ADVERTISEMENT

ಏಡ್ಸ್‌: 90-90-90 ಆಶಯ

ಡಾ.ಲೀಲಾ ಸಂಪಿಗೆ
Published 1 ಡಿಸೆಂಬರ್ 2019, 18:30 IST
Last Updated 1 ಡಿಸೆಂಬರ್ 2019, 18:30 IST
   

ಎಚ್‌ಐವಿ ಸೋಂಕು ನಿವಾರಣೆಗಾಗಿ ಜಗತ್ತು ಒಂದಾಗಿದೆ. ರುವಾಂಡದಲ್ಲಿ ನಡೆಯಲಿರುವ ಜಾಗತಿಕ ಸಮಾವೇಶ, ಏಡ್ಸ್‌ಮುಕ್ತ ಜಗತ್ತಿಗಾಗಿ ಶ್ರಮಿಸಲಿದೆ

ಅದು, 1990ರ ದಶಕ. ‘ಏಡ್ಸ್’ ಎಂಬ ಶಬ್ದವೇ ಇಡೀ ಜಗತ್ತಿನ ನಿದ್ದೆಗೆಡಿಸಿತ್ತು. ಮಾನವ ಸಂಕುಲವನ್ನೇ ನಾಶ ಮಾಡುವ ಭೀತಿ ಹುಟ್ಟಿಸಿತ್ತು. ಅದರಲ್ಲೂ ತೃತೀಯ ಜಗತ್ತಿನ ರಾಷ್ಟ್ರಗಳು ತತ್ತರಿಸಿಹೋಗಿದ್ದವು.

1986ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ದಾಖಲಾಯಿತು. ಆದರೂ ದೇಶ ಅದು ತನ್ನ ಸಮಸ್ಯೆಯಲ್ಲ ಎನ್ನುವ ಭ್ರಮೆಯಲ್ಲಿತ್ತು. ಆದರೆ, ಜಾಗತಿಕವಾಗಿ ಅತಿಹೆಚ್ಚು ಎಚ್ಐವಿ ಸೋಂಕಿತರನ್ನು ಹೊಂದಬಹುದಾದ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಇದೆ ಎಂಬ ಕಟುಸತ್ಯ ದೇಶವನ್ನು ಬೆಚ್ಚಿಬೀಳಿಸಿತು. ಅಂದು ಜಾಗೃತವಾದ ಭಾರತದ ಪ್ರಯತ್ನ, ಯಶಸ್ವಿ ಹೆಜ್ಜೆಗಳನ್ನು ಇಟ್ಟು ಸಾಗಿದ್ದು ಶ್ಲಾಘನೀಯ. ಅಂತಹ ಭಯದ ವಾತಾವರಣಕ್ಕೆ ಈಗ ಬ್ರೇಕ್ ಬಿದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸೇರಿದಂತೆ ಎಲ್ಲ ದೇಶಗಳೂ ಎಚ್ಐವಿ ಸೋಂಕಿನಿಂದ ಜಗತ್ತನ್ನು ಮುಕ್ತಗೊಳಿಸುವ ವ್ಯವಸ್ಥಿತವಾದ ಯೋಜನೆಗಳನ್ನು ಹಂತ ಹಂತವಾಗಿ ರೂಪಿಸುತ್ತಾ ಬಂದಿವೆ.

ADVERTISEMENT

2030ರ ವೇಳೆಗೆ ಏಡ್ಸ್‌ಮುಕ್ತ ಜಗತ್ತಿಗಾಗಿ ಡಬ್ಲ್ಯುಎಚ್ಒ ಕರೆ ನೀಡಿದೆ. ಈ ನಿಟ್ಟಿನಲ್ಲಿ ಇದುವರೆಗೆ ದೇಶಗಳು ಕೈಗೊಂಡ ಯೋಜನೆಗಳು, ಅದರ ಸಾಧನೆ–ವೈಫಲ್ಯ, ಮುಂದಿನ ಗುರಿಗಳ ಬಗ್ಗೆ ಚರ್ಚಿಸಲು ಆರು ದಿನಗಳ (ಡಿ. 2ರಿಂದ 7ರವರೆಗೆ) ಜಾಗತಿಕ ಸಮಾವೇಶವನ್ನು ರುವಾಂಡದಲ್ಲಿ ಸಂಘಟಿಸಿದೆ.

