ADVERTISEMENT

ಯೋಚಿಸಿ ಅರ್ಜಿ ಸಲ್ಲಿಸಿ, ಇಲ್ಲವೇ ದಂಡ ಕಟ್ಟಿ!

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 16:40 IST
Last Updated 24 ಫೆಬ್ರುವರಿ 2011, 16:40 IST

‘ಯಾವುದೇ ಒಂದು ಕಾರ್ಯಕ್ಕೆ (ಅದು ಒಳ್ಳೆಯದೋ, ಕೆಟ್ಟದ್ದೋ) ಹೆಜ್ಜೆ ಇಡುವ ಮುನ್ನ ನೂರು ಬಾರಿ ಯೋಚಿಸು’ ಎಂಬುದು ಹಳೆಯ ನಾಣ್ಣುಡಿ. ಆದರೆ ‘ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮುನ್ನ ಸಾವಿರ ಬಾರಿ ಯೋಚಿಸು’ ಎನ್ನುವುದು ಈಗಿನ ಮಾತು.

ಕಾರಣ, ವಿನಾಕಾರಣ ಅರ್ಜಿ ಸಲ್ಲಿಸುವ ಹಲವಾರು ಅರ್ಜಿದಾರರಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದ ‘ದಂಡದ ರುಚಿ’ಯನ್ನು ಹೈಕೋರ್ಟ್ ತೋರಿಸುತ್ತಿದೆ!

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹೆಸರಿನಲ್ಲಿ ಸ್ವಹಿತಾಸಕ್ತಿ, ಪ್ರಚಾರದ ಹಿತಾಸಕ್ತಿ ಎಲ್ಲವೂ ಅಡಗಿದ್ದು ಕೋರ್ಟ್‌ನ ಗಮನಕ್ಕೆ ಬಂದರೆ ಅರ್ಜಿದಾರರಿಗೆ ದಂಡವನ್ನು ವಿಧಿಸುವ ಪರಿಪಾಠ ಇಲ್ಲಿಯವರೆಗೆ ಇತ್ತು. ಆದರೆ ಈಗ ಸಾಮಾನ್ಯವಾದ ರಿಟ್ ಅರ್ಜಿಯಲ್ಲಿಯೂ ಅರ್ಜಿದಾರ (ತನ್ನ ತಪ್ಪಿನಿಂದಲೋ ಅಥವಾ ವಕೀಲರ ಪ್ರಮಾದದಿಂದಲೋ) ದಂಡ ತೆರಬೇಕಾದ ಪ್ರಸಂಗ ಬಂದಿದೆ.

ಕಳೆದ 4-5 ತಿಂಗಳಿನಲ್ಲಿಯೇ ಒಟ್ಟಾರೆ ದಂಡದ ಮೊತ್ತ ಸರಿಸುಮಾರು 10 ಲಕ್ಷವನ್ನು ದಾಟಿದೆ ಎನ್ನುತ್ತದೆ ನ್ಯಾಯಾಲಯದ ದಾಖಲೆ!

 ಹೈಕೋರ್ಟ್‌ನ ವ್ಯಾಪ್ತಿಯನ್ನು ಅರಿಯದೇ ಸಿವಿಲ್ ಕೋರ್ಟ್‌ನ ವ್ಯಾಜ್ಯವನ್ನೋ, ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿ ಮಟ್ಟದಲ್ಲಿ ಬಗೆಹರಿಸಿಕೊಳ್ಳುವ ದಾವೆಗಳನ್ನೋ ಅಲ್ಲಿ ಬಗೆಹರಿಸಿಕೊಳ್ಳದೇ ಸೀದಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಅದನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.

ಇಂತಹ ಪ್ರಕರಣಗಳಿಗೆ ನಿಯಂತ್ರಣ ಹೇರುವ ಸದುದ್ದೇ ಶದಿಂದ ನ್ಯಾಯಮೂರ್ತಿಗಳು ದಂಡ ವಿಧಿಸುತ್ತಿದ್ದಾರೆ. ಆದರೆ ಶೋಚನೀಯ ಸಂಗತಿಯೆಂದರೆ ಇದಕ್ಕೆ ಬಲಿಯಾಗುತ್ತಿರುವುದು ಮಾತ್ರ ಕಕ್ಷಿದಾರ!

