
ನುಡಿ ಬೆಳಗು
ಉತ್ತರ ಪ್ರದೇಶದ ಪ್ರಯಾಗರಾಜ್‍ನಲ್ಲಿ 80 ವರ್ಷ ವಯಸ್ಸಿನ ಅಜ್ಜ, ತನ್ನ ಹದಿಹರಯದ ಮೊಮ್ಮಗನನ್ನು ಕೈಯ್ಯಾರೆ ಕೊಂದು ಹಾಕುತ್ತಾನೆ. ಅವನ ಅಂಗಾಂಗಗಳನ್ನು ತುಂಡರಿಸಿ ಬೇರೆ ಬೇರೆ ಕಡೆಗಳಲ್ಲಿ ಎಸೆದು ಬರುತ್ತಾನೆ. ಯಾರೋ ಮಾಂತ್ರಿಕ, ‘ಈ ಹುಡುಗನ ಕಾರಣದಿಂದ ನಿನಗೆ ಕಷ್ಟಗಳು ಬಂದಿವೆ. ಇವನನ್ನು ಬಲಿಕೊಟ್ಟರೆ ನಿನ್ನ ಕುಟುಂಬಕ್ಕೆ ತಗುಲಿದ ಶಾಪ ಕಳೆಯುತ್ತದೆ’ ಎಂದು ಹೇಳಿದ್ದಕ್ಕೆ ಕುರುಡು ನಂಬಿಕೆಯಲ್ಲಿ ಶಾಪವನ್ನು ಕಳೆದುಕೊಳ್ಳುವುದಕ್ಕಾಗಿ ಆತ ತನ್ನದೇ ವಂಶದ ಕುಡಿಯನ್ನು ಕೊಲೆ ಮಾಡುತ್ತಾನೆ. ನಾವಿರುವ 21ನೇ ಶತಮಾನದ ಘಟನೆಯಿದು. ಶಿಷ್ಟ ಸಮಾಜದಲ್ಲಿ ಇಂಥ ಘಟನೆಗಳಿಗೆ ಜನರು ಪ್ರತಿಕ್ರಿಯಿಸದಷ್ಟು ಸಂವೇದನೆ ಹೀನರಾಗಿದ್ದಾರೆ. ಈ ಪ್ರಗತಿಶೀಲ ಶಿಷ್ಟ ಸಮಾಜ ಇಷ್ಟೊಂದು ಮೌಢ್ಯದಲ್ಲಿ ನರಳುತ್ತಿದೆಯೆಂಬುದನ್ನು ಅರ್ಥೈಸುವುದಾದರೂ ಹೇಗೆ? ಮಾಂತ್ರಿಕನ ಮಾತಿಗೆ ಮರುಳಾಗಿ ಕರುಳುಬಳ್ಳಿಯನ್ನೇ ಕೊಲೆಮಾಡುವಷ್ಟು ಮನುಷ್ಯನ ನೈತಿಕತೆ ಕುಸಿದಿದಿಯೇ? ಹೌದು ಎನ್ನುವುದೇ ಸುಡುವಾಸ್ತವ.
ಹೊಸ ದಾಂಪತ್ಯಕ್ಕೆ ಕಾಲಿಟ್ಟ ಯುವತಿ ಪತಿಯನ್ನೇ ಕೊಂದು ಹಾಕುತ್ತಾಳೆ. ಪತಿಯು ವರದಕ್ಷಿಣೆಗಾಗಿ ತನ್ನ ಪತ್ನಿಯನ್ನು ಸುಟ್ಟು ಹಾಕುತ್ತಾನೆ. ಇನ್ಯಾರೋ ತಾಯಿ ಹೆತ್ತ ಕಂದನನ್ನೇ ಕೊಲ್ಲುತ್ತಾಳೆ. ಇಷ್ಟೊಂದು ಕ್ರೌರ್ಯ, ಅನಾಗರಿಕತೆ ಮನುಷ್ಯರೊಳಗಡೆ ಹಾವಿನಂತೆ ಸುರುಳಿಸುತ್ತಿಕೊಂಡಿರುತ್ತದೆಯೇ? ಹೌದಾದರೆ ಇವನಂತಹ ದುಷ್ಟ ಪ್ರಾಣಿ ಬೇರೊಂದಿಲ್ಲ. ಕಾಡಿನೊಳಗೆ ಒಬ್ಬರೇ ಹೋಗುತ್ತಿದ್ದೀರಿ ಎಂದುಕೊಳ್ಳಿ. ಆಗ ಹುಲಿ ಎದುರಾಗುತ್ತದೆ. ಹುಲಿ ಹಸಿದಿದ್ದರೆ ಮಾತ್ರ ಅದು ನಿಮ್ಮ ಮೇಲೆರಗುತ್ತದೆ. ಆದರೆ ಒಬ್ಬ ಮನುಷ್ಯ ಅನ್ಯರ ಮೇಲೆ ಯಾವಾಗ ಎಲ್ಲಿ ಹೇಗೆ ಎರಗುತ್ತಾನೋ, ಆಕ್ರಮಣಕಾರಿಯಾಗುತ್ತಾನೋ ಎಂಬುದಕ್ಕೆ ದೊಡ್ಡ ಕಾರಣವೇ ಬೇಕಿರುವುದಿಲ್ಲ. 50 ರೂಪಾಯಿಯ ಬೀದಿ ಜಗಳದಲ್ಲೂ ಕೊಲೆ ಮಾಡಿದವರಿದ್ದಾರೆ. ಮನುಷ್ಯರಲ್ಲಿ ಇಷ್ಟೊಂದು ಸ್ವಾರ್ಥ, ಮೌಢ್ಯ, ನೀಚತನ ಯಾಕೆ ಮನೆ ಮಾಡಿದೆ?
