ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಒಮ್ಮೆ ಅಮೆರಿಕಕ್ಕೆ ಹೋಗಿದ್ದರು. ಅವರು ಪಂಚೆ ಉಟ್ಟಿದ್ದರು. ಕಚ್ಚೆ ಹಾಕಿದ್ದರು. ಒಬ್ಬ ಪೊಲೀಸ್ ಅವರನ್ನು ಹಿಡಿದು ಕಚ್ಚೆ ಎಳೆಯುತ್ತಾ ‘ಇದೇನಿದು, ಇದೇನಿದು’ ಎಂದು ಕೇಳಿದ. ರಾಮಸ್ವಾಮಿ ಅವರಿಗೆ ಇಂಗ್ಲಿಷ್ ಗೊತ್ತಿತ್ತು. ಆದರೆ ಕಚ್ಚೆಗೆ ಇಂಗ್ಲಿಷ್ ನಲ್ಲಿ ಏನಂತ ಕರೀತಾರೆ ಎಂಬುದು ಗೊತ್ತಿರಲಿಲ್ಲ. ಆದರೆ ಪೊಲೀಸ್ ಕಚ್ಚೆ ಎಳೆಯುವುದನ್ನು ಬಿಡಲಿಲ್ಲ. ಆಗ ರಾಮಸ್ವಾಮಿ ಅವರಿಗೆ ಪೊಲೀಸ್ ಟೈ ಹಾಕಿಕೊಂಡಿದ್ದು ಕಂಡಿತು. ಅದನ್ನು ಹಿಡಿದು ‘ವಾಟಿಸ್ ದಿಸ್’ ಅಂತಾ ಕೇಳಿದರು. ಅದಕ್ಕೆ ಪೊಲೀಸ್ ‘ದಿಸ್ ಈಸ್ ಫ್ರಂಟ್ ಟೈ’ ಎಂದ. ತಕ್ಷಣವೇ ರಾಮಸ್ವಾಮಿ ತಮ್ಮ ಕಚ್ಚೆಯನ್ನು ತೋರಿಸಿ ‘ದಿಸ್ ಈಸ್ಮೈ ಬ್ಯಾಕ್ ಟೈ’ ಎಂದರು. ಅಲ್ಲದೆ, ‘ನಿಮ್ಮ ದೇಶದಲ್ಲಿ ಮುಂದೆ ಟೈ ಹಾಕಿಕೊಳ್ಳುವವರಿಗೆ ಬೆಲೆ ಐತಿ. ನಮ್ಮ ದೇಶದಲ್ಲಿ ಹಿಂದೆ ಟೈ ಹಾಕಿಕೊಳ್ಳುವವರಿಗೆ ಬಹಳ ಬೆಲೆ ಐತಿ’ ಎಂದರು. ಅಂದರ ಮಾತು ಕೂಡಾ ಸಂಪತ್ತು. ಮಾತು ಮನುಷ್ಯರನ್ನು ಬದುಕಿಸುತ್ತದೆ.
ನಿಸರ್ಗವೇ ಸಂಪತ್ತು. ನಿಸರ್ಗದಲ್ಲಿ ಯಾವುದು ಸಂಪತ್ತಲ್ಲ ಹೇಳಿ, ನೋಡುವ ಕಣ್ಣು ಸರಿ ಇರಬೇಕು. ನಮ್ಮ ಕಣ್ಣು ಸರಿ ಇಲ್ಲದೇ ಇರುವುದರಿಂದ ನಾವು ಬಡವರಾಗಿದ್ದೇವೆ. ನಾವು ವಿಜಯದಶಮಿ ಆಚರಣೆ ಮಾಡುತ್ತೇವೆ. ಆಗ ನಾವು ‘ಬನ್ನಿ ತಗೊಂಡು ಬಂಗಾರಾಗಿರೋಣ’ ಅಂತೇವಿ. ಬನ್ನಿ ಗಿಡದ ಎಲೆಯನ್ನು ಯಾಕೆ ಬಂಗಾರ ಅಂತ ಕರೆದರು? ಯಾಕೆಂದರ ಒಂದು ಗಿಡದ ಅಡುಗೆ ಮನೆ ಎಂದರೆ ಅದು ಎಲೆ. ಗಿಡಕ್ಕೆ ಏನೆಲ್ಲಾ ಬೇಕು ಅದೆಲ್ಲವೂ ಎಲೆಯಲ್ಲಿಯೇ ತಯಾರಾಗುತ್ತದೆ. ಎಲೆ ಸೂರ್ಯನ ಬೆಳಕನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ವಾತಾವರಣದಲ್ಲಿರುವ ಕೆಟ್ಟ ಗಾಳಿಯನ್ನು ತೆಗೆದುಕೊಳ್ಳುತ್ತದೆ. ಭೂಮಿಯಿಂದ ನೀರು, ಲವಣಾಂಶಗಳನ್ನು ತೆಗೆದುಕೊಂಡು ಗಿಡಕ್ಕೆ ಆಹಾರ ತಯಾರು ಮಾಡುತ್ತದೆ. ಎಲೆ ಇಲ್ಲದಿದ್ದರೆ ಗಿಡವೇ ಇರುವುದಿಲ್ಲ. ಗಿಡಗಳು ಇಲ್ಲದಿದ್ದರೆ ಜೀವಿಗಳು ಅಂದರ ನಾವೂ ಇರುತ್ತಿರಲಿಲ್ಲ. ಅದಕ್ಕಾಗಿಯೇ ಎಲೆಗಳನ್ನು ಬಂಗಾರ ಅಂತ ಕರೆದರು. ಇವುಗಳನ್ನು ನೋಡುವ ಕಣ್ಣಿರಬೇಕು.
