ನುಡಿ ಬೆಳಗು
ತಮ್ಮ ನಡುವಿನ ಸ್ಪರ್ಧೆಯಲ್ಲಿ ಆಮೆ ಗೆದ್ದು ಮೊಲ ಸೋತು ಹೋದ ಕಥೆಯ ಕೊನೆಯಲ್ಲಿ ‘ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ನಿಧಾನವೂ ಸ್ಥಿರವೂ ಆದ ಪ್ರಯತ್ನದಿಂದ ಗೆಲುವು ಸಾಧ್ಯವಾಗುತ್ತದೆ’ ಎಂಬ ನೀತಿಯನ್ನು ಹೇಳಲಾಗುತ್ತದೆ. ವಾಸ್ತವದಲ್ಲಿ ಕಥೆಯ ಸಕಾಲಿಕ ಬೆಳವಣಿಗೆ ಬೇರೆಯದೇ ನೀತಿಯನ್ನು ಸಾದರಪಡಿಸುತ್ತದೆ. ಮೊಲ ತನ್ನ ಸೋಲಿಗೆ ಕಾರಣವೇನು ಎಂದು ಯೋಚಿಸುತ್ತಾ ಆಮೆಗೆ ಅದರ ಗೆಲುವಿಗಾಗಿ ಅಭಿನಂದನೆ ಹೇಳುತ್ತದೆ. ಮತ್ತು ಇನ್ನೊಮ್ಮೆ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ ಎಂದುಕೊಂಡು ಆಮೆಯನ್ನು ಸ್ಪರ್ಧೆಗೆ ಆಹ್ವಾನಿಸುತ್ತದೆ. ಗೆದ್ದ ಹುರುಪಿನಲ್ಲಿದ್ದ ಆಮೆ ತಕ್ಷಣ ಒಪ್ಪಿಕೊಳ್ಳುತ್ತದೆ. ಎರಡನೆಯ ಸಲದ ರೇಸ್‌ನಲ್ಲಿ ಯಾವ ತಪ್ಪೂ ಆಗದಂತೆ ಎಚ್ಚರವಹಿಸಿದ ಮೊಲ ಗೆಲ್ಲುತ್ತದೆ. ಆಮೆಗೆ ಮೊದಲ ಗೆಲುವು ಗೆಲುವಲ್ಲ ಅಂತ ಅನ್ನಿಸಿ ಗೆಲುವಿನ ಬೇರೆ ಬೇರೆ ದಾರಿಗಳ ಬಗ್ಗೆ ಯೋಚಿಸುತ್ತದೆ. ಸೀದಾ ಮೊಲದ ಬಳಿ ಹೋಗಿ ಅಭಿನಂದಿಸಿ ‘ಇನ್ನೊಂದು ಸಲ ಓಡೋಣ, ಆದರೆ ಈ ದಾರಿ ಬೇಡ, ಎದುರುಗಡೆ ಇರುವ ದಾರಿಯಲ್ಲಿ ಸ್ವಲ್ಪ ದೂರ ಹೋದರೆ ಅಲ್ಲೊಂದು ಮರವಿದೆ, ಅದು ನಮ್ಮ ಗುರಿಯಾಗಿರಲಿ’ ಎಂದು ಕರೆಯಿತು.
