ನುಡಿ ಬೆಳಗು
ಬರೀ ರಾಜ್ಯ ವಿಸ್ತರಣೆ, ಶತ್ರುಗಳ ನಿಗ್ರಹ ಮತ್ತು ಲಾಭಲೋಭಕೋರತನಗಳಲ್ಲೇ ಸಾಮ್ರಾಜ್ಯಗಳು ಮಗ್ನವಾಗಿದ್ದವು. ಹಸ್ತಿನಾವತಿಯೂ ಈ ಮಾತಿಗೆ ಹೊರತಲ್ಲ. ಹಿರಿಯರಿಗೆಲ್ಲ ತಮ್ಮ ಸಂತತಿಗಳನ್ನು ಯುದ್ಧ ಹೋರಾಟಕ್ಕೆ ತಯಾರಿ ಮಾಡುವುದೇ ಕಾಯಕ. ಪಾಂಡವ ಮತ್ತು ಕೌರವ ವಂಶದ ಪುಟ್ಟ ಮಕ್ಕಳಿಗೂ ಇದೇ ಪಾಠ. ಬಿಲ್ಲು, ಗದೆ, ಈಟಿ... ಇದರ ತಯಾರಿ, ತರಬೇತಿಗಳೇ. ಜೀವನ ಸಾರವನ್ನು ಶಸ್ತ್ರಗಳ ಮೂಲಕವೇ ಕಲಿಯಬೇಕೆಂದು ಪಣತೊಟ್ಟಂತಿದ್ದ ವ್ಯವಸ್ಥೆ.
ದ್ರೋಣರೇನು ಕಡಿಮೆ ಅಲ್ಲ. ತಮ್ಮ ಶಿಷ್ಯಂದಿರಿಗೆ ಯುದ್ಧವನ್ನು ಹೂಡಿ ಶತ್ರುಗಳ ಎದೆ ಬಗೆಯುವ ನೈಪುಣ್ಯವನ್ನು ಕಲಿಸುವ ಉತ್ಸಾಹಿ ಗುರು. ಯಾರು ಯಾವ ವಿದ್ಯೆಯಲ್ಲಿ ಪರಿಣಿತರಾಗಬಲ್ಲರೋ ಎಂದು ಪತ್ತೆ ಹಚ್ಚಿ ತರಬೇತಿ ಕೊಡುವಿಕೆ. ಅರ್ಜುನ ಬಿಲ್ವಿದ್ಯೆ, ಭೀಮ, ದುಶ್ಯಾಸನ, ದುರ್ಯೋಧನರಿಗೆ ಗದಾ ವಿದ್ಯೆ ಹೀಗೆ... ಆದರೂ ಎಲ್ಲ ಶಸ್ತ್ರಗಳ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕು ಎಂಬ ಅಭಿಪ್ರಾಯ ದ್ರೋಣರದ್ದು. ಎಲ್ಲರನ್ನೂ ದೊಡ್ಡ ಮರದ ಕೆಳಗೆ ಕರೆದು ನಿಲ್ಲಿಸಿ ಎಲ್ಲರ ಕೈಗೆ ಒಂದೊಂದು ಬಿಲ್ಲನ್ನು ಕೊಟ್ಟು ಗುರಿ ಹೂಡಲು ಹೇಳಿದರು.
ಎತ್ತರದ ಕೊಂಬೆಯ ದಟ್ಟವಾದ ಎಲೆಗಳ ನಡುವೆ ಕೂತಿದ್ದ ಹಕ್ಕಿಯೊಂದಕ್ಕೆ ಗುರಿ ಇಡಬೇಕಾಗಿತ್ತು. ಹಕ್ಕಿ ಸುಲಭವಾಗಿ ಕಣ್ಣಿಗೆ ಬೀಳುವಂತಿರಲಿಲ್ಲ. ಎಲೆ– ರೆಂಬೆಗಳ ನಡುವೆ ಇದ್ದ ಹಸಿರು ಬಣ್ಣದ ಕಾಣದ ಪುಟ್ಟ ಹಕ್ಕಿ ಅದು. ದ್ರೋಣರು ಎಲ್ಲರನ್ನೂ ಕೇಳುತ್ತಾ ಹೋದರು. ಮರದ ತುದಿಗೆ ಏನು ಕಾಣುತ್ತಿದೆ? ಕೆಲವರು, ಮೋಡ, ರೆಂಬೆ, ಒಂದು ಗೂಡು, ಒಂದು ಹಕ್ಕಿ, ಹೀಗೇ ಹೇಳುತ್ತ ಹೊರಟರು. ಅರ್ಜುನನ ಸರದಿ ಬಂದಾಗ ಅವನು ಕೇವಲ ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿದೆ ಎಂದು ಉತ್ತರ ಕೊಟ್ಟ. ದ್ರೋಣರಿಗೂ ಇಂತಹ ಏಕಾಗ್ರತೆ ದೃಷ್ಟಿಯ ಉತ್ತರವೇ ಬೇಕಿತ್ತು. ಕೊನೆಗೆ ಹಕ್ಕಿಯ ಎಡೆಗೆ ಗುರಿ ಇಟ್ಟವನೂ ಅರ್ಜುನನೇ. ಗೆದ್ದವನೂ ಅವನೇ.
ಬಹುಶಃ ದ್ರೋಣರ ಬದಲಿಗೆ ವಿದುರನು ಅಲ್ಲಿ ವಿದ್ಯೆ ಕಲಿಸುವಂತೆ ಇದ್ದರೆ, ಅವನಿಗೆ ಯಾರ ಉತ್ತರವೂ ಸಮಾಧಾನ ತರುತ್ತಿರಲಿಲ್ಲವೇನೋ. ಮಕ್ಕಳಿಗೆ ಕೇವಲ ಎಲೆ, ಕೊಂಬೆ, ಮೋಡ, ಗೂಡು, ಹಕ್ಕಿ, ಕಣ್ಣು ಅಷ್ಟೇ ಕಂಡ ಬಗ್ಗೆ ವಿಷಾದ ಪಡುತ್ತಿದ್ದನೇನೋ. ಇಡೀ ಹಸ್ತಿನಾವತಿಯಲ್ಲಿ ಮಾನವತೆಗೆ ಮಿಡುಕುತ್ತಿದ್ದ ಏಕೈಕ ಮನುಷ್ಯ ವಿದುರ. ಯಾವ ಮಕ್ಕಳಿಗೂ ಹಕ್ಕಿಯ ಒಡಲಿನೊಳಗೆ ಇದ್ದ ಜೀವ ಯಾಕೆ ಕಾಣುತ್ತಿಲ್ಲ ಅಂತ ಮಿಡುಕುತ್ತಿದ್ದ. ಇಂತಹ ಆಲೋಚನೆಗಳು ಎಷ್ಟು ಅಗತ್ಯ ನೋಡಿ. ವ್ಯವಹಾರ ಲಾಭ ಸ್ವಾರ್ಥಗಳ ಮಧ್ಯೆ ಮುಳುಗಿರುವ ನಮ್ಮ ಬಾಳಿನಲ್ಲಿ ಜೀವಾಂತಃಕರಣ ಗೋಚರವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.