ADVERTISEMENT

ಮೂಢನಂಬಿಕೆ ಆಚರಣೆ ತಡೆ ಮಸೂದೆ: ಗುಡ್ದ ಅಗೆದು ಇಲಿ ಹಿಡಿದಂತೆ

ಎಂ.ಅಬ್ದುಲ್ ರೆಹಮಾನ್ ಪಾಷ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಗುಡ್ಡ ಅಗೆದು ಇಲಿ ಹಿಡಿದರು’ ಎಂಬ ಗಾದೆಯಿದೆ. ಹಾಗಾಯಿತು ನಮ್ಮ ಮೂಢನಂಬಿಕೆ ಆಚರಣೆ ತಡೆ ಮಸೂದೆಯ ಕಥೆ. ನಾಲ್ಕುವರ್ಷಗಳಿಂದ ಕಾದಿದ್ದ, ‘ಕರ್ನಾಟಕ ಮೂಢನಂಬಿಕೆ ಆಚರಣೆ ಪ್ರತಿಬಂಧಕ ಮಸೂದೆ’ಯ ಈಗಿನ ಅವತಾರದಲ್ಲಿ ಯಾವುದೋ ನಿಗೂಢ ಶಕ್ತಿಗಳ ಪ್ರಭಾವದಿಂದಾಗಿ ‘ಮೂಢನಂಬಿಕೆ’ ಎಂಬ ಪದವೇ ಮಾಯವಾಗಿದೆ. ಸೆ. 27ರಂದು ಸಚಿವ ಸಂಪುಟದ ಅನುಮೋದನೆಯನ್ನು ಪಡೆದ ಮಸೂದೆಯ ಹೆಸರು, ‘ಕರ್ನಾಟಕ ಅಮಾನವೀಯ, ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನಾ ಮಸೂದೆ– 2017’ ಎಂದಾಗಿದೆ. ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲಾ ಅಮಾನವೀಯ, ದುಷ್ಟ ಮತ್ತು ವಾಮಾಚಾರ ಆಚರಣೆಗಳ ಮೂಲ ಬೇರು ಮೂಢನಂಬಿಕೆ. ಜನರಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಬಿತ್ತಿ ಬೆಳೆಸಲಾಗಿದೆ. ಇದನ್ನೇ ಸಂಪುಟವು ತಪ್ಪಾಗಿ ಭಾವಿಸಿದೆ.

ಉದ್ದೇಶಿತ ಮಸೂದೆಯಲ್ಲಿ ವ್ಯಾಖ್ಯಾನಿಸಲಾಗಿದೆ ಎನ್ನುವ ಪ್ರಕಾರ ‘ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವಇಚ್ಛೆಯಿಂದ, ವೈಯಕ್ತಿಕ ಸಿದ್ಧಿಗಾಗಿ ಪಾಲಿಸುವ ಆಚಾರ-ವಿಚಾರ ಮತ್ತು ಪದ್ಧತಿಗಳು– ನಂಬಿಕೆ’. ಬೇರೆಯವರನ್ನು ಮಾನಸಿಕವಾಗಿ ಬ್ಲ್ಯಾಕ್‌ಮೇಲ್ ಮಾಡಿ ಒತ್ತಡಕ್ಕೆ ಸಿಲುಕಿಸಿ ಆಚರಿಸುವಂತೆ ಮಾಡುವುದು ‘ಮೂಢನಂಬಿಕೆ’. ಮಸೂದೆಯ ಮುಂದಿನ ನಿರೂಪಣೆಗೆ ಸರಿಹೊಂದುವ ಹಾಗೆ ಈ ವ್ಯಾಖ್ಯಾನಗಳನ್ನು ರೂಪಿಸಿಕೊಳ್ಳಲಾಗಿದೆ. ವಾಸ್ತವವಾಗಿ ವೈಜ್ಞಾನಿಕ ಮನೋವೃತ್ತಿಯ ಪರಿಭಾಷೆಯಲ್ಲಿ ಹೇಳುವುದಾದರೆ, ಯಾವುದೇ ಪುರಾವೆ ಇಲ್ಲದೆ, ಪುರಾವೆಯ ನಿರೀಕ್ಷೆಯೂ ಇಲ್ಲದೆಒಂದು ಶಕ್ತಿ, ವ್ಯಕ್ತಿ, ಸಂಗತಿ ಇದೆ, ನಡೆಯುತ್ತೆ ಎಂದು ಭಾವಿಸುವಮನಸ್ಥಿತಿ ‘ನಂಬಿಕೆ’. ಇಂಥ ನಂಬಿಕೆಗೆ ವಿರುದ್ಧವಾದ ಪುರಾವೆ ದೊರಕಿದ ನಂತರವೂ ಅದನ್ನು ಉಪೇಕ್ಷಿಸಿ ಹಿಂದಿನ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗುವುದು ‘ಮೂಢನಂಬಿಕೆ’.

