶಾಪ ಹಾಕುತ್ತಲೇ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಇಕ್ಕಟ್ಟಾದ ರಸ್ತೆಗೆ ಡಿವೈಡರ್ ಹಾಕಲಾಗಿತ್ತು ಮತ್ತು ಆ ಬದಿಯ ಅಂಗಡಿಗಳಿಗೆ ಹೋಗಲು ಯು- ಟರ್ನ್ ಕೂಡಾ ಅರ್ಧ ಕಿಮಿ ಕ್ರಮಿಸಬೇಕಿತ್ತು. ಈ ಕಡೆಯವರು ಈ ಕಡೆ ಆ ಕಡೆಯವರು ಆ ಕಡೆಗೇ ಉಳಿವ ಹಾಗಿತ್ತು. ಹಾಗಾಗಿ ಈ ಕಡೆ ದಿನಸಿ ಕೊಳ್ಳುವವರು ಆ ಕಡೆಗೆ ಇದ್ದ ಹಾರ್ಡ್‌ವೇರ್ ಅಂಗಡಿಗೆ ಹೋಗಲು ಯೋಚಿಸಲೂ ಮನಸು ಮಾಡುತ್ತಿರಲಿಲ್ಲ. ಅಷ್ಟು ಜನನಿಬಿಡ ರಸ್ತೆ ಮತ್ತು ತಿರುವಿಗೆ ಬಹಳ ದೂರ ಹೋಗಬೇಕಿತ್ತು.
ಈ ಹಿಂದೆ ಡಿವೈಡರ್ ಇರದೇ ಇದ್ದಾಗ, ರಸ್ತೆ ದಾಟುವ ಸಮಯ ರಯ್ಯನೆ ಬರುವ ವಾಹನಗಳು ಅನೇಕರ ನೋವು ಮತ್ತು ಸಾವಿಗೂ ಕಾರಣವಾಗಿದ್ದನ್ನೂ ಜನ ಮರೆತಿರಲಿಲ್ಲ. ಸಿಕ್ಕ ಸಿಕ್ಕಲ್ಲಿ ಯಾವುದೇ ಸೂಚನೆ ಇರದೆ ತಿರುವು ತೆಗೆದುಕೊಳ್ಳುವ ವಾಹನ ಚಾಲಕರು ರಸ್ತೆಯನ್ನು ಬಂದ್ ಮಾಡುತ್ತಿದ್ದರು. ಬರಿ ಗೊಂದಲ ಮತ್ತು ಕೈ ಕೈ ಮಿಲಾಯಿಸುವ ಸನ್ನಿವೇಶಗಳೇ ಹೆಚ್ಚು.
ಈಗ ಡಿವೈಡರ್ ನಿರ್ಮಾಣದ ನಂತರ ಜನರ ಚಲನೆಯಲ್ಲಿ ಒಂದಿಷ್ಟು ವ್ಯವಧಾನವೂ ಕಂಡು ಬಂದಿತ್ತು. ಸಹಿಸದ ಜನ ಡಿವೈಡರ್ ತೆರವಿಗೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೂ ಅಹವಾಲನ್ನು ನೀಡಿದ್ದರು. ಡಿವೈಡರ್ ನಿರ್ಮಿಸಿದ ಆರಂಭಿಕ ದಿನಗಳಲ್ಲಿ ಪ್ರತಿಭಟನೆಗಳನ್ನೂ ಮಾಡಲಾಗಿದ್ದರೂ ಎಲ್ಲಿಂದಲೂ ವಿರೋಧಿಗಳ ಪರವಾದ ನಿರ್ಣಯ ಬಂದಿರಲಿಲ್ಲ. ಬದಲಿಗೆ ಅಪಘಾತಗಳು, ವಾಹನ ನಿಬಿಡತೆ ಕಡಿಮೆ ಆದುದರ ಕುರಿತು ಬುದ್ಧಿ ಹೇಳಿ ಕಳಿಸಿದರು.
ಜೀವನವೂ ಹೀಗೇ ಅಲ್ಲವೆ? ಹಳೆಯ ಉಸಿರು ಗಟ್ಟಿಸುವ ಕೆಲವು ನಿಯಮಗಳಿಗೆ ಒಗ್ಗಿ ಹೋಗಿ, ಹೊಸದು ಸರಿ ಇದ್ದರೂ ಅದನ್ನು ಸ್ವೀಕರಿಸಲಾಗದ ಇಕ್ಕಟ್ಟು. ಅದು ಒಳ್ಳೆಯದೇ ಇರುತ್ತದೆ. ಆದರೆ ಗೊಣಗಾಟ ಬಿಡಲ್ಲ. ಏನೇ ಎಂದರೂ ಸಣ್ಣ ಕೊಂಕು ಕಿರಿಕಿರಿ ಪ್ರತಿರೋಧ. ಈಗ ಆ ಊರು ಆ ಬೀದಿಯಲ್ಲಿ ಓಡಾಡುವ ಜನರು ಮೊದಲಿನ ಹಾಗೆ ಇಲ್ಲ. ಸಂಯಮದ ಚಲನೆ ನಡೆ ಮತ್ತು ಎಚ್ಚರದ ತಿರುವು. ಕೆಲಸಗಳು ಆಗುತ್ತಿವೆ ಮತ್ತು ಮೊದಲಿನ ತರಹದ ಎಡವಟ್ಟುಗಳೂ ಇಲ್ಲ. ಅಗತ್ಯ ಮತ್ತು ಆರೋಗ್ಯಕರ ಹೊಂದಾಣಿಕೆಗಳಿಗೆ ಮಣಿಯುವುದೂ ಒಂದು ಜವಾಬ್ದಾರಿಯೇ ಸರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.