ನುಡಿ ಬೆಳಗು
ತಿಲಕ್ ನಗರದ ಐದನೇ ಗಲ್ಲಿಯ ಕೊನೆಯ ಮನೆಯ ಮೂರನೇ ಮಹಡಿಯಲ್ಲಿ ವಾಸವಿದ್ದ ಶ್ರೀಮಂತ ವ್ಯಕ್ತಿಯೊಬ್ಬರಿಗೆ ಇದ್ದಕ್ಕಿದ್ದಂತೆ ಮೈ ಹುಷಾರಿಲ್ಲದಂತಾಯಿತು. ಬಳಲುತ್ತಾ, ನೋಯುತ್ತಾ ಹಾಸಿಗೆಯಲ್ಲಿ ಮಲಗಿದ ಅವರು ಹತ್ತಿರದ ಡಾಕ್ಟರ್ ಒಬ್ಬರನ್ನು ಮನೆಗೇ ಬಂದು ಪರೀಕ್ಷಿಸಲು ಕೇಳಿಕೊಂಡರು. ಮೂರನೇ ಮಹಡಿಯನ್ನು ಕಷ್ಟಪಟ್ಟು ಹತ್ತಿಕೊಂಡು ಬಂದ ಡಾಕ್ಟರ್ ಏದುಸಿರು ಬಿಡುತ್ತಾ ‘ಉಶ್, ಮೇಲೆ ಬರುವಷ್ಟರಲ್ಲಿ ಸಾಕಾಗಿ ಹೋಯ್ತು’ ಎಂದರು. ಇವರು ಹಾಸಿಗೆಯಿಂದ ಎದ್ದು ಡಾಕ್ಟರನ್ನು ಕುರ್ಚಿಯಲ್ಲಿ ಕೂರಿಸಿ, ಕುಡಿಯಲು ನೀರು ತಂದುಕೊಟ್ಟು ಅವರು ಸುಧಾರಿಸಿಕೊಂಡಾಗ ‘ನಿಮಗೆ ಮೆಟ್ಟಿಲು ಹತ್ತಿದ್ದಕ್ಕೆ ಸುಸ್ತಾಗಿಲ್ಲ, ಸ್ವಲ್ಪ ಸತ್ವಯುತ ಆಹಾರ, ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ನೋಡಿ, ನಿಮಗಿಂತ ಎರಡರಷ್ಟು ವಯಸ್ಸಾದ ನಾನೇ ನಿಮಗಿಂತ ಆರೋಗ್ಯವಾಗಿದ್ದೇನೆ. ಇದಕ್ಕಾಗಿ ನನಗೆ ನೀವು ಫೀಸ್ ಕೊಡಬೇಕು ಡಾಕ್ಟರ್’ ಎಂದು ತಮಾಷೆ ಮಾಡಿ ನಕ್ಕರು. ಆಗ ಡಾಕ್ಟರ್, ‘ನೀವೇ ಡಬಲ್ ಫೀಸು ಕೊಡಿ’ ಎಂದರು. ಯಾಕೆ ಅಂದಾಗ, ‘ನಾನು ಚಿಕಿತ್ಸೆ ಮಾಡುವ ರೀತಿ ಇದು. ರೋಗಿಯ ಮನೆಗೆ ಹೋದ ತಕ್ಷಣ ನಾನೇ ರೋಗಿಯಾಗಿಬಿಡುತ್ತೇನೆ. ಆಗ ನನ್ನನ್ನು ತನಗೆ ಹೋಲಿಸಿಕೊಳ್ಳುವ ರೋಗಿ ಡಾಕ್ಟರಿಗಿಂತ ನಾನೇ ಎಷ್ಟೋ ವಾಸಿ ಎಂದುಕೊಂಡು ಅರ್ಧ ವಾಸಿಯೇ ಆಗಿಬಿಡುತ್ತಾನೆ. ನೀವೇ, ಮಲಗಿದ್ದವರು ಎದ್ದು ಅದೆಷ್ಟು ಲವಲವಿಕೆಯಿಂದ ಓಡಾಡಿದಿರಿ’ ಎಂದರು ನಗುತ್ತಾ.