ಕಾರಣ ಇಷ್ಟೇ. ಯಾವುದೋ ಒಂದು ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ಯಾವುದೇ ಕಕ್ಷಿದಾರ ಕಾನೂನಿನ ನೆರವಿಗಾಗಿ ವಕೀಲನ ಬಳಿಗೆ ಹೋಗುವುದು ಸಹಜ. ಆಗ ಆ ವಕೀಲ ಅಂತಹ ಪ್ರಕರಣಗಳನ್ನು ಎಲ್ಲಿ ಪ್ರಶ್ನಿಸಬೇಕು ಎಂಬುದನ್ನು ತನ್ನ ಕಕ್ಷಿದಾರನಿಗೆ ಹೇಳಬೇಕು.

ಆದರೆ ಈಚಿನ ಬೆಳವಣಿಗೆ ಗಮನಿಸಿದರೆ ಹಾಗೆ ಆಗುತ್ತಿಲ್ಲ. ಹಿಂದು ಮುಂದು ಯೋಚಿಸದೆ ಸೀದಾ ಹೈಕೋರ್ಟ್‌ಗೆ ಹೋಗುತ್ತಿದ್ದಾರೆ, ಇದರಿಂದ ಕಕ್ಷಿದಾರನ ಜೇಬಿಗೆ ಕತ್ತರಿ ಬೀಳುತ್ತಿದೆ! ಇದರ ಫಲವಾಗಿ ಒಂದೆಡೆ ವಕೀಲರಿಗೆ ನೀಡಬೇಕಿರುವ ಶುಲ್ಕ, ಇನ್ನೊಂದೆಡೆ ದಂಡದ ಮೊತ್ತ, ಒಟ್ಟಿನಲ್ಲಿ ಕಕ್ಷಿದಾರ ತ್ರಿಶಂಕು.

ಮುಂದುವರಿಯುವ ವಾದ: ಇಲ್ಲೊಂದು ಪ್ರಕರಣ ಗಮನಿಸಿ. ಬೆಂಗಳೂರಿನ ಚೋಳನಾಯಕನಹಳ್ಳಿ ಬಳಿಯ ಜಮೀನಿನ ಗೇಣಿ ಹಕ್ಕಿಗೆ ಸಂಬಂಧಿಸಿದ ವಿವಾದವಿದು. ನ್ಯಾಯಮೂರ್ತಿಗಳು ಅರ್ಜಿ ಹಿಂದಕ್ಕೆ ಪಡೆಯುವಂತೆ ಸೂಚ್ಯವಾಗಿ ಹೇಳುತ್ತಿದ್ದರೂ ಮೂರು ದಿನ ವಕೀಲರು ವಾದ ಮಂಡಿಸಿದರು. ತೀರ್ಪು ತಮ್ಮ ವಿರುದ್ಧ ಬರುತ್ತದೆ ಎಂದು ತಿಳಿಯುತ್ತಲೇ, ಅರ್ಜಿ ಹಿಂದಕ್ಕೆ ಪಡೆಯುವುದಾಗಿ ಕೋರಿಕೊಂಡರು. ಮೂರು ದಿನ ಸಮಯದ ವ್ಯರ್ಥ. ನ್ಯಾಯಮೂರ್ತಿಗಳು ಬಿಟ್ಟಾರೆಯೇ? 50 ಸಾವಿರ ರೂಪಾಯಿ ದಂಡ ವಿಧಿಸಿಯೇ ಬಿಟ್ಟರು. ದಂಡ ಕೊಡುವುದು ಮಾತ್ರ ಕಕ್ಷಿದಾರ.