ಜನರಲ್ಲಿ ಭಯ, ಅನಿಶ್ಚಿತತೆ, ಅಸಮರ್ಪಕ ಆಸೆ ಇತ್ಯಾದಿ ಕಾರಣಕ್ಕಾಗಿ ಮನೆ ಮಾಡಿರುವ ಈ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಅನೇಕ ಧಾರ್ಮಿಕ, ವಾಣಿಜ್ಯ, ಮಾಧ್ಯಮ ಕಾರ್ಯಾಚರಣೆಗಳು ಢಾಳಾಗಿ ನಡೆಯುತ್ತಿವೆ. ಒಮ್ಮೆ ಮೂಢನಂಬಿಕೆಯ ದಾಸ್ಯಕ್ಕೆ ಒಳಗಾದರೆ ಅಂಥ ವ್ಯಕ್ತಿಯು ದುಷ್ಟತನ, ಕ್ರೌರ್ಯ, ಭ್ರಷ್ಟಾಚಾರ, ಅತ್ಯಾಚಾರ, ಶೋಷಣೆಯಂಥ ತಾರತಮ್ಯ ಗೊತ್ತಾಗದ ಸ್ಥಿತಿ ತಲುಪುತ್ತಾನೆ. ಸರ್ಕಾರದ ಸಮಿತಿಗಳು ಇಷ್ಟು ಸೂಕ್ಷ್ಮತೆಗೆ ಏರುವುದು ಕಷ್ಟ ಎನ್ನುವುದು ಅರ್ಥವಾಗುತ್ತದೆ.