ಮನುಷ್ಯನ ನಡವಳಿಕೆಯೇ ಹೀಗೆ. ತಾನು ಬಹಳ ಕಷ್ಟದಲ್ಲಿರುವ ಸಮಯದಲ್ಲಿ ತನಗಿಂತ ಕಷ್ಟದಲ್ಲಿರುವವರನ್ನು ನೋಡಿ ತನ್ನ ಕಷ್ಟವನ್ನು ಕನಿಷ್ಠವಾಗಿ ಕಾಣುತ್ತಾನೆ. ಸಂಕಟದಲ್ಲಿರುವ ಹೆಣ್ಣು ತನಗಿಂತ ಸಂಕಟ ಪಡುವ ಹೆಣ್ಣಿಗೆ ಸಹಾಯ ಮಾಡಿ ತನ್ನ ನೋವನ್ನು ಮರೆಯುತ್ತಾಳೆ. ತಂದೆ ಚಪ್ಪಲಿ ಕೊಡಿಸದ ನೋವನ್ನು ಮಗುವೊಂದು ಕಾಲೇ ಇಲ್ಲದ ತನ್ನ ವಯಸ್ಸಿನ ಹುಡುಗನ ಸ್ಥಿತಿಯನ್ನು ಕಂಡಮೇಲೆ ಮರೆಯುವ ಕತೆ ಬಹಳ ಚೆನ್ನಾಗಿ ತಿಳಿಸಿಕೊಡುತ್ತದೆ. ‘ಜಗತ್ತೇ ನನ್ನ ತಲೆಯ ಮೇಲಿದೆ, ಎಲ್ಲಾ ಕಷ್ಟಗಳೂ ನನಗೇ. ದೇವರು ನನಗೇ ಯಾಕೆ ಹೀಗೆ ಮಾಡುತ್ತಾನೆ’ ಎಂದು ಹಳಹಳಿಸುವವರನ್ನು ನಾವು ನೋಡುತ್ತೇವೆ. ಜಗತ್ತಿನಲ್ಲಿ ನನ್ನಷ್ಟು ಕಷ್ಟ ಯಾರಿಗೂ ಇಲ್ಲ ಅಂದುಕೊಳ್ಳುವುದು ಸ್ವಮರುಕ ಅಷ್ಟೆ. ದಲಿತರು, ಹೆಣ್ಣುಮಕ್ಕಳು, ಬಡವರು, ಅಂಗವಿಕಲರು ಇವರೆಲ್ಲರ ಕಷ್ಟದ ಮುಂದೆ ಇತರರ ಕಷ್ಟ ದೊಡ್ಡದಲ್ಲ.
ಎರಡು ಕಡ್ಡಿಗಳಲ್ಲಿ ಯಾವುದನ್ನೂ ಮುರಿಯದೇ ಒಂದನ್ನು ಚಿಕ್ಕದು ಮಾಡಬೇಕೆಂದರೆ ಅದರ ಪಕ್ಕಕ್ಕೆ ಅದಕ್ಕಿಂತ ದೊಡ್ಡದಾದ ಕಡ್ಡಿಯನ್ನು ಇಟ್ಟ ಬುದ್ಧಿವಂತಿಕೆಯ ಕತೆ ನಿಮಗೆಲ್ಲಾ ಗೊತ್ತೇ ಇದೆ. ಮನಸ್ಸಿಗೆ ಹಚ್ಚಿಕೊಂಡು ಕುಳಿತರೆ ಸಣ್ಣ ಸಮಸ್ಯೆಯೂ ಬಿಡಿಸಲಾರದ ಕಗ್ಗಂಟು. ಹಗುರವಾಗಿ ತೆಗೆದುಕೊಂಡರೆ ಅರ್ಧ ಸಮಸ್ಯೆ ಬಗೆಹರಿದಂತೆ. ಯಾವುದೇ ಕೆಲಸ, ಸಂದರ್ಭ, ಘಟನೆ ಚಿಕ್ಕದೋ, ದೊಡ್ಡದೋ ಎಂಬುದನ್ನು ನಿರ್ಧರಿಸುವುದು ಅದರ ಸುತ್ತಮುತ್ತಲಿನ ಆಗುಹೋಗುಗಳು ಮತ್ತು ಅದಕ್ಕೆ ಸಂಬಂಧಿಸಿದ ಮನಸ್ಸು ಮಾತ್ರ. ಹಾಗಾಗಿ, ನಮ್ಮ ಯೋಚನೆಗಳನ್ನು ಸದಾ ಸಕಾರಾತ್ಮಕ ದಿಕ್ಕಿನಲ್ಲಿ ಹರಿಬಿಡುವುದೇ ಉತ್ತಮ. ನಾವು ಮನಸ್ಸಿಗೆ ಏನನ್ನು ತುಂಬುತ್ತೇವೆಯೊ ಬಹುತೇಕ ದೇಹವೂ ಅದೇ ಚೈತನ್ಯವನ್ನು ತುಂಬಿಕೊಳ್ಳುತ್ತದೆ. ಕುಶಾಲಿನ ಮನಸ್ಸಿದ್ರೆ ದೇಹವೂ ಕುಶಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.