
ನುಡಿ ಬೆಳಗು
ಒಂದೂರಲ್ಲಿ ಪಹೋಮ್ ಎಂಬ ಬಡ ರೈತನಿದ್ದ. ಅವನಿಗೆ ಒಂದು ಸಣ್ಣ ಮನೆ, ಒಂದಿಷ್ಟು ಎಕರೆ ಹೊಲ ಹೀಗೆ ಬದುಕಲು ಬೇಕಾದ ಎಲ್ಲವೂ ಇತ್ತು. ಇಷ್ಟಿದ್ದರೂ ಅವನಿಗೆ ಮನಸ್ಸಿನಲ್ಲಿ ಒಂದೇ ಚಿಂತೆ — ‘ಇನ್ನೂ ಸ್ವಲ್ಪ ಭೂಮಿಯಿದ್ದರೆ ಎಷ್ಟು ಚೆನ್ನಾಗಿರುತ್ತದೆ’ ಎನ್ನುವುದು.
ಒಂದು ದಿನ ಅವನ ಪರಿಚಯದ ಜಮೀನುದಾರ ಹೊಲ ಮಾರಾಟಕ್ಕೆ ಇಟ್ಟನು. ಪಹೋಮ್ ಕೂಡಿಟ್ಟ ಎಲ್ಲಾ ಹಣವನ್ನು ಕೊಟ್ಟು ಸ್ವಲ್ಪ ಭೂಮಿ ಕೊಂಡುಕೊಂಡನು. ಮೊದಲು ಸಂತೋಷಗೊಂಡ, ಆದರೆ ಕೆಲವೇ ದಿನಗಳಲ್ಲಿ ‘ಇನ್ನೂ ಸ್ವಲ್ಪ ದೊಡ್ಡ ಹೊಲ ಇದ್ದಿದ್ದರೆ’ ಎಂಬ ಚಿಂತೆ ಹತ್ತಿತು.
ಸಂತೋಷವಾಗಿರುವುದನ್ನು ಬಿಟ್ಟು ಮನಸ್ಸಿನಲ್ಲಿ ದುರಾಸೆಯ ಬೆಂಕಿ ಹೊತ್ತಿ ಉರಿಯತೊಡಗಿತು. ಅದೇ ಸಮಯಕ್ಕೆ ಅವನು ಒಂದು ಅಚ್ಚರಿಯ ಕಥೆ ಕೇಳಿದನು. ‘ದೂರದೂರಿನಲ್ಲಿ ಬಾಷ್ಕಿರ್ ಜನರು ಇದ್ದಾರೆ, ಅವರು ಒಂದು ದಿನದಲ್ಲಿ ನೀನು ಎಷ್ಟು ನಡೆಯುತ್ತೀಯೋ ಅಷ್ಟು ಭೂಮಿ ಕೊಡುತ್ತಾರೆ’ ಎಂಬ ಸುದ್ದಿ ಅವನ ದುರಾಸೆಯನ್ನು ಹೆಚ್ಚಿಸಿತು.
ಪಹೋಮ್ ಖುಷಿಯಿಂದ ಅಲ್ಲಿಗೆ ಹೋದನು. ಆ ಜನರು ಹೇಳಿದರು: ‘ಅಯ್ಯಾ, ಬೆಳಗಿನ ಸೂರ್ಯೋದಯದ ಸಮಯದಲ್ಲಿ ನಡೆಯಲು ಆರಂಭಿಸಿ, ಸಂಜೆ ಸೂರ್ಯಾಸ್ತಕ್ಕೆ ಮುಂಚೆ ನೀನು ಹಿಂತಿರುಗುವಷ್ಟು ಭೂಮಿ ನಿನ್ನದು. ಆದರೆ ಸೂರ್ಯಾಸ್ತದ ವೇಳೆಗೆ ಹಿಂದಿರುಗದಿದ್ದರೆ, ನಿನ್ನ ಜೀವವೇ ಹೋಗುತ್ತದೆ.’
ಪಹೋಮ್ ಬೆಳಿಗ್ಗೆ ಓಡಲು ಶುರುಮಾಡಿದ. ಹೊಲಗಳು, ನದಿಗಳು, ಮಣ್ಣು ಎಲ್ಲವೂ ಸುಂದರವಾಗಿ ಕಾಣುತ್ತಿದ್ದವು. ‘ಇನ್ನೂ ಸ್ವಲ್ಪ ದೂರ ಓಡಿ ಈ ಬೆಟ್ಟವನ್ನೂ ಸೇರಿಸಿಕೊಳ್ಳೋಣ’ ಎಂದುಕೊಂಡ. ಆದರೆ ಸಮಯ ಕಳೆಯುತ್ತಿತ್ತು. ಮಧ್ಯಾಹ್ನದ ನೆತ್ತಿಮೇಲಿನ ಸೂರ್ಯ ಪಶ್ಚಿಮದತ್ತ ವಾಲಿದ. ಇದೀಗ ಪಹೋಮ್ ಬೆವರುತ್ತಾ, ಏದುಸಿರು ಬಿಡುತ್ತಾ ಹಿಂದಿರುಗಲು ಆರಂಭಿಸಿದ. ಸೂರ್ಯ ನಿಧಾನವಾಗಿ ಅಸ್ತಂಗತವಾಗುತ್ತಿದ್ದ. ಪಹೋಮನ ಕಾಲುಗಳು ನಡುಗುತ್ತಿದವು. ಆದರೂ ಅವನು ತನ್ನ ಶಕ್ತಿಯನ್ನೆಲ್ಲ ಕಟ್ಟಿ ಓಡಿದ. ಕೊನೆಗೆ ಸೂರ್ಯ ಮುಳುಗುವ ಕ್ಷಣದಲ್ಲಿ ಆತ ಗುರಿ ತಲುಪುವುದರಲ್ಲಿದ್ದ. ಬಾಷ್ಕಿರ್ ಮುಖ್ಯಸ್ಥನ ಬಳಿ ತಲುಪಿದ. ಜನರು ಚೀರಿದರು — ‘ಅವನು ಗೆದ್ದ!’ ಆದರೆ ಪಹೋಮ್ ನೆಲಕ್ಕೆ ಬಿದ್ದುಬಿಟ್ಟ.ಅವನ ಉಸಿರು ನಿಂತಿತ್ತು. ಆತ ಸತ್ತುಹೋಗಿದ್ದ. ಮುಖ್ಯಸ್ಥರು ನಿಶ್ಚಲವಾಗಿ ಹೇಳಿದರು: ‘ಈಗ ಅವನಿಗೆ ಎಷ್ಟು ಭೂಮಿ ಬೇಕು ಗೊತ್ತಾಯ್ತೇ? ಮನುಷ್ಯನಿಗೆ ಬೇಕಾದ್ದು ಆರಡಿ ಭೂಮಿ.’
ಹಣ, ಜಮೀನು, ಒಡವೆ ವಸ್ತ್ರಗಳು ಯಾವುದೇ ವಸ್ತುವಿರಲಿ ಅತಿಯಾದ ಆಸೆ ಒಳ್ಳೆಯದಲ್ಲ. ಹಣ, ಸಂಪತ್ತಿನ ಲೋಭದಲ್ಲಿ ಜನರು ಎಷ್ಟೆಲ್ಲ ಅಪರಾಧಗಳನ್ನು ಮಾಡುತ್ತಾರೆ. ಮದುವೆಯಲ್ಲಿ, ಮದುವೆಯಾದ ಬಳಿಕವೂ ದುಬಾರಿ ಕಾರು ಬೇಕು, ಹಣ ಬೇಕು ಎಂದು ಪೀಡಿಸಿ ತರಲಿಲ್ಲವಾದಲ್ಲಿ ಅಥವಾ ಪ್ರತಿಭಟಿಸಿದ ಮಹಿಳೆಯನ್ನು ಬೆಂಕಿಯಿಟ್ಟು ಕೊಂದ ಘಟನೆಗಳು ಇವತ್ತಿಗೂ ನಡೆಯುತ್ತಿಲ್ಲವೇ?
ಬುದ್ಧ ಆಸೆಯೇ ದುಃಖಕ್ಕೆ ಮೂಲವೆಂದು ಸಾರಿ ಎಲ್ಲವನ್ನೂ ತೊರೆದು ಹೋದ. ಭಗವದ್ಗೀತೆ, ಕುರ್‌ಅನ್, ಬೈಬಲ್ ಎಲ್ಲಾ ಧರ್ಮಗ್ರಂಥಗಳೂ ಇದನ್ನೇ ಬೋಧಿಸುತ್ತವೆ. ಅತಿಯಾಸೆ ಗತಿಗೆಡಿಸಿತು ಎಂಬ ಗಾದೆಯಂತೆ ಮನುಷ್ಯನ ಆಸೆಗಳಿಗೆ ಕೊನೆಮೊದಲಿಲ್ಲ. ಕೊಳೆತು ಹೋಗುವಷ್ಟು ಮನೆಯಲ್ಲಿ ತುಂಬಿದ್ದರೂ ಮನಸ್ಸಿನಲ್ಲಿ ಮತ್ತೂ ಬೇಕೆನ್ನುವ ದುರಾಸೆ. ಪಹೋಮನಂತೆ ಲೋಕವನ್ನೇ ಗೆದ್ದು ಸತ್ತುಹೋಗುವುದಾದರೆ ಅಂತಹ ಲೋಕ, ಐಶ್ವರ್ಯ ಯಾರಿಗೆ ಬೇಕು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.