ಮೂರನೆಯ ಸಲ ಆಮೆ ಸೂಚಿಸಿದ ಬೇರೊಂದು ದಾರಿಯಲ್ಲಿ ಎರಡೂ ಓಡಲಾರಂಭಿಸಿದವು. ಗೆಲುವಿನ ಉತ್ಸಾಹದಲ್ಲಿದ್ದ ಮೊಲ ಚಂಗನೆ ಓಡಿ ಇನ್ನೇನು ಮರ ಹತ್ತಿರವಾಯಿತು ಅನ್ನುತ್ತಿದ್ದ ಹಾಗೆ ಎದುರಾಗಿ ಹರಿಯುತ್ತಿದ್ದ ಹಳ್ಳವನ್ನು ಕಂಡು ಗಕ್ಕನೆ ನಿಂತುಬಿಟ್ಟಿತು. ಹಿಂದಿನಿಂದ ನಿಧಾನವಾಗಿ ಬಂದ ಆಮೆ ಸಲೀಸಾಗಿ ಹಳ್ಳದ ನೀರಿನಲ್ಲಿ ಈಜುತ್ತಾ ಸಾಗಿ ಮರದ ಬುಡಕ್ಕೆ ಆತುಕೊಂಡಿತು. ಮೊಲ ಈಚೆ ದಡದಲ್ಲಿ ಕುಳಿತು ಆಚೆ ದಡದಲ್ಲಿದ್ದ ಆಮೆಯನ್ನು ಅಭಿನಂದಿಸಿ ವಿಶ್ವಾಸದಿಂದ ಕರೆಯಿತು. ಹತ್ತಿರ ಬಂದ ಆಮೆಯ ಮುಖಕ್ಕೆ ಮುಖ ತಾಗಿಸಿ ಹೇಳುತ್ತದೆ: ‘ನಾವಿಬ್ಬರೂ ತಪ್ಪು ಮಾಡುತ್ತಿದ್ದೇವೆ. ನಿನ್ನ ಬಲ ನೀರಿನಲ್ಲಿದೆ, ನನ್ನ ಬಲ ನೆಲದ ಮೇಲಿದೆ. ನೀರಿನಲ್ಲಿ ನೀನು ನನ್ನನ್ನು, ನೆಲದಲ್ಲಿ ನಾನು ನಿನ್ನನ್ನು ಹೊತ್ತು ನಡೆಯೋಣ, ನಾವು ಒಟ್ಟಾಗಿ ಗುರಿ ಸೇರಿದರೆ ಇಬ್ಬರಿಗೂ ಗೆಲುವು’.
ಮನುಷ್ಯ ಸಮಾಜಕ್ಕೆ ಬೇಕಾಗಿರುವ ನಿಲುವು ಇದು. ಭಿನ್ನ ಮನೋಧರ್ಮ ಮತ್ತು ಸಾಮರ್ಥ್ಯಗಳ ನಡುವಿನ
ಅವೈಜ್ಞಾನಿಕ ಸ್ಪರ್ಧೆ ಮತ್ತು ಅಹಂ ಮನುಷ್ಯರನ್ನು ಒಡೆಯುತ್ತಿದೆ. ಬದುಕಿನ ಬಗೆಗೆ ಅಪಾರ ನಿರೀಕ್ಷೆಗಳು ನಮ್ಮ ನಮ್ಮಲ್ಲಿನ ಪೈಪೋಟಿಗೆ ಕಾರಣವಾಗಿವೆ. ತಾನೇ ಗೆಲ್ಲಬೇಕು, ಎಲ್ಲವೂ ತನಗೇ ಬೇಕು ಎನ್ನುವ ಸ್ವಾರ್ಥದಲ್ಲಿ ದುರ್ಬಲರನ್ನು ಅವಮಾನಿಸುತ್ತಾ ಕೀಳಾಗಿ ಕಾಣುತ್ತಿದ್ದೇವೆ. ಇದು ಪರಾಜಿತರಲ್ಲಿ ನೈಚ್ಯಾನುಸಂಧಾನವಾಗಿ ಬೆಳೆದು ಅವರನ್ನು ಮತ್ತಷ್ಟು ಕುಗ್ಗಿಸುತ್ತದೆ. ಜೊತೆಯಲ್ಲಿ ಬೆಳೆದವರ ಯಶಸ್ಸನ್ನೂ ಆನಂದಿಸಲಾಗದಂತಹ ಕೀಳರಿಮೆಗೆ ತಳ್ಳುತ್ತದೆ. ಬದಲಾಗಿ ಗೆದ್ದವರ ಕೈಕುಲುಕಿ ತಾನೂ ಗೆಲ್ಲುವ ಉಪಾಯಗಳನ್ನು ಕಂಡುಕೊಳ್ಳುವುದು ಜಾಣತನ. ಅಹಂಕಾರ ಮತ್ತು ಕೀಳರಿಮೆಗಳನ್ನು ಬದಿಗಿಟ್ಟು ತಮ್ಮ ಕೌಶಲ ಹಾಗೂ ಸಾಮರ್ಥ್ಯದ ಆಳವನ್ನು ಅರಿತುಕೊಂಡು ಮುನ್ನಡೆದರೆ ಸಾಧನೆಯ ಹಾದಿ ತಾನಾಗಿ ತೆರೆದುಕೊಳ್ಳುತ್ತದೆ. ಬಲಶಾಲಿಗಳು ಮತ್ತು ದುರ್ಬಲರ ನಡುವಿನ ಸ್ಪರ್ಧೆ ಅವೈಜ್ಞಾನಿಕ ಮಾತ್ರವಲ್ಲ, ಪ್ರಜಾಸತ್ತಾತ್ಮಕವೂ ಅಲ್ಲ. ಯಾರೂ ಪ್ರತಿಭಾಶೂನ್ಯರಲ್ಲ. ಪ್ರತಿಭಾ ಕೌಶಲವನ್ನು ಹೆಚ್ಚು ಕಡಿಮೆ ಎಂದು ಅಳೆಯುವುದು ಅಸಹಜವಾದ ಅಹಂ ಮತ್ತು ಕೀಳರಿಮೆ ಬೆಳೆಯಲು ಕಾರಣವಾಗುತ್ತದೆ.
ಬೇರೆ ಬೇರೆ ಪ್ರತಿಭೆ ಮತ್ತು ಕೌಶಲಗಳು ಸಮೃದ್ಧ ಸಮಾಜಕ್ಕೆ ಅವಶ್ಯಕ. ಈ ಶಕ್ತಿ ಸಾಮರ್ಥ್ಯ ಇರುವುದು ಒಬ್ಬರು ಮತ್ತೊಬ್ಬರನ್ನು ಸೋಲಿಸುವುದಕ್ಕಲ್ಲ, ತುಳಿಯುವುದಕ್ಕಲ್ಲ. ಮೇಲೆತ್ತುವುದಕ್ಕೆ, ಜೊತೆಯಲ್ಲಿ ಒಂದಾಗಿ ಕರೆದೊಯ್ಯುವುದಕ್ಕೆ. ಹಲವರನ್ನು ಹಿಂದಕ್ಕೆ ಸರಿಸಿ ಕೆಲವರು ಮುಂದೆ ಬಂದರೆ ಸಮಾಜದ ಒಟ್ಟಾರೆ ಪ್ರಗತಿಗೆ ಅಡ್ಡಿ. ಅಸಮತೋಲನಕ್ಕೆ ದಾರಿ. ಒಬ್ಬರು ಕೆಳಕ್ಕೆ ಬಿದ್ದಾಗ ಕೈಹಿಡಿದು ಎತ್ತುವುದು, ಹಿಂದೆ ಉಳಿದಾಗ ಒಂದರೆಕ್ಷಣ ನಿಂತು ಹೆಗಲಿಗೆ ಕೈಹಾಕಿ ಜೊತೆಗೂಡಿ ಸಾಗುವುದು ಪ್ರತಿಭೆಯ ಲಕ್ಷಣ. ಎಲ್ಲರನ್ನೂ ಒಳಗೊಳ್ಳುತ್ತಾ ನ್ಯಾಯಪಥದಲ್ಲಿ ಮುನ್ನಡೆಸುವುದು ವಿವೇಕ. ಸಮಾಜಕ್ಕೆ ಬೇಕಾಗಿರುವುದು ಹೀಗೆ ಒಬ್ಬರಿಗೊಬ್ಬರು ಆಗುವ, ಆತುಕೊಳ್ಳುವ ಭಾವ. ಅದೇ ಪ್ರಜಾಸತ್ತೆಯ ಸೊಗಸನ್ನು ಹೆಚ್ಚಿಸುವ ಜೀವಕೋಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.