ADVERTISEMENT

ನುಡಿ ಬೆಳಗು: ಬಯಲ ಬದುಕು..

ನುಡಿ ಬೆಳಗು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 8 ಮೇ 2025, 19:24 IST
Last Updated 8 ಮೇ 2025, 19:24 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ದಾರಿಯಲ್ಲಿ ಒಂದು ಸಸಿ ಬೆಳೆದಿತ್ತು. ಒಬ್ಬ ಮನುಷ್ಯ ಆ ಸಸಿಯನ್ನು ತುಳಿದು ಹೋದ. 15 ದಿನಗಳ ನಂತರ ಅದೇ ದಾರಿಯಲ್ಲಿ ವಾಪಸು ಬಂದ. ಯಾವ ಸಸಿಯನ್ನು ಆ ಮನುಷ್ಯ ತುಳಿದಿದ್ದನಲ್ಲ ಆ ಸಸಿ ಸ್ವಲ್ಪ ಎತ್ತರಕ್ಕೆ ಬೆಳೆದಿತ್ತು. ಒಂದು ಹೂವು ಬಂದಿತ್ತು. ಆ ಮನುಷ್ಯನನ್ನು ನೋಡಿ ಸಸಿ, ‘ನನ್ನಲ್ಲಿ ಒಂದು ಹೂವು ಬೆಳೆದಿದೆ. ಅದನ್ನು ತೆಗೆದುಕೊಂಡು ಹೋಗಿ ನಿನ್ನ ಮನೆಯ ಜಗಲಿಯಲ್ಲಿ ಇಟ್ಟರೆ ನಿನ್ನ ಮನೆ ಸುಗಂಧಿತವಾಗುತ್ತದೆ’ ಎಂದು ಹೇಳಿತು. ಆಗ ಭೂಮಿ ತಾಯಿ ಸಸಿಯನ್ನು ಉದ್ದೇಶಿಸಿ, ‘ಮೊನ್ನೆಯಷ್ಟೇ ಈ ಮನುಷ್ಯ ನಿನ್ನ ತುಳಿದು ಹೋಗಿದ್ದಾನೆ. ಆದರೂ ಈಗ ನೀನು ಅವನಿಗೇ ಹೂವು ಕೊಡಲು ಮುಂದಾಗಿದ್ದೀಯಲ್ಲ’ ಎಂದು ಕೇಳಿತು. ಅದಕ್ಕೆ ಸಸಿ, ‘ಯಾರು ಬೆಳೆಯುತ್ತಾರೆ, ಅವರನ್ನೆಲ್ಲಾ ತುಳಿಯುವುದು ಮನುಷ್ಯರ ಹಳೆಯ ಚಾಳಿ’ ಎಂದು ಹೇಳಿತು. ‘ಅದು ಗೊತ್ತಿದ್ದೂ ತುಳಿದವರಿಗೇ ಯಾಕೆ ಹೂವು ಕೊಡುತ್ತಿದ್ದಿ’ ಎಂದು ಭೂಮಿ ಮರು ಪ್ರಶ್ನೆ ಮಾಡಿತು. ‘ತುಳಿದವರನ್ನೆಲ್ಲಾ ನನ್ನ ತಲೆಯಲ್ಲಿ ಇಟ್ಟುಕೊಂಡಿದ್ದರೆ ನನ್ನ ಹೃದಯದಲ್ಲಿ ಹೂವು ಅರಳಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿತು ಸಸಿ. ಹಾಗೆಯೇ ಜೀವನದಲ್ಲಿ ಕೆಟ್ಟದ್ದನ್ನೆಲ್ಲಾ ಮರೆತು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಮನುಷ್ಯ. ಕೆಟ್ಟದ್ದರ ಮಧ್ಯದಲ್ಲಿಯೂ ಒಳ್ಳೆಯದನ್ನು ಮನುಷ್ಯ ಗುರುತಿಸಬೇಕು. ಸ್ವಚ್ಛ ಬದುಕಬೇಕು. ಸ್ವಸ್ಥ ಬದುಕೋದು. ಮಸ್ತ್ ಬದುಕೋದು. ಸುಸ್ತಾಗಿ ಬದುಕೋದಲ್ಲ. ಮೈ ಮತ್ತು ಮನಸ್ಸು ಎರಡೂ ಸ್ವಚ್ಛವಾಗಿರಬೇಕು. ಜೀವನದಲ್ಲಿ ಸ್ವಚ್ಛತೆಯನ್ನು ಕಲಿಯಬೇಕು.

