ADVERTISEMENT

ನುಡಿ ಬೆಳಗು: ನಮ್ಮ ಕೋಳಿಯ ತೋಳ ಹಿಡಿದರೆ

ಪಿ. ಚಂದ್ರಿಕಾ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   


ನರಹಳ್ಳಿ ಬಾಲಸುಬ್ರಹ್ಮಣ್ಯ ಕನ್ನಡದ ಬಹುದೊಡ್ಡ ವಿದ್ವಾಂಸ, ಶ್ರೇಷ್ಠ ವಿಮರ್ಶಕರು. ಅವರ ಹತ್ತಿರ ಮಧ್ಯವಯಸ್ಕ ಗಂಡ- ಹೆಂಡತಿ ತಮ್ಮ ಸಮಸ್ಯೆಯನ್ನು ತೆಗೆದುಕೊಂಡು ಬಂದಿದ್ದರು. ಮಗ ತಪ್ಪು ಮಾಡಿದಾಗಲೆಲ್ಲಾ ಅಪ್ಪ ಅಗತ್ಯಕ್ಕಿಂತ ಹೆಚ್ಚು ಬಯ್ಯುತ್ತಲೇ ಇರುತ್ತಾರೆ. ಅಪ್ಪ ಮಗ ಇಬ್ಬರೂ ಶತ್ರುಗಳ ರೀತಿ ಆಗಿದ್ದಾರೆ ಎಂದು ತಾಯಿಯ ಆರೋಪವಿತ್ತು. ತಂದೆಯದ್ದು, ಮಗ ಸ್ನೇಹಿತರ ಜೊತೆ ಸೇರಿ ಕೆಟ್ಟ ಅಭ್ಯಾಸ ಮಾಡಿಕೊಳ್ಳುತ್ತಿದ್ದಾನೆ ಎನ್ನುವ ಪ್ರತ್ಯಾರೋಪವಿತ್ತು. ಅದಕ್ಕೆ ನರಹಳ್ಳಿಯವರು ಅವರಿಬ್ಬರಿಗೂ ಬುದ್ಧಿ ಹೇಳುವ ಮೊದಲು ಒಂದು ವಾಕ್ಯವನ್ನು ಹೇಳಿದರು... ‘ಆಫ್ರಿಕಾದ ಬರಹಗಾರ ಚಿನು ಅಚಿಬೆ ಒಂದು ಕಡೆ, ‘ನಮ್ಮ ಕೋಳಿಯನ್ನು ತೋಳ ಹಿಡಿದರೆ ಮೊದಲು ತೋಳವನ್ನು ಓಡಿಸು, ಆಮೇಲೆ ಕೋಳಿಗೆ ಬುದ್ಧಿವಾದ ಹೇಳು’ ಎನ್ನುತ್ತಾನೆ. ಎಂಥಾ ಸುಂದರ ಸಾಲು ಅಲ್ವಾ’ ಎಂದು. ನಂತರ ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ತಾವು ಪ್ರಾಂಶುಪಾಲರಾಗಿದ್ದಾಗ ನಡೆದ ಘಟನೆಯನ್ನು ವಿವರಿಸಿದರು.‌