ADVERTISEMENT

ಮೊದಲಿನ 2013ರ ಮಸೂದೆ ಈಗಿನ ‘ಸುರಕ್ಷಿತ’ ರೂಪವನ್ನು ಪಡೆಯುವುದರಲ್ಲಿ ಜ್ಯೋತಿಷ, ವಾಸ್ತುವಿನಂಥ ಗಿಳಿಶಾಸ್ತ್ರದವರ, ಟಿ.ವಿ. ಮಾಧ್ಯಮದವರ ಬೃಹತ್ ಲಾಬಿಯ ಪ್ರಭಾವವಿರುವುದು ಗೊತ್ತಿರುವ ವಿಚಾರ. ಶಾರೀರಿಕ, ಮಾನಸಿಕ ಆರೋಗ್ಯ, ಶಿಕ್ಷಣ, ವಾಣಿಜ್ಯ, ಉದ್ಯೋಗ, ವೈವಾಹಿಕ ಸಂಬಂಧ, ವಾಸ್ತುಶಿಲ್ಪ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೆ ಪ್ರತ್ಯೇಕ ಪ್ರತ್ಯೇಕವಾದ ಪರಿಣತರು ಇರುತ್ತಾರೆ. ಒಬ್ಬರು ಇನ್ನೊಂದರ ಬಗ್ಗೆ ಅಭಿಪ್ರಾಯ ನೀಡದೇ ಇರುವ ಪ್ರಾಮಾಣಿಕತೆಯನ್ನು ತೋರುತ್ತಾರೆ. ಆದರೆ ಟಿ.ವಿ.ಯಲ್ಲಿ ದರ್ಶನ ನೀಡುವ ಸ್ವಯಂಘೋಷಿತ ಗುರುಗಳು, ಮಹರ್ಷಿಗಳು, ಶಾಸ್ತ್ರಿಗಳು ಒಬ್ಬರೇ ಇವೆಲ್ಲಾ ಕ್ಷೇತ್ರಗಳ ಸಮಸ್ಯೆಗಳ ಕುರಿತು ಪರಿಹಾರವನ್ನು ನೀಡಬಲ್ಲಂಥ ಸರ್ವಜ್ಞರಾಗಿರುತ್ತಾರೆ. ಹುಡುಗನಿಗೆ ಉದ್ಯೋಗ ಸಿಗದಿದ್ದರೆ ‘ಅವನಿಗೆ ಸರ್ಪದೋಷವಿದೆ, ರವೆ ಉಂಡೆ ಮಾಡಿ ಐದು ಜನ ಮುತ್ತೈದೆಯರಿಗೆ ತಿನ್ನಿಸಿದರೆ ಅವನಿಗೆ ಆರು ತಿಂಗಳಲ್ಲಿ ಸರ್ಕಾರಿ ನೌಕರಿ ಸಿಗುತ್ತದೆ’ ಎಂಬಷ್ಟುಮಟ್ಟಿಗಿನ ಕಾಗಕ್ಕ ಗುಬ್ಬಕ್ಕ ಕಥೆ ಹೇಳಿ ಜನರನ್ನು ಮರಳು ಮಾಡುವವರನ್ನು, ಆ ಮೂಲಕ ಜನರನ್ನು ಸರಿಯಾದ ತಾರ್ಕಿಕ ಚಿಕಿತ್ಸೆಗಳಿಂದ ಹಾದಿ ತಪ್ಪಿಸುವಂಥ ಅಪರಾಧ ಮಾಡುವಂಥವರನ್ನು ಪ್ರಸ್ತುತ ಮಸೂದೆಯಿಂದ ಹೊರಗಿಟ್ಟಿದ್ದು ದುರಂತವೇ ಸರಿ.

ಮಸೂದೆ ಪರಿಶೀಲನಾ ಸಮಿತಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ, ‘ಜ್ಯೋತಿಷ ಮತ್ತು ವಾಸ್ತು ಎರಡೂ ಮಾನ್ಯತೆ ಪಡೆದ ವಿಜ್ಞಾನ ವಿಷಯಗಳಾಗಿವೆ. ವಿಶ್ವವಿದ್ಯಾಲಯಗಳಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ಪದವಿ ನೀಡಲಾಗುತ್ತದೆ’ ಎಂದಿರುವುದು ಇನ್ನೊಂದು ದುರಂತ. ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಇಲಾಖೆಯು ದೇಶದ ಬಹುದೊಡ್ಡ ಸಂಶೋಧನಾ ಸಂಸ್ಥೆಗಳಲ್ಲಿ ನಡೆಯುವ ಮೂಲ ವಿಜ್ಞಾನ ಸಂಶೋಧನೆಗಳಿಗೆ ಮೀಸಲಾದ ನಿಧಿಯನ್ನು ಗೋವಿನ ಸಗಣಿ, ಮೂತ್ರ ಇತ್ಯಾದಿ ಒಳಗೊಂಡ ಪಂಚಗವ್ಯದ ಔಷಧೀಯ ಮತ್ತು ದೈವಿಕ ಗುಣಗಳ ಸಂಶೋಧನೆಗೆ ನೀಡಿದೆ ಎನ್ನುವುದನ್ನು ನೋಡುವಾಗ ವಿಶ್ವವಿದ್ಯಾಲಯಗಳು ಮಾಡುವುದೆಲ್ಲಾ ವೈಜ್ಞಾನಿಕ ಎಂದು ನಂಬಲು ಸಾಧ್ಯವಿಲ್ಲ. ಪ್ರತಿಯೊಂದನ್ನೂ ಸಾರ್ವತ್ರಿಕ ಮಟ್ಟದಲ್ಲಿ ಪ್ರಯೋಗದ ಮೂಲಕ ಸಾಬೀತುಪಡಿಸಿ ಆ ಹೊತ್ತಿಗೆ ದೊರಕಿದ ಸತ್ಯದ ಅತ್ಯಂತ ಹತ್ತಿರದ ಅಂದಾಜು ಎಂದು ಒಪ್ಪಿಕೊಳ್ಳುವ ವಸ್ತುನಿಷ್ಠ ಸತ್ಯ ಎಂಬುದು ವಿಜ್ಞಾನ. ಆದರೂ, ‘ಜ್ಯೋತಿಷದಲ್ಲಿ ಹೀಗೇ ಆಗುತ್ತದೆ ಎಂದು ಲಿಖಿತವಾಗಿ ಹೇಳುವುದಿಲ್ಲ. ಹೀಗಾಗಿ ಅದನ್ನು ಕಾಯ್ದೆಯ ವ್ಯಾಪ್ತಿಗೆ ತಂದು ಅಪರಾಧ ಎಂದು ಪರಿಗಣಿಸಿದರೆ ಸಾಬೀತುಪಡಿಸುವುದು ಕಷ್ಟ’ ಎಂದೂ ಸಮಿತಿ ಬಲವಾಗಿ ಪ್ರತಿಪಾದಿಸಿದೆ.

