ADVERTISEMENT

ಸಾಹಿತ್ಯ ಪರಿಷತ್ತಿನಲ್ಲೂ ಪುರುಷರ ಪಾರುಪತ್ಯ

ಎಚ್.ಎಸ್.ಅನುಪಮಾ
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ಹೆಣ್ಣು ಭ್ರೂಣ ಹತ್ಯೆ-, ಕೌಟುಂಬಿಕ   ದೌರ್ಜನ್ಯ, -ಅತ್ಯಾಚಾರ ದಿನನಿತ್ಯ ನಡೆಯು­­ತ್ತಿವೆ. ಕನಿಷ್ಠ ಕೂಲಿಯಿಲ್ಲದೆ, ಉದ್ಯೋಗ ಪರಿಸರದಲ್ಲಿ ಸುರಕ್ಷತೆಯಿಲ್ಲದೆ, ವೇತನ ತಾರತ­ಮ್ಯ­ ಎದುರಿಸುತ್ತಿರುವ ಅಸಂಘಟಿತ ವಲಯದಲ್ಲಿ ಲಕ್ಷಾಂತರ ಮಹಿಳೆಯರು ದುಡಿಯುತ್ತಿದ್ದಾರೆ. ಮೀಸ­ಲಾತಿಯ ಹೊರತಾ­ಗಿಯೂ ರಾಜಕೀಯ­ದಲ್ಲಿ ಕ್ರಿಯಾಶೀಲ ಮಹಿಳೆ­ಯರ ಸಂಖ್ಯೆ ತುಂಬಾ ಕಡಿಮೆ. ನ್ಯಾಯಾಲಯ, ಸರ್ಕಾರ, ರಕ್ಷಣಾ ವ್ಯವಸ್ಥೆ, ವಿಜ್ಞಾನ-ತಂತ್ರಜ್ಞಾನಗಳು ಮಹಿಳಾ ಘನತೆಗೆ ಮುಳುವಾಗುವಂತೆ ವರ್ತಿಸುವಾಗ ಸಣ್ಣ ಆಕ್ರೋಶವೂ ಹುಟ್ಟಲಾಗದಷ್ಟು ಸಮಾಜ ಜಡಗೊಂಡಿದೆ.

ಇದರ ನಡುವೆಯೇ ಮಹಿಳಾ ಸಮುದಾಯ ಜಾಗೃತಗೊಳ್ಳತೊಡಗಿರುವ ಸ್ಪಷ್ಟ ಸೂಚನೆ­ಗಳಿವೆ. ಸಾಮಾಜಿಕ ಮಹಿಳೆ ಕಾಣಿಸ­ತೊಡ­ಗಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಇರವನ್ನು ಸಾಬೀತುಪಡಿಸುತ್ತ, ಅನನ್ಯತೆಯನ್ನು ದಾಖಲಿ­ಸುತ್ತ ಅಸ್ಮಿತೆಯ ಶೋಧದಲ್ಲಿದ್ದಾಳೆ. ವಿಶ್ವ­ದಾದ್ಯಂತ ಸ್ತ್ರೀವಾದಿ ದೃಷ್ಟಿಕೋನವು ಮಹಿಳಾ ಹಕ್ಕು ಜಾಗೃತಿ ಮತ್ತು ಹೋರಾಟವನ್ನು ಹುಟ್ಟು­ಹಾಕುತ್ತಿದೆ. ಅಷ್ಟೇ ಅಲ್ಲ, ಮಹಿಳಾ ದೃಷ್ಟಿ­ಕೋನವು ಸಾಹಿತ್ಯ ಕ್ಷೇತ್ರವನ್ನೂ ಮರುಪೂರಣ­ಗೊಳಿ­ಸುತ್ತಿದೆ. ಕನ್ನಡದ ಮಟ್ಟಿಗೆ ಹೇಳುವು­ದಾದರೆ ಇತ್ತೀಚಿನ ದಶಕಗಳಲ್ಲಿ ಅನೇಕ ಸೂಕ್ಷ್ಮ ಬರಹಗಾರ್ತಿಯರಿಂದ ವಿಪುಲ, ವೈವಿಧ್ಯಮಯ ಹಾಗೂ ಮೌಲಿಕ ಕನ್ನಡ ಸಾಹಿತ್ಯ ರಚನೆಯಾಗಿದೆ.

