ಅದು ಕೆಲವು ದಶಕಗಳ ಹಿಂದಿನ ಮಾತು. ಪಬ್ಲಿಕ್ ಪರೀಕ್ಷೆ ಎದುರಿಸುವ ಮಕ್ಕಳು ಪೋಷಕರೊಂದಿಗೆ ಹಿರಿಯ ವಿದ್ಯಾರ್ಥಿಗಳ ಮನೆಗಳನ್ನು ಮುತ್ತುತ್ತಿದ್ದರು. ಅವರ ಬೇಡಿಕೆ– ಹಳೆಯ ಪ್ರಶ್ನೆಪತ್ರಿಕೆಗಳು.ಅವುಗಳ ಆಧಾರದಿಂದ ಇಂಥಿಂಥ ಪ್ರಶ್ನೆ ಈ ಬಾರಿ ಕೇಳಬಹುದು ಅಥವಾ ಕೇಳಲಾರರು ಎಂದು ಅವರು
ನಿರ್ಧರಿಸುತ್ತಿದ್ದರು. ಹೀಗೆ ಅಂದಾಜಿಸುವುದು ತಪ್ಪು, ಎಲ್ಲ ಅಧ್ಯಾಯಗಳನ್ನೂ ಓದಬೇಕು ಎಂಬುದು ಸರಿ. ಆದರೆ ಪರೀಕ್ಷೆ ಕುರಿತು ಅವರಿಗಿದ್ದ ಆಸ್ಥೆ, ಭಯ ಮೆಚ್ಚುವಂಥದ್ದು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಅಥವಾ ಯಾವುದೇ ಕಲಿಕೆಯ ಹಂತವಿರಲಿ ಪರೀಕ್ಷೆಗಳು ಮುಗಿ
ಯುತ್ತಲೇ ಓದಿಕೊಂಡ ಪಠ್ಯಗಳು, ಬರೆದುಕೊಂಡ ತರಗತಿ ನೋಟ್ಸ್ ನಾಪತ್ತೆಯಾಗುವುದೇ ಹೆಚ್ಚು. ಯಾರಾದರೂ ಗೆಳೆಯರು, ಬಂಧುಮಿತ್ರರ ಮಕ್ಕಳಿಗೆ ಹಳೆಯ ಪಠ್ಯಪುಸ್ತಕಗಳು ಪ್ರಯೋಜನಕ್ಕೆ ಬರಬಹುದೆಂಬ ಆಲೋಚನೆ ಸಮಂಜಸವಾಗುತ್ತದೆ.ಮುಂದಿನ ಶೈಕ್ಷಣಿಕ ವರ್ಷಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ
ಗಳಿಗೆ ಅವರಿಗೇ ಅವು ಉಪಯುಕ್ತ ಆಗಬಹುದು.
ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಪಠ್ಯಪುಸ್ತಕ, ನೋಟ್ ಬುಕ್ ಕೊಡಿಸುವುದೆಂದರೆ ಪೋಷಕರಿಗೆ ಇನ್ನಿಲ್ಲದ ಸಡಗರ. ಇವಲ್ಲದೆ ಅಗತ್ಯ ಪರಾಮರ್ಶನ ಗ್ರಂಥಗಳು, ನಿಘಂಟು ಸಹ ಮಕ್ಕಳ ಕೈಸೇರಿರುತ್ತವೆ. ಆದರೆ ಆಯಾ ಪರೀಕ್ಷೆ ನಂತರ, ಆ ತರಗತಿಯ ಪಠ್ಯ ಪುಸ್ತಕಗಳಿಂದ ಆಗಬೇಕಾದ್ದೇನು ಎನ್ನುವ ತಾತ್ಸಾರ ಆವರಿಸುತ್ತದೆ. ವಾಸ್ತವವಾಗಿ ಪುಸ್ತಕಗಳಲ್ಲಿ ಹಳತು, ಹೊಸತು ಎನ್ನುವುದಿಲ್ಲ. ಎಲ್ಲವೂ ಹೊಸವೇ. ಮಕ್ಕಳು ಗ್ರಂಥದಲ್ಲಿ ಏನನ್ನಾದರೂ ಬರೆದರೆ, ಗೀಚಿದರೆ ಅಥವಾ ಗುರುತು ಹಾಕಿದರೆ ಹಿರಿಯರು ಕಟ್ಟುನಿಟ್ಟಾಗಿ ಎಚ್ಚರಿಸುವ ಪರಂಪರೆ ನಮ್ಮದು.
