
ನುಡಿ ಬೆಳಗು
ನನಗೆ ತಿಳಿದಿರುವ ಏಳೆಂಟು ವರ್ಷ ವಯಸ್ಸಿನ ಹುಡುಗನಿಗೆ ಮಾತು ಬರುವುದಿಲ್ಲ. ಬರುವುದಿಲ್ಲ ಎಂದರೆ ಮಾತೇ ಬರುವುದಿಲ್ಲವೆಂದಲ್ಲ. ಆದರೆ, ಅವನ ಮಾತಿನ ಉಚ್ಚಾರಣೆ ಚೀನಿ, ಜಪಾನಿ ಭಾಷೆಯ ಹಾಗಿರುತ್ತದೆ. ಅವನನ್ನು ನಾನು ಮೊದಲು ನೋಡಿದ್ದು ಎರಡು ವರ್ಷದವನಿದ್ದಾಗ. ಆಗ ಅವನ ವಯಸ್ಸಿಗೆ ತಕ್ಕಂತೆ ಬಾಲ ಭಾಷೆಯಲ್ಲಿ ಅಪ್ಪ, ಅಮ್ಮ, ಕಾರು, ಬಸ್ಸು ಇತ್ಯಾದಿ ಮಾತಾಡುತ್ತಿದ್ದ. ನೋಡಲೂ ತುಂಬಾ ಮುದ್ದಾಗಿದ್ದಾನೆ. ಅವರೂ ವೈದ್ಯರ ಬಳಿ ಕರೆದೊಯ್ದಿದ್ದಾರೆ ಪ್ರಜ್ಞೆ, ಕಿವಿ, ಧ್ವನಿಪೆಟ್ಟಿಗೆ ಎಲ್ಲವೂ ಸರಿಯಾಗಿಯೇ ಇದೆ. ಆದರೂ ಹೀಗೆ ಯಾಕೆ ಎನ್ನುವ ಸಮಸ್ಯೆ ಅವರಿಗೂ ಕಾಡಿದೆ. ನಂತರ ತಜ್ಞ ವೈದ್ಯರ ಬಳಿಗೂ ಕರೆದೊಯ್ದಿದ್ದಾರೆ. ನಾನೂ ಏನಾಯಿತು ಎಂದು ಕೇಳಿದೆ, ‘ಇದೆಲ್ಲಾ ಆರಂಭವಾದದ್ದು ಕೋವಿಡ್ ಹೊತ್ತಲ್ಲಿ. ರಸ್ತೆಗೆ ಮಗುವನ್ನು ಬಿಡಲು ಭಯವಾಗುತ್ತಿತ್ತು. ಮಕ್ಕಳ ಜೊತೆ ಬೆರೆಯುವುದು ಆಗುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಮೊಬೈಲ್ ಕೊಟ್ಟು ಕೂರಿಸುತ್ತಿದ್ದೆವು. ಅದರಲ್ಲಿ ಬರೀ ಕಾರ್ಟೂನ್ ನೋಡುತ್ತಿದ್ದ. ‘ತಿಳಿಯದ ಭಾಷೆ, ಅರ್ಥವಾಗದ ಉಚ್ಚಾರಣೆಯನ್ನು ಅನುಕರಿಸಿ ಹುಡುಗ ಹೀಗಾಗಿ ಬಿಟ್ಟಿದ್ದಾನೆ. ಮನುಷ್ಯರ ಸಂಪರ್ಕ ಕಡಿಮೆಯಾಗಿ ಅವನದ್ದೇ ಕಲ್ಪನೆಯ ಲೋಕವನ್ನು ಸೃಷ್ಟಿಸಿಕೊಂಡಿದ್ದಾನೆ. ಅವನಿಗೆ ನೀವು ಅರ್ಥ ಮಾಡಿಸುವುದು ತುಂಬಾ ಕಷ್ಟ’ ಎಂದು ವೈದ್ಯರು ಹೇಳಿದ್ರು’ ಎಂದರು ಆ ತಂದೆ ತಾಯಿ. ಈಗ ಆ ಹುಡುಗನಿಗೆ ತಜ್ಞರ ಚಿಕಿತ್ಸೆ ಕೊಡಿಸಲಾಗುತ್ತಿದೆಯಾದರೂ ಯಾವುದೂ ಸರಿಯಾಗಿಲ್ಲ. ಪ್ರಪಂಚದ ಕಡೆಗೆ ಗಮನವೂ ಇಲ್ಲ. ಅವನ ಮಾತು ನಡವಳಿಕೆ ಎಲ್ಲವೂ ಸಾಮಾನ್ಯರ ಹಾಗೆ ಇಲ್ಲವೇ ಇಲ್ಲ. ಮೊಬೈಲ್ ಈಗಲೂ ಅವನ ಪ್ರಪಂಚ. ಅದಿಲ್ಲದೇ ಹೋದರೆ ಅವನು ಊಟ ಇರಲಿ; ನಿದ್ದೆ ಕೂಡಾ ಮಾಡುವುದಿಲ್ಲ.