ಹೀಗಿರುತ್ತ ೧೯೧೫ರಲ್ಲಿ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಗೆ ಯಾವ ಸ್ಥಾನ­ಮಾನ ನೀಡಿದೆ ಎಂದು ನೋಡಹೊರಟರೆ ಉಳಿದ ಪುರುಷಪಾರಮ್ಯದ ವ್ಯವಸ್ಥೆಗಳಿಗಿಂತ ಅದು ಏನೇನೂ ಭಿನ್ನವಾಗಿಲ್ಲ ಎನ್ನುವುದು ತಿಳಿದು­ಬರುತ್ತದೆ. ಕನ್ನಡ ಸಾಹಿತ್ಯವು ಮಹಿಳಾ ಭಾಗ­ವಹಿ­ಸುವಿಕೆಯಿಂದ ವೈವಿಧ್ಯ ಪಡೆದಿದ್ದು ಹೌದಾದರೂ ಶತಮಾನ ಪೂರೈಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು, ರಾಜಕೀಯ ಕ್ಷೇತ್ರ ಹೇಗೋ ಹಾಗೆಯೇ ಮಹಿಳೆಯನ್ನು ತೀರಾ ಅವಜ್ಞೆಗೊಳಪಡಿಸಿದೆ.

ಈ ನೂರು ವರ್ಷಗಳಲ್ಲಿ ಕಸಾಪ, ೨೪ ಅಧ್ಯಕ್ಷ­ರನ್ನು ಪಡೆದಿದ್ದು ಅದರಲ್ಲಿ ಒಬ್ಬೇ ಒಬ್ಬ ಮಹಿಳೆ­ಯಿಲ್ಲ! ಮಹಿಳಾ ಅಧ್ಯಕ್ಷೆಯಿಲ್ಲದಿದ್ದರೇನು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎಷ್ಟು ಮಹಿಳಾ ಅಧ್ಯಕ್ಷರಿದ್ದರು ಎಂದು ನೋಡಿ­ದರೆ ಜಯದೇವಿ ತಾಯಿ ಲಿಗಾಡೆ ಮಂಡ್ಯದಲ್ಲಿ ೧೯೭೪ರಲ್ಲಿ ಅಧ್ಯಕ್ಷೆಯಾಗುವವರೆಗೆ ಮಹಿಳೆ ಕಾಯಬೇಕಾಯಿತು. ಅದಾದಮೇಲೆ ಇಲ್ಲಿಯ­ವರೆಗೆ - ಎಂದರೆ ೮೦ ಸಮ್ಮೇಳನಗಳಲ್ಲಿ ಒಟ್ಟು ನಾಲ್ವರು ಮಹಿಳೆಯರಷ್ಟೇ ಅಧ್ಯಕ್ಷ ಪದವಿ ಅಲಂಕರಿ­ಸಿದ್ದಾರೆ!

ಲಿಗಾಡೆ ಅವರಲ್ಲದೇ ಬಾಗಲ­ಕೋಟೆಯ ೬೮ನೇ ಸಮ್ಮೇಳನಕ್ಕೆ ಶಾಂತಾದೇವಿ ಮಾಳ­ವಾಡ, ಮೂಡುಬಿದಿರೆಯ ೭೧ನೇ ಸಮ್ಮೇಳ­ನಕ್ಕೆ ಕಮಲಾ ಹಂಪನಾ ಹಾಗೂ ಗದಗಿ­ನಲ್ಲಿ ನಡೆದ ೭೬ನೇ ಸಮ್ಮೇಳನಕ್ಕೆ ಗೀತಾ ನಾಗಭೂಷಣ ಬಿಟ್ಟರೆ ಮತ್ಯಾವ ಮಹಿಳೆಯೂ ಕಸಾಪ ಕಣ್ಣಿಗೆ ಬಿದ್ದಿಲ್ಲ. ಈಗಿನ ಕಸಾಪದ ಕಾರ್ಯ­ಕಾರಿ ಸಮಿತಿ ನೋಡಿದರೆ ಅದರಲ್ಲಿರುವ ೪೬ ಜನರಲ್ಲಿ  ಮೂವರು ಮಹಿಳೆಯರಷ್ಟೇ ಇದ್ದಾರೆ.

