ನುಡಿ ಬೆಳಗು
ಒಂದು ಊರಿನಲ್ಲಿ ಜ್ಞಾನಿಯಾದ ವ್ಯಕ್ತಿಯೊಬ್ಬನಿದ್ದ. ಜನರು ಆತನ ಬಳಿ ಸಮಸ್ಯೆಗಳನ್ನು ಹೊತ್ತು ಬರುತ್ತಿದ್ದರು. ಬದುಕಿನಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ ಕೆಲವಾದರೂ ಪರಿಹಾರವಾಗುತ್ತವೆ ಎಂದು ಅವನು ಅದೆಷ್ಟೇ ಹೇಳಿದರೂ ಜನರಿಗೆ ಅದು ಅರ್ಥವಾಗುತ್ತಿರಲಿಲ್ಲ. ಹಾಗಾಗಿ, ಅಂತಹವರಿಗೆ ಅರ್ಥವಾಗುವಂತೆ ಮನದಟ್ಟು ಮಾಡಬೇಕೆಂದು ಆತ ಕಾಯುತ್ತಿದ್ದ.
ಒಮ್ಮೆ ಒಂದು ದಿನ ಆತ ನದಿಯ ದಡದಲ್ಲಿ ದಿನವಿಡೀ ಕುಳಿತಿದ್ದ. ಬೆಳಿಗ್ಗೆಯಿಂದ ಸಂಜೆಯವರೆಗೂ ಆತ ಕುಳಿತ ಜಾಗ ಬಿಟ್ಟು ಕದಲದೇ ಇದ್ದುದನ್ನು ನೋಡಿ ಊರಿನ ಜನರು ಬಂದು ಯಾಕೆ ಹೀಗೆ ಕುಳಿತಿದ್ದೀರಿ ಎಂದು ಕೇಳುತ್ತಾರೆ. ‘ಈ ನದಿ ಪೂರ್ತಿಯಾಗಿ ಒಣಗುತ್ತದೆಂದು ಕಾಯುತ್ತ ಕುಳಿತಿದ್ದೇನೆ. ಇದು ಒಣಗಿದ ಮೇಲೆ ನಾನು ಆಚೆ ದಡಕ್ಕೆ ನಡೆದುಕೊಂಡು ಹೋಗಬೇಕು’ ಎಂದ ಆತ. ಅದಕ್ಕೆ ಊರ ಜನರು ನಕ್ಕು, ‘ಹಾಗಾದರೆ ನೀವು ಎಂದಿಗೂ ಆಚೆ ದಡ ತಲುಪಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ. ಆಗ ಆ ವ್ಯಕ್ತಿ ಮುಗುಳ್ನಕ್ಕು ಹೇಳಿದ, ‘ಇದನ್ನೇ ನಾನು ನಿಮಗೆ ಅದೆಷ್ಟೋ ವರ್ಷಗಳಿಂದ ಹೇಳಲು ಪ್ರಯತ್ನಿಸುತ್ತಿದ್ದೇನೆ. ಈ ನದಿ ನಮ್ಮ ಬದುಕಿನ ಸಮಸ್ಯೆಗಳ ಹಾಗೆ. ಅದು ಬತ್ತುವುದೇ ಇಲ್ಲ. ನದಿಯ ಆಚೆ ದಡಕ್ಕೆ ಹೋಗಲು ಈಜಿಕೊಂಡು ಹೋಗಬೇಕು ಅಥವಾ ದೋಣಿಯಲ್ಲಿ ಹೋಗಬೇಕು. ನದಿ ದಾಟಲು ದೋಣಿಯನ್ನು ಬಳಸುತ್ತೇವೆ. ದೋಣಿಯೇ ಇಲ್ಲವೆಂದರೆ ಈಜುವುದನ್ನು ಕಲಿಯುತ್ತೇವೆ. ಸೇತುವೆ ಕಟ್ಟಲು ಪ್ರಯತ್ನಿಸುತ್ತೇವೆ. ನದಿ ಬತ್ತುವುದಿಲ್ಲವೆಂದೋ, ದೋಣಿ ಇಲ್ಲವೆಂದೋ ಅಳುತ್ತ ಕುಳಿತುಕೊಂಡರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಅದೇ ರೀತಿ ಬದುಕಿನಲ್ಲಿ ಸಮಸ್ಯೆಗಳಿಗೆ ಕೊನೆಯೇ ಇಲ್ಲ. ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತ ಅವುಗಳ ನಡುವೆಯೇ ಬದುಕುವುದನ್ನು ಕಲಿಯಬೇಕು. ಪಶ್ಚಾತ್ತಾಪ ಹೇಗೆ ಆಗಿಹೋದ ಸಂಗತಿಗಳನ್ನು ಬದಲಾಯಿಸದೋ ಹಾಗೆ ಚಿಂತೆ ಭವಿಷ್ಯವನ್ನು ಸುಧಾರಿಸದು. ಈಸಬೇಕು ಈಸಿ ಜೈಸಬೇಕು ಎಂದು ಹಿರಿಯರು ಸುಮ್ಮನೇ ಹೇಳಿದ್ದಾರೆಯೇ’ ಎಂದ.
ಇಂದು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಆಡಂಬರದ ವಿವಾಹ, ವೈಭವದ ಜೀವನಶೈಲಿ ಇವುಗಳನ್ನು ನೋಡಿ ಯುವಜನರು ಹಣವಿದ್ದುಬಿಟ್ಟರೆ ಸಮಸ್ಯೆಗಳೇ ಬದುಕಲ್ಲಿ ಬರುವುದಿಲ್ಲ ಎಂದುಕೊಳ್ಳುತ್ತಾರೆ. ತಕ್ಷಣ ಹಣಮಾಡುವ ಹುಚ್ಚಿಗೆ ಬಿದ್ದು ಅಪರಾಧಗಳನ್ನು ಎಸಗುತ್ತಾರೆ. ಮತ್ತೆ ಕೆಲವರು ಸಮಸ್ಯೆಗಳಿರುವುದು ತಮ್ಮ ಬದುಕಿನಲ್ಲಿ ಮಾತ್ರ ಎಂದು ಯೋಚಿಸಿ ಖಿನ್ನತೆಗೆ ಜಾರುತ್ತಾರೆ. ಮತ್ತೆ ಕೆಲವರು ಜೀವನೋತ್ಸಾಹವಿಲ್ಲದೇ ನಿರುತ್ಸಾಹದಿಂದ ಬದುಕುತ್ತಿರುತ್ತಾರೆ. ಆದರೆ, ಇಂದು ನಾವು ಬದುಕಲು ಬೇಕಾದ ಅತ್ಯಂತ ಕನಿಷ್ಟಮಟ್ಟದ ಜ್ಞಾನ ಯಾವುದೆಂದರೆ ಸಮಸ್ಯೆಗಳಿಲ್ಲದೇ ಯಾರ ಜೀವನವೂ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು. ಕೆಲವರ ಸಮಸ್ಯೆ ಹೊರಜಗತ್ತಿಗೆ ಕಾಣದಿರಬಹುದು. ಆದರೆ ಸವಾಲುಗಳಿಲ್ಲದ ಬದುಕು ಯಾರದ್ದೂ ಇಲ್ಲ. ಕಡ್ಡಿಯನ್ನು ಗುಡ್ಡವಾಗಿಸಿಕೊಳ್ಳುವುದೋ, ಗುಡ್ಡವಿದ್ದರೂ ಕಡ್ಡಿ ಎಂದುಕೊಂಡು ಮುನ್ನಡೆವುದೋ ಅದು ನಮ್ಮ ನಮ್ಮ ದೃಷ್ಟಿಕೋನದ ಮೇಲೆ ನಿರ್ಧಾರಿತ. ಅಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.