ADVERTISEMENT

ನುಡಿ ಬೆಳಗು: ಕರ್ನಾಟಕದ ಸಿಂಹ

ದೀಪಾ ಹಿರೇಗುತ್ತಿ
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಸ್ವಾತಂತ್ರ್ಯಕ್ಕಾಗಿನ ಚಳವಳಿ ತೀವ್ರವಾಗುತ್ತಿದ್ದ ಕಾಲ. ಗಂಗಾಧರ್‌ ರಾವ್‌ ಎಂಬ ತರುಣ ಆಗ ತಾನೇ ಪುಣೆಯಲ್ಲಿ ಬಿಎ, ಎಲ್‌ಎಲ್‌ಬಿ ಪಾಸು ಮಾಡಿದ್ದ. ಸ್ವತಃ ವಕೀಲರಾಗಿದ್ದ ಆತನ ತಂದೆಗೋ ಮಗ ಇಡೀ ಬೆಳಗಾವಿಗೇ ದೊಡ್ಡ ವಕೀಲನಾಗುತ್ತಾನೆಂಬ ಆಸೆ. ಆದರೆ ಗಂಗಾಧರನಿಗೆ ದೇಶಸೇವೆಯ ಸೆಳೆತ. ಆತ ಲೋಕಮಾನ್ಯ ಬಾಲಗಂಗಾಧರ ತಿಲಕರ ಅನುಯಾಯಿಯಾಗಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ತಂದೆಯ ಮಾತನ್ನು ಕೇಳುತ್ತಿರಲಿಲ್ಲ. ಆಗ ಗಂಗಾಧರನ ತಂದೆ ಭಾವೂ ಸಾಹೇಬರು ಪುಣೆಯಲ್ಲಿ ತಿಲಕರನ್ನು ಭೇಟಿಯಾಗಿ, ‘ಮಾನ್ಯರೇ, ದೇಶಕ್ಕೆ ಸ್ವಾತಂತ್ರ್ಯ ತರುವ ನಿಮ್ಮ ಕೆಲಸ ಶ್ರೇಷ್ಠವಾದದ್ದು. ಆದರೆ, ನನ್ನ ಮಗನನ್ನು ದಯವಿಟ್ಟು ಇದರಲ್ಲಿ ಎಳೆಯಬೇಡಿ. ನಮ್ಮದು ಶ್ರೀಮಂತ ಕುಟುಂಬ, ನನಗೆ ಇವನೊಬ್ಬನೇ ಮಗ. ಮೇಲಾಗಿ ಎಲ್‌ಎಲ್‌ಬಿ ಪಾಸಾಗಿದ್ದಾನೆ. ಬುದ್ಧಿವಂತ. ಬೇಕಾದಷ್ಟು ದಡ್ಡ ಹುಡುಗರು, ಬಡವರ ಮಕ್ಕಳೂ ಇರುವಾಗ ನನ್ನ ಮಗನನ್ನು ಏಕೆ ಕರೆದೊಯ್ಯುತ್ತೀರಿ’ ಎಂದರು. ಆಗ ತಿಲಕರು, ‘ಬಡವರು ಹೊಟ್ಟೆ ಹೊರೆಯಲು ಉದ್ಯೋಗ ಮಾಡಬೇಕಾಗುತ್ತದೆ. ಆದರೆ ನೀವು ಶ್ರೀಮಂತರು. ಮತ್ತು ನನ್ನ ಕೆಲಸಕ್ಕೆ ಬುದ್ಧಿವಂತರೇ ಬೇಕು. ಎಲ್ಲವೂ ಇದ್ದ ನೀವೇ ನಿಮ್ಮ ಮಗನನ್ನು ನನಗೆ ಕೊಡಲಿಲ್ಲ ಎಂದರೆ ಬಡವರು ಹೇಗೆ ತಮ್ಮ ಮಕ್ಕಳನ್ನು ಚಳವಳಿಗೆ ಅರ್ಪಿಸಬಲ್ಲರು’ ಎಂದು ಕೇಳಿದರು. ಆಗ ಭಾವು ಸಾಹೇಬರು ಒಂದು ಕ್ಷಣ ಮೌನವಾದರು. ಮತ್ತೆ ಚೇತರಿಸಿಕೊಂಡು, ‘ಆಗಲಿ ಇವತ್ತಿನಿಂದ ನನ್ನ ಮಗನನ್ನು ದೇಶಕ್ಕಾಗಿ ಅರ್ಪಿಸಿದ್ದೇನೆ’ ಎಂದರು.

ಹೀಗೆ ತಂದೆಯಿಂದ ದೇಶಕ್ಕಾಗಿ ಸಮರ್ಪಿಸಲ್ಪಟ್ಟ ಯುವಕನೇ ಗಂಗಾಧರ ರಾವ್‌ ದೇಶಪಾಂಡೆ. ತಮ್ಮ ಅಸಾಧಾರಣ ಧೈರ್ಯ, ನಾಯಕತ್ವದ ಗುಣಗಳಿಂದ ‘ಕರ್ನಾಟಕ ಸಿಂಹ’ ಎಂದೇ ಹೆಸರಾದ ಕೆಚ್ಚೆದೆಯ ಕಲಿ ಅವರು. ಗಂಗಾಧರರ ಭಾಷಣ ಹೇಗಿರುತ್ತಿತ್ತೆಂದರೆ ಅವರ ಭಾಷಣ ಕೇಳುತ್ತಿದ್ದಾಗಲೇ ಸಭೆಯಲ್ಲಿ ಇದ್ದ ಜನರು ತಮ್ಮ ಹಣ ಬಂಗಾರದ ಒಡವೆಗಳನ್ನು ಸ್ವಯಂ ಸೇವಕರಿಗೆ ಕೊಟ್ಟುಬಿಡುತ್ತಿದ್ದರು. ಅಸ್ಪೃಶ್ಯತಾ ನಿವಾರಣೆಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಖಾದಿಧಾರಿಯಾದರು. ಹುದಲಿಯಲ್ಲಿ ಖಾದಿ ಕೇಂದ್ರ ಸ್ಥಾಪಿಸಿ ಕರ್ನಾಟಕದ ಖಾದಿ ಭಗೀರಥ ಎನಿಸಿಕೊಂಡರು. ರಾಷ್ಟ್ರೀಯ ಶಾಲೆ ಆರಂಭಿಸಿದರು. ಸಂಯುಕ್ತ ಕರ್ನಾಟಕವೂ ಸೇರಿದಂತೆ ಅನೇಕ ಪತ್ರಿಕೆಗಳ ಹುಟ್ಟು, ಮುನ್ನಡೆಯುವಿಕೆಗೆ ಕಾರಣರಾದರು. ಸ್ವಾತಂತ್ರ್ಯಾನಂತರವೂ ಪಕ್ಷ ಸಂಘಟನೆ ಮಾಡಿದರೇ ಹೊರತು ಮಂತ್ರಿಮಂಡಲ ಸೇರಲು ನಿರಾಕರಿಸಿ ಅಧಿಕಾರದಿಂದ ದೂರ ಉಳಿದರು.

ADVERTISEMENT

ವಕೀಲಿ ವೃತ್ತಿ ನಡೆಸಿ ಕೈತುಂಬಾ ಹಣ ಸಂಪಾದಿಸುತ್ತ, ಸಿರಿವಂತ ಕುಟುಂಬದ ಆಸ್ತಿ, ಅಧಿಕಾರವನ್ನು ಅನುಭವಿಸುವುದರ ಬದಲು ತಮ್ಮೆಲ್ಲ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಮೂಲೆಗೆ ತಳ್ಳಿ ಭಾರತದ ಸ್ವಾತಂತ್ರ್ಯ, ಭಾರತೀಯರ ಏಳಿಗೆ ಇವೆರಡನ್ನೇ ಧ್ಯಾನಿಸುತ್ತ ಹಗಲಿರುಳೂ ದುಡಿದ ಇಂತಹ ಮಹಾನ್‌ ನಾಯಕರನ್ನು ಆಗಾಗ ನೆನಪಿಸಿಕೊಳ್ಳದಿದ್ದರೆ ನಮ್ಮಂತಹ ಕೃತಘ್ನರು ಮತ್ಯಾರೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.