‘ಒಮ್ಮೆ ನಮ್ಮ ಕಾಲೇಜಿನ ಮಕ್ಕಳು ಅಂತರ ಕಾಲೇಜು ಕ್ರಿಕೆಟ್ ಪಂದ್ಯಕ್ಕೆಂದು ಹೋದಾಗ ಅಲ್ಲಿ ದೊಡ್ಡ ಗಲಾಟೆ ನಡೆಯಿತು. ಈ ಮಕ್ಕಳು ದಾದಾಗಳ ಹಾಗೆ ಎದುರು ತಂಡದವರಿಗೆ ಹಿಗ್ಗಾ ಮುಗ್ಗಾ  ಹೊಡೆದು ಬಂದಿದ್ದರು. ಆ ದೂರನ್ನು ತೆಗೆದುಕೊಂಡು ಪಂದ್ಯದ ಆಯೋಜಕರು ನನ್ನ ಬಳಿಗೆ ಬಂದರು. ಅಲ್ಲಿ ಏನು ನಡೆದಿರಬಹುದು ಎಂಬುದು ಮಕ್ಕಳ ಮುಖ ನೋಡಿದರೆ ಗೊತ್ತಾಗುತ್ತಿತ್ತು. ವಯಸ್ಸು ಹುಮ್ಮಸ್ಸು ಇಂಥಾ ಗಲಾಟೆ... ಯಾವುದನ್ನು ಬೇಕಾದರೂ ಮಾಡಿಸಿರುತ್ತದೆ. ಆದರೆ, ಬಂದವರ ಎದುರು ನಮ್ಮ ಕಾಲೇಜಿನ ಮಕ್ಕಳನ್ನು ಬಿಟ್ಟುಕೊಡುವಂತಿಲ್ಲ. ಬಿಟ್ಟುಕೊಟ್ಟರೆ, ‘ನಮ್ಮ ಮೇಷ್ಟ್ರು ನಮ್ಮನ್ನು ಅವಮಾನಿಸಿದರು’ ಅಂತ ನಾಳೆ ನನ್ನ ಮಾತನ್ನು ಕೇಳದೆ ಹೋಗುತ್ತಾರೆ. ಒಬ್ಬ ಒಳ್ಳೆಯ ಮೇಷ್ಟ್ರು ಒಳ್ಳೆಯ ತಂದೆಯೂ ಆಗಿರಬೇಕು ಎನ್ನುವುದು ನನ್ನ ನಂಬಿಕೆ. ನಾನು ಏನು ಹೇಳಬಹುದು ಎನ್ನುವ ಕುತೂಹಲದಿಂದ ಆತಂಕದಿಂದ ನೋಡುತ್ತಾ ನಿಂತಿದ್ದವರನ್ನು ನೋಡಿ, ಅವರನ್ನು ಕಾಪಾಡಿಕೊಳ್ಳುವುದೂ ನನ್ನ ಧರ್ಮ ಎಂದು ನನಗೆ ಅನ್ನಿಸುತ್ತಿತ್ತು. ಹಾಗಾಗಿ ನಾನು ಅವರಿಗೆ, ‘ನಮ್ಮ ಕಾಲೇಜು ಶಿಸ್ತಿಗೆ ಹೆಸರುವಾಸಿಯಾಗಿದೆ. ನಮ್ಮ ಮಕ್ಕಳು ಯಾವ ಪ್ರಚೋದನೆಯೂ ಇಲ್ಲದೆ ಹೀಗೆ ಮಾಡಿರಲಿಕ್ಕೆ ಸಾಧ್ಯವೇ ಇಲ್ಲ. ಆ ಕಡೆಯಿಂದ ಪ್ರಚೋದನೆ ಬಂದರೆ ಅದು ಇವರ ತಪ್ಪು ಹೇಗಾದೀತು’ ಎಂದೆಲ್ಲ ವಾದ ಮಾಡಿ ಅವರನ್ನು ಕಳುಹಿಸಿದೆ. ನಮ್ಮ ಮಕ್ಕಳು ಸಮಾಧಾನದಿಂದ ನಿಟ್ಟುಸಿರು ಬಿಟ್ಟರು. ಅವರಿಗೆ ಆ ಕ್ಷಣಕ್ಕೆ ನನ್ನ ಮೇಲೆ ಅಭಿಮಾನವೂ ಬಂದಿತ್ತು. ನನಗೂ ಹುಡುಗರು ಹೀಗೆ ಕಾಲೇಜಿನ ಹೆಸರು ಹಾಳು ಮಾಡುತ್ತಿದ್ದುದಕ್ಕೆ ಕೋಪ ಬಂದಿತ್ತು. ಪಂದ್ಯದ ಆಯೋಜಕರನ್ನು ಕಳಿಸಿದ ಮೇಲೆ ಗಲಾಟೆ ಮಾಡಿದ ಹುಡುಗರನ್ನು ಕಟುವಾಗಿ ಬೈದೆ. ಒಬ್ಬರೂ ಮಾತಾಡಲಿಲ್ಲ. ನಾನು ಬಂದವರ ಎದುರೇ ಅವರನ್ನು ಬೈದಿದ್ದರೆ ಹುಡುಗರು ಕೋಪಗೊಳ್ಳುತ್ತಿದ್ದರು. ‘ನಮ್ಮ ಹುಡುಗರು ಹಾಗಲ್ಲ’ ಎಂದು ವಾದ ಮಾಡಿದ್ದರಿಂದ ಹುಡುಗರಿಗೆ ಮೇಷ್ಟ್ರು ನಮ್ಮವರು ಅನ್ನಿಸಿತ್ತು. ಹಾಗಾಗಿ ಅವರ ಎದುರು ಮಾತನಾಡದೆ ಇನ್ನೊಮ್ಮೆ ಹೀಗೆಲ್ಲಾ ಮಾಡಲ್ಲ ಎಂದು ಪ್ರಮಾಣ ಮಾಡಿ ಹೊರನಡೆದರು’ ಎಂದರು.

ADVERTISEMENT

‘ನಿಮ್ಮನ್ನು ನಿಮ್ಮ ವಿದ್ಯಾರ್ಥಿಗಳು ನಂಬಿದ ಹಾಗೆ ನಮ್ಮ ಮಗ ನಮ್ಮನ್ನು ನಂಬಬೇಕಲ್ಲಾ?’ ಎಂದರು ಆ ತಂದೆ. ಅದಕ್ಕೆ ನರಹಳ್ಳಿಯವರು, ‘ನಂಬಿಕೆ ಎನ್ನುವುದು ಹೇಳಿದರೆ ಬರುವುದಲ್ಲ; ಅದು ನಮ್ಮ ನಡವಳಿಕೆಗಳಿಂದ ವ್ಯಕ್ತವಾಗಬೇಕು. ನಿಮ್ಮದೇ ರಕ್ತ ಹಂಚಿಕೊಂಡ ಮಗನಿಗೆ ನಂಬಿಕೆ ಬರಿಸಲು ಸಾಧ್ಯವಾಗುವುದಿಲ್ಲವೇ? ಸಾಧ್ಯವಿಲ್ಲ ಎಂದರೆ ಅವನನ್ನು ನೀವು ಗಮನಿಸಿಯೇ ಇಲ್ಲ ಎಂದರ್ಥ. ದಯವಿಟ್ಟು ನಿಮ್ಮ ಮಗನನ್ನು ಇವತ್ತಿನಿಂದ ಗಮನಿಸಿ. ಅವನ ಬೇಕು ಬೇಡಗಳಿಗೆ ಸ್ಪಂದಿಸಿ. ಆಗ ನೀವು ಸ್ವಲ್ಪ ಅಧಿಕಾರದಿಂದ ಹೇಳಿದರೂ, ಅವನ ಮೇಲಿನ ನಿಮ್ಮ ಪ್ರೀತಿ ಅದನ್ನು ಸಹಿಸುವಂತೆ ಮಾಡುತ್ತದೆ’ ಎಂದರು.

ನಿಜ. ಇವತ್ತು ನಮ್ಮ ಮಕ್ಕಳನ್ನು ಆಮಿಷ ಎನ್ನುವ ತೋಳ ಹೊತ್ತೊಯ್ಯದ ಹಾಗೆ ಕಾಪಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿ. ಹೇಗಾದರೂ ಸರಿ ಅದನ್ನು ನಿಭಾಯಿಸಲೇ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.