ಹೌದು, ಜ್ಯೋತಿಷ, ವಾಸ್ತು, ದೈವಿಕ ಶಕ್ತಿಯುಳ್ಳ ವಸ್ತುಗಳು ಇವೆಲ್ಲವೂ ಬಹುದೊಡ್ಡ ವಾಣಿಜ್ಯ ಸರಕುಗಳಾಗಿವೆ. ಇಂತಿಷ್ಟು ಎಂದು ಹಣವನ್ನು ಪಡೆದು ಗ್ರಾಹಕ ಸೇವೆ ಮತ್ತು ವಸ್ತುಗಳನ್ನು ಒದಗಿಸುತ್ತವೆ. ಆದರೂ ಇವು ಗ್ರಾಹಕ ಹಿತರಕ್ಷಣೆಯ ಕಾಯ್ದೆಗೆ ಒಳಪಡುವುದಿಲ್ಲ. ಅಷ್ಟೇ ಏಕೆ, ಎಲ್ಲಾ ವಾಣಿಜ್ಯ ಅಂಗಡಿಗಳು ಇರುವ ಬೀದಿಗಳಲ್ಲಿಯೇ ಅವಕ್ಕೆ ಸಮನಾಗಿ ದೊಡ್ಡ ನಾಮಫಲಕಗಳನ್ನು ಹಾಕಿಕೊಂಡು ದಂಧೆ ನಡೆಸುವ ಜ್ಯೋತಿಷ್ಯಾಲಯಗಳು ನಗರ ಪಾಲಿಕೆಗಳಿಂದ ಯಾವ ‘ಟ್ರೇಡ್ ಲೈಸೆನ್ಸ್‌’ ಪಡೆದಿರುತ್ತವೆ? ಇದೊಂದು ನಿಗೂಢ. ಅವು ಶುಲ್ಕ ಪಡೆಯುವುದಿಲ್ಲ, ‘ಕಾಣಿಕೆ’ಪಡೆಯುತ್ತವೆ. ರಸೀದಿ ಕೊಡುವುದಿಲ್ಲ. ಸೇವೆಯ, ವಸ್ತುವಿನಗ್ಯಾರಂಟಿ ಕೊಡುವುದಿಲ್ಲ. ಆದರೂ ಅವು ಮೋಸವಲ್ಲ, ನಂಬಿಕೆ.

