ADVERTISEMENT

ನುಡಿ ಬೆಳಗು | ವಿವೇಕ 

ಪಿ. ಚಂದ್ರಿಕಾ
Published 30 ಏಪ್ರಿಲ್ 2024, 0:53 IST
Last Updated 30 ಏಪ್ರಿಲ್ 2024, 0:53 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಲಂಕೆಯಿಂದ ವಿಜಯಶಾಲಿಯಾಗಿ ಸೀತಾಮಾತೆಯೊಂದಿಗೆ ಬಂದ ರಾಮನಿಗೆ ಅಯೋಧ್ಯೆಯಲ್ಲಿ ಪಟ್ಟಾಭಿಷೇಕದ ಸಂಭ್ರಮ. ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡಿದ ಅಷ್ಟೂ ಜನ ವಾನರರೂ ಅಲ್ಲಿ ಆಮಂತ್ರಿತರಾಗಿದ್ದರು. ಅಲಂಕೃತಗೊಂಡ ಅಯೋಧ್ಯೆಯನ್ನು ನೋಡಿ ಸ್ವರ್ಗವೇ ಭೂಲೋಕಕ್ಕೆ ಬಂತೇನೋ ಎನ್ನುವಷ್ಟು ಅವರು ಸಂಭ್ರಮಿತರಾಗಿದ್ದರು. ಮಕ್ಕಳು ಮರಿಗಳೊಂದಿಗೆ ಬಂದವರಿಗೆ ಯಾವ ಕೊರತೆಯೂ ಆಗಬಾರದೆಂದು ರಾಮ ಕಟ್ಟಪ್ಪಣೆ ಮಾಡಿದ್ದರಿಂದ ಅವರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು.  

ಅರಮನೆಯ ಭೋಜನಶಾಲೆಗೆ ಬಿಡುವೇ ಇಲ್ಲ. ವಿಧ ವಿಧವಾದ ಭಕ್ಷ್ಯಗಳ ತಯಾರಿ ನಡೆಯುತ್ತಲೇ ಇತ್ತು. ಕಾಡಿನಲ್ಲೇ ಹುಟ್ಟಿ ಬೆಳೆದು ನಾರು ಬೇರು ಗೆಡ್ಡೆ ಗೆಣಸುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಪಿಗಳಿಗೆಲ್ಲಾ ಬಗೆಬಗೆಯ ಊಟವನ್ನು ತಿನ್ನುವ ಹೊಸ ಅನುಭವ. ಅದು ಅವರೆ ಕಾಳಿನ ಕಾಲ. ಹಾಗಾಗಿ ಅವರೆ ಕಾಳಿನ ಸಾಂಬಾರನ್ನು ಮಾಡಲಾಗಿತ್ತು. ಎಲ್ಲ ಕಪಿಗಳೂ ಊಟಕ್ಕೆ ಕೂತಿರುವಾಗ ಬಡಿಸಿದ್ದ ಅವರೆ ಕಾಳೊಂದನ್ನು ಮರಿಕಪಿ ಹಿಸುಕಿತು. ಸಿಪ್ಪೆಯಿಂದ ಬೇರ್ಪಟ್ಟ ಒಳಗಿನ ಕಾಳು ಮೇಲಕ್ಕೆ ಪುಟಿಯಿತು. ಇದನ್ನು ನೋಡಿದ ಮರಿ ಕಪಿ, ‘ಅರೇ ನೀನು ನೆಗೀತಿಯಾ... ನಿನಗಿಂತಲೂ ನಾನು ಜಾಸ್ತಿ ನೆಗೆಯುತ್ತೇನೆ ನೋಡು’ ಎಂದು ನೆಗೆದು ಕುಳಿತುಕೊಂಡಿತು. ಅದನ್ನು ನೋಡಿ ಪಕ್ಕದಲ್ಲಿ ಕುಳಿತಿದ್ದ ಇನ್ನುಂದು ಕಪಿ ‘ನಿನಗಿಂತ ನಾನು ಜಾಸ್ತಿ ಎತ್ತರಕ್ಕೆ ನೆಗೆಯುತ್ತೇನೆ’ ಎಂದು ನೆಗೆದು ಕುಳಿತುಕೊಂಡಿತು.