ಇದೇ ರೀತಿ ಅನೇಕ ಪ್ರಕರಣಗಳಲ್ಲಿ, ಯಾವುದೇ ಒಂದು ಅರ್ಜಿ ದಂಡಕ್ಕೆ ಅರ್ಹ ಎಂದು ಅನಿಸಿದಾಗ, ನ್ಯಾಯಮೂರ್ತಿಗಳು ವಾದವನ್ನು ನಿಲ್ಲಿಸುವಂತೆಯೋ ಅಥವಾ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆಯೋ ಸೂಚಿಸುತ್ತಾರೆ. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯೂ ಕೇಳಿ ಬರುತ್ತದೆ. ಆದರೆ ಈ ಎಚ್ಚರಿಕೆಯನ್ನು ಮೀರಿ ವಕೀಲರು ತಮ್ಮ ವಾದ ಮುಂದುವರಿಸುತ್ತಾರೆ.

ಇಲ್ಲಿ ತಪ್ಪು ಯಾರದ್ದು ಎನ್ನುವುದು ಈಗ ಇರುವ ಪ್ರಶ್ನೆ. ಏಕೆಂದರೆ ಇಂತಹ ಎಲ್ಲ ಪ್ರಕರಣಗಳಲ್ಲಿ ವಕೀಲರದ್ದೇ ತಪ್ಪು ಎನ್ನಲೂ ಆಗದು. ನ್ಯಾಯಮೂರ್ತಿಗಳ ಮಾತು ಕೇಳಿ ಅರ್ಜಿ ಹಿಂದಕ್ಕೆ ಪಡೆದರೆ, ಕೋರ್ಟ್‌ನಲ್ಲಿ ನಡೆದ ವಿಚಾರ ತಿಳಿಯದೇ ಕಕ್ಷಿದಾರರು ತಮ್ಮ ಮೇಲೆ ಉರಿದು ಬೀಳಬಹುದು ಎಂಬ ಭಯ ಅವರಲ್ಲಿ ಇದ್ದೇ ಇರುತ್ತದೆ. ಒಂದು ವೇಳೆ ವಾದ ಮುಂದುವರಿಸಿದ್ದರೆ, ತಮ್ಮ ಪರವಾಗಿ ಕೋರ್ಟ್ ತೀರ್ಪು ನೀಡುತ್ತಿತ್ತೇನೋ. ಅರ್ಜಿಯನ್ನು ಏಕೆ ಹಿಂದೆ ಪಡೆದದ್ದು ಎಂದು ಕಕ್ಷಿದಾರ ಗೊಣಗಿ, ತಮಗೆ ನೀಡಬೇಕಾದ ಶುಲ್ಕವನ್ನೂ ನೀಡದಿದ್ದರೆ ಎಂಬ ಭಯ ಅವರದ್ದು.

ಆದರೆ ಕೆಲವೊಂದು ವೇಳೆ ಕಕ್ಷಿದಾರರು ತಮ್ಮದಲ್ಲದ ತಪ್ಪಿಗೆ ‘ಶಿಕ್ಷೆ’ ಅನುಭವಿಸುತ್ತಾರೆ. ಇದಕ್ಕೆ ಉದಾಹರಣೆ, ವ್ಯರ್ಥ ಅರ್ಜಿ ಸಲ್ಲಿಸಿದುದಕ್ಕೆ ಹಾಸನದ ಮಹಿಳೆಯೊಬ್ಬರಿಗೆ ಕೋರ್ಟ್ 20 ಸಾವಿರ ರೂಪಾಯಿ ದಂಡ ವಿಧಿಸಿದ್ದು.

ಸಿವಿಲ್ ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಬಹುದಾದ ಗೋಮಾಳ ಜಮೀನಿನ ವಿವಾದವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಕ್ಕೆ ದಂಡ ವಿಧಿಸಲಾಯಿತು.