‘ಬಡವನಾರ್, ಮಡದಿಯೊಲವಿನ ಸವಿಯನವರಿಯದವನು, ಹುಡುಗರಾಟದಿ ಬೆರೆತು ನಗಲರಿಯದವನು, ಉಡುರಾಜನೋಲಗದಿ ಕುಳಿತು ಮೈಮರೆಯದವನು, ಬಡ ಮನಸೇ ಬಡತನವೊ ಮರುಳ ಮುನಿಯ’ ಎಂದು ಡಿವಿಜಿ ಹೇಳುತ್ತಾರೆ. ಎಲ್ಲ ಸಂಪತ್ತು ಇರುವಾಗ ಮನಸ್ಸು ಕೆಡಿಸಿಕೊಂಡಿರಬಾರದು. ಸಂಸಾರದಲ್ಲಿ ಒಲವು ಇದ್ದರೆ ಶ್ರೀಮಂತವಾಗುತ್ತದೆ. ಸಂಶಯದ ವಿಷದ ಗಾಳಿ ಪ್ರವೇಶ ಮಾಡಿದರೆ ಸಂಸಾರ ಕೆಡುತ್ತದೆ. ಅದಕ್ಕೆ ಪ್ರೇಮ ಸಂಪತ್ತು ಎನ್ನುವುದನ್ನು ಅರಿಯಬೇಕು. ಜೀವನದಲ್ಲಿ, ಸಂಸಾರದಲ್ಲಿ ಏನೇ ಕಷ್ಟ ಬಂದರೂ ಯಾರ ಮುಂದೆ ಕೈಜೋಡಿಸದೆ ಬದುಕನ್ನು ಕಟ್ಟಿಕೊಂಡಿದ್ದಾರಲ್ಲ ಅವರೂ ಭಾರತ ರತ್ನಗಳೇ ಆಗಿದ್ದಾರೆ. ರಾಷ್ಟ್ರಪತಿಯಿಂದ ಪ್ರಶಸ್ತಿ ಪಡೆದವರು ಮಾತ್ರ ಭಾರತ ರತ್ನಗಳಲ್ಲ ಅಂಬೋದನ್ನು ತಿಳಕೋಬೇಕು.
ಗಂಡ ನೀಡಿದ ಒಂದು ಬೀಜವನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊಂಡು ಬೆಳೆಸಿ ಮಗುವನ್ನಾಗಿ ಮಾಡಿ, ಮಗು ಹುಟ್ಟಿದ ನಂತರ 6 ವರ್ಷ ಅದನ್ನು ಬೆಳೆಸಿ, ಅದು ಅತ್ತಾಗ ತಾನೂ ಅತ್ತು, ಅದು ನಕ್ಕಾಗ ತಾನೂ ನಕ್ಕು ಮಗುವನ್ನು ಶಾಲೆಗೆ ಸೇರಿಸುವಾಗ ತನ್ನ ಹೆಸರು ಹೇಳದೆ ಅಪ್ಪನ ಹೆಸರನ್ನು ಬರೆಸುವ ತಾಯಿಯ ತ್ಯಾಗ ಬಹಳ ದೊಡ್ಡದು. ಪ್ರೇಮ ಮನೆ ಕಟ್ಟುತ್ತದೆ ಎನ್ನುವುದು ಗೊತ್ತಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.