೩೦ ಜಿಲ್ಲೆಗಳಲ್ಲಿ ಕಸಾಪ ಜಿಲ್ಲಾ ಘಟಕ­ಗಳ ಈಗಿನ ಅಧ್ಯಕ್ಷರ ಯಾದಿಯಲ್ಲಿ ಮಂಡ್ಯ ಜಿಲ್ಲೆ­ಯಲ್ಲಿ ಮಾತ್ರ ಮಹಿಳೆಯಿದ್ದಾರೆ. ಅದೂ  ಅವರು ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಜಿಲ್ಲಾ ಘಟಕದ ಮೊದಲ ಅಧ್ಯಕ್ಷೆ  ಎಂಬ ಮಾತೂ ಕೇಳಿಬಂದಿದೆ. ಒಂದು ಸಂಸ್ಥೆಯ ಸ್ವರೂಪ­ದಲ್ಲಿಯೇ ಹೀಗಿದ್ದ ಮೇಲೆ ಇನ್ನು ಸಮ್ಮೇಳ­`ನಗಳು ಅದರ ಪ್ರತಿಬಿಂಬಗಳಲ್ಲದೆ ಬೇರೇನಾಗಿರಲು ಸಾಧ್ಯ?

ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳ­ನ­ಗಳಲ್ಲೂ ಪುರುಷರದ್ದೇ ಮೇಲುಗೈ. ಮಡಿಕೇರಿ, ೮೦ನೇ ಸಮ್ಮೇಳನಕ್ಕೆ ಸಜ್ಜಾಗಿದೆ. ಸರ್ವಾನು­ಮತದ ಆಯ್ಕೆಯಾಗಿ ನಾ. ಡಿಸೋಜ ಅಧ್ಯಕ್ಷರಾ­ಗಿ­ದ್ದಾರೆ. ಈ ಸಲದ ಸಮ್ಮೇಳನದ ಆಮಂತ್ರಣ ಪತ್ರಿಕೆ­ಯತ್ತ ಕಣ್ಣಾಡಿಸಿದರೆ ಮಹಿಳೆಯರು ತಮ್ಮ ಇಲ್ಲದಿರು­ವಿಕೆಯಿಂದಲೇ ಎದ್ದು ಕಾಣುತ್ತಾರೆ! ಉದ್ಘಾಟನಾ ಸಮಾರಂಭಕ್ಕೆ ೨೪ ಜನ ವೇದಿಕೆಯ ಮೇಲಿರುತ್ತಾರೆ. ಅದರಲ್ಲಿ ಒಬ್ಬರೇ ಮಹಿಳೆ. - ಅದೂ ಅವರು ಕನ್ನಡ ಸಂಸ್ಕೃತಿ ಖಾತೆಯ ಸಚಿವೆ ಎಂಬ ಕಾರಣಕ್ಕೆ.

ಮೂರು ದಿನದ ಸಮ್ಮೇಳನದಲ್ಲಿ ಮುಖ್ಯ ಹಾಗೂ ಸಮಾ­ನಾಂತರ ವೇದಿಕೆಗಳಲ್ಲಿ ಒಟ್ಟು ೧೬ ಗೋಷ್ಠಿಗಳು ನಡೆಯಲಿದ್ದು ಮಹಿಳಾ ಗೋಷ್ಠಿ ಅದರಲ್ಲಿ ಇಲ್ಲ. ಮಹಿಳಾ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿ­ಕೊಂಡ ಮಹಿಳೆಯರ ಭಾಗವಹಿಸುವಿಕೆ ನಗಣ್ಯ­ವೆನಿ­ಸುವಷ್ಟಿದೆ. ಯಾವುದೇ ಗೋಷ್ಠಿಯ ಅಧ್ಯಕ್ಷತೆ­ಯನ್ನು ಮಹಿಳೆಗೆ ನೀಡಿಲ್ಲ. ಯಾವುದೇ ಗೋಷ್ಠಿಗೂ ಮಹಿಳೆ ಆಶಯ ಮಾತುಗಳ­ನ್ನಾ­ಡುತ್ತಿಲ್ಲ. ಎಲ್ಲೋ ಕೆಲ ಮಹಿಳೆಯರು ವಿಷಯ ಮಂಡನೆಯಲ್ಲಿ ಕಾಣುತ್ತಾರೆ.

