ನುಡಿ ಬೆಳಗು
ಎಲ್ಲರೂ ಸುಖದ ಶಿಕಾರಿಯಲ್ಲಿ ಮುಳುಗಿರುವಾಗ ಕಷ್ಟ ಬೇಕು ಎಂದು ಹೇಳುವವಳು ಕುಂತಿ. ಸುಖ ಎಂದರೆ ಏನೆಂದು ಗೊತ್ತಿರದ ಕುಂತಿಯನ್ನು ಕಷ್ಟ ಬೆನ್ನತ್ತಿ ಬೇಟೆ ಆಡಿತ್ತು. ವಿವಾಹ ಪೂರ್ವದ ಮಂತ್ರದ ಫಲ ಕಂದ ಕರ್ಣನನ್ನು ಗಂಗೆಯಲ್ಲಿ ತೇಲಿ ಬಿಟ್ಟರೂ ಮನದಾಳದಲ್ಲಿ ಕಾಡುವ ಕಲಕುವ ಜೀವ ಕರ್ಣ. ಮಕ್ಕಳು ಬೆಂಕಿಯಿಂದ ಬೀದಿಗೆ ಬಿದ್ದರೂ ಕುಂತಿ ಕನಲಲಿಲ್ಲ. ಧೈರ್ಯ ತುಂಬಿದಳು. ಸೊಸೆ ದ್ರೌಪದಿ ಮೇಲಾದ ಅನಾಚಾರದ ಪರಿಣಾಮವನ್ನು ದೈವದ ತಲೆಮೇಲೆ ಹಾಕಿ ಕೂತಳು. ಮತ್ತೆ ಮತ್ತೆ ಆವರಿಸುವ ಕಷ್ಟಗಳು ದೈವ ಮತ್ತು ಸಜ್ಜನಿಕೆಯನ್ನು ಗಟ್ಟಿಗೊಳಿಸುತ್ತವೆ ಎಂಬ ನಂಬಿಕೆ.
ಇದಕ್ಕೂ ಆಚೆಗೆ ಕಷ್ಟಗಳಿರದ ಬದುಕು ತನ್ನ ಅರ್ಥ ಮತ್ತು ಮೌಲ್ಯವನ್ನು ಪಡೆಯಲಾರದು ಕೂಡ. ಕಷ್ಟಗಳು ಬಾಳಿಗೆ ಅನೇಕ ರೂಪಗಳನ್ನು ಹಚ್ಚಬಲ್ಲದು. ಸುಖಕ್ಕೆ ಒಂದೇ ಮಗ್ಗುಲು. ಕಷ್ಟಕ್ಕೆ ಅಸಂಖ್ಯಾತ ಹೊರಳು. ಆದರೆ ಎಲ್ಲವನ್ನೂ ಕಾಯವ ಭರವಸೆ ಇದೆಯಲ್ಲ ಅದು ಕೃಷ್ಣನ ಹಾಜರಾತಿ ತರಹ. ಆಗಾಗ ಬಂದು ಸಾಂತ್ವನ ಹೇಳಿ ಹೋಗುತ್ತಿರುತ್ತದೆ. ಕೃಷ್ಣನೇ ಕುಂತಿಯ ಭರವಸೆ. ಎಲ್ಲರ ಬಾಳಿನಲ್ಲಿ ಇಂಥದ್ದೊಂದು ವ್ಯಕ್ತಿ ರೂಪದ ಭರವಸೆಯೊಂದು ಹಾಜರಾತಿ ಹಾಕುತ್ತಲೇ ಇರುತ್ತದೆ. ಪರಿಹಾರವೂ ತಕ್ಕ ಮಟ್ಟಿಗೆ ಸಿಗಲೂ ಬಲ್ಲದು.
ವಾಸ್ತವದ ಬದುಕೂ ಹಾಗೇ ಅಲ್ಲವೆ? ‘ತೆರೆದಿದೆ ಮನೆ ಓ ಬಾ ಅತಿಥಿ’ ಎಂಬ ಆಶೋತ್ತರದ ಬೆಳಕಿಗೆ ಹಾತೂರೆದು ಹಾಡುತ್ತಲೇ ಇರುತ್ತೇವೆ. ಎಷ್ಟೋ ಸಂದರ್ಭಗಳಲ್ಲಿ ಕೆಲವು ಸಂಬಂಧಗಳು ಯಾವುದೇ ಭೌತಿಕ ರೂಪದ ಸಹಾಯವನ್ನು ಮಾಡದೇ ಇದ್ದರೂ ಅವರ ಉಪಸ್ಥಿತಿಯೇ ಬಲವನ್ನು ತಂದು ಕೊಡುತ್ತದೆ. ಆದರೆ, ಇಂತಹ ಸಂಬಂಧಗಳು ದುರ್ಲಭವಾಗಬಾರದು ಅಷ್ಟೇ. ಗಂಗೆಯಲ್ಲಿ ತೇಲಿಹೋದ ಮಗು ಬದುಕುವ ಖಚಿತತೆ ಏನಿತ್ತು? ಆದರೆ, ಅದಕ್ಕೂ ಅಪ್ಪ ಅಮ್ಮ ಆಶ್ರಯ ದೊರೆತು ಅಂಗಾಧಿಪತಿ ಕರ್ಣ ಆದ ಕತೆಯೂ ಇಂತಹ ಭರವಸೆಯ ಪ್ರಯಾಣವೇ ಅಲ್ಲವೆ?
ಮೊಸಳೆಯ ಕ್ರೂರ ಬಾಯಿಗೆ ಈಡಾದ ಆನೆಯೊಂದು ಕಾಣದ ಕೈಯ ಅಭಯದ ಮೂಲಕ ಮತ್ತೆ ಬದುಕಿದ್ದು ಹೀಗೆ. ಕಷ್ಟ ಬರಲಿ ಎಂಬ ಮಾತು ನೆನಪಾದಾಗಲೆಲ್ಲ ಕಾಪಾಡುವ ಇಂತಹ ಶಕ್ತಿಗಳಿಗೆ ಹೊಸ ಅರ್ಥ ಬರುತ್ತದೆ. ಬಾಳು ಬೇರೆ ಬೇರೆ ಸಾಹಸದ ಕತೆಗಳಿಂದ ಮೈದುಂಬಿಕೊಳ್ಳುತ್ತದೆ. ಮಹಾಭಾರತದಲ್ಲಿ ಕುಂತಿ ಮತ್ತು ದ್ರೌಪದಿಯ ಎದುರು ಆಗಾಗ ಕೃಷ್ಣ ಬಂದು ನಿಂತಾಗಲೆಲ್ಲ ಅವರ ಮೂಲಕ ಹೊರಡುವ ಮಾತು, ‘ನಿನ್ನ ಕಂಡಾಗಲೆಲ್ಲ ನಮ್ಮ ಕಷ್ಟಗಳು ಮರೆಯಾಗುತ್ತವೆ ಮತ್ತು ಕಷ್ಟಗಳು ಬಂದಾಗಲೆಲ್ಲ ನಿನ್ನ ನೆನಪಾಗುತ್ತದೆ’. ಇಂತಹ ಹಾಜರಾತಿಗಳು ಅದೆಷ್ಟು ಬಲ ತಂದುಕೊಡುತ್ತವೆ ನೋಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.