ನಿಜವೆಂದರೆ ಹಲವು ಹೆಸರಿನಲ್ಲಿ ಪ್ರಕಟವಾಗುವ ಜ್ಯೋತಿಷ, ಸಂಖ್ಯಾಶಾಸ್ತ್ರ, ವಾಸ್ತು ಇತ್ಯಾದಿ ಬುರುಡೆಗಳನ್ನು ಮಟ್ಟಹಾಕಲು ಈಗಾಗಲೇ ಅಧಿನಿಮಯ ನಮ್ಮ ಸಹಾಯಕ್ಕೆ ಬರುತ್ತದೆ. ಅದು ಕರ್ನಾಟಕ ಸರ್ಕಾರದ ಗಮನಕ್ಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಟಿ.ವಿ. ವಾಹಿನಿಗಳ ಪ್ರಸಾರದ ಮೇಲೆ ನಿರ್ಬಂಧವನ್ನು ಹೇರುವ ‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್) ಆ್ಯಕ್ಟ್– 1995’ ಎಂಬ ಒಂದು ಕಾನೂನಿದೆ. ಅದರ ಅನ್ವಯ ಇರುವ ನಿಬಂಧನೆಗಳ ಪೈಕಿ, ‘ಸುಳ್ಳು ಮತ್ತು ಸೂಚಿತ ದ್ವಂದ್ವದ, ಅರೆಸತ್ಯವಾದ, ಅತೀಂದ್ರಿಯ ಮತ್ತು ಕುರುಡು ನಂಬಿಕೆಯನ್ನು ಪ್ರೋತ್ಸಾಹಿಸುವಂಥ’ ಕಾರ್ಯಕ್ರಮಗಳನ್ನು ಬಿತ್ತರಿಸುವಂತಿಲ್ಲ. ವಾಹಿನಿಗಳು ‘ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳಿಗೆ ವಾಹಿನಿ ಜವಾಬ್ದಾರವಲ್ಲ’ ಎಂಬ ತುಣುಕನ್ನು ಹಾಕಿ ತಪ್ಪಿಸಿಕೊಳ್ಳುವಂತಿಲ್ಲ. ಯಾವುದಾದರೂ ವ್ಯಕ್ತಿ, ಸಂಸ್ಥೆ ಈ ಕುರಿತು ಪಿಐಎಲ್ ಹಾಕಿ ಕೆಲವರನ್ನು ಕೋರ್ಟಿಗೆ ಎಳೆದರೆ ಆಗ ಜನಕ್ಕೂ ಇವರ ಮೋಸದ ಅರಿವು ಉಂಟಾಗುತ್ತದೆ, ವಾಹಿನಿಗಳು ಇಂಥ ಬುರುಡೆ ಬಾಬಾಗಳನ್ನು ದೂರವಿಟ್ಟು ಜನಹಿತ ಕಾರ್ಯಕ್ರಮ ಮಾಡುವುದು ಅನಿವಾರ್ಯವಾದೀತು.

ಇರಲಿ, ವಿಧಾನಸಭಾ ಚುನಾವಣೆಯ ಕತ್ತಿ ತಲೆಯ ಮೇಲೆ ತೂಗುತ್ತಿರುವ ಹೊತ್ತಿನಲ್ಲಿಯೂ ಸರ್ಕಾರ ಈ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡುವ ನಿರ್ಧಾರವನ್ನು ಸ್ವಾಗತಿಸೋಣ. ಕಾನೂನು ಸಚಿವರು ಹೇಳಿದ ಹಾಗೆ ಒಮ್ಮೆ ಮೂಲ ಕಾನೂನು ಜಾರಿಗೆ ಬಂದ ನಂತರವೂ ಆಗುವ ಬೆಳವಣಿಗೆಯನ್ನು ನೋಡಿಕೊಂಡು ಅದರಲ್ಲಿ ತಿದ್ದುಪಡಿಗಳನ್ನು ತರಬಹುದು. ಈಗ ಮಸೂದೆಯಲ್ಲಿ ಯಾವುದನ್ನು ನಿಷೇಧಿಸಲಾಗಿದೆ, ಯಾವುದಕ್ಕೆ ರಿಯಾಯಿತಿ ನೀಡಲಾಗಿದೆ ಎನ್ನುವ ಪಟ್ಟಿ ಎಲ್ಲರಿಗೂ ಸುಲಭವಾಗಿ ಸಿಗುತ್ತದೆ. ಅದನ್ನು ಗಮನಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಯ ಸಂಘ ಸಂಸ್ಥೆಗಳು ಈಗಲೂ ಪ್ರತಿಕ್ರಿಯೆಯನ್ನು ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.