ವಿರಳ­ವಾಗಿ ಸಭಾ ನಿರ್ವಹಣೆಯಲ್ಲಿ ಕಾಣಬರುತ್ತಾರೆ. ‘ಕೊಡಗು ಜಿಲ್ಲೆಯ ಮುಂದಿನ ಸವಾಲುಗಳು’, ‘ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’, ‘ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು’, ‘ಕನ್ನಡ ಸಾಹಿತ್ಯ ಮತ್ತು ದೇಶೀಯತೆ’ ಎಂಬ ಗೋಷ್ಠಿ­ಗಳಲ್ಲಿ ಒಬ್ಬ ಮಹಿಳೆಯೂ ಇಲ್ಲ. ಸನ್ಮಾನ ಸಮಾರಂಭ­ದಲ್ಲಿ ೮೨ ಜನ ಸನ್ಮಾನ ಸ್ವೀಕರಿ­ಸಲಿ­ದ್ದಾರೆ. ಅದರಲ್ಲಿ ಐವರು ಮಾತ್ರ ಮಹಿಳೆಯರಿ­ದ್ದಾರೆ.

ಸಮಾರೋಪ ಸಮಾರಂಭದಲ್ಲಿ ೨೧ ಜನರಲ್ಲಿ ಮೂವರು ಮಹಿಳೆಯರಿದ್ದಾರೆ. ಇಬ್ಬರು, ಮಾಜಿ ಸಚಿವೆ ಮತ್ತು ಜಿಲ್ಲಾ ಪಂಚಾಯ್ತಿ ಸಿಇಒ ಎಂಬ ಕಾರಣಕ್ಕೆ ಇದ್ದಾರೆ. ಮುಖ್ಯ ಕವಿಗೋಷ್ಠಿಯ ೨೮ ಕವಿಗಳಲ್ಲಿ ಎಂಟು ಮಹಿಳೆ­ಯರು, ಸಮಾನಾಂತರ ವೇದಿಕೆಯ ೩೬ ಕವಿಗಳಲ್ಲಿ ನಾಲ್ವರು  ಮಹಿಳೆಯರು ಇದ್ದಾರೆ.

ಈ ಬಾರಿ ಭಾಷೆ-, ಪರಿಸರ, -ದಾಸ ಸಾಹಿತ್ಯ-, ದೇಶೀಯತೆ-, ವಿಜ್ಞಾನ ತಂತ್ರಜ್ಞಾನ, -ಸಾಂಸ್ಕೃತಿಕ ಸಂಶೋಧನೆ,- ಕನ್ನಡ ಸ್ಥಾನಮಾನದ ಕುರಿತು ಗೋಷ್ಠಿ­ಗಳಿವೆ. ಆದರೆ ಮಹಿಳೆಯ ಯಾವ ಸಮಸ್ಯೆಯೂ ಗೋಷ್ಠಿಯೊಂದರಲ್ಲಿ ಚರ್ಚೆಗೊಳ­ಪಡು­ವಷ್ಟು ಮಹತ್ವದ ವಿಷಯವೆನಿಸಲಿಲ್ಲವೇ? ಮಹಿಳಾ ಹೋರಾಟ, ಚಳವಳಿ, ಸಂಘಟನೆ­ಗಳಲ್ಲಿ­ರು­ವವರ ಜೊತೆ ಕನ್ನಡ ಸಾಹಿತ್ಯ,- ಸಾಹಿತಿಗಳು ಗುರುತಿಸಿ­ಕೊಳ್ಳುವುದು ಮುಖ್ಯವಲ್ಲವೇ? ಪರ­ಕಾಯ ಪ್ರವೇಶ ಮಾಡಿ ತನ್ನದಲ್ಲದ ನೋವು, ಸಂಕ­ಟ­ಗಳನ್ನು ಅಕ್ಷರವಾಗಿ ಅಭಿವ್ಯಕ್ತಿಸಬಲ್ಲ ಸೂಕ್ಷ್ಮಜ್ಞ ಸಾಹಿತಿಗಳಲ್ಲೇ ಇಷ್ಟು ಲಿಂಗ ಅಸೂ­ಕ್ಷ್ಮತೆ ಇದೆಯೆಂದಾದರೆ ಭಾರತೀಯ ಸಮಾಜ ಮಹಿಳೆಯನ್ನು ೨೧ನೇ ಶತಮಾನದಲ್ಲಿ ಹೀಗೆ ನಡೆಸಿಕೊಳ್ಳುತ್ತಿರುವುದರಲ್ಲಿ ಏನಚ್ಚರಿಯಿದೆ?

