ADVERTISEMENT

ಬ್ಯಾಂಕ್ ಖಾತೆ ಅಸಮಾನತೆ

ಸೌತಿಕ್ ಬಿಸ್ವಾಸ್
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST
ಬ್ಯಾಂಕ್ ಖಾತೆ ಅಸಮಾನತೆ
ಬ್ಯಾಂಕ್ ಖಾತೆ ಅಸಮಾನತೆ   

ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‌ ಖಾತೆಗಳನ್ನು ಹೊಂದಿರುವ ದೇಶಗಳ ಸಂಖ್ಯೆ ಜಗತ್ತಿನಲ್ಲಿ ಆರು ಮಾತ್ರ. ಆ ದೇಶಗಳು: ಅರ್ಜೆಂಟೀನಾ, ಜಾರ್ಜಿಯಾ, ಇಂಡೊನೇಷ್ಯಾ, ಲಾವೋಸ್, ಮಂಗೋಲಿಯಾ ಮತ್ತು ಫಿಲಿಪೀನ್ಸ್.

ವಿಶ್ವ ಬ್ಯಾಂಕ್‌ ಈಚೆಗೆ ಸಿದ್ಧಪಡಿಸಿರುವ ‘ಗ್ಲೋಬಲ್‌ ಫೈಂಡೆಕ್ಸ್‌’ ಎನ್ನುವ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಜಗತ್ತಿನ 140ಕ್ಕೂ ಹೆಚ್ಚಿನ ದೇಶಗಳ ವಯಸ್ಕರು ತಮ್ಮ ಬ್ಯಾಂಕ್‌ ಖಾತೆಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ, ಹೇಗೆ ಹಣ ಪಾವತಿ ಮಾಡುತ್ತಾರೆ, ಹೇಗೆ ಹಣ ಉಳಿತಾಯ ಮಾಡುತ್ತಾರೆ, ಹಣವನ್ನು ಸಾಲದ ರೂಪದಲ್ಲಿ ಹೇಗೆ ಪಡೆದುಕೊಳ್ಳುತ್ತಾರೆ, ಆರ್ಥಿಕ ಸಂಕಷ್ಟಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗೆಗಿನ ವರದಿ ಇದು.

ಇಂದು ಜಗತ್ತಿನ ವಯಸ್ಕರ ಪೈಕಿ 500 ಮಿಲಿಯನ್‌ಗೂ (50 ಕೋಟಿಗೂ) ಹೆಚ್ಚು ಜನ ಕಟ್ಟಡ ರೂಪದಲ್ಲಿರುವ ಬ್ಯಾಂಕ್‌ ಶಾಖೆಗಳಲ್ಲಿ ‘ಖಾತೆ’ ಹೊಂದಿದ್ದಾರೆ ಅಥವಾ ಸಂಚಾರಿ ಹಣಕಾಸು ಸೇವಾ ಸಂಸ್ಥೆಯ ಜೊತೆ ನಂಟು ಹೊಂದಿದ್ದಾರೆ. 50 ಕೋಟಿಗೂ ಹೆಚ್ಚು ಅಂದರೆ ವಯಸ್ಕ ಜನಸಂಖ್ಯೆಯ ಶೇಕಡ 69ರಷ್ಟು ಎಂದು ಅರ್ಥ. ವಯಸ್ಕರ ಪೈಕಿ ಬ್ಯಾಂಕ್ ಖಾತೆ ಹೊಂದಿರುವವರ ಪ್ರಮಾಣ 2011ರಲ್ಲಿ ಶೇಕಡ 51ರಷ್ಟು ಮಾತ್ರ ಇತ್ತು.

ADVERTISEMENT

ಆದರೆ, ಈ ವರದಿ ಹೇಳುವ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹಿಂದುಳಿದಿದ್ದಾರೆ. ಪುರುಷರ ಪೈಕಿ ಶೇಕಡ 72ರಷ್ಟು ಜನ ಬ್ಯಾಂಕ್‌ ಖಾತೆ ಹೊಂದಿದ್ದರೆ, ಮಹಿಳೆಯರ ಪೈಕಿ ಬ್ಯಾಂಕ್‌ ಖಾತೆ ಹೊಂದಿರುವವರ ಪ್ರಮಾಣ ಶೇಕಡ 65ರಷ್ಟು ಮಾತ್ರ. 2011ರಲ್ಲಿ ಕೂಡ ಬ್ಯಾಂಕ್‌ ಖಾತೆ ಹೊಂದಿರುವ ಮಹಿಳೆಯರು ಹಾಗೂ ಪುರುಷರ ಪ್ರಮಾಣದ ನಡುವಣ ವ್ಯತ್ಯಾಸ ಇಷ್ಟೇ ಇತ್ತು.