ಗ್ರಂಥವು ‘ದೈವ’ಸ್ವರೂಪಿ ಎಂಬ ಭಾವ. ಓದು ಬಲ್ಲವರು ಮಾತ್ರವಲ್ಲ, ಓದಲು ಬಾರದವರು ಕೂಡ ಪುಸ್ತಕಗಳನ್ನು ಗೌರವಿಸುತ್ತಾರೆ. ಅಧ್ಯಯನದ ನಂತರ ಪುಸ್ತಕಗಳನ್ನು ತ್ಯಾಜ್ಯವೆಂದು ಪರಿಗಣಿಸುವುದಕ್ಕಿಂತ ಸಾಂಸ್ಕೃತಿಕ ಬರ ಮತ್ತೊಂದಿಲ್ಲ. ಎಲ್ಲ ಪುಸ್ತಕಗಳೂ ಬದುಕು ಸುಧಾರಿಸುವ ಅನನ್ಯ ಸಂಪನ್ಮೂಲಗಳು.
ದೇಶ– ವಿದೇಶವೆನ್ನದೆ, ನೀವು ಓದಿದ ಪುಸ್ತಕದ ಅಗತ್ಯವಿರುವ ಯಾರಾದರೂ ಇದ್ದೇ ಇರುತ್ತಾರೆ.
ಅವರಿಗೆ ಈ ಪುಸ್ತಕಗಳನ್ನು ರವಾನಿಸಬಹುದು. ತಂತ್ರಜ್ಞಾನ ಊಹಿಸಲಾಗದಷ್ಟು ಮುಂದುವರಿದಿದೆ. 300 ಪುಟಗಳ ಒಂದು ಪುಸ್ತಕವನ್ನು ಕೇವಲ 6 ನಿಮಿಷಗಳಲ್ಲಿ ಡಿಜಿಟಲೀಕರಿಸಿ ಇ–ಮೇಲ್ ಮೂಲಕ ಕ್ಷಣಾರ್ಧದಲ್ಲಿ ಜಗತ್ತಿನ ಯಾವುದೇ ಮೂಲೆಗೆ ತಲುಪಿಸಬಹುದು. ನಮ್ಮ ಸಂವೇದನೆಗಳ ಸಮೇತ ಆಪ್ತರಿಗೆ ತಲುಪಿಸಬಹುದಾದ ಒಂದು ವಿಶಿಷ್ಟ ಜಾದು ಎಂದರೆ ಅದು ಪುಸ್ತಕವೆ!
ಜೈಲಿನಲ್ಲಿರುವ ಕೈದಿಗಳಿಗೂ ಓದುವ ಹಂಬಲ ಇರುತ್ತದೆ. ಮನಃಪರಿವರ್ತನೆ ಹಾದಿಯಲ್ಲಿರುವ ಅವರಿಗೆ ಪುಸ್ತಕಗಳನ್ನು ತಲುಪಿಸುವುದು ಅತ್ಯಂತ ಘನ ಕಾರ್ಯ. ಶಿಕ್ಷಣವನ್ನು ಪ್ರಾಯೋಜಿಸುವ ಸಂಘ– ಸಂಸ್ಥೆಗಳಂತೂ ಪುಸ್ತಕಗಳ ಉಡುಗೊರೆಯಿಂದ ಬಹು ಉತ್ತೇಜಿಸಲ್ಪ
ಡುತ್ತವೆ. ಇನ್ನೊಬ್ಬ ವಿದ್ಯಾರ್ಥಿಯ ಪುಸ್ತಕ ನಿಮಗೆ ಬೇಕಾಗಬಹುದು. ಸಾಮಾಜಿಕ ಜಾಲತಾಣದ ಮೂಲಕ ನೀವು ಸಂಗ್ರಹಿಸಿರುವ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿ ಅಗತ್ಯವಿರುವವರಿಗೆ ಕಳುಹಿಸಬಹುದು. ನಿಮಗೆ ಬೇಕಾಗುವ ಗ್ರಂಥಗಳನ್ನು ಅವರಿಂದ ಪಡೆಯಬಹುದು. ಪುಸ್ತಕ ಮತ್ತೆ ಮತ್ತೆ ತೆರೆದು ನೋಡುವ ಕೊಡುಗೆ.
ತರಗತಿಯ ನೋಟ್ಸ್ ಎಂದರೆ ಯಥಾವತ್ತಾಗಿ ಗುರುಗಳು ಹೇಳಿದ್ದನ್ನು ಬರೆದುಕೊಂಡಿದ್ದು ಅಲ್ಲ. ಪಾಠ, ಪ್ರವಚನಗಳನ್ನು ಅರ್ಥೈಸಿಕೊಳ್ಳದೆ ದಾಖಲಿಸಿದ್ದು ನೋಟ್ಸ್ ಆಗಲಾರದು. ನೋಟ್ಸ್ ಸಮರ್ಥವಾಗಿ ಕಲಿತದ್ದರ ಫಲವಾಗಿರಬೇಕು. ಮೂಲತಃ ತರಗತಿಯ ಬೋಧನೆ ಏಕಮುಖವಲ್ಲ. ಸಂದೇಹಗಳು ಬಂದಾಗ ಗುರುಗಳಲ್ಲಿ ಹೇಳಿ ಅವನ್ನು ಪರಿಹರಿಸಿಕೊಂಡಿರಬೇಕು. ಹಾಗೆ ತಿದ್ದಿ ತೀಡಿ ಪರಿಷ್ಕರಿಸಿದ್ದು ಮಾತ್ರ ನೋಟ್ಸ್
ಎನ್ನಿಸಿಕೊಳ್ಳುವುದು.
