ADVERTISEMENT

ನುಡಿ ಬೆಳಗು | ಯಾರ ಮಾತಿಗೆ ಎಷ್ಟು ಬೆಲೆ?

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:58 IST
Last Updated 3 ಜುಲೈ 2025, 23:58 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಬೆಳಗಿನ ನಾಲ್ಕು ಗಂಟೆಗೇ ಬಾಡಿಗೆದಾರ ಬಂದು ದಡದಡ ಬಾಗಿಲು ಬಡಿದಾಗ ಸಿಟ್ಟಿನಿಂದಲೇ ಬಾಗಿಲು ತೆಗೆದ ಮಾಲೀಕ, ‘ಏನು ವಿಷಯ’ ಅಂದ. ‘ನಾನು ಈ ತಿಂಗಳ ಬಾಡಿಗೆ ಕೊಡುವುದು ಸಾಧ್ಯವಿಲ್ಲ’ ಎಂದ ಅವನು. ಈತ ಮತ್ತಷ್ಟು ಕೋಪಗೊಂಡು ‘ಇದನ್ನು ಹೇಳಲು ಬೆಳಿಗ್ಗೆಯೇ ಬಂದು ನಿದ್ರೆಯಿಂದ ಏಳಿಸಬೇಕಿತ್ತಾ, ನಿಧಾನಕ್ಕೆ ಹೇಳಿದ್ದರಾಗುತ್ತಿರಲಿಲ್ವಾ’ ಎಂದ. ‘ಈ ಮನೆಯ ವಿಷಯ ಇಬ್ಬರಿಗೂ ಸಂಬಂಧಿಸಿದ ಕಾರಣ ಒತ್ತಡವನ್ನು ನಾನೊಬ್ಬನೇ ಏಕೆ ಅನುಭವಿಸಲಿ, ನಿಮಗೂ ಹಂಚೋಣ ಅಂತ ಹೇಳಿದೆ’ ಅಂದ ಇವನು ತಣ್ಣಗೆ.

ನಮ್ಮ ಜೀವಿತಾವಧಿಯಲ್ಲಿ ಬಹಳಷ್ಟು ಜನ ಇಂಥವರು ಸಿಗುತ್ತಾರೆ. ಸುಮ್ಮನೆ ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಬದುಕುವವರನ್ನು ಕಂಡರೆ ಇವರಿಗೆ ಸಮಾಧಾನವಿರುವುದಿಲ್ಲ. ತಮ್ಮ ಮನಸ್ಸಿನಲ್ಲಿ ಇರುವ ಆತಂಕ, ದುಃಖ, ದುಮ್ಮಾನ, ಮತ್ತು ಇಲ್ಲ ಸಲ್ಲದ ಬೇಡದ ವಿಚಾರಗಳನ್ನೆಲ್ಲಾ‌ ಇನ್ನೊಬ್ಬರ ತಲೆಗೆ ತುಂಬುವುದರ ಮೂಲಕ ವಿಕೃತ ಖುಷಿಯನ್ನು ಅನುಭವಿಸುತ್ತಿರುತ್ತಾರೆ. ಯಾರೋ ಮಾಡಿದ ಚಂದದ ಪೇಂಟಿಂಗ್ ಒಂದಕ್ಕೆ ಏನೋ ಕೊರತೆಯನ್ನು ಎತ್ತಿ ಹೇಳಿಬಿಡುವುದು. ಮಾಡಿದ ಅಡುಗೆಯಲ್ಲಿ ತಪ್ಪು ಕಂಡು ಹಿಡಿಯುವುದು. ದೈಹಿಕ ನ್ಯೂನತೆಗಳನ್ನು ಎತ್ತಿ ಹಿಡಿದು ಹೀಯಾಳಿಸಿದಂತೆ ಮಾತನಾಡಿಬಿಡುವುದು. ಇಲ್ಲವೇ ಕಟ್ಟಿದ ಮನೆ ವಾಸ್ತು ಪ್ರಕಾರ ಇಲ್ಲ ಅಂತಲೋ, ಸೊಸೆ ನಿಮಗೆ ತಕ್ಕವಳಲ್ಲ ಅಂತಲೋ, ನಿಮ್ಮ ಹುಡುಗನ ಸಹವಾಸ ಸರಿಯಾದವರ ಜೊತೆ ಇಲ್ಲ ಅಂತಲೋ... ಹೀಗೆ ಹಲವಾರು ಸಣ್ಣ ಸಣ್ಣ ವಿಷಯಗಳ್ನು ದೊಡ್ಡದು ಮಾಡಿ ಮನಸ್ಸಿಗೆ ಕಹಿ ಸುರಿಯುವ ಜನ ಇವರು. ಇವರ ಈ ನಡವಳಿಕೆಗೆ ಸರಿಯಾದ ಮದ್ದೆಂದರೆ ಇಂಥವರ ಮಾತುಗಳನ್ನು ಕಡಗಣಿಸುವುದು.