‘ಮಾಡುವ ನೀಡುವ ಭಕ್ತನ ಕಂಡೊಡೆ ನಿಧಿ ನಿಧಾನವ ಕಂಡಂತಾಯ್ತು’ ಎಂದು ಬಸವಣ್ಣ ಹೇಳುತ್ತಾರೆ. ಮನುಷ್ಯ ದುಡಿಯಬೇಕು. ದುಡಿದಿದ್ದರಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ಖರ್ಚು ಮಾಡಬೇಕು. ಅಂತಹವರ ಹೃದಯದಲ್ಲಿ ದೇವರು ನೆಲಸುತ್ತಾನೆ. ‘ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ಬಯಲ ಜೀವನ ಬಯಲ ಭಾವನೆ, ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ನಿಮ್ಮಪೂಜಿಸಿದವರು ಮುನ್ನವೆ ಬಯಲಾದರು ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ’ ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ.

ADVERTISEMENT

ಮನುಷ್ಯ ಒಂದು ತಿಳಕೋಬೇಕು. ಜೀವನ ಎಂದರೆ ಬಟಾ ಬಯಲು ಅಷ್ಟೆ. ತಾಯಿಯ ಗರ್ಭದಿಂದ ನಾವು ಬಂದಿದ್ದೇವೆ ಎನ್ನುತ್ತೇವೆ. ತಾಯಿಯ ಗರ್ಭಕ್ಕೆ ಬರುವ ಮೊದಲು ತಂದೆಯ ಹೊಟ್ಟೆಯಲ್ಲಿ ಇದ್ದೆವು. ತಂದೆಯ ಹೊಟ್ಟೆಗೆ ಬರುವುದಕ್ಕೆ ಅನ್ನ ಕಾರಣ. ಅನ್ನ ಎಲ್ಲಿಂದ ಬಂತು ಅಂದರೆ ಭೂಮಿಯಿಂದ. ಭೂಮಿ ಎಲ್ಲಿಂದ ಬಂತು ಅಂದರೆ ಬಯಲಿನಿಂದ. ಹೀಗೆ ಸಂಪೂರ್ಣ ನಮ್ಮ ಬದುಕು ಬಯಲಿನಿಂದಲೇ ಬಂದಿದ್ದು. ನಾವು ಬಂದಿದ್ದು ಬಯಲಿನಿಂದ ಮತ್ತು ಹೋಗುವುದೂ ಬಯಲಿಗೆ. ದೇಹ ಬಯಲು, ಮನಸ್ಸು ಬಯಲು. ಮೊದಲು ಇದ್ದಿದ್ದೂ ಬಯಲು, ನಾವು ಹೋದಮೇಲೆ ಉಳಿಯುವುದೂ ಬಯಲು. ಬದುಕು ಎನ್ನುವುದು ಕಲ್ಪನೆ ಅಷ್ಟೆ. ಮನಸ್ಸು
ಎನ್ನುವುದು ಒಂದು ಆಕಾಶ. ಮನಸ್ಸಿನಲ್ಲಿ ಬರುವ ಆಲೋಚನೆಗಳು ಚಲಿಸುವ ಮೋಡಗಳು ಅಷ್ಟೆ. ಕಾಮ ಕ್ರೋಧ, ಮದ ಮತ್ಸರ, ಲೋಭ ಎಲ್ಲವೂ ಮೋಡಗಳಷ್ಟೆ. ಹುಟ್ಟುವಾಗ ಜಾತಿ ಇಲ್ಲ, ಸಾಯುವಾಗಲೂ ಜಾತಿ ಇಲ್ಲ. ಹುಟ್ಟು ಸಾವಿಗೆ ಇಲ್ಲದ ಜಾತಿ ಬದುಕಿಗೆ ಯಾಕೆ? ಜೀವನವನ್ನು ಜಾತಿ ಮೇಲೆ ಕಟ್ಟಬಾರದು. ನೀತಿ ಮೇಲೆ ಕಟ್ಟಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.