ಹಾಲ್ ಮತ್ತು ನೈಟ್ ಅವರ ‘ಟ್ರಿಗೊನಾಮಿಟ್ರಿ’, ರೆನ್ ಮತ್ತು ಮಾರ್ಟಿನ್ ಅವರ ‘ಇಂಗ್ಲಿಷ್ ಗ್ರ್ಯಾಮರ್ ಆ್ಯಂಡ್ ಕಾಂಪೊಸಿಷನ್’ ವಿಶ್ವದಾದ್ಯಂತ ಶೈಕ್ಷಣಿಕ ವಲಯದಲ್ಲಿ ಇಂದಿಗೂ ಅನುರಣಿಸುವ ಗ್ರಂಥಗಳಿಗೆ ಉದಾಹರಣೆಗಳು. ಕನ್ನಡದ ಸಂದರ್ಭದಲ್ಲಿ ಸುಬ್ಬಣ್ಣಾಚಾರ್ ಅವರ ‘ಅಂಕಗಣಿತ’ದ ಹಿರಿಮೆಯನ್ನು ಇಂದಿಗೂ ಗುರುಹಿರಿಯರು ಕೊಂಡಾಡುತ್ತಾರೆ, ಮೆಲುಕು ಹಾಕುತ್ತಾರೆ.
ಪಠ್ಯಪುಸ್ತಕ, ನೋಟ್‌ಬುಕ್, ಹಾಳೆ, ಲೇಖನ ಸಾಮಗ್ರಿಗಳಿಗೆ ವೆಚ್ಚ ಭರಿಸಲಾಗದೆ ಶಾಲೆ ಅರ್ಧಕ್ಕೇ ಬಿಡುವ ಮಕ್ಕಳ ಸಂಖ್ಯೆ ದೊಡ್ಡದಿದೆ. ಹಣದ ಕೊರತೆಯಿಂದ ಗ್ರಂಥಾಲಯ ಬಡವಾಗಿರುವುದರ ಮಾತಿರಲಿ, ಗ್ರಂಥಾಲಯವೇ ಇರದ ಶಾಲೆಗಳು ಅವೆಷ್ಟೋ? ಹಾಗಾಗಿ ವಿದ್ಯಾಸಂಸ್ಥೆಗಳಿಗೆ ಗ್ರಂಥಗಳನ್ನು ಬಳುವಳಿಯಾಗಿ ನೀಡುವುದು ಉದಾತ್ತವಾದ ಜ್ಞಾನದಾಸೋಹ. ವಿದ್ಯಾಲಯ ಅಥವಾ ಆಸ್ಪತ್ರೆಗಳ ಆವರಣದಲ್ಲಿ, ಉದ್ಯಾನದಲ್ಲಿ ‘ಉಚಿತ ಪುಸ್ತಕ ಪೆಟ್ಟಿಗೆ’ ಇರಿಸಿ ಪುಸ್ತಕ ಕೊಡುವ– ಪಡೆವ ವ್ಯವಸ್ಥೆ
ಏರ್ಪಡಿಸಬಹುದು.
ಅಮೆರಿಕ, ಬ್ರಿಟನ್, ಸಿಂಗಪುರದಲ್ಲಿ ತಮ್ಮ ತಮ್ಮ ಮನೆಯ ಮುಂದೆ ‘ಗ್ಯಾರೇಜ್ ಸೇಲ್’ ಏರ್ಪಡಿಸಿ ಕೈಗೆಟ
ಕುವ ಬೆಲೆಯಲ್ಲಿ ಪುಸ್ತಕಗಳನ್ನು ಮಾರುವುದಿದೆ. ಪುಸ್ತಕವು ಪುಟ ತೆರೆಯದಷ್ಟು ವಿಪರೀತ ಶಿಥಿಲ
ವಾಗಿದ್ದರೂ ಅದನ್ನು ಎಚ್ಚರಿಕೆಯಿಂದ ಓದಿಕೊಳ್ಳಬಹುದು. ಈ ಉದ್ದೇಶಕ್ಕಾಗಿ ಕೆಲವು ಮನೆಗಳಲ್ಲಿ ‘ವ್ಯಾಸ ಪೀಠ’ (ಕೆಳಗೆ ಕೂತು ಪುಸ್ತಕವಿರಿಸಿ ಓದುವ ಕಿರುಮೇಜು) ಎಂಬ ಪರಿಕರ ಉಪಯೋಗಿಸುವು
ದುಂಟು. ರದ್ದಿಗೆ ಹಾಕದೆ ಅದರಿಂದ ಕಾರ್ಡ್ ಬೋರ್ಡ್, ಕಲಾಕೃತಿಗಳನ್ನು ತಯಾರಿಸಲೂ ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.