ಜೋಹಾನಸ್‌ಬರ್ಗ್‌ನಲ್ಲಿ ಒಂದು ಸಭೆಯಲ್ಲಿ ಗಾಂಧೀಜಿಯವರ ಭಾಷಣ ನಡೆದಿತ್ತು. ಜನರು ಕಿಕ್ಕಿರಿದಿದ್ದರು. ಗಾಂಧೀಜಿ ಅವರು ಭಾಷಣ ಮುಗಿದ ಮೇಲೆ ವೇದಿಕೆ ಇಳಿದು ಸಭಾಭವನದ ಹೊರಗೆ ಬಂದಾಗ ಹೊರಬಾಗಿಲ ಮರೆಯಲ್ಲಿ ಒಬ್ಬ ಅವಿತುಕೊಂಡಿದ್ದನ್ನು ಕಂಡರು. ಆಗ ಅವರು ಅವನ ಬಳಿಗೆ ಹೋಗಿ ಹೆಗಲ ಮೇಲೆ ಕೈಹಾಕಿ ಮೆಲುದನಿಯಲ್ಲಿ ಗಂಭೀರವಾಗಿ ಏನೋ ಮಾತಾಡಿದರು. ಆ ಮನುಷ್ಯ ಮೊದಲು ಗಾಂಧೀಜಿಯ ಜೊತೆಗೆ ಬರಲು ಅನುಮಾನಿಸಿದ; ತರುವಾಯ ಜೊತೆಗೆ ಹೆಜ್ಜೆಹಾಕತೊಡಗಿದ. ಇನ್ನೊಂದು ಪಕ್ಕದಲ್ಲಿ ಶ್ರೀಮತಿ ಮಿಲ್ಲೀ ನಡೆಯುತ್ತಿದ್ದಳು. ಬೀದಿಯುದ್ದಕ್ಕೂ ಮೆದುವಾದ ಮಾತುಕತೆ. ಕೆಲಕಾಲ ನಡೆದ ಮೇಲೆ ಆ ವ್ಯಕ್ತಿ ಗಾಂಧೀಜಿಯ ಕೈಗೆ ಏನನ್ನೋ ಕೊಟ್ಟು ಹೊರಟುಹೋಗುತ್ತಾನೆ. ಆತ ಗಾಂಧೀಜಿಯನ್ನು ಕೊಲ್ಲಲು ಬಂದಿದ್ದ. ಗಾಂಧೀಜಿ, ‘ನಾನು ಆ ಜನಕ್ಕೆ ದ್ರೋಹ ಮಾಡಿದ್ದೇನೆಂದೂ ಸರ್ಕಾರದೊಡನೆ ಸೇರಿ ಜನರ ವಿರುದ್ಧ ಒಳಸಂಚು ನಡೆಸುತ್ತಿದ್ದೇನೆಂದೂ ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೇನೆಂದೂ ಅವನು ತಿಳಿದಿದ್ದ. ಒಂದೆರಡು ಮಾತು ಆಡಿದ ಮೇಲೆ ಆತ ಇರಿಯಲು ತಂದಿದ್ದ ಚಾಕುವನ್ನೇ ನನಗೆ ಕೊಟ್ಟು ಹೋದ’ ಎನ್ನುತ್ತಾರೆ. ಹೀಗೆ ಗಾಂಧೀಜಿ ಕೊಲ್ಲಲು ಬಂದವನ ಮನಸ್ಸನ್ನೇ ಪರಿವರ್ತಿಸುತ್ತಾರೆ.
‘ನೀರೊಳಗಣ ಕಿಚ್ಚಿಗೆ ನೀರೇ ತಾಯಿ, ಕಲ್ಲೊಳಗಣ ಕಿಚ್ಚಿಗೆ ಕಲ್ಲೇ ತಾಯಿ, ಮರದೊಳಗಣ ಕಿಚ್ಚಿಗೆ ಮರವೇ ತಾಯಿ, ಅವು ಹೊರಹೊಮ್ಮಿದಾಗ ತಾಯ ತಿಂದು ತಾವು ತಲೆದೋರುವಂತೆ’ ಎನ್ನುತಾನೆ ಶರಣ ಮೆರೆಮಿಂಡಯ್ಯ. ಅದೇ ರೀತಿ ಮನುಷ್ಯನೊಳಗಿನ ಕಿಚ್ಚು, ನಂಜು ಕಡೆಗೆ ಅವನನ್ನೇ ತಿಂದುಹಾಕುತ್ತವೆ ಎಂದು ಅರ್ಥೈಯಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.