ಮುಚ್ಚಿಟ್ಟ ಸುಳ್ಳು: ವಕೀಲರಿಗೆ ಕಕ್ಷಿದಾರರು ಹಾಗೂ ವೈದ್ಯರಿಗೆ ರೋಗಿಗಳು ಎಂದಿಗೂ ಸುಳ್ಳು ಹೇಳಬಾರದು ಎನ್ನುವುದು ಗಾದೆ. ಆದರೆ ಎಷ್ಟೋ ಕಕ್ಷಿದಾರರು ವಕೀಲರಿಂದ ಸತ್ಯ ಮುಚ್ಚಿಟ್ಟು ಅವರನ್ನು ಪೇಚಿಗೆ ಸಿಲುಕಿಸಿ ಕೊನೆಗೆ ದಂಡ ತೆರುತ್ತಾರೆ. ಇನ್ನು ಕೆಲ ಪ್ರಕರಣಗಳಲ್ಲಿ ಸತ್ಯ ಹೇಳಿದ್ದರೂ ‘ಏನೂ ಆಗುವುದಿಲ್ಲ’ ಎಂದು ವಕೀಲರು ನೀಡುವ ಭರವಸೆ ಮೇರೆಗೆ ಮುಂದುವರಿದು ದಂಡ ತೆರುವುದೂ ಇದೆ.

ಮಡಿಕೇರಿಯ ಪ್ರಕರಣವೊಂದು ಇದಕ್ಕೆ ಉದಾಹರಣೆ. ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಜಗಳವದು. ವಿರಾಜಪೇಟೆಯ ತಹಶೀಲ್ದಾರರು ಒತ್ತುವರಿ ಮಾಡಿಕೊಂಡಿರುವುದು ನಿಜವೆಂದು ತಿಳಿಸಿದ್ದರು. ಇದನ್ನು ಉಪವಿಭಾಗಾಧಿಕಾರಿ ನಂತರ ಜಿಲ್ಲಾಧಿಕಾರಿ ಕೂಡ ಊರ್ಜಿತಗೊಳಿಸಿದ್ದರು. ವಿರಾಜಪೇಟೆಯ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇತ್ಯರ್ಥಕ್ಕೆ ಬಾಕಿ ಇದ್ದರೂ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದರಲ್ಲಿ ತಪ್ಪು ಯಾರದ್ದೋ ಗೊತ್ತಿಲ್ಲ. ಅಂತೂ ಅರ್ಜಿದಾರರ ಬೇಬಿಗೆ 50 ಸಾವಿರ ರೂಪಾಯಿ  ಕತ್ತರಿ ಬಿತ್ತು.

ಇದರಿಂದಾಗಿ ಕಕ್ಷಿದಾರ ಹಾಗೂ ವಕೀಲ ಇಬ್ಬರೂ ತಮ್ಮ ಕರ್ತವ್ಯ ಅರಿತು ಸರಿಯಾದ ರೀತಿಯಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಿದೆ. ಕಕ್ಷಿದಾರನ ದಾರಿ ತಪ್ಪಿಸುವ ಕೆಲಸ ವಕೀಲ ಮಾಡಿದರೆ ಅದು ಅವರ ವಕೀಲಿ ವೃತ್ತಿಯ ಭವಿಷ್ಯಕ್ಕೆ ಮಾರಕ ಆಗಬಹುದು, ಅಂತೆಯೇ ವಕೀಲರ ದಾರಿ ತಪ್ಪಿಸುವ ಕೆಲಸ ಕಕ್ಷಿದಾರ ಮಾಡಿದರೆ, ವಕೀಲರ ಶುಲ್ಕದ ಜೊತೆ ‘ದುಬಾರಿ ದಂಡದ ವೆಚ್ಚ’ ಆತನ ಮೇಲೆ ಬೀಳಬಹುದು!

ತೀರ್ಪು ತಮ್ಮ ವಿರುದ್ಧ ಬಂದಾಗ ಕಕ್ಷಿದಾರ ಅದರ ಸತ್ಯಾಸತ್ಯತೆಯನ್ನು ಅರಿತು ನಡೆಯಬೇಕಿದ್ದರೆ, ಕಕ್ಷಿದಾರನಿಗೆ ಹೆದರಿ ವಕೀಲ ‘ತಪ್ಪುಹೆಜ್ಜೆ’ ಇಡುವಾಗಲೂ ಅಷ್ಟೇ ಚಿಂತಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT