ಹಣಕಾಸು ಸಚಿವರು ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸುವ ಮತ್ತೊಂದು ಅವಕಾಶ ಕಳೆದುಕೊಂಡಿದ್ದಾರೆ. 2010ರ ಜನಗಣತಿಯ ಇತ್ತೀಚಿನ ವಿಶ್ಲೇಷಣೆಗಳು ಕಳೆದ ಒಂದು ದಶಕದಲ್ಲಿ ಸಂಭವಿಸಿದ ಧನಾತ್ಮಕ ಸಾಮಾಜಿಕ ಅಭಿವೃದ್ಧಿಯನ್ನು ಚಿತ್ರವತ್ತಾಗಿ ಮುಂದಿಟ್ಟಿವೆ. ಈ ದಶಕದಲ್ಲಿ ಸಂಭವಿಸಿದ ಅಭೂತಪೂರ್ವ ಆರ್ಥಿಕ ಪ್ರಗತಿಯ ಪರಿಣಾಮಗಳು ಕೊನೆಯ ನಾಗರಿಕನ ತನಕ ತಲುಪಿರುವುದೇ ಈ ಬದಲಾವಣೆಗೆ ಮುಖ್ಯ ಕಾರಣ.
ಈ ಆರ್ಥಿಕ ಪ್ರಗತಿ ಪ್ರಶ್ನಿಸಿದ ಅನೇಕ ಟೀಕಾಕಾರರನ್ನು ಸುಮ್ಮನಿರಿಸಿರುವುದೂ ಕೊನೆಯ ನಾಗರಿಕನನ್ನು ತಲುಪಿದ ಆರ್ಥಿಕ ವೃದ್ಧಿಯ ಧನಾತ್ಮಕ ಪರಿಣಾಮಗಳೇ. ಆದರೆ ಎರಡನೇ ಬಾರಿಗೆ ಅಧಿಕಾರಕ್ಕೇರಿದ ಯುಪಿಎ ಮಾತ್ರ ದೂರದೃಷ್ಟಿಯುಳ್ಳ ನಿಲುವಿನ ಬದಲಿಗೆ ಸದ್ಯಕ್ಕೆ ಮಾತ್ರ ಸ್ಪಂದಿಸುವ ರಕ್ಷಣಾತ್ಮಕ ತಂತ್ರ ಅನುಸರಿಸಿದೆ. ಅನೇಕರ ನಿರೀಕ್ಷೆಗಳನ್ನು ಹಲವು ಬಗೆಯಲ್ಲಿ ಈಡೇರಿಸುವಲ್ಲಿ ಬಜೆಟ್ ಸೋತಿರುವುದು ಅನುಭವಕ್ಕೆ ಬರುತ್ತದೆ. ಯಾವುದೇ ದೊಡ್ಡ ಪ್ರಮಾಣದ ಸುಧಾರಣೆಗಳನ್ನು ಘೋಷಿಸಿಲ್ಲ.
ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಇನ್ನೂ ಕಾಯಬೇಕಾಗಿದೆ. ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಪ್ರಸ್ತಾಪವಷ್ಟೇ ಇರುವುದು ವ್ಯಾಪಾರ - ಉದ್ಯಮ ವಲಯದಲ್ಲಿ ಅನೇಕ ಶಂಕೆಗಳನ್ನು ಹುಟ್ಟು ಹಾಕಿದೆ.
ಗಮನಹರಿಸಲೇ ಬೇಕಾಗಿದ್ದ ಕಾರ್ಮಿಕ ಕ್ಷೇತ್ರ, ವಿಮೆ, ಪಿಂಚಣಿ ಮುಂತಾದವುಗಳ ಬಗ್ಗೆ ಬಜೆಟ್ ಮೌನ ತಳೆದಿದೆ. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ವಿಚಾರವೂ ನೇಪಥ್ಯಕ್ಕೆ ಸರಿದಂತಿದೆ. ಉತ್ಪಾದನಾ ಕ್ಷೇತ್ರದ ಮಹತ್ವ ಗುರುತಿಸಲಾಗಿದೆಯಾದರೂ ಅದಕ್ಕೆ ಅಗತ್ಯವಿರುವ ಪ್ರೋತ್ಸಾಹವೇನೂ ದೊರೆತಿಲ್ಲ.
ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆಯ ವಿಚಾರವೇನೋ ವಿಶಿಷ್ಟ ತಂತ್ರದಂತೆ ಕಾಣಿಸುತ್ತಿದೆ.
ಈ ಬಜೆಟ್‌ನಲ್ಲಿರುವ ದೋಷಗಳ ಪಟ್ಟಿಯನ್ನೆಲ್ಲ ಮರೆಸುವ ಒಂದೇ ಒಂದು ಪ್ರಮುಖ ಸಂಗತಿ ಏನೆಂದರೆ, ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳ ಜಾರಿಯಲ್ಲಿ ತರಲು ಉದ್ದೇಶಿಸಿರುವ ಸುಧಾರಣೆಗಳು.
`ಆಧಾರ್~ ಕಾರ್ಡ್‌ಗಳನ್ನು ಬಳಸಿ ಸೀಮೆಎಣ್ಣೆ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಪ್ರಯತ್ನವೊಂದಕ್ಕೆ ಬಜೆಟ್ ಅಡಿಯಿಟ್ಟಿದೆ. `ಆಧಾರ್~ ಕಾರ್ಡ್‌ಗಳ ಸಂಖ್ಯೆ ಈಗ ಇರುವ ಹದಿನೆಂಟು ಕೋಟಿಗಳಿಂದ ನಲವತ್ತು ಕೋಟಿಗಳಿಗೆ ಏರಲಿದೆ. ಅಂದರೆ ನೇರವಾಗಿ ವಿತರಿಸಲಾಗುವ ಸಬ್ಸಿಡಿಯ ಪ್ರಮಾಣವೂ ರೂ. 14,200 ಕೋಟಿ ಗಳಾಗುತ್ತವೆ. ಇದು ಸರ್ಕಾರದ ಮತ್ತು ಬಡತನ ರೇಖೆಯ ಕೆಳಗಿರುವ ಕುಟುಂಬಗಳ ಮಟ್ಟಿಗೆ ಒಂದು ದೊಡ್ಡ ಬದಲಾವಣೆಯನ್ನೇ ತರಲಿರುವುದರಲ್ಲಿ ಸಂದೇಹವೇ ಇಲ್ಲ.
ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದಕ್ಕಾಗಿ ವ್ಯಯಿಸುವ ಮೊತ್ತ ಸುಮಾರು ರೂ. 50 ಲಕ್ಷ ಕೋಟಿಗಳೆಂದು ಅಂದಾಜಿಸಲಾಗಿದೆ. ಇದರಲ್ಲಿ ಶೇಕಡಾ 50ರಷ್ಟು ಜನರ ಪಾಲ್ಗೊಳ್ಳುವಿಕೆಯಿಂದ ಬರಲಿರುವುದು ಸ್ವಾಗತಾರ್ಹ ಹೆಜ್ಜೆ.
ಬಾಹ್ಯ ವಾಣಿಜ್ಯ ಸಾಲಗಳ ಬಳಕೆಗೆ ಸಂಬಂಧಿಸಿದಂತೆ ಘೋಷಿಸಲಾಗಿರುವ ಕೆಲವು ಸಡಿಲಿಕೆಗಳು ಕೆಲವು ಕ್ಷೇತ್ರಗಳಿಗೆ ಸಹಕಾರಿಯಾಗಬಹುದು. ಹಿಂದಿನ ಅನುಭವಗಳನ್ನು ಪರಿಗಣಿಸಿದರೆ ರೂ. 30,000 ಕೋಟಿಗಳ ಷೇರು ವಿಕ್ರಯದ ಗುರಿ ಮಾತ್ರ ಕಷ್ಟ ಸಾಧ್ಯವಾದ ಗುರಿಯೆಂಬಂತೆ ಕಾಣಿಸುತ್ತದೆ.
ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಗುರುತಿಸಲಾಗಿದೆಯಾದರೂ ಯಾವುದೇ ಕ್ರಾಂತಿಕಾರಿ ಬದಲಾವಣೆಗಳನ್ನೇನೂ ಬಜೆಟ್ ಮುಂದಿಟ್ಟಿಲ್ಲ. ಕೇವಲ ತೋರಿಕೆಯ ಸುಧಾರಣೆಗಳಿಂದ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಲು ಸಾಧ್ಯವ್ಲ್ಲಿಲ.
ಹಾಗೆಯೇ ಆಹಾರ ಹಣದುಬ್ಬರ ಒಂದು ಶಾಪವಾಗಿ ಮುಂದುವರಿಯಲಿದೆ. ಹಣದುಬ್ಬರದ ವಿಚಾರಕ್ಕೆ ಬಂದರೆ ವಿತ್ತೀಯ ಕೊರತೆ ನಿಯಂತ್ರಣದಲ್ಲಿದೆ ಎಂಬಂತೆ ಪ್ರತಿಬಿಂಬಿಸಲಾಗಿದೆ. ಇದು ಹಣದುಬ್ಬರವನ್ನೂ ನಿಯಂತ್ರಿಸಬಹುದು. ಆದರೆ, ಆರ್ಥಿಕ ವೃದ್ಧಿಯನ್ನು ತಡೆಯುತ್ತದೆ. ಒಟ್ಟು ಆಂತರಿಕ ಉತ್ಪನ್ನ ಮತ್ತು ಸಾಲದ ನಡುವಣ ಅನುಪಾತ ಶೇಕಡಾ 46ಕ್ಕೆ ಸೀಮಿತಗೊಂಡು ನಿಯಂತ್ರಣದಲ್ಲಿಟ್ಟುಕೊಳ್ಳಲು ಆರ್ಥಿಕ ವೃದ್ಧಿಯನ್ನು ತ್ಯಾಗ ಮಾಡಬಾರದು.