ಪ್ರಪಂಚದ ಹಲವು ದೇಶಗಳಲ್ಲಿ ಲಿಂಗ ತಾರತಮ್ಯ ಕಡಿಮೆ ಆಗುತ್ತಿದ್ದರೂ, ಬ್ಯಾಂಕಿಂಗ್ ವಿಚಾರದಲ್ಲಿನ ಪರಿಸ್ಥಿತಿ ಮಾತ್ರ ಹೀಗೇ ಇದೆ. ಭಾರತದಲ್ಲಿ ಶೇಕಡ 83ರಷ್ಟು ಪುರುಷರು, ಶೇಕಡ 77ರಷ್ಟು ಮಹಿಳೆಯರು ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಬ್ಯಾಂಕ್‌ ಖಾತೆ ಹೊಂದುವ ವಿಚಾರದಲ್ಲಿ 2014ರಲ್ಲಿ ಪುರುಷರು ಹಾಗೂ ಮಹಿಳೆಯರ ನಡುವೆ ಇದ್ದ ವ್ಯತ್ಯಾಸದ ಪ್ರಮಾಣ ಶೇಕಡ 20. ಈಗ ಅದು ಶೇಕಡ 6ಕ್ಕೆ ಇಳಿದಿದೆ. ಹಾಗಾದರೆ, ಯುರೋಪ್‌, ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಈ ಭಿನ್ನ ಆರು ದೇಶಗಳು ಹೇಗೆ ಬೇರೆ ದಾರಿಯನ್ನು ಕಂಡುಕೊಂಡಿವೆ? ವಿಶ್ವ ಬ್ಯಾಂಕ್‌ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆ ಆಗಿ ಕೆಲಸ ಮಾಡುತ್ತಿರುವ ಲಿಯೋರಾ ಕ್ಲ್ಯಾಪರ್‌ ಅವರು ಈ ಬಗ್ಗೆ ಕೆಲವು ಹೊಳಹುಗಳನ್ನು ನೀಡುತ್ತಾರೆ.

ಫಿಲಿಪೀನ್ಸ್‌ನ ಮಹಿಳೆಯರು ವಿದೇಶಗಳಲ್ಲಿ ಕೆಲಸ ಮಾಡುವುದು ವ್ಯಾಪಕವಾಗಿದೆ. ಅವರು ಅಲ್ಲಿಂದ ತಮ್ಮ ಕುಟುಂಬದ ಸದಸ್ಯರಿಗಾಗಿ ಹಣ ಕಳುಹಿಸಲು ಅನುಕೂಲ ಆಗುತ್ತದೆ ಎಂಬ ಕಾರಣಕ್ಕಾಗಿ ಬ್ಯಾಂಕ್‌ ಖಾತೆ ಹೊಂದಿರುತ್ತಾರೆ. ಅವರು ಕಳುಹಿಸುವ ಹಣದಿಂದ ಕುಟುಂಬದ ಸದಸ್ಯರು ಸ್ವದೇಶದಲ್ಲಿ ತಮ್ಮ ಕೌಟುಂಬಿಕ ಆರ್ಥಿಕ ಅವಶ್ಯಕತೆಗಳನ್ನು ನಿಭಾಯಿಸುತ್ತಿರುತ್ತಾರೆ ಎಂದು ಡಾ. ಕ್ಲ್ಯಾಪರ್ ವಿವರಣೆ ನೀಡಿದರು.