ADVERTISEMENT

ಸಲಹೆ ನೀಡುವವರು ಎಷ್ಟು ಅರ್ಹರು ಎನ್ನುವುದರ ಮೇಲೆ ಸಲಹೆಯ ತೂಕವನ್ನು ಅಳೆಯಿರಿ. ಹೀಗೆ ಕಿರಿಕಿರಿ ಉಂಟುಮಾಡುವ ಜನರನ್ನು ನಿರ್ಲಕ್ಷಿಸುವುದು ಸವಾಲಿನ ಸಂಗತಿ. ಆದಷ್ಟೂ ಜನರೊಂದಿಗೆ ನೀವು ಸಂವಹನ ನಡೆಸಬೇಕಾದ ಸಂದರ್ಭಗಳನ್ನು ತಪ್ಪಿಸಲು ಪ್ರಯತ್ನಿಸಿ. ನಾವು ಮಾಡುವ ಎಲ್ಲಾ ಕೆಲಸಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವರಿಗೆ ಇಷ್ಟವಾಗಬಹುದು, ಇನ್ನೂ ಕೆಲವರು ಇಷ್ಟಪಡದಿರಬಹುದು. ಇಷ್ಟವಿಲ್ಲದವರು ಕೆಲಸದಲ್ಲಿನ ದೋಷಗಳನ್ನು ಕಂಡು ಟೀಕಿಸುತ್ತಾರೆ. ಇದು ನಮ್ಮಲ್ಲಿ ಖಿನ್ನತೆ ಉಂಟುಮಾಡುತ್ತದೆ. ನಮ್ಮ ಪ್ರತಿಭೆ, ವ್ಯಕ್ತಿತ್ವ ಗೊತ್ತೇ ಇಲ್ಲದವರ ಮಾತೂ ನಮಗೆ ಗೊತ್ತಾಗುವುದು ಬೇಡ. ಎಲ್ಲ ಟೀಕೆಗಳಿಗೆ ಉತ್ತರವನ್ನೂ ನೀಡಬೇಕಿಲ್ಲ.

ನಾವೂ ಇತರರನ್ನು ಟೀಕಿಸುವಾಗ ಬಹಳ ಯೋಚಿಸಬೇಕು. ಇತರರನ್ನು ಕಡಿಮೆ ಅಂದಾಜು ಮಾಡುವುದು, ಅವರ ಭಾವನೆಗಳನ್ನು ನೋಯಿಸುವುದು ಭವಿಷ್ಯದಲ್ಲಿ ಅವರಿಗೆ ದೊಡ್ಡ ನಷ್ಟವನ್ನು ಉಂಟು ಮಾಡಬಹುದು. ನೀವು ಯಾರನ್ನಾದರೂ ಹಂಗಿಸಿದರೆ ಆ ಮಾತು ನಿಮಗೆ ಸಾಮಾನ್ಯ ಎನಿಸಬಹುದು. ಆದರೆ ಹಂಗಿಸಿಕೊಂಡವರಿಗೆ ಆ ನೋವು ಏನೆಂದು ಗೊತ್ತು. ಆದಷ್ಟೂ ಬಿಟ್ಟಿ ಸಲಹೆಗಳನ್ನು ದೇಶಾವರಿಯಾಗಿ ನೀಡುವುದನ್ನು ನಿಲ್ಲಿಸಿ. ಮೇಲ್ನೋಟಕ್ಕೆ ವ್ಯಕ್ತಿಯೊಬ್ಬರಲ್ಲಿ ನಾವು ಕಾಣುವುದಕ್ಕೂ ಅವರು ಮನದೊಳಗೆ ಅನುಭವಿಸುತ್ತಿರುವುದಕ್ಕೂ ಅಜಗಜಾಂತರ ಇದ್ದೀತು. ಯಾರಿಗೆ ಗೊತ್ತು ನಿಮ್ಮ ಅಂದಾಜಿಗೂ ಸಿಗದ ಯುದ್ಧದಲ್ಲಿ ಸಿಕ್ಕಿ ಅವರು ಹೈರಾಣಾಗಿರಬಹುದು‌. ಆದ್ದರಿಂದ ನಾವು ಎಲ್ಲರಿಗೂ ಬಾಯಾಗಬೇಕಿಲ್ಲ. ಎಲ್ಲರ ಮಾತಿಗೂ ಕಿವಿಕೊಡಬೇಕಾಗಿಯೂ ಇಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.