ನಿರೀಕ್ಷೆಯಂತೆ ಅಬ್ಕಾರಿ ಮತ್ತು ಸೇವಾ ತೆರಿಗೆಗಳು ಶೇಕಡಾ 2ರಷ್ಟು ಹೆಚ್ಚಿವೆ. ಆದರೆ, ಆದಾಯ ತೆರಿಗೆಯ ಹಂತಗಳಲ್ಲಿ ಮಾಡಿರುವ ಸಣ್ಣ ಪುಟ್ಟ ಬದಲಾವಣೆಗಳು ಜನರನ್ನು ನಿರಾಶೆಗೊಳಿಸಿವೆ.
ಹೊಸ ಷೇರು ಉಳಿತಾಯ ಯೋಜನೆ ಸ್ವಾಗತಾರ್ಹ ಬದಲಾವಣೆ. ಉಳಿತಾಯ ಖಾತೆಗಳಿಂದ ದೊರೆಯುವ ಬಡ್ಡಿಯಲ್ಲಿ ರೂ. 10,000ಗಳವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಿರುವುದು ಮಾತ್ರ ಅನಿರೀಕ್ಷಿತ ಉಡುಗೊರೆ.
ಎಲ್ಲಾ ತೆರಿಗೆ ಪ್ರಸ್ತಾಪಗಳು ಬೊಕ್ಕಸಕ್ಕೆ ರೂ. 40,000 ಕೋಟಿ ವರಮಾನ ತಂದುಕೊಡಲಿವೆ. ಹಾಗೆಯೇ ಕಪ್ಪು ಹಣದ ವಿಚಾರದಲ್ಲಿ ಶ್ವೇತ ಪತ್ರ ಹೊರಡಿಸುವ ಭರವಸೆ ನೀಡುವ ಮೂಲಕ ಹಣಕಾಸು ಸಚಿವರು ಕಪ್ಪು ಹಣ ನಿಯಂತ್ರಣಕ್ಕೆ ಉತ್ತಮ ಆರಂಭ ನೀಡಿದ್ದಾರೆ.
ಸಾಮಾಜಿಕ ಕ್ಷೇತ್ರದ ಪರಿಧಿಯಲ್ಲಿ ಬರುವ ಎಲ್ಲಾ ಕ್ಷೇತ್ರಗಳಿಗೆ ನೀಡುವ ಮೊತ್ತದ ಪ್ರಮಾಣವೂ ನಿರೀಕ್ಷೆಯಂತೆಯೇ ಹೆಚ್ಚಿದೆ. ಅಪೌಷ್ಟಿಕತೆ, ಗ್ರಾಮೀಣ ನೈರ್ಮಲ್ಯ, ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಮೊತ್ತದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ. ಪ್ರೌಢಶಾಲಾ ಶಿಕ್ಷಣ ಕ್ಷೇತ್ರಕ್ಕೂ ಉತ್ತೇಜನ ನೀಡುವ ಯೋಜನೆಯನ್ನು ಬಜೆಟ್ ಘೋಷಿಸಿದೆ.
2012ರ ವೇಳೆಗೆ `ಆಧಾರ್~ ಕಾರ್ಡ್‌ಗಳ ಆಧಾರದಲ್ಲಿ ಆಹಾರ ಭದ್ರತೆ ನೀಡುವ ಯೋಜನೆ ಒಂದು ಉತ್ತಮ ಹೆಜ್ಜೆ.
ಕಡಿಮೆ ವೆಚ್ಚದ ಗೃಹ ನಿರ್ಮಾಣ ಮತ್ತು ಆರೋಗ್ಯ ಯೋಜನೆಗಳಿಗೆ ಭಾರಿ ಉತ್ತೇಜನ ದೊರೆತಿದೆ. ಗ್ರಾಮೀಣ ಉದ್ಯೋಗ ಖಾತರಿ ಕ್ಷೇತ್ರದಲ್ಲಿ ಹೆಚ್ಚು ಹಣ ವ್ಯಯಿಸುವ ಉ್ದ್ದದೇಶವೂ ಸ್ವಾಗತಾರ್ಹ.
ಒಟ್ಟಿನಲ್ಲಿ ಈ ಬಜೆಟ್ ಕೂಡಾ ಹಿಂದಿನ ವರ್ಷದ ಬಜೆಟ್‌ನ ಪ್ರತಿಯನ್ನೇ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಮಂಡಿಸಿದಂತೆ ಕಾಣಿಸುತ್ತದೆ. ಈ ಮೂಲಕ ಹಣಕಾಸು ಸಚಿವರು ದೇಶದ ಅರ್ಥವ್ಯವಸ್ಥೆಯನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ಅವಕಾಶ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.