ADVERTISEMENT

ಹೀಗೆ ಒಂದಾದ ಮೇಲೆ ಇನ್ನೊಂದರಂತೆ ಎಲ್ಲ ಕಪಿಗಳು ನೆಗೆದು ಕುಳಿತುಕೊಂಡವು. ಕಡೆಯಲ್ಲಿ ಆಂಜನೇಯನ ಸರದಿ ಬಂತು. ಎಲ್ಲರಂತೆ  ಅವನು ‘ನಿಮಗಿಂತ ನಾನೇನು ಕಡಿಮೆ’ ಎಂದು ಸೀದಾ ಆಕಾಶಕ್ಕೆ ನೆಗೆದು ಕೂತ. ಇದನ್ನೆಲ್ಲಾ ನೋಡುತ್ತಿದ್ದ ರಾಮ ಅಚ್ಚರಿಯಿಂದ, ‘ಏನಾಯಿತು’ ಎಂದು ಆಂಜನೇಯನನ್ನು ಕೇಳಿದ. ಆಂಜನೇಯ, ‘ನನ್ನ ಪಕ್ಕದವ ನೆಗೆದ ಅದಕ್ಕೆ ಅವನಿಗಿಂತ ಎತ್ತರಕ್ಕೆ ನೆಗೆಯಬೇಕೆಂದು ನೆಗೆದೆ’ ಎಂದ. ರಾಮ ಪಕ್ಕದ ಕಪಿಯನ್ನು ಕೇಳಿದ ಅದು ಕೂಡಾ ಪಕ್ಕದವ ನೆಗೆದದ್ದಕ್ಕೆ ನೆಗೆದೆ ಎನ್ನುವ ಉತ್ತರವನ್ನೇ ಕೊಟ್ಟಿತು. ಕಡೆಗೆ ಮೊದಲು ನೆಗೆದ ಕಪಿಮರಿಯ ಬಳಿಗೆ ಬಂದಾಗ ಅದು ಅವರೆ ಕಾಳಿನ ಬಗ್ಗೆ ಹೇಳಿತು.

ರಾಮ ನಕ್ಕ, ‘ಹನುಮ ನೀನು ಲಂಕೆಗೆ ಹಾರಿದವನು, ಲಕ್ಷ್ಮಣ ಮೂರ್ಚೆಗೊಂಡಾಗ ಗಿಡಮೂಲಿಕೆಯನ್ನು ತೆಗೆದುಕೊಂಡು ಬಾ ಎಂದರೆ ಸಂಜೀವಿನಿ ಪರ್ವತವನ್ನೇ ತಂದವನು. ನಿನ್ನ ಸಾಧನೆಯೇನೂ ಕಡಿಮೆಯಲ್ಲ. ನಿನ್ನ ಶಕ್ತಿಯೂ ಅಗಾಧ. ಹಾಗಿದ್ದೂ, ಅವನ್ನೆಲ್ಲಾ ಮರೆತು ನೀನು ಕೂಡ ಬೇರೆ ಕಪಿಗಳ ಜೊತೆ ಸೇರಿ ನಿಮಗಿಂತ ನಾನು ದೊಡ್ಡವನು ಎನ್ನುತ್ತೀಯಲ್ಲ? ಏನು ಹೇಳಲಿ? ಸಾಮಾನ್ಯರು ಹೀಗೆ ತಮ್ಮನ್ನು ಮರೆತುಹೋಗುವುದು ಸಹಜ. ಆದರೆ ನೀನಲ್ಲ. ಯಾವತ್ತೂ ನೀನು ಮಾಡಿರುವ ಸಾಧನೆಯನ್ನು ನೆನಪಿಟ್ಟುಕೋ ಅದಕ್ಕಿಂತ ದೊಡ್ಡದನ್ನೇನಾದರೂ ಮಾಡು. ಅದನ್ನು ಮರೆತು ಹೀಗೆ ಚಿಕ್ಕವನ ಥರ ಆಡಬೇಡ’ ಎಂದ. ಆಂಜನೇಯನಿಗೆ ನಿಜಕ್ಕೂ ನಾಚಿಕೆಯಾಯಿತು. ಆಗ ರಾಮ, ‘ಹನುಮ ಎಂಥದ್ದೇ ಹೊತ್ತಿನಲ್ಲಾದರೂ ನಾವೇನು ಎನ್ನುವುದನ್ನು ಮರೆಯಬಾರದು ಆಗ ನಮ್ಮ ವ್ಯಕ್ತಿತ್ವಕ್ಕೂ, ಸಾಧನೆಗೂ ಘನತೆ ಸಿಗುತ್ತದೆ’ ಎಂದ. ಇದಲ್ಲವೇ ವಿವೇಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.