
ನುಡಿ ಬೆಳಗು
ಗುರು ಗೋವಿಂದರು ಯಮುನಾ ನದಿಯ ತಟದಲ್ಲಿ ಕುಳಿತು ದೈವ ಧ್ಯಾನದಲ್ಲಿ ತೊಡಗಿದ್ದರು. ಅವರ ಅಪಾರ ಶಿಷ್ಯ ಕೋಟಿಗಳಲ್ಲಿ ಒಬ್ಬನಾದ ರಘುನಾಥ ಅವರನ್ನು ಹುಡುಕಿ ಬಂದ. ಅವನು ಅತ್ಯಂತ ಶ್ರೀಮಂತನಾಗಿದ್ದ. ಗುರು ಗೋವಿಂದರು ಶಿಷ್ಯನನ್ನು ನೋಡಿ, ಹೇಗಿದ್ದೀಯ ಎಂದರು. ಕುಶಲೋಪರಿಯ ನಂತರ ಗುರುವಿಗಾಗಿ ತಂದಿದ್ದ ರತ್ನ ಖಚಿತವಾದ ಚಿನ್ನಾಭರಣಗಳನ್ನು ಅವರ ಮುಂದೆ ಇರಿಸಿದ. ಗೋವಿಂದರು, ಏನಿದು ಎಂದು ಪ್ರಶ್ನಿಸಿದರು. ‘ಜಗತ್ತಿನ ಅತ್ಯಂತ ಬೆಲೆಬಾಳುವ ಆಭರಣಗಳು ಇವು, ಇವುಗಳನ್ನು ಇನ್ನೊಬ್ಬರಿಗೆ ಕೊಡುವಷ್ಟು ಶ್ರೀಮಂತಿಕೆ ನನಗೆ ಬಂದಿದೆ’ ಎಂದ ರಘುನಾಥ. ಈ ಮಾತುಗಳನ್ನು ಕೇಳಿ ಗೋವಿದರಿಗೆ ನಗುಬಂತು. ಅದರಲ್ಲಿ ಒಂದು ಆಭರಣವನ್ನು ತೆಗೆದುಕೊಂಡು ನೋಡುವವರಂತೆ ನಟಿಸುತ್ತಾ ನೀರೊಳಗೆ ಬೀಳಿಸಿಬಿಟ್ಟರು. ಬಿದ್ದ ನಂತರ, ‘ಅಯ್ಯಯ್ಯೋ ನೀರೊಳಗೆ ನೀನು ಕೊಟ್ಟ ಆಭರಣ ಬಿದ್ದು ಹೋಯಿತಲ್ಲ’ ಎಂದರು. ಗಾಬರಿಗೊಂಡ ರಘುನಾಥ, ‘ಅದು ಅತ್ಯಂತ ಅಮೂಲ್ಯವಾದ ಆಭರಣ’ ಎಂದು ನೀರೊಳಗೆ ಹುಡುಕಾಟ ನಡಿಸಿದ.
ರಭಸವಾಗಿ ಹರಿಯುತ್ತಿದ್ದ ಯಮುನೆ ಆ ಆಭರಣವನ್ನು ತನ್ನೊಂದಿಗೆ ಸೆಳೆದೊಯ್ದಿದ್ದರಿಂದ ಅದು ರಘುನಾಥನ ಕೈಗೆ ಸಿಗಲಿಲ್ಲ. ಹುಡುಕಿ ಸುಸ್ತಾದ ಅವನು ಗುರುವಿನ ಬಳಿಗೆ ಬಂದು, ‘ಎಲ್ಲಿ ಬಿದ್ದಿತು ಎಂದು ಮತ್ತೊಮ್ಮೆ ತೋರಿಸಿ, ನಾನದನ್ನು ಎತ್ತಿಕೊಂಡು ಬರುತ್ತೇನೆ’ ಎಂದ. ಗೋವಿಂದರು ಮತ್ತೊಂದು ಆಭರಣವನ್ನು ತೆಗೆದುಕೊಂಡು, ‘ಅಗೋ ನೋಡು ಅಲ್ಲಿ’ ಎನ್ನುತ್ತಾ ತಮ್ಮ ಕೈಲಿದ್ದ ಆಭರಣವನ್ನು ತಾವು ತೋರಿಸಿದ ಜಾಗದತ್ತ ಮತ್ತೆ ಎಸೆದರು. ರಘುನಾಥನಿಗೆ ಅಳುವೇ ಬಂತು. ‘ಎಂಥಾ ಕೆಲಸ ಮಾಡಿದಿರಿ ಗುರುಗಳೇ’ ಎನ್ನುತ್ತಾ ಮತ್ತೆ ಯಮುನೆಯ ಒಡಲಿಗೆ ಜಿಗಿದ. ತನ್ನೆಲ್ಲಾ ಶ್ರಮ ಹಾಕಿ ಹುಡುಕಿದ. ಆ ಆಭರಣವೂ ಸಿಗಲಿಲ್ಲ. ನಿರ್ಲಿಪ್ತರಾಗಿದ್ದ ಗುರುಗೋವಿಂದರನ್ನು ನೋಡಿ ರಘುನಾಥನಿಗೆ ಈಗ ಬರಿ ಅಳು ಮಾತ್ರವಲ್ಲ; ಕೋಪವೂ ಬಂತು. ಅವನು ಅವರನ್ನು ಬೈಯ್ಯುತ್ತಾ, ‘ನಾನು ಶ್ರಮಪಟ್ಟುಗಳಿಸಿದ್ದನ್ನು ಬೆಲೆ ಇಲ್ಲದೆ ಎಸೆದು ತಣ್ಣಗೆ ಕುಳಿತಿದ್ದೀರಲ್ಲ? ಇದು ನ್ಯಾಯವಾ’ ಎಂದು ಜಗಳವಾಡತೊಡಗಿದ.
ಗುರುಗೋವಿಂದರು, ‘ನಿಜವೇ ರಘುನಾಥ, ಶ್ರಮದಿಂದ ಗಳಿಸಿದ್ದು ಕಳೆಯಿತೇ? ನಾನು ಶ್ರಮ ಪಟ್ಟ ಎಲ್ಲವೂ ನನ್ನ ಬಳಿಯೇ ಇದೆ. ನೀನು ಗಳಿಸಿದ್ದು ಮಾತ್ರ ಯಾಕೆ ಹೀಗಾಯಿತು’ ಎಂದರು. ರಘುನಾಥನಿಗೆ ಉತ್ತರಿಸಲು ಮಾತುಗಳೇ ಇರಲಿಲ್ಲ. ಆಗ ಗೋವಿಂದರು ಶಿಷ್ಯನನ್ನು ಉದ್ದೇಶಿಸಿ, ‘ನಿನಗೆ ಅಮೂಲ್ಯವಾದದ್ದು ನನಗೆ ಅಮೂಲ್ಯವಾಗಬೇಕಿಲ್ಲ ಅಲ್ಲವೇ? ನೋಡು ಈ ನದಿಯನ್ನು ಇದಕ್ಕೆ ನಿನ್ನ ಅಮೂಲ್ಯವಾದ ಆಭರಣವೂ, ಕಲ್ಲೂ ಎರಡೂ ಒಂದೇ. ಯಾವುದನ್ನು ಹಾಕಿದರೂ ನಿರ್ಲಿಪ್ತವಾಗಿ ನುಂಗಿಕೊಳ್ಳುತ್ತದೆ. ಜ್ಞಾನಿಗಳು ಹೀಗಿರಬೇಕು’ ಎಂದರು. ರಘುನಾಥನಿಗೆ ತನ್ನ ತಪ್ಪಿನ ಅರಿವಾಗಿತ್ತು. ತನಗೆ ಆಭರಣ ಮಹತ್ವದ್ದು. ಆದರೆ, ಅದು ಗುರುವಿಗೂ ಮಹತ್ವದ್ದು ಎಂದು ತೀರ್ಮಾನಿಸಿದ್ದು ತನ್ನ ಮಿತಿ ಎಂಬುದರ ಅರಿವು ಅವನಿಗಾಗಿತ್ತು.
ಯಾರಿಗಾದರೂ ಏನನ್ನಾದರೂ ಕೊಡುವ ಮುನ್ನ ಆ ವಸ್ತುವಿನ ಅಗತ್ಯ ಅವರಿಗೆ ಇದೆಯಾ? ಇಲ್ಲವಾ? ಎಂದು ಯೋಚಿಸುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.