ಈ ಸೋಂಕನ್ನು ಕೇವಲ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಬಾರದು. ಇದರಿಂದ ಇಡೀ ಕುಟುಂಬ, ಸಮುದಾಯ ಹಾಗೂ ರಾಷ್ಟ್ರಗಳು ಅನುಭವಿಸುವ ಆರ್ಥಿಕ ಸಂಕಷ್ಟದ ಬಗೆಗೂ ಗಂಭೀರ ಚಿಂತನೆ ಅಗತ್ಯ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ (UNAIDS) ಏಡ್ಸ್ ಕುರಿತ ಘೋಷಣೆ 90-90-90 ಮಹತ್ವ ಪಡೆದಿದೆ. ಈ ಗುರಿಯನ್ನು 2020ರೊಳಗೆ ತಲುಪುವ ಕಾರ್ಯಸೂಚಿ ರೂಪಿಸಲಾಗಿದೆ. ಇದರಂತೆ, ಎಚ್ಐವಿ ಬಾಧಿತ
ಶೇ 90ರಷ್ಟು ಮಂದಿ ತಮ್ಮ ಸೋಂಕಿನ ಸ್ಥಿತಿಗತಿ ಬಗ್ಗೆ ಅರಿತಿರುತ್ತಾರೆ. ಈ ಬಗ್ಗೆ ಅರಿತ ಶೇ 90ರಷ್ಟು ಮಂದಿ ಎ.ಆರ್.ಟಿ. ಚಿಕಿತ್ಸೆಗೆ ಒಳಗಾಗಲಿದ್ದಾರೆ ಹಾಗೂ ಈ ರೀತಿ ಚಿಕಿತ್ಸೆ ಪಡೆದ ಶೇ 90ರಷ್ಟು ಮಂದಿ ಪರಿಣಾಮಕಾರಿ ರೋಗನಿರೋಧಕಶಕ್ತಿ ಹೊಂದುತ್ತಾರೆ.

ಇಲ್ಲಿಯವರೆಗೂ ಮನುಕುಲ ನಿಭಾಯಿಸಿರುವ ಬಹುಪಾಲು ರೋಗಗಳು ಕೇವಲ ವೈದ್ಯಕೀಯ ಸಮಸ್ಯೆಗಳ ಸ್ವರೂಪವನ್ನು ಹೊಂದಿದ್ದವು. ಆದರೆ ಎಚ್‌ಐವಿ ಸೋಂಕು ಮನುಷ್ಯರ ಅಸುರಕ್ಷಿತ ಲೈಂಗಿಕ ನಡವಳಿಕೆಗಳಿಗೆ ಸಂಬಂಧಿಸಿದ್ದಾಗಿರುವುದರಿಂದ, ಭಾರತದಂತಹ ದೇಶದಲ್ಲಿ ಈ ಬಗ್ಗೆ ಗೋಪ್ಯತೆ, ನಾಚಿಕೆ, ಕಳಂಕ, ತಾರತಮ್ಯಗಳು ಇರುವುದರಿಂದ ಈ ಸೋಂಕು ಇನ್ನೂ ತೀವ್ರಗೊಳ್ಳುವ ಅಪಾಯವೇ ಹೆಚ್ಚು. ಇದರ ನಿಯಂತ್ರಣದ ಸೂತ್ರಧಾರ ಕಾಂಡೋಮ್ ಬಳಕೆ ಕೂಡ ಪುರುಷ ಪ್ರಾಧಾನ್ಯದ ಈ ವ್ಯವಸ್ಥೆಯಲ್ಲಿ ಒಂದು ಸವಾಲಾಗಿದೆ.

ಮೊದಲು ಈ ಸೋಂಕಿನ ಪ್ರಸಾರಕರೆಂದು ಲೈಂಗಿಕ ವೃತ್ತಿನಿರತ ಮಹಿಳೆಯರು, ಸಲಿಂಗಕಾಮಿಗಳು, ಮದ್ಯವ್ಯಸನಿಗಳು, ಟ್ರಕ್ ನಿರ್ವಾಹಕರು, ವಲಸೆಗಾರರನ್ನು ಪರಿಗಣಿಸಿ, ಅವರನ್ನು ಅತಿ ಅಪಾಯಕಾರಿ ಗುಂಪುಗಳು ಎಂದೇ ಗುರುತಿಸಲಾಗಿತ್ತು. ಆದ್ದರಿಂದಲೇ ಮೊದಲ ಹಂತದಲ್ಲಿ, ಈ ಗುಂಪುಗಳ ಮಧ್ಯೆ ಮಾತ್ರ ಎಚ್ಐವಿ ಸೋಂಕು ನಿಯಂತ್ರಣದ ಅರಿವು ಮೂಡಿಸಲು ಹೆಚ್ಚು ಗಮನ ನೀಡಲಾಗಿತ್ತು. ನಂತರದ ಹಂತದಲ್ಲಿ ವಿವಾಹಿತ ಮಹಿಳೆಯರೂ ಅಪಾಯದ ಅಂಚಿನಲ್ಲಿರುವುದು ಹಾಗೂ ನವಜಾತ ಶಿಶುಗಳಲ್ಲಿ (ಸೋಂಕಿತ ತಾಯಿಯಿಂದ ಜನಿಸಿದ) ಎಚ್ಐವಿ ಸೋಂಕು ಕಂಡು
ಬಂದಿದ್ದು ಜಗತ್ತನ್ನು ಮತ್ತೆ ಚಿಂತೆಗೀಡುಮಾಡಿತ್ತು.

