ADVERTISEMENT

ನುಡಿ ಬೆಳಗು: ಪ್ರಿಯವಾದ ಸುಳ್ಳು..

ನುಡಿ ಬೆಳಗು

ವಾಸುದೇವ ನಾಡಿಗ್
Published 6 ಜನವರಿ 2026, 23:31 IST
Last Updated 6 ಜನವರಿ 2026, 23:31 IST
<div class="paragraphs"><p>ನುಡಿ ಬೆಳಗು...</p></div>

ನುಡಿ ಬೆಳಗು...

   

ಓ ಹೆನ್ರಿಯ ದಿ ಲಾಸ್ಟ್ ಲೀಫ್ ಸದಾ ಕಾಡುವ ಕಥೆ. ಕಿಟಕಿಯಲ್ಲಿ ಕಾಣುವ ಹಸಿರೆಲೆಯನ್ನು ನೋಡುತ್ತಲೇ ಬಾಳಿನತ್ತ ಮನಸು ಮಾಡುವ ಆ ಕಥನ ಅಸಾಧಾರಣವಾದುದು. ಅದೆಷ್ಟೊ ಸಂಗತಿಗಳು ಆಸ್ಪತ್ರೆಗಳ ಋಗ್ಣ ಶಯ್ಯೆಯಲ್ಲಿ ಇದ್ದೇ ಬಾಳಿನತ್ತ ಕೊಂಡೊಯ್ಯುತ್ತದೆ. ಇಲ್ಲಿ ಕೂಡ ಆದದ್ದು ಅದೇ. ಇಬ್ಬರು ಹೆಚ್ಚು ಕಡಿಮೆ ಒಂದೇ ವಯಸ್ಸಿನ ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾದ ಜೀವಗಳವು. ಅಕ್ಕ ಪಕ್ಕದ ಹಾಸಿಗೆ ಅಷ್ಟೇ. ಒಬ್ಬ ತೀರಾ ಕಿಟಕಿಯ ಹತ್ತಿರದಲ್ಲೇ ಇದ್ದರೆ ಇನ್ನೊಬ್ಬ ಅವನ ಪಕ್ಕದ ತೆಳು ಪರದೆಯ ಆಚೆ. ಎಚ್ಚರ ಆದಾಗೆಲ್ಲ ಇಬ್ಬರೂ ಸಣ್ಣಗೆ ಮಾತಾಡಿಕೊಳ್ಳುತ್ತಿದ್ದರು. ಕಿಟಕಿಯ ಪಕ್ಕದ ವ್ಯಕ್ತಿ ಕಿಟಕಿಯಾಚೆಯ ಕೆಲವು ಚಿತ್ರಗಳನ್ನು ವಿವರಿಸುತ್ತಿದ್ದ. ಹಾಸಿಗೆ ಬಿಟ್ಟು ಏಳೋದು ಇರಲಿ ಮಗ್ಗುಲಾಗಲೂ ಆಗದ ಪಕ್ಕದ ವ್ಯಕ್ತಿ ಎಲ್ಲ ಕೇಳಿಸಿಕೊಂಡು ಹೂಂ ಗುಟ್ಟುತ್ತ ಮಲಗುತ್ತಿದ್ದ.

ಕಿಟಕಿಯ ಪಕ್ಕದ ವ್ಯಕ್ತಿ ಹೊರಗೆ ಕಾಣುತ್ತಿದ್ದ ಆಕಾಶ, ಹಕ್ಕಿ, ಮೋಡ, ಸಾಗುವ ವಿಮಾನಗಳು, ಕಟ್ಟಡಗಳ ಗೋಡೆಗಳ ರಚನೆ, ದೂರದ ಗಿರಿ– ಮರ, ಮನುಷ್ಯರ ಓಡಾಟ... ಎಲ್ಲವನ್ನೂ ಬಹಳ ಸಂಭ್ರಮದಿಂದ ವಿವರಿಸುತ್ತಿದ್ದ. ಇದನ್ನು ಕೇಳುತ್ತಲೇ ಈ ಬದಿಯ ವ್ಯಕ್ತಿಗೆ ಏನೋ ಹುರುಪು. ತಾನೂ ನಾಳೆ ಇಲ್ಲಿಂದ ಎದ್ದು ಹೊರಗೆ ಹೋಗುವ ಲೋಕವನ್ನು ಕಾಣುವ ಭರವಸೆಗಳಲ್ಲೇ ಹಗಲು ಇರುಳು ಸಾಗಾಟ. ಹೊರಗೆ ಹೇಗಿದೆಯೋ ಒತ್ತಟ್ಟಿಗೆ ಇರಲಿ. ಅವುಗಳನ್ನು ವಿವರಿಸುವ ಪಕ್ಕದ ವ್ಯಕ್ತಿಯ ಸಡಗರವೇ ಭಿನ್ನ. ಇವರಿಬ್ಬರನ್ನು ಕಾಯುತ್ತಿದ್ದ ನರ್ಸ್‌ಗೆ ಈ ಘಟನೆ ಒಂದು ವಿಸ್ಮಯವಾದರೂ ಅವಳು ಮೌನಿ. ದೂರದಿಂದಲೇ ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು.