ಮೇಲೆ ಹೇಳಿದ ದೇಶಗಳಲ್ಲಿ (ಲಾವೋಸ್ ಹೊರತುಪಡಿಸಿ), ಸರ್ಕಾರದ ವಿವಿಧ ಯೋಜನೆಗಳ ಭಾಗವಾಗಿ ಮಹಿಳೆಯರು ನಗದು ನೇರ ವರ್ಗಾವಣೆಯ ಪ್ರಯೋಜನಗಳನ್ನು ಪಡೆಯುವ ಅವಕಾಶಗಳು ಪುರುಷರಿಗೆ ಇರುವುದಕ್ಕಿಂತ ಹೆಚ್ಚಿವೆ. ಉದಾಹರಣೆಗೆ ಮಂಗೋಲಿಯಾದಲ್ಲಿ ಶೇಕಡ 43ರಷ್ಟು ಮಹಿಳೆಯರು ತಮಗೆ ನೇರ ನಗದು ವರ್ಗಾವಣೆ ರೂಪದಲ್ಲಿ ಹಣ ದೊರೆಯುತ್ತದೆ ಎಂದು ಹೇಳಿದ್ದಾರೆ. ಆ ದೇಶದಲ್ಲಿ ಈ ರೀತಿ ಹಣ ಪಡೆಯುವ ಪುರುಷರ ಪ್ರಮಾಣ ಶೇಕಡ 24ರಷ್ಟು ಮಾತ್ರ.

ಇಂಡೊನೇಷ್ಯಾದಲ್ಲಿ ‘ಸಕ್ರಿಯ’ ಬ್ಯಾಂಕ್‌ ಖಾತೆಗಳು ಅಥವಾ ಕಳೆದ ಒಂದು ವರ್ಷದ ಅವಧಿಯಲ್ಲಿ ಜಮೆ ಅಥವಾ ನಗದು ಹಿಂಪಡೆಯುವಿಕೆಯ ವಹಿವಾಟನ್ನು ಒಂದು ಬಾರಿಯಾದರೂ ನಡೆಸಿರುವ ಖಾತೆಗಳ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರ ನಡುವೆ ಗಮನಾರ್ಹ ವ್ಯತ್ಯಾಸ ಇಲ್ಲ.

ಸರ್ಕಾರಿ ಯೋಜನೆಯ ಭಾಗವಾಗಿ ಮಹಿಳೆಯರು ತಮ್ಮ ಖಾತೆಗೆ ಒಂದಲ್ಲ ಒಂದು ಸಂದರ್ಭದಲ್ಲಿ ಹಣ ಪಡೆದುಕೊಂಡಿರುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಸರ್ಕಾರದಿಂದ ಹಣ ಬಂದ ನಂತರ ಮಹಿಳೆಯರು ಬೇರೆ ಉದ್ದೇಶಗಳಿಗೆ ಕೂಡ ಆ ಖಾತೆ ಬಳಕೆ ಮಾಡುವುದನ್ನು ಸ್ಥಗಿತ ಮಾಡುತ್ತಾರೆ. ಫಿಲಿಪೀನ್ಸ್‌ ಹೊರತುಪಡಿಸಿದರೆ, ಮಹಿಳೆಯರು ಪುರುಷರು

ಹೊಂದಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ‘ಸಕ್ರಿಯ’ ಬ್ಯಾಂಕ್‌ ಖಾತೆ ಹೊಂದಿರುವ ಸಾಧ್ಯತೆ ಇನ್ಯಾವ ದೇಶದಲ್ಲೂ ಇಲ್ಲ. ಈ ಮಾತಿಗೆ ಭಾರತವನ್ನೇ ಉದಾಹರಣೆಯಾಗಿ ಹೇಳಬಹುದು. ಬ್ಯಾಂಕ್‌ ಖಾತೆ ತೆರೆಯುವ ವಿಚಾರದಲ್ಲಿ ಸ್ತ್ರೀ – ಪುರುಷ ನಡುವಿನ ಅಂತರವನ್ನು ತಗ್ಗಿಸುವಲ್ಲಿ ಭಾರತ ಯಶಸ್ಸು ಕಂಡಿದೆ. ಆದರೆ, ಮಹಿಳೆಯರಿಗೆ ಸೇರಿದ ಅರ್ಧಕ್ಕೂ ಹೆಚ್ಚಿನ ಖಾತೆಗಳು ನಿಷ್ಕ್ರಿಯವಾಗಿ ಇವೆ.

‘ಭಾರತದಲ್ಲಿ ಮಹಿಳೆಯರು ಬಳಸಿಕೊಳ್ಳಬಹುದಾದ ಹಣಕಾಸು ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ವಿನ್ಯಾಸಗೊಳಿಸುವುದು ಕಠಿಣ ಸವಾಲು’ ಎನ್ನುತ್ತಾರೆ ಡಾ. ಕ್ಲ್ಯಾಪರ್‌.

–ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.