ADVERTISEMENT

ನುಡಿ ಬೆಳಗು: ಕಾಲು ದಾರಿ ಮತ್ತು ಕಾಲ

ಪ್ರಜಾವಾಣಿ ವಿಶೇಷ
Published 7 ಅಕ್ಟೋಬರ್ 2025, 23:38 IST
Last Updated 7 ಅಕ್ಟೋಬರ್ 2025, 23:38 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಈ ಹಿಂದೆ ಕಿರುದಾರಿ ಇದ್ದಾಗ ಆಮೆಗಳು ಹೇಗೋ ಆ ಬದಿಯಿಂದ ಈ ಬದಿಗೆ, ಈ ಬದಿಯಿಂದ ಆ ಬದಿಗೆ ಬಂದು ಬಿಡುತ್ತಿದ್ದವು. ಮಳೆಗಾಲದಲ್ಲಂತೂ ತಾಪತ್ರಯವೇ ಇಲ್ಲ. ಗುಡ್ಡದಿಂದ ಹರಿದು ಬರುವ ನೀರು ಅನಾಮತ್ತಾಗಿ ತೇಲಿಸಿ ಆಚೆ ಬಿಡುತ್ತಿದ್ದವು. ವಾಹನಗಳು ಧಾವಿಸಬಾರದಷ್ಟೆ. ದಡ್ ಅಂತ ಬರುವ ವಾಹನಗಳು ಅನೇಕ ಆಮೆಗಳ ಚಿಪ್ಪನ್ನೇ ಬಗೆದು ಹೋಗಿವೆ. ಆದರೆ ಅಪರೂಪ ಅಷ್ಟೇ. ಏಕೆಂದರೆ ಅದು ಕಿರುದಾರಿ. ಕಡಿದಾದ ದಾರಿ. ಎತ್ತಿನ ಗಾಡಿ ಮತ್ತು ಸೈಕಲ್ಲುಗಳಷ್ಟೇ ಹಾದುಹೋಗುತ್ತಿದ್ದವು. ಈ ಅಪಾಯಗಳು ಇರಲಿಲ್ಲ. ಸೈಕಲ್ಲಿನವರು ಹುಷಾರಾಗೇ ಹೋಗುತ್ತಿದ್ದರು. ಎತ್ತಿನ ಗಾಡಿಗಳ ಚಕ್ರದ ಶಬ್ದ ಇಡಿ ಊರಿಗೇ ಕೇಳಿಸುತ್ತಿತ್ತು. ಹಾಗಾಗಿ, ಆಮೆಗಳು ತಮ್ಮ ವೇಗವನ್ನು ಕಡಮೆ ಮಾಡಿಯೋ ಹೆಚ್ಚು ಮಾಡಿಯೋ ಪಾರಾಗುತ್ತಿದ್ದವು.

ಈಗ ಹಾಗಲ್ಲ ದೈತ್ಯಾಕಾರದ ಹೆದ್ದಾರಿ ಚಾಚಿಕೊಂಡಿದೆ. ದಾಟುವ ಕನಸನ್ನೂ ಆಮೆಗಳು ಕಾಣುವಂತಿಲ್ಲ ಮತ್ತು ಗುಡ್ಡಗಳಿಂದ ನೀರು ಹರಿವುದೆಲ್ಲ ಕನಸೇ. ಹಾದಿ ಚಿಕ್ಕದಾಗಿದ್ದಾಗ ಸಾಲಾಗಿ ಆಮೆಗಳು ರಸ್ತೆಯನ್ನು ದಾಟಿದರೂ ಮನುಷ್ಯರಿಗೆ ಅಚ್ಚರಿ ಹುಟ್ಟುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಊರು ಸೇರುತ್ತಿದ್ದರು. ಆಮೆಗಳು ಕೂಡಾ. ಸರಿದು ಹೋಗಿಬಿಡುತ್ತಿದ್ದವು, ಅಲ್ಲೆಲ್ಲೋ ಈ ಬದಿಯ ಕಾಡಿನಲ್ಲಿ ಕರೆಯುವ ತೊರೆ, ನದಿಗಳ ಕಡೆಗೆ.