ಆ ರಾತ್ರಿ ಹಿತಕರವಾಗಿರಲಿಲ್ಲ. ಕಿಟಕಿಯ ಪಕ್ಕದ ವ್ಯಕ್ತಿ ಅಚಾನಕ್ ಹೃದಯ ಸ್ತಂಭನದಿಂದ ಕಣ್ಣು ಮುಚ್ಚಿದ. ಅತೀವ ನೋವಿನ ಸಂಗತಿ ಅದು. ಪಕ್ಕದ ವ್ಯಕ್ತಿ ತನ್ನ ಹಾಸಿಗೆಯನ್ನು ಕಿಟಕಿಯ ಪಕ್ಕಕ್ಕೆ ಸ್ಥಳಾಂತರಿಸಲು ವಿನಂತಿ ಮಾಡಿಕೊಂಡ. ನರ್ಸ್ ಮಾಡಿದ್ದೂ ಅದನ್ನೇ. ಈ ವ್ಯಕ್ತಿ ಕಿಟಕಿಯಾಚೆ ನೋಡಿದರೆ ಕಂಡದ್ದು ಬರೀ ಕಾಂಕ್ರೀಟ್ ಗೋಡೆ. ನಿತ್ರಾಣ ಮರಗಳು. ನಿಸ್ತೇಜ ವಾತಾವರಣ ಮತ್ತು ಖಾಲಿ ಬರೀ ಖಾಲಿ.

ಆದದ್ದು ಹೀಗೆ ಅಂತ ನರ್ಸ್ ವಿವರಣೆ. ಈ ಹೊರಗಿನ ಕಥೆಗಳನ್ನು ಹೇಳುತ್ತಿದ್ದ ವ್ಯಕ್ತಿ ಹುಟ್ಟು ಕುರುಡ. ಎಂದೂ ಯಾವತ್ತೂ ಏನನ್ನೂ ನೋಡದ ಜೀವ. ಆದರೂ ಎಲ್ಲವನ್ನೂ ಕಂಡವನ ಹಾಗೆ ಕನಸುಗಳನ್ನು ಚಿತ್ರಗಳನ್ನು ಕಟ್ಟಿಕೊಡುತ್ತ ಪಕ್ಕದ ವ್ಯಕ್ತಿಗೆ ಲವಲವಿಕೆ ತುಂಬುತ್ತಿದ್ದ. ತನ್ನ ಕತ್ತಲೆಗೂ ಬೆಳಕನ್ನು ಹಚ್ಚುವ ಮೂಲಕ ಬೆಳಕಿದ್ದವನಿಗೆ ಕತ್ತಲನ್ನು ಮರೆಯಲು ಪ್ರೇರಣೆ ನೀಡುತ್ತಿದ್ದ ಈ ಇಂತಹ ಬಾಳಿಗೆ ಹೇಳುವುದಾದರೂ ಏನು? ಸುಮ್ಮನೆ ಕೂತು ಯೋಚಿಸಬೇಕಷ್ಟೇ. ಅಪ್ರಿಯವಾದ ಸತ್ಯ ಅನೇಕ ಸಲ ಪ್ರಾಣವನ್ನೇ ತೆಗೆಯಬಲ್ಲುದಾದರೆ ಸಂದರ್ಭೋಚಿತ ಪ್ರಿಯವಾದ ಸುಳ್ಳು ಇಲ್ಲಿ ಬಾಳನ್ನೇ ಮೇಲೆತ್ತ ಬಲ್ಲದು. ದಟ್ಟ ನಿರಾಶೆಯನ್ನು ಹೊತ್ತುಕೊಡುವ ಕಟುವಾಸ್ತವದ ವಿವರಣೆಯನ್ನು ಕಿಟಕಿಯ ಪಕ್ಕದ ವ್ಯಕ್ತಿ ಕೊಡುತ್ತ ನಿಟ್ಟುಸಿರು ಬಿಡುತ್ತಿದ್ದರೆ, ಈಗಾಗಲೇ ಹೊರಳಲು ಸಾಧ್ಯವಾಗದಷ್ಟು ಹಾಸಿಗೆ ಹಿಡಿದಿದ್ದ ಆ ವ್ಯಕ್ತಿ ಕುರುಡನಿಗಿಂತ ಮುಂಚೆಯೇ ಮುಗಿದೇ ಹೋಗುತ್ತಿದ್ದನೇನೋ.

ಕಾಣದಿದ್ದರೂ ಕಂಡಂತೆ ಕಲ್ಪಿಸಿ ವರ್ಣಿಸಿದಾಗ ಕಂಡ ಬದುಕಿಗೆ ಹೊಸ ಕಣ್ಣು ಹಚ್ಚಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.