ADVERTISEMENT

ತಳಮೂಲ ಸಂಸ್ಕೃತಿಯ

ಪ್ರೊ.ಸಿ.ಪಿ.ಸಿದ್ಧಾಶ್ರಮ
Published 7 ನವೆಂಬರ್ 2013, 19:30 IST
Last Updated 7 ನವೆಂಬರ್ 2013, 19:30 IST

ತಮ್ಮ ಹಿಂದಿನ ಹೇಳಿಕೆಗೆ ಪೇಜಾವರ ಶ್ರೀಗಳು ಸ್ಪಷ್ಟನೆ ರೂಪದಲ್ಲಿ ‘ದಲಿತರೂ ಸೇರಿದಂತೆ ಯಾರೇ ಅಪೇಕ್ಷಿಸಿದರೂ ವಿಷ್ಣುಮಂತ್ರದ ಜತೆಗೆ ಶಿವಮಂತ್ರವನ್ನೂ ಉಪದೇಶಿಸಿ ಸಾಮರಸ್ಯ ಸಾಧಿಸಲು ಸಿದ್ಧ’ (ಪ್ರ.ವಾ.  ಅ. 31) ಎಂದು ನುಡಿದಿರುವುದು ನೋವಿನ ಸಂಗತಿಯಾಗಿದೆ.

ಪೇಜಾವರ ಶ್ರೀಗಳು ವೈಷ್ಣವ ದೀಕ್ಷೆಯನ್ನೋ, ಶೈವದೀಕ್ಷೆಯನ್ನೋ ಕೊಟ್ಟರೆ ಈ ದೇಶದ ತಳಮೂಲ, ನೆಲಮೂಲ ಸಂಸ್ಕೃತಿಯವರಾದ ದಲಿತ ಮತ್ತು ಶೂದ್ರರ ಆರ್ಥಿಕ, ಸಾಮಾಜಿಕ ಅಸಮಾನತೆ, ಸಂಕಷ್ಟಗಳು ದೂರವಾಗಿ ಬಿಡುತ್ತವೆಯೇ?

  ಇಲ್ಲಿ ಮುಖ್ಯ ವಿಷಯವೇನೆಂದರೆ ದಲಿತರು, ಕುರುಬರು, ಬೆಸ್ತರು, ಅಗಸರು ಮುಂತಾದ ತಳಮೂಲ ನೆಲಮೂಲದವರು ಮತ್ತು ಅವರ ಸಂಸ್ಕೃತಿ ಕೀಳು; ಮೇಲ್ವರ್ಗದವರು ಮತ್ತು ಅವರ ಸಂಸ್ಕೃತಿ ಮೇಲು ಎಂಬ ಬಲವಾದ ನಂಬುಗೆ ಯನ್ನು ಪೇಜಾವರ ಶ್ರೀಗಳು ಮನದಾಳದಲ್ಲಿ ಹೊಂದಿರುವುದು. ಇದು ಅವರ ಸಮತಾ ವಿರೋಧಿ ಸಂಕುಚಿತ ದೃಷ್ಟಿಕೋನವಲ್ಲದೆ ಬೇರೇನೂ ಅಲ್ಲ.

ಕಾಯಕ ಜೀವಿಗಳಾದ ತಳಮೂಲ ನೆಲ ಮೂಲ ಸಂಸ್ಕೃತಿಯವರು ತಮಗೆ ದೊರೆತ ಅಲ್ಪ ಅವಕಾಶದಲ್ಲಿ ಶ್ರಮದ ಮೂಲಕವೇ ಪ್ರಾಮಾ ಣಿಕ ನೆಲೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ದೇಶದ ಅಭಿವೃದ್ಧಿಯಲ್ಲೂ ಸಕ್ರಿಯರಾಗಿದ್ದಾರೆ. ಮಾತ್ರವಲ್ಲ, ಶ್ರಮಸಂಸ್ಕೃತಿಯನ್ನು ಮೈಗೂಡಿಸಿ ಕೊಂಡಿರುವ ಇವರು ಈ ದೇಶದ ನಿಜವಾದ ವಾರಸುದಾರರು. ಅವರ ಸಂಸ್ಕೃತಿ ನೈಜ ಸಂಸ್ಕೃತಿ ಯಾಗಿರುವುದರಿಂದ ಅವರನ್ನು ಯಾವುದೇ ದೀಕ್ಷೆಯ ಮೂಲಕ ಉದ್ಧರಿಸುವ ಪ್ರಮೇಯ ಯಾರಿಗೂ ಬರುವುದಿಲ್ಲ. ದೇಶದ ತಳಮೂಲ ನೆಲಮೂಲದವರನ್ನು ಅವರವರ ಮೂಲನೆ ಲೆಯಿಂದ ಒಕ್ಕಲೆಬ್ಬಿಸಿ, ಬದುಕುವ ಹಕ್ಕಿನಿಂದ ವಂಚಿತರನ್ನಾಗಿಸುವ ಕುತಂತ್ರ ನಿರಂತರವಾಗಿ ನಡೆದಿರುವುದು ಚರಿತ್ರೆಯ ಸತ್ಯ ಸಂಗತಿಯಾಗಿದೆ.

ದೀಕ್ಷೆಯಂಥ ಮೇಲರಿಮೆಯ, ಮತೀಯ ಕ್ರಿಯೆಗಳಿಂದ ದಲಿತರು ಮತ್ತು ಶೂದ್ರರನ್ನು ಉದ್ಧರಿಸುತ್ತೇವೆ ಎನ್ನುವುದು ಆ ಸಮುದಾಯ ದವರ ಸ್ವೋಪಜ್ಞ ಸಂಸ್ಕೃತಿಯ ಅಸ್ಮಿತೆಯನ್ನು ನಾಶಮಾಡುವ ಹುನ್ನಾರ. ಪೇಜಾವರ ಶ್ರೀಗಳು ಶ್ರೇಷ್ಠತೆಯ ವ್ಯಸನದಿಂದ ಬಿಡಿಸಿಕೊಂಡು ಪ್ರಚಾರದ ಹಂಬಲ ತೊರೆದು ನೈಜ ಮಾನವ ನೆಲೆಯಲ್ಲಿ ಚಿಂತಿಸುವುದನ್ನು ರೂಢಿಸಿಕೊಳ್ಳಲಿ. ಅವರು ಪ್ರಗತಿಪರ ಸನ್ಯಾಸಿಗಳೇ ಆಗಿದ್ದಲ್ಲಿ ಕೃಷ್ಣಮಠದ ಉತ್ತರಾಧಿಕಾರಿಯಾಗಿ ದಲಿತರು, ಶೂದ್ರರನ್ನು ನೇಮಕ ಮಾಡಿಕೊಳ್ಳಲಿ. ತಮ್ಮ ಪರಿಸರದಲ್ಲಿ ನಡೆಯುತ್ತಿರುವ ಸಮಾನತಾ ವಿರೋಧಿ ನೆಲೆಯ ‘ಮಡೆಸ್ನಾನ’ವನ್ನು ವಿರೋಧಿಸಿ ನಿಲ್ಲಿಸಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.