ಇಂಥ ಪ್ರಶ್ನೆ ಎತ್ತಿದ ಕೂಡಲೇ ಕರ್ನಾಟಕ ಲೇಖಕಿಯರ ಸಂಘದತ್ತ ಬೊಟ್ಟುಮಾಡಿ ಅದರ ಸಮ್ಮೇಳನಗಳಲ್ಲಿ ಮಹಿಳಾ ವಿಷಯ ಕುರಿತೇ ಚರ್ಚೆ ಮಾಡಿ ಎಂಬ ಉತ್ತರ ಬರುವುದು ನಿರೀಕ್ಷಿತ. ಆದರೆ ನಮಗೆ ಬೇಕಿರುವುದು ಪ್ರತ್ಯೇಕ ಮಹಿಳಾ ಸಮ್ಮೇಳನಗಳೆಂಬ ಮಹಿಳಾ ಮೀಸಲಾತಿಯಲ್ಲ. ಬದಲಾಗಿ ಸರ್ವ ಕನ್ನಡಿಗರ ಸಮ್ಮೇಳನದಲ್ಲಿ ಕನ್ನಡತಿಯರಿಗೂ ಸಮಾನ ಅವಕಾಶ ಹಾಗೂ ಸಹಭಾಗಿತ್ವ ಸಿಗಬೇಕು. ಸರ್ವರ ಮನದಲ್ಲಿ ಮಹಿಳೆಗೆ ಸಮಾನ ಗೌರವ ದೊರೆಯಬೇಕು.

ಬಹುಶಃ ‘ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು’ ಗೋಷ್ಠಿಯ ಆಶಯ ಮಾತುಗಳನ್ನು ಮಹಿಳೆಯೊಬ್ಬಳು ಆಡಿದ್ದರೆ ಅರ್ಧಕ್ಕರ್ಧ ಜನ­ಸಮುದಾಯ ಕಸಾಪವನ್ನು ಏನೆಂದು ಭಾವಿಸಿದೆ ಎಂದು ತಿಳಿಯುತ್ತಿತ್ತು. ಆದರೆ ಎಲ್ಲಿಯವರೆಗೆ ಧಾರ್ಮಿಕ ವ್ಯಕ್ತಿಗಳ ಇರುವಿಕೆಯೇ ದಿವ್ಯ ಸಾನ್ನಿಧ್ಯ­ವೆಂದು ಕಸಾಪ ಬಗೆಯುವುದೋ ಅಲ್ಲಿಯವರೆಗೆ ಮಹಿಳೆಯನ್ನು ನಾಮಮಾತ್ರವಾಗಿ ಬಳಸಿಕೊಳ್ಳು­ವುದು ಮುಂದುವರೆಯುತ್ತದೆ.

ಮುಂಬರುವ ದಿನಗಳಲ್ಲಾದರೂ ಕಸಾಪ ತನ್ನ ಇಂಥ ಧೋರಣೆ ಬದಲಿಸಿಕೊಳ್ಳದೇ ಹೋದಲ್ಲಿ, ಸಮ್ಮೇಳ­ನದ ಸ್ವರೂಪ ಬದಲಾಗದೇ ಹೋದಲ್ಲಿ ಪ್ರಸ್ತುತ ಬೀದರ್‌ ಜಿಲ್ಲೆಯ ಸೋದರಿಯರು ಹೇಗೆ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುತ್ತಿ­ದ್ದಾರೋ, ಅದೇ ಮೇಲ್ಪಂಕ್ತಿ ಅನುಸರಿಸಿ ಪ್ರತೀ ಜಿಲ್ಲೆಯ ಮಹಿಳೆಯರೂ ಕ್ರಿಯಾಶೀಲ­ರಾಗ­ಬಹುದು. ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಈ ವಿಷಯದತ್ತ ಗಮನಹರಿಸಿ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತು ರಚನೆಯಾ­ಗುವ ಒತ್ತಡವೂ ಹುಟ್ಟಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.