ನನ್ನ ಸ್ನೇಹಿತರೊಬ್ಬರು ಎಡಗೈ ಹೆಬ್ಬೆರಳು ತುಂಬಾ ನೋವು, ಏನೂ ಕೆಲಸ ಮಾಡಲೂ ಆಗುವುದಿಲ್ಲ ಎಂದು ತುಂಬಾ ದಿನಗಳಿಂದ ಹೇಳುತ್ತಲೇ ಇದ್ದರು. ಎಂಥಾ ನೋವು ನಿವಾರಕ ತೆಗೆದುಕೊಂಡರೂ ಅದು ಗುಣವಾಗುತ್ತಿಲ್ಲ, ಫಿಜಿಯೋಥೆರಪಿ ಮಾಡಿಸಿದರೂ ಕಡಿಮೆಯಾಗುತ್ತಿಲ್ಲ. ಅವರದ್ದು ಇನ್ನೊಂದು ಕಥೆ- ಮಲಗುವಾಗ, ಕೂತಾಗ ನಿಂತಾಗ ಕೈಲಿ ಮೊಬೈಲ್ ಹಿಡಿದೇ ಇರುತ್ತಾರೆ. ಯಾರಾದರೂ ಮನೆಗೆ ಬಂದರೆ ಕೋಪ. ಮಕ್ಕಳು, ಗಂಡ ಯಾರೂ ಬೇಡ, ಸುಮ್ಮನೆ ಮೊಬೈಲ್ ಪರದೆಯನ್ನು ತೀಡುತ್ತಲೇ ಇರಬೇಕು ಅನ್ನಿಸುತ್ತೆ ಎನ್ನುತ್ತಾರೆ. ‘ಸ್ವಲ್ಪ ಮೊಬೈಲ್ ಬಳಕೆ ಕಡಿಮೆ ಮಾಡಿ’ ಎಂದೆ. ಆದರೆ ಅದು ಅವರಿಗೆ ಸಾಧ್ಯವಾಗುತ್ತಿಲ್ಲ. ಈಗ ಎಡಗೈ ಹೆಬ್ಬೆರಳು ಪೂರ್ತಿ ಬಳಸಲಿಕ್ಕೆ ಸಾಧ್ಯವೇ ಆಗದೇ ಹೋಗಿದೆ.
ಸಮಸ್ಯೆಗಳಾಗುತ್ತೆ ಎಂದು ಗೊತ್ತಾಗಿಯೂ ಕೆಲಸ ಹಗುರ ಮಾಡಿಕೊಳ್ಳಲು ಮಕ್ಕಳಿಗೆ ಮೊಬೈಲ್ ಕೊಡುತ್ತೇವೆ. ಅವರ ಭವಿಷ್ಯವನ್ನೇ ಹಾಳು ಮಾಡುತ್ತೇವೆ. ಗೀಳಿಗೆ ಬಿದ್ದು ದೊಡ್ಡವರೂ ಹೀಗೇ ಆಗುತ್ತಿದ್ದೇವೆ. ಇನ್ನು ಯುವಕರ ಸ್ಥಿತಿಯಂತೂ ಹೇಳಲಾಗುತ್ತಿಲ್ಲ. ಸಾಧನೆ ಮಾಡುವ ಹೊತ್ತಿನಲ್ಲಿ ಕಳೆದುಹೋಗುತ್ತಿದ್ದಾರೆ. ಯಾವುದೇ ಆದರೂ ಅತಿಯಾದ ಬಳಕೆಯಿಂದ ನಮಗೇ ಹಾನಿ ಎಂದರೂ ಮನಸ್ಸು ಕೇಳುವುದಿಲ್ಲ ನಾವು ಯಾಕೆ ಇಷ್ಟು ದುರ್ಬಲರಾಗುತ್ತಿದ್ದೇವೆ?
ನಮ್ಮ ಇಚ್ಛಾಶಕ್ತಿಯನ್ನು ಕುಂದಿಸುವ ಯಾವುದನ್ನೇ ಆದರೂ ದೂರವಿಡುವ ದೃಢ ಸಂಕಲ್ಪವನ್ನು ನಾವು ಮಾಡಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.