ADVERTISEMENT

ಕಾಲ ಅದೆಷ್ಟು ಅಮಾನವೀಯ ಅನಿಸುತ್ತದೆ. ಹೆದ್ದಾರಿ ಬಂದಮೇಲೆ ನಿಸರ್ಗ ಸಹಜ ಲಯಗಳೇ ಇಲ್ಲವಾಗಿವೆ. ಹಕ್ಕಿಗಳ ಕೂಗು, ನೆಲದಲ್ಲಿ ರಂಗೋಲಿ ಬರೆವ ಬಿದ್ದ ಎಲೆಹೂಗಳು ಬೇಲಿ ಕಂಪು ಎಲ್ಲ ಮಾಯವಾಗಿವೆ. ಎಲ್ಲವನ್ನೂ ಚಿತ್ರದಲ್ಲಿ ನೋಡುತ್ತ ರೀಲ್ಸ್‌ಗಳಲ್ಲಿ ಹುಡುಕುತ್ತ ಕೂತ ಮನುಷ್ಯರು. ರಸ್ತೆ ದಾಟುವ ಸಾಹಸಕ್ಕೆ ಈಗ ಆಮೆಗಳು ಇಳಿಯುತ್ತಿಲ್ಲ. ಕಾಲದ ಜೊತೆಗೆ ಬದಲಾಗಿವೆ. ಎಲ್ಲೋ ಮರೆಯಾಗಿ ಉಳಿದರೆ ಸಾಕು ಎಂಬ ನಿರ್ಧಾರಕ್ಕೆ ಬಂದ ಹಾಗಿದೆ.

ಆಧುನಿಕತೆಗೆ ಮಾರುಹೋದ ಮತ್ತು ಮಾರಿಕೊಂಡ ಮನುಷ್ಯರು ಹಿಂದೆ ಕಿರು ಕಡಿದಾದ ದಾರಿ ಇದ್ದ ಮತ್ತು ಈಗ ಹೆದ್ದಾರಿಯಾಗಿ ಬದಲಾದ ಜಾಗದಲ್ಲಿ ಕಾರಿನಲ್ಲಿ ಹೋಗುವಾಗ ಅಕಸ್ಮಾತ್ತಾಗಿ ಆಮೆಯೊಂದು ದಾಟಿ ಹೋಗುತ್ತಿರುವುದನ್ನು ಕಂಡು ಪುಳಕಿತರಾಗುತ್ತಾರೆ. ಹೊಸ ಜೀವನ ಕ್ರಮದಲ್ಲಿ ಈಗ ಉಳಿದಿರುವುದು ಇಂತಹ ಅಕಸ್ಮಾತ್ತಾಗಿ ಕಾಣುವ ವಿಸ್ಮಯಗಳು ಮಾತ್ರ. ದೊಡ್ಡ ಬಲೆಯ ವರ್ತುಲವನ್ನು ನಿರ್ಮಿಸಿ ಚಿಟ್ಟೆಗಳನ್ನು ಹಿಡಿದು ತಂದು ಬಿಟ್ಟು, ಅವುಗಳ ಸಂತತಿಯನ್ನು ಹೆಚ್ಚಿಸುವ ಯೋಜನೆ ಮನುಷ್ಯನದ್ದು. ನಿಸರ್ಗದ ಯಾವುದೇ ಧಾತು ಕೂಡಾ ಈ ದಿನ ಪುಳಕಕ್ಕೆ ಕಾರಣವಾಗಿದೆ. ನಾಗರಿಕತೆ ಎಂಬುದು ಉಳಿಸಿಹೋಗುವುದು ಈ ಸಂಗತಿ ಮಾತ್ರ. ಆ ಕಡೆ ಆಮೆಯೂ ಸಲೀಸಾಗಿ ದಾಟಲಾರದು ಈ ಕಡೆ ಮನುಷ್ಯನೂ ಆಧುನಿಕತೆಯನ್ನು ಕೈಬಿಡಲಾರನು. ಯಾವುದಾದರೊಂದು ಹೊಂದಾಣಿಕೆ ಮತ್ತು ಒಪ್ಪಂದಗಳು ಬಾಳನ್ನು ತೂಗಿಸಿದರೆ ಸಾಕು ಎನಿಸುತ್ತದೆ.

ನಿಧಾನವಾಗಿ ಮತ್ತು ನಿರಾಳವಾಗಿ ರಸ್ತೆ ದಾಟುವ ಆಮೆಗಳು ನಮ್ಮ ಧಾವಂತಗಳನ್ನು ಎಚ್ಚರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.