ADVERTISEMENT

ನುಡಿ ಬೆಳಗು | ಮಾದರಿಯಾದ ವೀರ ಮಹಿಳೆಯರು

ದೀಪಾ ಹಿರೇಗುತ್ತಿ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
   

ರಾಣಿ ವೇಲು ನಾಚಿಯಾರ್‌. ದಕ್ಷಿಣ ತಮಿಳುನಾಡಿನ ರಾಜ್ಯ ರಾಮನಾಥಪುರದ ರಾಜಕುಮಾರಿ. ಹುಟ್ಟಿದ್ದು 1730ರ ಜನವರಿ 3ರಂದು. ವೀರ ಮಂಗೈ (ವೀರ ಮಹಿಳೆ) ಎಂದು ಕರೆಯಲ್ಪಡುತ್ತಿದ್ದಳು. ಕುದುರೆ ಸವಾರಿ, ಬಿಲ್ಲುಗಾರಿಕೆ ಮುಂತಾದ ಸಮರಕಲೆಗಳಲ್ಲಿ ಪರಿಣತಳಾಗಿದ್ದಳು. ಇಂಗ್ಲಿಷ್‌, ಉರ್ದು ಮುಂತಾದ ಭಾಷೆಗಳೂ ಆಕೆಗೆ ಬರುತ್ತಿದ್ದವು. ಶಿವಗಂಗಾ ರಾಜ್ಯದ ದೊರೆಯೊಂದಿಗೆ ಈಕೆಯ ವಿವಾಹವಾಗುತ್ತದೆ. ರಾಜ್ಯ ವಿಸ್ತರಿಸುತ್ತಿದ್ದ ಬ್ರಿಟಿಷರು ಈ ರಾಜ್ಯದ ಮೇಲೆ ದಾಳಿ ಮಾಡುತ್ತಾರೆ. ರಾಜ ಹೋರಾಡುತ್ತ ಮರಣ ಹೊಂದುತ್ತಾನೆ. ವೇಲು ನಾಚಿಯಾರ್‌ ರಾಜ್ಯದಿಂದ ತಲೆಮರೆಸಿಕೊಳ್ಳಬೇಕಾಗುತ್ತದೆ. ರಾಜ್ಯಭ್ರಷ್ಟಳಾದರೂ ಮಹಿಳಾ ಸೈನ್ಯ ಕಟ್ಟುತ್ತಾಳೆ. ಹಲವಾರು ರಾಜರನ್ನು ಒಗ್ಗೂಡಿಸುತ್ತಾಳೆ. ಎಂಟು ವರ್ಷಗಳ ನಂತರ ಬ್ರಿಟಿಷರ ಮೇಲೆ ಯುದ್ಧ ಹೂಡುತ್ತಾಳೆ. ರಾಣಿಯ ಮುಖ್ಯ ಸೈನಿಕರಲ್ಲಿ ಒಬ್ಬಳಾಗಿದ್ದ ಕುಯಿಲಿ ಎನ್ನುವ ವೀರ ಮಹಿಳೆ ತನ್ನಿಡೀ ದೇಹವನ್ನು ತುಪ್ಪದಲ್ಲಿ ನೆನೆಸಿಕೊಂಡು ತನಗೆ ತಾನೇ ಬೆಂಕಿ ಹಚ್ಚಿಕೊಂಡು ಬ್ರಿಟಿಷರ ಶಸ್ತ್ರಾಗಾರಕ್ಕೆ ಧುಮುಕಿ ಅದನ್ನು ನಾಶ ಪಡಿಸುತ್ತಾಳೆ. ಯುದ್ಧ ಗೆದ್ದ ರಾಣಿ, ಮುಂದಿನ ಹತ್ತು ವರ್ಷ ರಾಜ್ಯವನ್ನಾಳುತ್ತಾಳೆ.

ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಇತಿಹಾಸದ ಪುಟಗಳಲ್ಲಿ ರಾಣಿ ವೇಲು ನಾಚಿಯಾರ್‌ ಹೆಸರು ದಾಖಲಾಗಿದೆ. 2008ರಲ್ಲಿ ಭಾರತ ಸರ್ಕಾರ ಈಕೆಯ ಹೆಸರಿನ ಅಂಚೆಚೀಟಿಯನ್ನು ಬಿಡುಗಡೆ ಮಾಡಿ ಗೌರವ ಸಲ್ಲಿಸಿದೆ. ಬ್ರಿಟಿಷರು ಆಧುನಿಕ ಶಸ್ತ್ರಾಸ್ತ್ರವುಳ್ಳ ವೈರಿಗಳಾದರೂ ಎದೆಗುಂದದೇ ಸೈನ್ಯ ಒಗ್ಗೂಡಿಸಿ ಹೋರಾಡಿದ ರಾಣಿ ವೇಲು ನಾಚಿಯಾರ್‌, ತಾಯ್ನಾಡಿನ ರಕ್ಷಣೆಗಾಗಿ ತನ್ನನ್ನು ತಾನು ಸುಟ್ಟುಕೊಂಡ ಕುಯಿಲಿ...ಇಂತಹ ವೀರ ಮಹಿಳೆಯರ ಕಥೆಗಳನ್ನು ನಾವು ಮಕ್ಕಳಿಗೆ ಹೇಳಬೇಕಾಗಿದೆ. ಹೆಣ್ಣೆಂದರೆ ಸೌಂದರ್ಯ ಮಾತ್ರ ಎಂದು ಬಿಂಬಿಸುವ ಸ್ಟೀರಿಯೋಟೈಪ್‌ಗಳನ್ನು ತಿರಸ್ಕರಿಸಿ ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ವ್ಯಕ್ತಿಗಳನ್ನು ಉದಾಹರಣೆಯಾಗಿ ನೀಡಬೇಕಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಕ್ಷಣವೂ ಸ್ವಂತಕ್ಕಾಗಿ ಯೋಚಿಸದೆ ತಾಯ್ನಾಡಿನ ಹಿತವನ್ನೇ ಚಿಂತಿಸುತ್ತ ನಗುನಗುತ್ತ ಪ್ರಾಣಾರ್ಪಣೆಗೈದ ಮಹಿಳೆಯರು ಒಂದೆಡೆಯಿದ್ದರು. ಜತೆಗೇ, ಕುಟುಂಬದ ಪುರುಷರನ್ನು ಸಾವಿನ ಬಾಗಿಲಿಗೆ ಕಳಿಸಿ, ಎದೆಯಲ್ಲಿ ಸಾವಿರ ಸಂಕಟಗಳನ್ನು ಬಚ್ಚಿಟ್ಟು ಕುಟುಂಬವನ್ನು ಮುನ್ನಡೆಸಿದ ನಮ್ಮ ದೇಶದ ಸಾಮಾನ್ಯ ಮಹಿಳೆಯರು ಕೂಡ ಬಹುಸಂಖ್ಯೆಯಲ್ಲಿದ್ದರು. ಈ ಎಲ್ಲ ಧೀರ ಸ್ತ್ರೀಯರನ್ನು ಅವರ ಅಸಾಮಾನ್ಯ ಸಾಹಸಕ್ಕಾಗಿ ನಾವಿಂದು ಸ್ಮರಿಸಬೇಕಿದೆ. ಮೊನ್ನೆ ‘ಆಪರೇಷನ್‌ ಸಿಂಧೂರ’ ಬಗ್ಗೆ ಕರ್ನಲ್‌ ಸೋಫಿಯಾ ಖುರೇಷಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡುತ್ತಿದ್ದಾಗ ವೇಲು ನಾಚಿಯಾರ್‌, ಕುಯಿಲಿ ಇಂತಹ ವೀರ ಮಹಿಳೆಯರ ತ್ಯಾಗ ವ್ಯರ್ಥವಾಗಲಿಲ್ಲ ಅನ್ನಿಸಿ ಮನಸ್ಸು ತುಂಬಿ ಬಂತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.