ಭಾರತೀಯ ಸಮಾಜದಲ್ಲಿ ಲೈಂಗಿಕತೆಯ ಬಗ್ಗೆ ಮುಕ್ತ ವಾತಾವರಣವಿಲ್ಲ. ಇಂತಹ ಸಾಮಾಜಿಕ, ಆರ್ಥಿಕ ಪರಿಮಿತಿಯ ನಡುವೆಯೂ ಈ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮುದಾಯ ಕೈಗೊಂಡ ಕಾರ್ಯಯೋಜನೆಗಳು ಪರಿಣಾಮಕಾರಿಯಾಗಿವೆ. ಇದರಲ್ಲಿ ಪ್ರಮುಖವಾದುದೆಂದರೆ, ಔಷಧಿ ಮಾಫಿಯಾದಿಂದ ಇದನ್ನು ಹೊರಗಿಡುವಲ್ಲಿ ಸರ್ಕಾರ ಯಶಸ್ವಿಯಾಗಿರುವುದು.

ಮೊದಮೊದಲು ಅತ್ಯಂತ ಗೋಪ್ಯ ಮತ್ತು ದುಬಾರಿ ಎನಿಸಿದ್ದ ಈ ಚಿಕಿತ್ಸೆ ಸಾಮಾನ್ಯ ಜನರಿಗೂ ಉಚಿತವಾಗಿ, ನೆರೆಯ ಸರ್ಕಾರಿ ಆಸ್ಪತ್ರೆಗಳಲ್ಲೇ ದೊರೆಯುವಂತಾಗಿರುವುದು ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. 2017ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಸೂದೆಯು ಎಚ್ಐವಿ ಬಾಧಿತರು ಸಮಾಜದಲ್ಲಿ ತಾರತಮ್ಯಕ್ಕೆ ಒಳಗಾಗದಂತೆ ಕಾನೂನಾತ್ಮಕ ರಕ್ಷಣೆ ನೀಡಿದೆ. ಮೊದಲು 2011ರಲ್ಲಿ ದೆಹಲಿಯಲ್ಲಿ ನಡೆದ ಚುನಾಯಿತ ಪ್ರತಿನಿಧಿಗಳ (ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಮೇಯರ್‌ಗಳನ್ನೊಳಗೊಂಡ) ಸಮಾವೇಶ, ಎಚ್ಐವಿ, ಏಡ್ಸ್ ಕುರಿತ ಜಾಗೃತಿಗೆ ರಾಷ್ಟ್ರೀಯ ಸ್ವರೂಪ ನೀಡಿತು. ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ರೂಪಿಸಿದ ‘ರೆಡ್ ರಿಬ್ಬನ್ ಎಕ್ಸ್‌ಪ್ರೆಸ್‌’ ಜನರಿರುವೆಡೆಗೇ ಅತ್ಯಂತ ಪರಿಣಾಮಕಾರಿಯಾಗಿ ಸಾಗಿ, ಸಂಪೂರ್ಣ ಪ್ರಚಾರಾಂದೋಲನ ರೂಪಿಸಿತು.

ಇವೆಲ್ಲದರ ನಡುವೆಯೂ ಎಚ್ಐವಿ ಸೋಂಕು ನಿಯಂತ್ರಣಕ್ಕೆ ಅನೇಕ ಪರಿಮಿತಿಗಳು, ಸವಾಲುಗಳು ಇಂದಿಗೂ ಇವೆ. ಎಲ್ಲ ಇಲಾಖೆಗಳ, ಧಾರ್ಮಿಕ ಸಂಸ್ಥೆಗಳ, ಸಾಮಾಜಿಕವಾದ ಎಲ್ಲಾ ಸ್ತರಗಳ ಸಹಯೋಗದಿಂದ ಇದೊಂದು ಜನಾಂದೋಲನವಾದಾಗ ಮಾತ್ರ ಎಚ್ಐವಿ ಸೋಂಕಿನಿಂದ ಮುಕ್ತಿ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.